CM Siddaramaiah: ಸಿಎಂ ಕಾಲಿಗೆ ಏನಾಯ್ತು? ವ್ಹೀಲ್ ಚೇರ್‌ನಲ್ಲೇ ʼಇನ್ವೆಸ್ಟ್ ಕರ್ನಾಟಕʼ ವೇದಿಕೆಗೆ ಬಂದ ಸಿದ್ದರಾಮಯ್ಯ!
CM Siddaramaiah: 'ಇನ್ವೆಸ್ಟ್ ಕರ್ನಾಟಕ-2025' ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ವ್ಹೀಲ್ ಚೇರ್‌ನಲ್ಲಿ ಆಗಮಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಇದರಿಂದ ಅವರ ಅಭಿಮಾನಿಗಳು, ಕಾರ್ಯಕರ್ತರು ಆತಂಕಗೊಂಡಿದ್ದಾರೆ. ಸಮಾವೇಶದ ಉದ್ಘಾಟನೆ ಸಂದರ್ಭದಲ್ಲೂ ಸಿಎಂ ಸಿದ್ದರಾಮಯ್ಯ ಅವರು ಪಕ್ಕದಲ್ಲಿದ್ದವರ ಸಹಾಯದಿಂದಲೇ ಎದ್ದು ನಿಂತಿರುವುದು ಕಂಡುಬಂದಿದೆ.
![ವ್ಹೀಲ್ ಚೇರ್‌ನಲ್ಲೇ ʼಇನ್ವೆಸ್ಟ್ ಕರ್ನಾಟಕʼ ವೇದಿಕೆಗೆ ಬಂದ ಸಿಎಂ](https://cdn-vishwavani-prod.hindverse.com/media/original_images/CM_Siddaramaiah_5.jpg)
![Profile](https://vishwavani.news/static/img/user.png)
ಬೆಂಗಳೂರು: 'ಇನ್ವೆಸ್ಟ್ ಕರ್ನಾಟಕ-2025' (Invest Karnataka 2025) ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ನಗರದ ಅರಮನೆ ಮೈದಾನದಲ್ಲಿ ಮಂಗಳವಾರ ಅದ್ಧೂರಿ ಚಾಲನೆ ದೊರೆತಿದೆ. ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದು, ಹಲವು ಗಣ್ಯರು ಭಾಗಿಯಾಗಿದ್ದಾರೆ. ಆದರೆ, ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ವ್ಹೀಲ್ ಚೇರ್‌ನಲ್ಲಿ ಆಗಮಿಸಿರುವುದು ಅಚ್ಚರಿಗೆ ಕಾರಣವಾಗಿದ್ದು, ಇದರಿಂದ ಅವರ ಅಭಿಮಾನಿಗಳು, ಕಾರ್ಯಕರ್ತರು ಆತಂಕಗೊಂಡಿದ್ದಾರೆ. ಸಮಾವೇಶದ ಉದ್ಘಾಟನೆ ಸಂದರ್ಭದಲ್ಲೂ ಸಿಎಂ ಸಿದ್ದರಾಮಯ್ಯ ಅವರು ಪಕ್ಕದಲ್ಲಿದ್ದವರ ಸಹಾಯದಿಂದಲೇ ಎದ್ದು ನಿಂತರು. ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೈ ಹಿಡಿದುಕೊಂಡಿದ್ದು ಕಂಡುಬಂದಿದೆ.
ಸಿಎಂ ಸಿದ್ದರಾಮಯ್ಯ ಅವರು ಎಡಗಾಲಿನ ಮಂಡಿ ನೋವಿನ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಡಾ. ಸತ್ಯನಾರಾಯಣ ಅವರು ತಪಾಸಣೆ ನಡೆಸಿ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಹಾಯಕರ ನೆರವಿನೊಂದಿಗೆ ಸಿದ್ದರಾಮಯ್ಯ ಅವರು ವ್ಹೀಲ್‌ಚೇರ್‌ನಲ್ಲೇ ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶ ʼಇನ್ವೆಸ್ಟ್ ಕರ್ನಾಟಕ 2025ʼ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್, ಡಿಸಿಎಂ ಡಿ.ಕೆ. ಶಿವಕುಮಾರ್, ಉದ್ಯಮಿ ಕಿರಣ್ ಮಜುಂದಾರ್ ಸೇರಿ ಹಲವರು ಭಾಗಿಯಾಗಿದ್ದರು. ಅಲ್ಲದೇ 19 ದೇಶಗಳ 2,000ಕ್ಕೂ ಹೆಚ್ಚು ಹೂಡಿಕೆದಾರರು, ಉದ್ಯಮಿಗಳು, ರಾಜ್ಯ ಸರ್ಕಾರದ ಸಚಿವರುಗಳು, ಶಾಸಕರು ಹಾಗೂ ಅನೇಕ ಮಂದಿ ಗಣ್ಯರು ಉಪಸ್ಥಿತರಿದ್ದರು.
ಅರಮನೆ ಮೈದಾನದಲ್ಲಿ ಆಯೋಜಿಸಿರುವ ಜಾಗತಿಕ ಹೂಡಿಕೆದಾರರ ಸಮಾವೇಶ "ಇನ್ವೆಸ್ಟ್ ಕರ್ನಾಟಕ 2025" ಕಾರ್ಯಕ್ರಮವನ್ನು ಮುಖ್ಯಮಂತ್ರಿ @siddaramaiah ಅವರು ಕೇಂದ್ರ ರಕ್ಷಣಾ ಸಚಿವರಾದ @rajnathsingh ಅವರ ಜೊತೆಗೂಡಿ ಉದ್ಘಾಟಿಸಿದರು.
— CM of Karnataka (@CMofKarnataka) February 11, 2025
ಕೇಂದ್ರ ಸಚಿವರಾದ @JoshiPralhad, ಉಪಮುಖ್ಯಮಂತ್ರಿ @DKShivakumar, ಕೈಗಾರಿಕಾ ಸಚಿವರಾದ @MBPatil, 19… pic.twitter.com/MyEkSMjnHi
ಈ ಸುದ್ದಿಯನ್ನೂ ಓದಿ | Stock Market: ಟ್ರಂಪ್ ಟ್ರೇಡ್ ವಾರ್‌ಗೆ ತತ್ತರಿಸಿದ ಸ್ಟಾಕ್ ಮಾರ್ಕೆಟ್- ಒಂದೇ ದಿನ 9 ಲಕ್ಷ ಕೋಟಿ ನಷ್ಟ!
ಫೆಬ್ರವರಿ 12 ರಿಂದ 14ರ ವರೆಗೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಸಮರ್ಥ, ಸಮಗ್ರ, ಸದೃಢ ಹಾಗೂ ತಂತ್ರಜ್ಞಾನ ಆಧಾರಿತ ಭವಿಷ್ಯವನ್ನು ಮರುಕಲ್ಪಿಸುವ ಸಲುವಾಗಿ ಜಾಗತಿಕ ಕೈಗಾರಿಕಾ ಪ್ರವರ್ತಕರೆಲ್ಲರೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೊಸ ಅವಕಾಶಗಳು ಮತ್ತು ಜಾಗತಿಕ ಪಾಲುದಾರಿಕೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಕರ್ನಾಟಕದ ಪರಿವರ್ತನಾತ್ಮಕ ಪ್ರಗತಿಯಲ್ಲಿ ಭಾಗಿಯಾಗಲು ಹೂಡಿಕೆದಾರರಿಗೆ ರಾಜ್ಯ ಸರ್ಕಾರ ಕರೆ ನೀಡಿದೆ.
ಈ ಸುದ್ದಿಯನ್ನೂ ಓದಿ | Midday Meal: ಶಾಲಾ ಮಕ್ಕಳಿಗೆ ಬೇಸಿಗೆಯಲ್ಲೂ ಬಿಸಿಯೂಟ; ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ
ಸಮಾವೇಶಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಗ್ಲೋಬಲ್ ಹೆಡ್ ಆಫ್ ಪಲ್ಸಸ್ ಕಂಪನಿಯ ಮುಖ್ಯಸ್ಥರಾದ ವಿಲ್ ವಾಚರ್ನ್ ಹಾಗೂ ಹೀರೋ ಫ್ಯೂಚರ್ ಎನರ್ಜೀಸ್ ಕಂಪನಿಯ ಮುಖ್ಯಸ್ಥರಾದ ರಾಹುಲ್ ಮಂಜಲ್ ಮತ್ತಿತರ ಉದ್ಯಮಿಗಳು ಭೇಟಿಯಾಗಿ ಹೂಡಿಕೆಯ ಉದ್ದೇಶ, ಉದ್ಯೋಗ ಸೃಷ್ಟಿಯ ಗುರಿಗಳ ಕುರಿತು ಚರ್ಚಿಸಿದರು.
'ಪ್ರಗತಿಯ ಮರು ಕಲ್ಪನೆ' ಥೀಮ್ ನೊಂದಿಗೆ ಫೆಬ್ರವರಿ 12 ರಿಂದ 14ರವರೆಗೂ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ಸಮರ್ಥ, ಸಮಗ್ರ, ಸದೃಢ ಹಾಗೂ ತಂತ್ರಜ್ಞಾನ ಆಧಾರಿತ ಭವಿಷ್ಯವನ್ನು ಮರುಕಲ್ಪಿಸುವ ಸಲುವಾಗಿ ಜಾಗತಿಕ ಕೈಗಾರಿಕಾ ಪ್ರವರ್ತಕರೆಲ್ಲರೂ ಸಮಾವೇಶದಲ್ಲಿ ಪಾಲ್ಗೊಳ್ಳುವ ತಾಣ ಇದಾಗಿದೆ. ಆವಿಷ್ಕಾರ, ಕೈಗಾರಿಕಾ ಬೆಳವಣಿಗೆ ಮತ್ತು ಜಾಗತಿಕ ಪಾಲುದಾರಿಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕದ ಅನುಕೂಲವನ್ನು ತೋರಿಸುವುದು ಈ ಸಮಾವೇಶದಲ್ಲಿ ಪ್ರಮುಖ ಗುರಿಯಾಗಿದೆ.
ಇದರಲ್ಲಿ 10 ಲಕ್ಷ ಕೋಟಿ ರೂ. ಮೊತ್ತದ ಹೂಡಿಕೆ ಪ್ರಸ್ತಾಪಗಳನ್ನು ಆಕರ್ಷಿಸುವ ಮತ್ತು ಸುಮಾರು 19 ದೇಶಗಳು ಭಾಗವಹಿಸುವ ನಿರೀಕ್ಷೆಯಿದೆ. 75 ಕ್ಕೂ ಹೆಚ್ಚು ಮಳಿಗೆಗಳು, 25 ಕ್ಕೂ ಹೆಚ್ಚು ತಾಂತ್ರಿಕ ಸೆಷನ್‌ಗಳು, 10 ಕ್ಕೂ ಹೆಚ್ಚು ದೇಶದ ಸೆಷನ್ಸ್ ಮತ್ತು SME ಸಂಪರ್ಕ ಚರ್ಚೆಗಳನ್ನು ಒಳಗೊಂಡಿರುವ ಸಮಾವೇಶವು, ಜಾಗತಿಕ ಆರ್ಥಿಕ ಪ್ರವೃತ್ತಿಗಳು, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಸ್ಥಿತಿಸ್ಥಾಪಕ ತಂತ್ರಗಳ ಬಗ್ಗೆ ಆಳವಾದ ಒಳನೋಟಗಳನ್ನು ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.