Pralhad Joshi: ವಕ್ಫ್ ಬಿಲ್ ಹರಿದು ಹಾಕೋ ಕಾಂಗ್ರೆಸಿಗರಿಗೆ ಬಿಹಾರ ಚುನಾವಣೆಯಲ್ಲಿ ಪ್ರಭಾವ ಗೊತ್ತಾಗಲಿದೆ: ಜೋಶಿ ತಿರುಗೇಟು
Pralhad Joshi: ಕೇಂದ್ರ ಸರ್ಕಾರ ಎಲ್ಲ ವಿಚಾರ ಮಾಡಿ ವಕ್ಫ್ ಸುಧಾರಣೆಗಾಗಿಯೇ ಈ ಬಿಲ್ ತಂದಿದೆ. ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸಂವಿಧಾನಿಕವಾಗಿ ಬಿಲ್ ಮಂಡನೆ ಮಾಡಿಲ್ಲ. 6 ತಿಂಗಳ ಹಿಂದಿನಿಂದಲೂ ಎಲ್ಲ ಅಳೆದು ತೂಗಿ, ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ರಚಿಸಿ, ಸುದೀರ್ಘ ಕಾಲ ಚರ್ಚೆ ನಡೆಸಿಯೇ ತಿದ್ದುಪಡಿ ಮಸೂದೆ ತಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಹುಬ್ಬಳ್ಳಿ: ವಕ್ಫ್ ಅಲ್ಲಿ ಸ್ವಜನ ಪಕ್ಷಪಾತ ತೀವ್ರವಾಗಿದೆ. ಅನೇಕರು ವಕ್ಫ್ ಆಸ್ತಿಯನ್ನು ನುಂಗುತ್ತಿದ್ದಾರೆ. ಇದನ್ನೆಲ್ಲ ತಡೆಗಟ್ಟಿ ವಕ್ಫ್‌ನ ಸದುದ್ದೇಶವನ್ನು ಎತ್ತಿ ಹಿಡಿಯಬೇಕೆಂದೇ ವಕ್ಫ್ ತಿದ್ದುಪಡಿ ಮಸೂದೆ ತರಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಸ್ಪಷ್ಟಪಡಿಸಿದರು. ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಎಲ್ಲಾ ವಿಚಾರ ಮಾಡಿ ವಕ್ಫ್ ಸುಧಾರಣೆಗಾಗಿಯೇ ಈ ಬಿಲ್ ತಂದಿದೆ. ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ವಿರುದ್ಧವಾಗಿಲ್ಲ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸಂವಿಧಾನಿಕವಾಗಿ ಬಿಲ್ ಮಂಡನೆ ಮಾಡಿಲ್ಲ. ಆರು ತಿಂಗಳ ಹಿಂದಿನಿಂದಲೂ ಎಲ್ಲ ಅಳೆದು ತೂಗಿ, ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ರಚಿಸಿ, ಸುದೀರ್ಘ ಕಾಲ ಚರ್ಚೆ ನಡೆಸಿಯೇ ತಿದ್ದುಪಡಿ ಮಸೂದೆ ತಂದಿದೆ ಎಂದು ಹೇಳಿದರು.
ಸೋನಿಯಾ ಗಾಂಧಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ
ಕಾಂಗ್ರೆಸ್ ನಾಯಕರು ತಮಗೆ ರಾಜಕೀಯ ಹಿನ್ನಡೆ ಆಗುತ್ತದೆ ಎಂಬ ಕಾರಣಕ್ಕೆ ಮಸೂದೆಗೆ ವಿರೋಧ ಮಾಡುತ್ತಿದ್ದಾರೆ. ಸೋನಿಯಾ ಗಾಂಧಿ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯೇ ಇಲ್ಲ. ರಾಜಮಾತೆ ಸುಪುತ್ರ ರಾಹುಲ್ ಗಾಂಧಿ ಈ ಹಿಂದೆ ಬಿಲ್ ಹರಿದು ಹಾಕಿದ್ದಾರೆ ಎಂದು ಸಚಿವ ಜೋಶಿ ಆರೋಪಿಸಿದರು.
ಬಿಹಾರ ಚುನಾವಣೆಯಲ್ಲಿ ಗೊತ್ತಾಗುತ್ತದೆ
ವಕ್ಫ್ ಬಿಲ್ ಹರಿದು ಹಾಕುವ ಕಾಂಗ್ರೆಸ್ಸಿಗರಿಗೆ ಬಿಹಾರ ಚುನಾವಣೆಯಲ್ಲಿ ಅದರ ಪ್ರಭಾವ ಗೊತ್ತಾಗುತ್ತದೆ. ಹೀಗಾಗಿ ವಕ್ಫ್ ಮಸೂದೆ ಬಗ್ಗೆ ತಪ್ಪಾಗಿ ಅರ್ಥ ಮಾಡಿಸುತ್ತಿದ್ದಾರೆ ಎಂದು ಜೋಶಿ ಆರೋಪಿಸಿದರು.
ಬಹಳ ಹಿಂದೂಗಳ ಆಸ್ತಿ ವಕ್ಫ್ ಆಗಿದೆ
ದೇಶದಲ್ಲಿ ವಕ್ಫ್ ಬೋರ್ಡ್ ಸ್ವತಂತ್ರವಾಗಿದೆ. ಪ್ರಶ್ನೆ ಮಾಡುವಂತೆಯೇ ಇರಲಿಲ್ಲ. ಹೀಗಾಗಿ ಅನೇಕ ಮುಸ್ಲಿಂರ ಮನೆಗಳನ್ನು ವಕ್ಫ್ ಆಸ್ತಿಯಾಗಿ ಮಾಡಿದ್ದಾರೆ. ಅಲ್ಲದೇ ಸಾಕಷ್ಟು ಮಂದಿ ಹಿಂದೂಗಳ ಆಸ್ತಿಯನ್ನೂ ವಕ್ಫ್ ಆಸ್ತಿಯಾಗಿ ಮಾಡಿದ್ದಾರೆ. ವಕ್ಫ್ ಬೋರ್ಡ್ ಅಲ್ಲಿ ತೀವ್ರ ದುರುಪಯೋಗ ಆಗಿದೆ ಎಂದು ಗಂಭೀರ ಆರೋಪ ಮಾಡಿದರು.
ಹಳೆ ಹುಬ್ಬಳ್ಳಿಯಲ್ಲಿ ಅನೇಕರ ಮುಸ್ಲಿಂ ಮನೆಗಳೂ ವಕ್ಫ್ ಆಸ್ತಿ ಆಗಿವೆ. ವಿಜಯಪುರ, ಹಾವೇರಿ, ಧಾರವಾಡ ಹೀಗೆ ಎಲ್ಲಿ ಬೇಕಲ್ಲಿ ರೈತರ ಜಮೀನು ವಕ್ಫ್ ಎಂದಾಗಿದೆ. ಇದೆಲ್ಲವನ್ನೂ ವಿಚಾರ ಮಾಡಿ ಕಡುಬಡವರ ಪರ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸಬೇಕೆಂದು ಈ ವಕ್ಫ್ ಬಿಲ್ ತರಲಾಗಿದೆ ಎಂದು ಹೇಳಿದರು.
ವಕ್ಫ್ ಬೋರ್ಡ್‌ನಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಪಾರದರ್ಶಕತೆ ತರಬೇಕಿದೆ. ಕರ್ನಾಟಕದಲ್ಲಿ 54 ಸಾವಿರ ಎಕರೆ ವಕ್ಫ್ ಜಮೀನಿದೆ. ಇದನ್ನು ಸರಿಯಾಗಿ ಬಳಸಿದ್ದರೆ ಸಾಚಾರ್ ಕಮಿಟಿ ವರದಿ ಪ್ರಕಾರ 12 ಸಾವಿರ ಕೋಟಿ ಆದಾಯ ಬರಬೇಕಿತ್ತು. ಎಲ್ಲಿದೆ? ಎಂದು ಪ್ರಶ್ನಿಸಿದ ಸಚಿವ ಜೋಶಿ, ವಕ್ಫ್ ಆಸ್ತಿ ಸಂಪೂರ್ಣ ದುರಪಯೋಗ ಆಗಿದೆ ಎಂದು ಆರೋಪಿಸಿದರು.
ನಮ್ಮ ಪೋಸ್ಟ್ ಸಹ ಹಾಕಿದ್ರು ನಾವೂ ಎಫ್‌ಐಆರ್ ಹಾಕಿದ್ದೇವೆಯೇ?
ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬರೀ ಪೋಸ್ಟ್ ಹಾಕಿದ್ದಕ್ಕೆ ಕಾಂಗ್ರೆಸ್ಸಿಗರು FIR ಹಾಕಿಸಿ ಕಿರುಕುಳ ಕೊಡುತ್ತಾರೆ ಎಂದರೆ ಇವರು ಯಾವ ಮಟ್ಟದ ದುರಾಡಳಿತ ನಡೆಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಅನೇಕ ಬಾರಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಪೋಸ್ಟ್‌ಗಳನ್ನೂ ಹಾಕಿದ್ದರು. ನಾವೂ ಹೀಗೆ ಎಫ್‌ಐಆರ್ ಹಾಕಿಸಿದ್ದೇವೆಯೇ? ಎಂದು ತರಾಟೆಗೆ ತೆಗೆದುಕೊಂಡರು.
ಪೊನ್ನಣ್ಣ ರಾಜಕೀಯಕ್ಕೆ ಯೋಗ್ಯವಲ್ಲ
ಶೌಚಾಲಯ ಕೆಟ್ಟು ಹೋಗಿದ್ದಕ್ಕೆ ಫೋಟೋ ಹಾಕಿದ್ದರೆ ಅದರಲ್ಲೆನು ತಪ್ಪು? ಎಂದು ಪ್ರಶ್ನಿಸಿದ ಸಚಿವರು, ಮೃತಪಟ್ಟ ಯುವಕ ಸೇರಿ ಇಬ್ಬರ ಮೇಲೆ ಎಫ್‌ಐಆರ್ ಹಾಕಿ ಆತ್ಮಹತ್ಯೆ ಮಟ್ಟಕ್ಕೆ ಕಿರುಕುಳ ಕೊಡುತ್ತಾರೆ ಎಂದರೆ ಪೊನ್ನಣ್ಣ ರಾಜಕೀಯಕ್ಕೆ ಯೋಗ್ಯರೇ ಅಲ್ಲ ಎಂದು ದೂರಿದರು.
ಕಾಂಗೆಸ್ಸಿಗರಲ್ಲಿ ಅಧಿಕಾರದ ಧರ್ಪ, ದುರಹಂಕಾರ ತುಂಬಿ ತುಳುಕುತ್ತಿದೆ. ಅದರ ಪರಿಣಾಮದಿಂದ ಇದೆಲ್ಲಾ ಆಗುತ್ತಿದೆ. ಕೋರ್ಟಲ್ಲಿ ಸ್ಟೇ ಇದ್ರೂ ಹೇಗೆ?, ಯಾವ ಆಧಾರದ ಮೇಲೆ ರೌಡಿ ಶೀಟರ್ ಕೇಸ್ ಹಾಕುತ್ತಾರೆ? ಎಂದು ಅವರು ಪೊಲೀಸರ ವಿರುದ್ಧ ಹರಿಹಾಯ್ದರು.
ಆತ್ಮಹತ್ಯೆ ಮಾಡಿಕೊಂಡ ಯುವಕನ ವಾಟ್ಸಪ್ ಅಲ್ಲಿ ಶಾಸಕರ ಹೆಸರು ಸ್ಪಷ್ಟವಾಗಿದೆ. ಹಾಗಿದ್ದರೂ ಪೊಲೀಸರೇಕೆ ಅವರ ಮೇಲೆಕೆ ಒಂದೂ ಕೇಸ್ ಹಾಕಿಲ್ಲ? ಎಂದು ತರಾಟೆಗೆ ತೆಗೆದುಕೊಂಡ ಜೋಶಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈ ಸುದ್ದಿಯನ್ನೂ ಓದಿ | IDBI Bank Recruitment 2025: ಐಡಿಬಿಐ ಬ್ಯಾಂಕ್‌ನಲ್ಲಿದೆ 119 ಹುದ್ದೆ; ಹೀಗೆ ಅಪ್ಲೈ ಮಾಡಿ
ನಾವೂ ಅಧಿಕಾರದಲ್ಲಿ ಇದ್ದೇವೆ. ಒಳ್ಳೆ ರೀತಿಯ ಕೆಲಸ ಮಾಡುವ ಪೊಲೀಸರೂ ನಮ್ಮಲ್ಲಿ ಇದ್ದಾರೆ. ನಾನು ಪೊಲೀಸ್ ಇಲಾಖೆಯನ್ನು ದೂಷಿಸುತ್ತಿಲ್ಲ. ಆದರೆ, ಹೈಕೋರ್ಟ್ ಸ್ಟೇ ಮಾಡಿದ ಮೇಲೂ ರೌಡಿ ಶೀಟರ್ ಹಾಕಿದ್ದರೆ, ಆ ಇಬ್ಬರೂ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು. ಅದಕ್ಕಾಗಿ ಹೈಕೋರ್ಟ್‌ನಲ್ಲಿ ಕೇಸ್ ಹಾಕಲು ಸೂಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.