ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muda Case: ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತೆ ಸಂಕಷ್ಟ; ಇಡಿ ತನಿಖೆಗೆ ಹೈಕೋರ್ಟ್‌ ಅನುಮತಿ

Muda Case: ಮುಡಾ ಮಾಜಿ ಆಯುಕ್ತ ಡಾ.ಡಿ.ಬಿ.ನಟೇಶ್ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. ಆದರೆ ಡಿ.ಬಿ.ನಟೇಶ್ ವಿರುದ್ಧದ ಸಮನ್ಸ್ ರದ್ದು ಆದೇಶ ತಡೆ ಇಲ್ಲ ಎಂದು ತಿಳಿಸಿದೆ.

ಮುಡಾ ಪ್ರಕರಣದಲ್ಲಿ ಇಡಿ ತನಿಖೆಗೆ ಹೈಕೋರ್ಟ್‌ ಅನುಮತಿ

Profile Prabhakara R Apr 2, 2025 6:17 PM

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ (Muda Case) ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನಿಖೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. ಮುಡಾ ಮಾಜಿ ಆಯುಕ್ತ ಡಾ.ಡಿ.ಬಿ.ನಟೇಶ್ ಹೇಳಿಕೆ ಆಧರಿಸಿ ಇತರೆ ಆರೋಪಿಗಳ ವಿರುದ್ಧದ ತನಿಖೆಗೆ ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದೆ. ಆದರೆ ಡಿ.ಬಿ.ನಟೇಶ್ ವಿರುದ್ಧದ ಸಮನ್ಸ್ ರದ್ದು ಆದೇಶ ತಡೆ ಇಲ್ಲ ಎಂದು ತಿಳಿಸಿದೆ. ಇದೇ ವೇಳೆ ಹೈಕೋರ್ಟ್ ಏಕಸದಸ್ಯಪೀಠದ ಆದೇಶಕ್ಕೆ ತಡೆಯಾಜ್ಞೆ ನೀಡಲು ವಿಭಾಗೀಯ ಪೀಠ ನಿರಾಕರಿಸಿದೆ.

ಡಿ.ಬಿ.ನಟೇಶ್ ಹೇಳಿಕೆ ಆಧರಿಸಿ ಇಡಿ ತನಿಖೆ ನಡೆಸಬಹುದು. ಅಲ್ಲದೇ ಶೋಧನೆ ವೇಳೆ ಸಿಕ್ಕ ದಾಖಲೆ ಆಧಾರಿಸಿಯೂ ತನಿಖೆ ನಡೆಸಬಹುದು ಎಂದು ಸಿಜೆ ಅಂಜಾರಿಯಾ, ನ್ಯಾ.ಅರವಿಂದ್ ಅವರಿದ್ದ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆ ಏ.8ಕ್ಕೆ ಮುಂದೂಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ಇಡಿ ಪ್ರತಿಭಟನಾ ಅರ್ಜಿ

ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್‌ ಸಲ್ಲಿಸಿರುವುದನ್ನು ವಿರೋಧಿಸಿ ಜಾರಿ ನಿರ್ದೇಶನಾಲಯವು ವಿಚಾರಣಾಧೀನ ನ್ಯಾಯಾಲಯಕ್ಕೆ ಮಂಗಳವಾರ ಪ್ರತಿಭಟನಾ ಅರ್ಜಿ ಸಲ್ಲಿಸಿದೆ. ಮುಕ್ತಾಯ ವರದಿಗೆ ಸಂಬಂಧಿಸಿದಂತೆ ಆದೇಶ ಪ್ರಕಟಿಸುವುದಕ್ಕೂ ಮುನ್ನ ಬಾಧಿತರಾಗಿರುವ ಅರ್ಜಿ ವಿಚಾರಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ.

ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ ಎಂ ಪಾರ್ವತಿ, ಅವರ ಸಹೋದರ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ ದೇವರಾಜು ಅವರಿಗೆ ಲೋಕಾಯುಕ್ತ ಪೊಲೀಸರು 2025ರ ಫೆಬ್ರವರಿ 20ರಂದು ಕ್ಲೀನ್‌ಚಿಟ್‌ ನೀಡಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮುಕ್ತಾಯ ವರದಿ ಸಲ್ಲಿಸಿದ್ದರು.

ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಖಾಸಗಿ ದೂರು ನೀಡಿದ್ದನ್ನು ಆಧರಿಸಿ 2024ರ ಸೆ. 25ರಂದು ಎಫ್‌ಐಆರ್‌ ದಾಖಲಿಸಲು ಮೈಸೂರು ಲೋಕಾಯುಕ್ತ ಪೊಲೀಸರು ಆದೇಶಿಸಿದ್ದರು. ಇದರ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಇದರ ಬೆನ್ನಿಗೇ, 2024ರ ಅ. 1ರಂದು ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿತ್ತು. ಇದು ಪಿಎಂಎಲ್‌ ಕಾಯಿದೆ ಅಡಿ ಷೆಡ್ಯೂಲ್‌ ಅಪರಾಧವಾಗಿದೆ. ತದನಂತರ ಇಡಿ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ತನಿಖೆ ಆರಂಭಿಸಿತ್ತು. ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ಮಾಹಿತಿಯನ್ನು ಲೋಕಾಯುಕ್ತದ ಜತೆ ಹಂಚಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಪಿಎಂಎಲ್‌ ಕಾಯಿದೆ ಅಡಿ ನಿವೇಶನ ಹಂಚಿಕೆ ಸೇರಿರುವುದನ್ನೂ ಒಳಗೊಂಡು ಹಲವು ಅಕ್ರಮಗಳು ಬೆಳಕಿಗೆ ಬಂದಿದ್ದು, ಸಿದ್ದರಾಮಯ್ಯ ಆಪ್ತರು ಅನಗತ್ಯ ಪ್ರಭಾವ ಬೀರಿದ್ದಾರೆ. ಈ ಸಂಬಂಧ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರ ಜೊತೆ ಹಂಚಿಕೊಂಡಿದ್ದು, ಅದನ್ನೂ ಲೋಕಾಯುಕ್ತರು ಪರಿಗಣಿಸಿಲ್ಲ ಎಂದು ದೂರಲಾಗಿದೆ.

ಮುಡಾದಲ್ಲಿ ಭಾರಿ ಹಗರಣ ನಡೆದಿದೆ ಎಂದು ಖಾಸಗಿ ದೂರಿನಲ್ಲಿ ವಿವರಿಸಲಾಗಿದ್ದು, ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿಸುವಾಗ ಅದನ್ನೂ ಉಲ್ಲೇಖಿಸಿದ್ದಾರೆ. ಇದನ್ನು ಹೈಕೋರ್ಟ್‌ ಏಕಸದಸ್ಯ ಪೀಠ ಎತ್ತಿ ಹಿಡಿದಿದೆ. ಸಂಗ್ರಹಿಸಲಾಗಿರುವ ಸಾಕ್ಷಿಗಳಲ್ಲಿ ಮುಡಾ ನಿವೇಶನ ಹಂಚಿಕೆಯಲ್ಲಿ ಅಪಾರ ಪ್ರಮಾಣದ ಹಗರಣ ನಡೆದಿದ್ದು, ಇದರಲ್ಲಿ ನಗದು, ಚರ/ಸ್ಥಿರಾಸ್ತಿಯನ್ನು ನಿವೇಶನ ಹಂಚಿಕೆ ಮಾಡಲು ಮುಡಾ ಅಧಿಕಾರಿಗಳು ಪಡೆದಿದ್ದಾರೆ. ಇದನ್ನು ಲೋಕಾಯುಕ್ತ ಪೊಲೀಸರಿಗೆ ಒದಗಿಸಲಾಗಿದೆ. ಅದಾಗ್ಯೂ, ಯಾವುದೇ ಕ್ರಮವಾಗಿಲ್ಲ ಎಂದು ಇ.ಡಿ. ಹೇಳಿದೆ.

ಈ ಸುದ್ದಿಯನ್ನೂ ಓದಿ | KSDL: ಕೆಎಸ್‌ಡಿಎಲ್‌ಗೆ 416 ಕೋಟಿ ರೂ. ದಾಖಲೆಯ ನಿವ್ವಳ ಲಾಭ

ಹೀಗಾಗಿ, ಪ್ರೆಡಿಕೇಟ್‌ ಅಪರಾಧದಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಅವರ ಸಹೋದರ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಮತ್ತು ಭೂಮಾಲೀಕ ಜೆ.ದೇವರಾಜು ಅವರಿಗೆ ಕ್ಲೀನ್‌ಚಿಟ್‌ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಅಂತಿಮ ವರದಿಯನ್ನು ಒಪ್ಪಬಾರದು. ಸೂಕ್ತ ತನಿಖೆಗೆ ನಿರ್ದೇಶಿಸಬೇಕು ಎಂದು ಇ.ಡಿ. ಕೋರಿದೆ.