DK Shivakumar: ಭಾರತ, ಬೆಂಗಳೂರು ಜಾಗತಿಕವಾಗಿ ಬೆಳೆಯಲು ಮನಮೋಹನ್ ಸಿಂಗ್ ಕೊಡುಗೆ ಅಪಾರ: ಡಿಕೆಶಿ
ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಯೋಜನೆ ಮಾಡುವ ಕುರಿತು ಈ ಹಿಂದೆ ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚೆ ನಡೆಸಿದ್ದೆ. ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡಬೇಕು ಎನ್ನುವ ಆಲೋಚನೆಯಿದೆ. ಇದಕ್ಕೆ ಯಾವ ರೀತಿ ಹೆಸರನ್ನು ಇಡಬೇಕು ಎಂದು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು: ದೂರದೃಷ್ಟಿಯ ನಾಯಕ, ಆರ್ಥಿಕ ನೀತಿಗಳ ಮೂಲಕ ದೇಶ ಹಾಗೂ ಬೆಂಗಳೂರು ಜಾಗತಿಕವಾಗಿ ಬೆಳೆಯಲು, ಗುರುತಿಸಿಕೊಳ್ಳಲು ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಮನಮೋಹನ್ ಸಿಂಗ್ (Manmohan Singh) ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸಭೆ ಬಜೆಟ್ ಅಧಿವೇಶನದ ಮೊದಲನೇ ದಿನದ ಸಂತಾಪ ಸೂಚನೆ ವೇಳೆ ಅವರು ಸೋಮವಾರ ಮಾತನಾಡಿದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ವಿಮಾನ ನಿಲ್ದಾಣ, ಕೋಲಾರ ಕಡೆಯ ಮೇಲ್ಸೆತುವೆಗೆ ಅನುದಾನ ನೀಡಿದರು. ನರ್ಮ್ ಯೋಜನೆ ಮುಖಾಂತರ ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದರು. ಬೆಂಗಳೂರಿನ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿದ್ದವರು ಡಾ.ಸಿಂಗ್. ಹೃದಯ ಶ್ರೀಮಂತಿಕೆಯಿಂದ ಹಣದ ಸಹಾಯ ಮಾಡಿದ್ದಾರೆ. ಇಲ್ಲಿ ಆದಾಯವೂ ಸಹ ಅದೇ ರೀತಿ ಮರಳಿ ಬರುತ್ತಿತ್ತು. ಈಗ ಐಟಿ- ಬಿಟಿ ರಫ್ತು ಮೂಲಕ ಶೇ. 39ರಷ್ಟು ಆದಾಯ ದೇಶಕ್ಕೆ ಬೆಂಗಳೂರಿನಿಂದ ಬರುತ್ತಿದೆ. ಇಂತಹ ದೂರದೃಷ್ಟಿಯಿಂದ ಸಿಂಗ್ ಅವರು ಬೆಂಗಳೂರಿನ ಅಭಿವೃದ್ದಿಗೆ ಕೊಡುಗೆ ನೀಡಿದ್ದರು ಎಂದರು.
ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಯೋಜನೆ ಮಾಡುವ ಕುರಿತು ಈ ಹಿಂದೆ ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚೆ ನಡೆಸಿದ್ದೆ. ಅವರ ಹೆಸರು ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ನಾವು ಮಾಡಬೇಕು ಎನ್ನುವ ಆಲೋಚನೆಯಿದೆ. ಇದಕ್ಕೆ ಯಾವ ರೀತಿ ಹೆಸರನ್ನು ಇಡಬೇಕು ಎಂದು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಾಗುವುದು ಎಂದು ಅವರು ಹೇಳಿದರು.
ಯುಪಿಎ ಅವಧಿಯಲ್ಲಿ ಮಾಡಿರುವ ಕಾರ್ಯಕ್ರಮಗಳನ್ನು, ಜನರ ಬದುಕು, ಕಲ್ಯಾಣಕ್ಕೆ ತೆಗೆದುಕೊಂಡಿರುವ ತೀರ್ಮಾನಗಳನ್ನು ನಾವುಗಳು ಮರೆಯಬಾರದು. ರಾಷ್ಟ್ರ್ರೀಕೃತ ಬ್ಯಾಂಕ್‌ಗಳಲ್ಲಿ ಇದ್ದ ಸುಮಾರು 70 ಸಾವಿರ ಕೋಟಿ ರೂ.ಗೂ ಹೆಚ್ಚಿನ ರೈತರ ಸಾಲವನ್ನು ಮನ್ನಾ ಮಾಡಿದ್ದರು. ದೇಶದಲ್ಲಿ ಯಾರೂ ಕೂಡ ಹಸಿವಿನಿಂದ ಬಳಲಬಾರದು ಎಂದು ಆಹಾರ ಭದ್ರತಾ ಕಾಯ್ದೆ ಎನ್ನುವ ಅತ್ಯುತ್ತಮ ಯೋಜನೆ ತಂದವರು. ನರೇಗಾ ಮೂಲಕ ಪ್ರತಿ ಪಂಚಾಯತ್‌ಗೆ 3-4 ಕೋಟಿ ರೂ. ಅನುದಾನ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟವರು. ಇದಕ್ಕೂ ಹಿಂದೆ 1 ಪಂಚಾಯತ್‌ಗೆ 1 ಲಕ್ಷ ರೂ. ಅನುದಾನವೂ ಸಿಗುತ್ತಿರಲಿಲ್ಲ. ಜೆ.ಎಚ್.ಪಟೇಲರ ಕಾಲದಲ್ಲಿ 5 ಲಕ್ಷ ರೂ. ಅನುದಾನ ಬರುತ್ತಿತು. ಜತೆಗೆ ರೈತರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿ ಹಣ ಪಡೆಯುವ ಯೋಜನೆ ನರೇಗಾದಲ್ಲಿದೆ ಎಂದು ಹೇಳಿದರು.
ಅರಣ್ಯ ಭೂಮಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಕಾನೂನುಗಳನ್ನು ಮನಮೋಹನ್ ಸಿಂಗ್ ಪರಿಚಯಿಸಿದರು. ಭೂಮಿ ಕಳೆದುಕೊಂಡ ಜನರಿಗೆ ದುಪ್ಪಟ್ಟು ಪರಿಹಾರ ಯೋಜನೆ, 15 ಕಿ.ಮೀ. ವ್ಯಾಪ್ತಿಯಿದ್ದರೆ ಮೂರು ಪಟ್ಟು, ಗ್ರಾಮೀಣ ಭಾಗದಲ್ಲಿ 4 ಪಟ್ಟು ಪರಿಹಾರ ನೀಡುವ ಯೋಜನೆ ಜಾರಿಗೆ ತಂದರು. ಇದರಿಂದ ಅನೇಕರಿಗೆ ಉಪಯೋಗವಾಗಿದೆ. ಸರ್ಕಾರದಲ್ಲಿ ಕುಳಿತಿರುವ ನಮಗೆ ಈ ಹಣ ಹೊರೆ ಎಂದು ಎನಿಸಬಹುದು. ರಾಜ್ಯಪಾಲರ ಭಾಷಣದ ವೇಳೆ ಭೂ ಸ್ವಾಧಿನಕ್ಕೆ ಸುಮಾರು 20 ಸಾವಿರ ಕೋಟಿ ರೂ. ಹಣ ನೀಡಬೇಕು ಎಂದು ಹೇಳಿದರು. ಈ ಕಾಯ್ದೆ ಬರುವ ಮೊದಲು ರೂ. 3-4 ಸಾವಿರ ಕೋಟಿ ರೂ.ಗೆ ಮುಗಿಯುತಿತ್ತು. ಆದರೆ ಇದರಿಂದ ಭೂಮಿ ಕಳೆದುಕೊಂಡ ರೈತರಿಗೆ ಅನುಕೂಲವಾಗಿದೆ. ಇದು ಮನಮೋಹನ್ ಸಿಂಗ್ ಅವರ ದೂರದೃಷ್ಟಿ ಎಂದು ತಿಳಿಸಿದರು.
ಸಿಎಸ್‌ಆರ್ ಸದ್ಬಳಕೆಗೆ ನಾಂದಿ ಹಾಡಿದವರು ಡಾ. ಸಿಂಗ್
ನಮ್ಮ ರಾಜ್ಯವೊಂದರಲ್ಲಿಯೇ 8,100 ಕೋಟಿ ರೂ. ಸಿಎಸ್‌ಆರ್ ಹಣ ಸಂಗ್ರಹವಾಗುತ್ತಿದೆ. ಈ ಸಿಎಸ್‌ಆರ್ ಯೋಜನೆ ಪರಿಚಯಿಸಿದವರು ಮನಮೋಹನ್ ಸಿಂಗ್ ಅವರು. ಅಂದು ಪ್ರಣಬ್ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದರು. ಆಗ ಕಾರ್ಪೋರೇಟ್ ವಲಯದವರು ಶೇ. 2ರಷ್ಟು ಹಣವನ್ನು ಸಾಮಾಜಿಕ ಕೆಲಸಗಳಿಗೆ ಮೀಸಲಿಡಬೇಕು ಎಂದು ಈ ಯೋಜನೆ ಜಾರಿಗೆ ತಂದರು ಎಂದು ಹೇಳಿದರು.
ಈಗ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಈ ವಿಚಾರವಾಗಿ ನನ್ನ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ. ಇದರ ಮೂಲಕ ಪ್ರತಿ ಗ್ರಾಮೀಣ ಪ್ರದೇಶದಲ್ಲಿ ಕೆಪಿಎಸ್ ಶಾಲೆಗಳನ್ನು ನಿರ್ಮಾಣ ಮಾಡಬೇಕು ಎಂದು ಮುಂದಾಗಿದ್ದೇವೆ. ಈಗಾಗಲೇ ಮೊದಲನೇ ಹಂತದಲ್ಲಿ 500 ಶಾಲೆಗಳ ನಿರ್ಮಾಣಕ್ಕೆ ಹೆಜ್ಜೆಯಿಟ್ಟಿದ್ದೇವೆ. ಒಟ್ಟು 2 ಸಾವಿರ ಶಾಲೆಗಳ ನಿರ್ಮಾಣ ಗುರಿ ನಮ್ಮ ಮುಂದಿದೆ. ಒಂದು ಕ್ಷೇತ್ರಕ್ಕೆ ಕನಿಷ್ಠ 5- 8 ಶಾಲೆಗಳು ನಿರ್ಮಾಣವಾಗುವ ಅವಕಾಶವಿದೆ. ಪ್ರತಿ ಶಾಲೆಗೆ ಕನಿಷ್ಠ 7- 10 ಕೋಟಿ ರೂ. ವಿನಿಯೋಗಿಸಲಾಗುವುದು. ಜನರು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಹಾಗೂ ಜಿಲ್ಲಾ ಕೇಂದ್ರಗಳಿಗೆ ಬರುತ್ತಿದ್ದಾರೆ. ಇದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇದಕ್ಕೆಲ್ಲಾ ಮನಮೋಹನ್ ಸಿಂಗ್ ಅವರು ಜಾರಿಗೆ ತಂದ ಸಿಎಸ್‌ಆರ್ ಯೋಜನೆ ಕಾರಣ ಎಂದರು.
ಮನಮೋಹನ್ ಸಿಂಗ್ ಅವರು ತಮ್ಮ ಜೀವಿತಾವಧಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. 6 ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜನಾರ್ದನ ಪೂಜಾರಿ ವಿತ್ತ ಸಚಿವರಾಗಿದ್ದ ಸಮಯದಲ್ಲಿ ಇವರು ಸರ್ಕಾರಕ್ಕೆ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ಅವರು ಪ್ರಧಾನಿಗಳಾಗಿದ್ದ ಸಮಯ, ನಂತರದ ದಿನಗಳಲ್ಲಿಯೂ ಅವರನ್ನು ಭೇಟಿ ಮಾಡಿದ್ದೇನೆ ಎಂದರು.
ಗಾಂಧಿ ಭಾರತ ಕಾರ್ಯಕ್ರಮ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಹಾಗೂ ಸುವರ್ಣಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಅನಾವರಣವಿತ್ತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರಿಗೆ ಹಾಗೂ ನಮಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಮರಣ ಹೊಂದಿದ್ದಾರೆ ಎನ್ನುವ ಸುದ್ದಿ ಬಂದಿತು. ನಂತರ ಗಾಂಧಿ ಭಾರತ ಕಾರ್ಯಕ್ರಮದ ವೇದಿಕೆಯಲ್ಲಿಯೇ ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | PNB Recruitment 2025: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿದೆ 350 ಹುದ್ದೆ; ಪದವಿ ಪಡೆದವರು ಅರ್ಜಿ ಸಲ್ಲಿಸಿ
ಮಾಜಿ ಸಂಸದರಾಗಿದ್ದ ಶ್ರೀನಿವಾಸಯ್ಯ ಅವರು ನನಗೆ ಆತ್ಮೀಯರಾಗಿದ್ದರು. ಅವರ ಜತೆ ನಾನು 4 ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಅನೇಕ ಸಮಿತಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ವಿಮಾನ ನಿಲ್ದಾಣ ಸಮಿತಿಯಲ್ಲಿದ್ದಾಗ ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ. ಜಯವಾಣಿ ಮಂಚೇಗೌಡರು ಅವರನ್ನು ಇದೇ ಸಮಯದಲ್ಲಿ ನೆನೆಯುತ್ತೇನೆ. ಇವರು ಉಪಚುನಾವಣೆಗೆ ನಿಂತಾಗ ದೊಡ್ಡ ಹೋರಾಟವೇ ನಡೆಯಿತು. ಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್, ಸಾಹಿತಿ ನಾ. ಡಿಸೋಜಾ ಅವರು, ಜನಪದ ಕಲಾವಿದೆ ಸುಕ್ರೀ ಬೊಮ್ಮಗೌಡ ಅವರಿಗೂ ಇದೇ ವೇಳೆ ಸಂತಾಪಗಳನ್ನು ಸೂಚಿಸುತ್ತೇನೆ. ಇವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.