ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನಿಗೂಢ ಅಂಟಾರ್ಕ್ಟಿಕಾ ನಿಜವಾಗಿಯೂ ಹೀಗೆ ಕಾಣಿಸುತ್ತಾ? ಗಗನಯಾತ್ರಿಗಳು ರಿಲೀಸ್‌ ಮಾಡಿದ ವಿಡಿಯೊದಲ್ಲೇನಿದೆ?

Viral Video: ನಾಲ್ಕು ಖಾಸಗಿ ಗಗನಯಾತ್ರಿಗಳು ಕಣ್ಣಾರೆ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಏಕಕಾಲದಲ್ಲಿ ನೋಡಿದ್ದಾರೆ. ಸ್ಪೇಸ್‌ಎಕ್ಸ್‌ನ ಫ್ರಾಮ್ 2 ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ‌ಪ್ರಯಾಣ ಬೆಳೆಸಿದ ಅವರು ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಆ ಕುರಿತಾದ ವಿಡಿಯೋ - ಮಾಹಿತಿ ಇಲ್ಲಿದೆ ನೋಡಿ

ನಿಗೂಢ ಅಂಟಾರ್ಕ್ಟಿಕಾ ನಿಜವಾಗಿಯೂ ಹೀಗೆ ಕಾಣಿಸುತ್ತಾ? ವಿಡಿಯೊ ವೈರಲ್‌

Profile Sushmitha Jain Apr 3, 2025 3:16 PM

ಬೆಂಗಳೂರು: ಈ ಬ್ರಹ್ಮಾಂಡ ನಿಜಕ್ಕೂ ವಿಸ್ಮಯಗಳ ಆಗರ. ನಾವೆಷ್ಟು ಅನ್ವೇಷಣೆಗಳನ್ನು ಮಾಡಿದರೂ, ಅದು ಇನ್ನೂ ಹೊಸತನ್ನು ನಮ್ಮ ಕಣ್ಣ ಮುಂದೆ ತಂದಿಡುತ್ತಲೇ ಇದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ನಾವು ಎಷ್ಟೇ ಪ್ರಗತಿ ಸಾಧಿಸಿದ್ದರೂ, ಹಲವಾರು ಹೊಸ ಕೌತುಕಗಳು ನಮ್ಮ ಹುಬ್ಬೇರಿಸುವಂತೆ ಮಾಡುತ್ತದೆ. ಇಂತಹುದೇ ಒಂದು ವಿಡಿಯೋ(Viral Video) ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪ್ರಕೃತಿಯ ವಿಸ್ಮಯಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ. ಬಾಹ್ಯಾಕಾಶ ಯಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ನಾಲ್ಕು ಖಾಸಗಿ ಗಗನಯಾತ್ರಿ(Private Astronauts)ಗಳು ಕಣ್ಣಾರೆ ಉತ್ತರ ಮತ್ತು ದಕ್ಷಿಣ ಧ್ರುವ(North and South Poles)ಗಳನ್ನು ಏಕಕಾಲದಲ್ಲಿ ನೋಡಿದ್ದಾರೆ. ಸ್ಪೇಸ್‌ಎಕ್ಸ್‌ನ ಫ್ರಾಮ್ 2 ಮಿಷನ್‌(SpaceX's Fram2 mission)ನಲ್ಲಿ ಬಾಹ್ಯಾಕಾಶ(Space Station)ಕ್ಕೆ ‌ಪ್ರಯಾಣ ಬೆಳೆಸಿದ ಅವರು ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಬ್ಬರಾದ ಚುನ್ ವಾಂಗ್, ಜಗತ್ತೇ ಬೆರಗಾಗುವಂತಹ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಭೂಮಿಯಿಂದ 460 ಕಿ.ಮೀ ಮೇಲಿನಿಂದ ನೋಡಿದಾಗ ಅಂಟಾರ್ಕ್ಟಿಕಾ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುವ ವಿಡಿಯೊ ಇದಾಗಿದೆ.

"ಹಲೋ, ಅಂಟಾರ್ಕ್ಟಿಕಾ," ಅವರು ಬರೆದುಕೊಂಡಿರುವ ವಾಂಗ್‌, "ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಭಿನ್ನವಾಗಿ, ಭೂಮಿಯಿಂದ 460 ಕಿ.ಮೀ ಮೇಲಿನಿಂದ ನೋಡಿದರೆ, ಇದು ಶುದ್ಧ ಬಿಳಿ ಬಣ್ಣದಲ್ಲಿ ಕಾಣಿಸುತ್ತಿದೆ. ಯಾವುದೇ ಮಾನವ ಚಟುವಟಿಕೆ ಗೋಚರಿಸುವುದಿಲ್ಲ" ಎಂದು ಅವರು ಹೇಳಿದ್ದಾರೆ. ಸ್ಪೇಸ್‌ಎಕ್ಸ್‌ನ ಕ್ರೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿರುವ ಗುಮ್ಮಟಾಕಾರದ, ಸಂಪೂರ್ಣ ಗಾಜಿನ ವೀಕ್ಷಣಾ ಕಿಟಕಿ ʼಡ್ರಾಗನ್ಸ್ ಕುಪೋಲಾʼವನ್ನು ಸಿಬ್ಬಂದಿ ತೆರೆದಾಗ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಈ ಡ್ರಾಗನ್ಸ್ ಕುಪೋಲಾವು ಗಗನಯಾತ್ರಿಗಳಿಗೆ ಬಾಹ್ಯಾಕಾಶ ಮತ್ತು ಭೂಮಿಯನ್ನು ನೌಕೆಯೊಳಗಿಂದ ನೋಡಲು ಅವಕಾಶ ಮಾಡಿಕೊಡುತ್ತದೆ.



ವಿಡಿಯೋಗೆ ನೆಟ್ಟಿಗರು ಏನು ಹೇಳಿದ್ದಾರೆ?

ಭೌಗೋಳಿಕ ವಿಜ್ಞಾನ ಮತ್ತು ಬಾಹ್ಯಾಕಾಶದ ಕುರಿತು ಆಸಕ್ತಿ ಇರುವವರಷ್ಟೇ ಅಲ್ಲದೇ, ಬೇರೆಯವರು ಕೂಡಾ ಈ ವಿಸ್ಮಯಕಾರಿ ವಿಡಿಯೋ ನೋಡಿ ʼಭೇಷ್‌ʼ ಎಂದು ಹೇಳಿದ್ದಾರೆ. “ಇದು ಸಾಗುತ್ತಿರುವಾಗ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಹಂಚಿಕೊಳ್ಳುತ್ತೀರಾ? ಆ ಪರ್ವತದಂತಹ ಪ್ರದೇಶವನ್ನು ಮತ್ತು ಅದರ ವಿವರಗಳನ್ನು ನಾನು ಗಂಟೆಗಟ್ಟಲೆ ನೋಡಬಲ್ಲೆ" ಎಂದು ಒಬ್ಬರು ಬರೆದಿದ್ದಾರೆ.ಮತ್ತೊಬ್ಬರು, "ಇದು ಅದ್ಭುತವಾದ ವಿಡಿಯೋ" ಎಂದರೆ, ಮತ್ತೊಬ್ಬರು, “ಉಸಿರು ಬಿಗಿಹಿಡಿದು ನೋಡಬೇಕಾದ ವಿಡಿಯೋ, ಇದನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ.

ಸ್ಪೇಸ್‌ಎಕ್ಸ್‌ನ ಫ್ರಾಮ್2 ಗಗನಯಾತ್ರಿಗಳು ಯಾರು?

ಸ್ಪೇಸ್‌ಎಕ್ಸ್‌ನ ಫ್ರಾಮ್2 ಮಿಷನ್ ಯಶಸ್ವಿಯಾಗಿ ಉಡಾವಣೆಯಾದ ನಂತರ ನಾಲ್ಕು ಖಾಸಗಿ ಗಗನಯಾತ್ರಿಗಳು ಭೂಮಿಯ ಸುತ್ತ ಧ್ರುವದಿಂದ ಧ್ರುವಕ್ಕೆ ಪ್ರದಕ್ಷಿಣೆ ಹಾಕುತ್ತಿದ್ದಾರೆ. ಇದು ಭೂಮಿಯ ಧ್ರುವಗಳ ಮೇಲೆ ಸುತ್ತುವ ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟವಾಗಿದೆ. ಈ ಕಾರ್ಯಾಚರಣೆಯಲ್ಲಿ ಮಾಲ್ಟಾದ ಚುನ್ ವಾಂಗ್ ನೇತೃತ್ವ ವಹಿಸಿದ್ದಾರೆ. ಅವರೊಂದಿಗೆ ಜರ್ಮನಿಯ ಪೈಲಟ್ ರಾಬಿಯಾ ರೋಗ್, ನಾರ್ವೆಯ ವಾಹನ ಕಮಾಂಡರ್ ಜಾನಿಕೆ ಮಿಕೆಲ್ಸೆನ್ ಮತ್ತು ಆಸ್ಟ್ರೇಲಿಯಾದ ವೈದ್ಯಕೀಯ ಅಧಿಕಾರಿ ಮತ್ತು ಮಿಷನ್ ತಜ್ಞ ಎರಿಕ್ ಫಿಲಿಪ್ಸ್ ಕೂಡಾ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ವಾಂಗ್ ಒಬ್ಬ ಕ್ರಿಪ್ಟೋಕರೆನ್ಸಿ ಉದ್ಯಮಿ ಮತ್ತು ಮಿಕೆಲ್ಸೆನ್ ಒಬ್ಬ ಚಲನಚಿತ್ರ ನಿರ್ಮಾಪಕ. ರಾಬಿಯಾ ರೋಗ್ ಎಂಜಿನಿಯರ್ ಮತ್ತು ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದರೆ, ಫಿಲಿಪ್ಸ್ ಓರ್ವ ಅಡ್ವೆಂಚರರ್ ಮತ್ತು ಗೈಡ್‌ ಅಗಿದ್ದು, ಅವರು ಈ ಹಿಂದೆ ಧ್ರುವಗಳಲ್ಲಿ ಸ್ಕೀಯಿಂಗ್‌ ಯಾತ್ರೆ ಮಾಡಿದ್ದರು.