#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Narasimharajapura News: ನರಸಿಂಹರಾಜಪುರದಲ್ಲಿ ಎಂ.ಶ್ರೀನಿವಾಸ್ ವೃತ್ತ ಉದ್ಘಾಟನೆ

Narasimharajapura News: ನರಸಿಂಹರಾಜಪುರ ಪಟ್ಟಣದ ಪ್ರವಾಸಿ ಮಂದಿರದ ಸಮೀಪ ಶುಕ್ರವಾರ ಸಂಜೆ ಎಂ. ಶ್ರೀನಿವಾಸ್ ವೃತ್ತವನ್ನು ಶಿವಮೊಗ್ಗ ಭದ್ರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ. ಅಂಶುಮಂತ್ ಉದ್ಘಾಟಿಸಿ, ಬಳಿಕ ಮಾತನಾಡಿದರು. ಈ ಕುರಿತ ವಿವರ ಇಲ್ಲಿದೆ.

ನರಸಿಂಹರಾಜಪುರದಲ್ಲಿ ಎಂ. ಶ್ರೀನಿವಾಸ್ ವೃತ್ತ ಉದ್ಘಾಟನೆ

ನರಸಿಂಹರಾಜಪುರ ಪಟ್ಟಣದಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಹುಟ್ಟುಹಬ್ಬ ಆಚರಣೆ.

Profile Siddalinga Swamy Feb 8, 2025 5:30 PM

ನರಸಿಂಹರಾಜಪುರ: ಅಧಿಕಾರವಿರಲಿ, ಅಧಿಕಾರವಿಲ್ಲದಿರಲಿ ಹಲವು ದಶಕಗಳಿಂದ ಹುಟ್ಟೂರಿನ ಅಭಿಮಾನದಿಂದ ಊರಿನ ಅಭಿವೃದ್ಧಿಗೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಶ್ರೀನಿವಾಸ್ ಅವರ ಕೊಡುಗೆ ಅನನ್ಯವಾದುದು ಎಂದು ಶಿವಮೊಗ್ಗ ಭದ್ರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ. ಅಂಶುಮಂತ್ ಹೇಳಿದರು. ಪಟ್ಟಣದ (Narasimharajapura News) ಪ್ರವಾಸಿಮಂದಿರದ ಸಮೀಪ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಎಂ. ಶ್ರೀನಿವಾಸ್ ವೃತ್ತ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

1

ವಿಧಾನಪರಿಷತ್ ಸದಸ್ಯರಾಗಿದ್ದಾಲೂ ಶ್ರೀನಿವಾಸ್ ಅವರು ಯಾವುದೇ ಸ್ವಾರ್ಥವಿಲ್ಲದೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಿದ್ದಾರೆ. ದೇವಸ್ಥಾನ,ಚರ್ಚ್, ಮಸೀದಿಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸರ್ವಧರ್ಮಿಯರ ಧಾರ್ಮಿಕ ಆಚರಣೆಗಳನ್ನು ಮಾಡಲು ಪ್ರೇರಕರಾಗಿದ್ದಾರೆ. ಸಮುದಾಯ ಭವನಗಳನ್ನು ನಿರ್ಮಿಸಿದ್ದಾರೆ. ಊರಿನ ಅಭಿವೃದ್ಧಿಗೆ ಯಾವುದೇ ಕಾಮಗಾರಿಯನ್ನು ಕೈಗೊಂಡರು ಅದನ್ನು ಪೂರ್ಣಗೊಳಿಸುವವರೆಗೂ ಬದ್ಧತೆ ಪ್ರದರ್ಶಿಸುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದ ಇಡೀ ಊರಿನ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಪ್ರವಾಸಿಮಂದಿರ ಅಭಿವೃದ್ಧಿ, ಹೊನ್ನೆಕೂಡಿಗೆ ಸೇತುವೆ ನಿರ್ಮಾಣಕ್ಕೆ ಅನುದಾನ ತರುವ ಮೂಲಕ ಉತ್ತಮ ಕಾರ್ಯ ಮಾಡಿದ್ದಾರೆ. ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಪಟ್ಟಣದ ಹಲವು ಪ್ರಮುಖ ಸ್ಥಳಗಳಿಗೆ ಮಹನೀಯರ ಹೆಸರನ್ನು ಇಡುವ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದೆ. ಅದರಂತೆ ಊರಿನ ಅಭಿವೃದ್ಧಿ ನಿಸ್ವಾರ್ಥವಾಗಿ ಶ್ರಮಿಸಿದ ಎಂ.ಶ್ರೀನಿವಾಸ್ ಅವರ ಹೆಸರನ್ನು ಅವರು ಹುಟ್ಟಿ ಬೆಳೆದ ಪ್ರದೇಶದ ವ್ಯಾಪ್ತಿಯ ವೃತ್ತಕ್ಕೆ ಇಡುವ ಮೂಲಕ ಅವರ ಹೆಸರನ್ನು ಶಾಶ್ವತವಾಗಿ ನೆನಪಿನಲ್ಲಿಡುವಂತೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ಎಂ.ಶ್ರೀನಿವಾಸ್ ಅಭಿಮಾನಿ ಬಳಗ ಹಾಗೂ ಚೈತನ್ಯ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮಾತನಾಡಿ, ಊರಿನ ಅಭಿವೃದ್ಧಿಗೆ ಶ್ರಮಿಸಿದ್ದ ಎಂ.ಶ್ರೀನಿವಾಸ್ ಅವರ ಹೆಸರನ್ನು ಪ್ರವಾಸಿಮಂದಿರದ ವೃತ್ತಕ್ಕೆ ಇಡುವಂತೆ ಪಟ್ಟಣ ಪಂಚಾಯಿತಿಗೆ ಸಂಘದಿಂದ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿ ಸರ್ವಾನುಮತದ ಒಪ್ಪಿಗೆ ಸೂಚಿಸಿತ್ತು. ಅದರಂತೆ ಅವರ ಹೆಸರನ್ನು ವೃತ್ತಕ್ಕೆ ನಾಮಕರಣಮಾಡಿ ಉದ್ಘಾಟಿಸಲಾಗಿದೆ. ಎಂ.ಶ್ರೀನಿವಾಸ್ ಅವರು ಪ್ರವಾಸಿಮಂದಿರದ ವ್ಯಾಪ್ತಿಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ, ಸಮುದಾಯ ಭವನ, ಕೋಟೆ ಮಾರಿಕಾಂಬ ದೇವಸ್ಥಾನ, ದರ್ಗಾ, ಅಲ್ ನೂರ್ ಮಸೀದಿ, ಚರ್ಚ್ ಅಭಿವೃದ್ಧಿಗೆ ಸರ್ಕಾರದ ಅನುದಾನ ಮತ್ತು ವೈಯಕ್ತಿಕವಾಗಿಯೂ ಧನ ಸಹಾಯಮಾಡಿದ್ದಾರೆ. ಹೊನ್ನೆಕೂಡಿಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗೆ ₹35ಕೋಟಿ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಗತಿಯಲ್ಲಿದೆ. ಸೇತುವೆಯಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಪಟ್ಟಣದ ರಸ್ತೆ ವಿಸ್ತರಣೆಗೆ ₹60 ಕೋಟಿ ಅನುದಾನ ಬಿಡುಗಡೆ ಹಂತದಲ್ಲಿದೆ. ಈ ರೀತಿ ಹುಟ್ಟೂರಿನ ಅಭಿಮಾನದ ಮೇಲೆ ಊರಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಅವರ ನಿಸ್ವಾರ್ಥ ಸೇವೆ ಪರಿಗಣಿಸಿ ಪ್ರವಾಸಿಮಂದಿರದ ವೃತ್ತಕ್ಕೆ ಎಂ.ಶ್ರೀನಿವಾಸ್ ವೃತ್ತ ಎಂದು ನಾಮಕರಣ ಮಾಡಲಾಗಿದೆ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಮುನಾವರ್ ಪಾಷ ಮಾತನಾಡಿ, ಪಟ್ಟಣದ ವ್ಯಾಪ್ತಿಯ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ, ಪಟ್ಟಣ ಪಂಚಾಯಿತಿಯಿಂದ ಸುಂಕದಕಟ್ಟೆವರೆಗೆ ರಸ್ತೆ ವಿಸ್ತರಣೆಗೆ ಎಂ.ಶ್ರೀನಿವಾಸ್ ಅವರು ₹60 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ. ಅಲ್ಲದೆ ಶಾಸಕ ಟಿ.ಡಿ.ರಾಜೇಗೌಡರು ಮಿನಿ ವಿಧಾನಸೌಧವನ್ನು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸುವ ಭರವಸೆ ನೀಡಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿಯೇ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು. ಬಗರ್ ಹುಕುಂ ಸಮಿತಿ ಅಧ್ಯಕ್ಷ ಈ.ಸಿ.ಜೋಯಿ, ಜಾಮೀಯ ಮಸೀದಿಯ ಕಾರ್ಯದರ್ಶಿ ಸಾಧಿಕ್ ಪಾಷ, ಪಟ್ಟಣ ಪ‍ಂಚಾಯಿತಿ ಸದಸ್ಯ ಮುಕುಂದ ಮಾತನಾಡಿದರು.

ಈ ಸುದ್ದಿಯನ್ನೂ ಓದಿ | SSLC preparatory Exam: ಫೆ.25ರಿಂದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಬಾನು, ಉಪಾಧ್ಯಕ್ಷೆ ಉಮಾಕೇಶವ್, ಸದಸ್ಯರಾದ ಶೋಜಾ, ಕುಮಾರಸ್ವಾಮಿ, ಜುಬೇದಾ, ಸುಬ್ರಹ್ಮಣ್ಯ, ಅಣ್ಣಪ್ಪ,ಮುಖಂಡರಾದ ಶಿವಣ್ಣ, ಅಬೂಬಕರ್, ಉಪೇಂದ್ರ, ಲಕ್ಷ್ಮಣ್ ಶೆಟ್ಟಿ, ಉಪೇಂದ್ರ, ಜೆಡಿಎಸ್ ಮುಖಂಡ ಅಬ್ದುಲ್ ಸುಬಾನ್, ಗ್ರಾಮ ಪಂಚಾಯಿತಿ ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು. ಕೆಕ್ ಕತ್ತರಿಸಿ ಎಂ. ಶ್ರೀನಿವಾಸ್ ಅವರ ಹುಟ್ಟುಹಬ್ಬ ಆಚರಿಸಲಾಯಿತು.