Amit Shah: ವಕ್ಫ್ ಬಡ ಮುಸ್ಲಿಮರಿಗಾಗಿಯೇ ಹೊರತು ದರೋಡೆಕೋರರಿಗಲ್ಲ; ಅಮಿತ್ ಶಾ ಗುಡುಗು
Waqf Amendment Bill: ವಕ್ಫ್ ತಿದ್ದುಪಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ಇಂದು ಮಂಡಿಸಿದ ಮಸೂದೆಯನ್ನು ನಾನು ಬೆಂಬಲಿಸುತ್ತೇನೆ. ಈ ಮಸೂದೆಯನ್ನು ಬಡ ಮುಸ್ಲಿಮರ ಕಲ್ಯಾಣಕ್ಕೆ ಬಳಸಲಾಗುತ್ತಿದೆ ಹೊರತು ದರೋಡೆಕೋರರಿಗಾಗಿ ಅಲ್ಲʼʼ ಎಂದು ತಿಳಿಸಿದರು.

ಅಮಿತ್ ಶಾ.

ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ (ಏ. 2) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ (Waqf Amendment Bill) ಮಂಡಿಸಿದೆ. ಈ ಮಸೂದೆಯ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು, ವಕ್ಫ್‌ಗಾಗಿ ನೀಡಲಾಗಿದೆ ಎಂದು ಹೇಳಲಾದ ಆಸ್ತಿಗಳ ದೀರ್ಘ ಪಟ್ಟಿಯನ್ನು ಮಂಡಿಸಿದರು. ಆ ಪಟ್ಟಿಯಲ್ಲಿ ಹಿಂದೂ ದೇವಾಲಯಗಳು, ಇತರ ಧರ್ಮಗಳಿಗೆ ಸೇರಿದ, ಸರ್ಕಾರ ಮತ್ತು ಇತರರಿಗೆ ಸೇರಿದ ಭೂಮಿ ಇದೆ. "ಇಂದು ಮಂಡಿಸಿದ ಮಸೂದೆಯನ್ನು ನಾನು ಬೆಂಬಲಿಸುತ್ತೇನೆ. ಮಧ್ಯಾಹ್ನ 12 ಗಂಟೆಯಿಂದ ನಡೆಯುತ್ತಿರುವ ಚರ್ಚೆಯನ್ನು ನಾನು ಎಚ್ಚರಿಕೆಯಿಂದ ಆಲಿಸಿದ್ದೇನೆ. ಹಲವು ಸದಸ್ಯರಲ್ಲಿ ಮಸೂದೆ ಬಗ್ಗೆ ತಪ್ಪು ಕಲ್ಪನೆಗಳಿವೆ. ಅಲ್ಲದೆ ಸದನದ ಮೂಲಕ, ದೇಶಾದ್ಯಂತ ಆ ತಪ್ಪು ಕಲ್ಪನೆಗಳನ್ನು ಹರಡಲು ಪ್ರಯತ್ನಗಳು ನಡೆಯುತ್ತಿವೆʼʼ ಎಂದು ವಿಪಕ್ಷಗಳ ವಿರುದ್ದ ಕಿಡಿಕಾರಿದರು.
"ಈ ಮಸೂದೆಯು ಮುಸ್ಲಿಮರ ಧಾರ್ಮಿಕ ಆಚರಣೆಗಳು ಮತ್ತು ಅವರು ದಾನ ಪಡೆದ ಆಸ್ತಿಯಲ್ಲಿ ಹಸ್ತಕ್ಷೇಪ ಮಾಡುವ ಗುರಿಯನ್ನು ಹೊಂದಿದೆ ಎಂಬ ವದಂತಿಯನ್ನು ಹರಡಲಾಗುತ್ತಿದೆ. ಅಲ್ಪಸಂಖ್ಯಾತರನ್ನು ಬೆದರಿಸಲು ಇದನ್ನು ಮಾಡಲಾಗುತ್ತಿದೆ. ಈ ಮಸೂದೆಯನ್ನು ಬಡ ಮುಸ್ಲಿಮರ ಕಲ್ಯಾಣಕ್ಕೆ ಬಳಸಲಾಗುತ್ತಿದೆ ಹೊರತು ದರೋಡೆಕೋರರಿಗಾಗಿ ಅಲ್ಲ" ಎಂದು ಶಾ ಹೇಳಿದರು.
ಅಮಿತ್ ಶಾ ಹೇಳಿದ್ದೇನು? ಇಲ್ಲಿದೆ ನೋಡಿ:
Speaking in the Lok Sabha on The Waqf (Amendment) Bill, 2025. https://t.co/32ZsznVTL5
— Amit Shah (@AmitShah) April 2, 2025
ಈ ಸುದ್ದಿಯನ್ನೂ ಓದಿ: Waqf Bill: ಹೀಗೆ ಬಿಟ್ರೆ ಏರ್‌ಪೋರ್ಟ್, ರೈಲ್ವೇ ಸ್ಟೇಷನ್ ಎಲ್ಲವೂ ವಕ್ಫ್ ಪಾಲಾಗುತ್ತವೆ; ತಿದ್ದುಪಡಿ ಮಸೂದೆಗೆ ಕಿರಣ್ ರಿಜಿಜು ಸಮರ್ಥನೆ
"2013ರಲ್ಲಿ ವಕ್ಫ್‌ಗೆ ತಿದ್ದುಪಡಿಗಳನ್ನು ಪರಿಚಯಿಸಿದಾಗ, ಲಾಲು ಪ್ರಸಾದ್ ಯಾದವ್ ಅವರು ದುರುಪಯೋಗ ತಡೆಯಲು ಕಠಿಣ ಕಾನೂನು ಬೇಕು ಮತ್ತು ಅತಿಕ್ರಮಣ ಮಾಡುವವರನ್ನು ಜೈಲಿಗೆ ಹಾಕಬೇಕೆಂದು ಹೇಳಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಲಾಲು ಪ್ರಸಾದ್ ಯಾದವ್ ಅವರ ಆಶಯಗಳನ್ನು ಪೂರೈಸಿದ್ದಾರೆ" ಎಂದು ಸಚಿವರು ತಿಳಿಸಿದರು.
ಕರ್ನಾಟಕದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಕರ್ನಾಟಕ ಹೈಕೋರ್ಟ್ 602 ಚದರ ಕಿ.ಮೀ. ಪ್ರದೇಶವನ್ನು ವಕ್ಫ್ ವಶಪಡಿಸಿಕೊಳ್ಳುವುದನ್ನು ತಡೆದಿದೆ ಎಂದು ವಿವರಿಸಿದರು. "ದಿಲ್ಲಿಯ ಲುಟ್ಯೆನ್ಸ್ ವಲಯದಲ್ಲಿನ ಆಸ್ತಿಗಳು ವಕ್ಫ್ ಪಾಲಾದವು. ಜತೆಗೆ ಸರ್ಕಾರಿ ಭೂಮಿಯನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಲಾಯಿತು. ತಮಿಳುನಾಡಿನಲ್ಲಿ 400 ವರ್ಷಗಳಷ್ಟು ಹಳೆಯದಾದ ದೇವಾಲಯದ ಆಸ್ತಿಯನ್ನು ವಕ್ಫ್ ಎಂದು ಘೋಷಿಸಲಾಯಿತು. ವಕ್ಫ್ ಮಂಡಳಿಯ ಒಡೆತನದ 500 ಕೋಟಿ ರೂ. ಮೌಲ್ಯದ ಭೂಮಿಯನ್ನು ಪಂಚತಾರಾ ಹೋಟೆಲ್‌ಗೆ ತಿಂಗಳಿಗೆ ಕೇವಲ 12,000 ರೂ. ಬಾಡಿಗೆಗೆ ನೀಡಲಾಗಿದ್ದು, ದುರುಪಯೋಗ ಮತ್ತು ಪಕ್ಷಪಾತದ ಬಗ್ಗೆ ಕಳವಳ ವ್ಯಕ್ತವಾಗಿದೆ. ಪ್ರಯಾಗ್‌ರಾಜ್‌ನಲ್ಲಿರುವ ಚಂದ್ರಶೇಖರ್ ಆಜಾದ್ ಪಾರ್ಕ್ ಸೇರಿದಂತೆ ವಿವಿಧ ಧರ್ಮಗಳಿಗೆ ಸೇರಿದ ಹಲವಾರು ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಯಿತು" ಎಂದು ಅವರು ಹೇಳಿದರು.
ತಿದ್ದುಪಡಿ ಮಾಡಲಾದ ವಕ್ಫ್ ಮಸೂದೆಯು ಈ ಅನ್ಯಾಯಗಳನ್ನು ತಡೆಯುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದರು. "ಈ ಮಸೂದೆಯು ಎಎಸ್‌ಐ ಆಸ್ತಿ, ಬುಡಕಟ್ಟು ಸಮುದಾಯಕ್ಕೆ ಸೇರಿದ ಭೂಮಿ ಮುಂತಾದ ಆಸ್ತಿಯನ್ನು ರಕ್ಷಿಸುತ್ತದೆ. ನೀವು ಖಾಸಗಿ, ವೈಯಕ್ತಿಕ ಆಸ್ತಿಯನ್ನು ಮಾತ್ರ ವಕ್ಫ್‌ಗೆ ದಾನ ಮಾಡಬಹುದು ಮತ್ತು ಸಮುದಾಯದ (ಗ್ರಾಮ) ಭೂಮಿಯನ್ನು ನೀಡಲು ಆಗುವುದಿಲ್ಲ. ಈ ಮಸೂದೆಯು ಪಾರದರ್ಶಕತೆಯನ್ನು ತರುತ್ತದೆ" ಎಂದು ಅವರು ವಿವರಿಸಿದರು.
ತಿದ್ದುಪಡಿಗಳನ್ನು ತರುವ ಮೊದಲು ವಿವಿಧ ವರ್ಗಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಅಮಿತ್ ಶಾ ತಿಳಿಸಿದರು. "ನಮಗೆ ಸಾರ್ವಜನಿಕರಿಂದ 1 ಕೋಟಿಗೂ ಹೆಚ್ಚು ಸಲಹೆಗಳು ಬಂದಿವೆ. ನಮ್ಮ ತತ್ವ ಸ್ಪಷ್ಟವಾಗಿದೆ. ನಾವು ಮತ ಬ್ಯಾಂಕ್‌ಗಾಗಿ ಯಾವುದೇ ಕಾನೂನನ್ನು ತರುವುದಿಲ್ಲ, ಅದು ನ್ಯಾಯಕ್ಕಾಗಿ ಮಾತ್ರ" ಎಂದು ಒತ್ತಿ ಹೇಳಿದರು. ಈ ಮಸೂದೆಗೆ ಕೇರಳದ ಕ್ರಿಶ್ಚಿಯನ್ನರ ಬೆಂಬಲವೂ ಸಿಕ್ಕಿದೆ ಎಂದು ಅವರು ಘೋಷಿಸಿದರು.
ಇದಕ್ಕೂ ಮುನ್ನ ಕೇಂದ್ರ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು.