Hardik Pandya: ಭಾರತ ಗೆಲುವಿಗಿಂತ ಹೆಚ್ಚು ಸದ್ದು ಮಾಡಿದ ಪಾಂಡ್ಯ ವಾಚ್ ಮೌಲ್ಯ!
ಪಾಕಿಸ್ತಾನ(IND vs PAK) ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ಧರಿಸಿದ್ದ ಕೈ ವಾಚ್‌ನ(Hardik Pandya watch) ಬೆಲೆ ಕೇಳಿ ಕ್ರೀಡಾಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಪಾಕ್ ವಿರುದ್ಧ ಬೌಲಿಂಗ್ ವೇಳೆ ಹಾರ್ದಿಕ್ ಧರಿಸಿದ್ದ ಕೇಸರಿ ಬಣ್ಣದ ವಾಚ್‌ನ ಬೆಲೆ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.


ದುಬೈ: ಭಾನುವಾರ ದುಬೈ ಅಂಗಳದಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಭಾರತ ತಂಡ 6 ವಿಕೆಟ್ ಅಂತರದ ಗೆಲುವು ಸಾಧಿಸಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಸೆಮಿಫೈನಲ್ ಸ್ಥಾನವನ್ನು ಬಹುತೇಕ ಖಾತ್ರಿಪಡಿಸಿಕೊಂಡಿದೆ. ಆದರೆ ಭಾರತ ಪಂದ್ಯ ಜಯಿಸಿದ್ದಕ್ಕಿಂತ ಹೆಚ್ಚು ಚರ್ಚೆಯಾಗುತ್ತಿರುವ ವಿಚಾರ ಎಂದರೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಧರಿಸಿದ್ದ ವಾಚ್.
ಹೌದು, ಹಾರ್ದಿಕ್ ಪಾಂಡ್ಯ ಧರಿಸಿದ್ದ ಕೈ ವಾಚ್‌ನ ಬೆಲೆ ಕೇಳಿ ಕ್ರೀಡಾಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ಪಾಕ್ ವಿರುದ್ಧ ಬೌಲಿಂಗ್ ವೇಳೆ ಹಾರ್ದಿಕ್ ಧರಿಸಿದ್ದ ಕೇಸರಿ ಬಣ್ಣದ ವಾಚ್‌ನ ಬೆಲೆ ಬರೋಬ್ಬರಿ 7 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ರಿಚರ್ಡ್ ಮಿಲ್ಲೆ ಕಂಪನಿಯ ಅರ್‌ಎಂ 27-02 ಟೂರ್‌ಬಿಲ್ಲನ್ ರಾಲ್ ನಡಾಲ್ ಲಿಮಿಟೆಡ್ ಆವೃತ್ತಿಯ ವಾಚ್ ಇದಾಗಿದ್ದು, ಕೇವಲ 50 ವಾಚ್‌ಗಳನ್ನು ಮಾತ್ರ ತಯಾರಿಸಿ ಕಂಪನಿಯೂ ಮಾರಾಟ ನಡೆಸಿದೆ ಎನ್ನಲಾಗಿದೆ. ಇದರಲ್ಲಿ 2 ವಾಚ್‌ಗಳನ್ನು ಪಾಂಡ್ಯ ಬದ್ರರ್ಸ್ ಕೊಂಡುಕೊಂಡಿದ್ದಾರೆ.
ಇದನ್ನೂ ಓದಿ IND vs PAK: ಕೊಹ್ಲಿ ಶತಕ ವೈಭವ; ಪಾಕ್ ವಿರುದ್ಧ ಭಾರತಕ್ಕೆ 6 ವಿಕೆಟ್ ಜಯ
ಎಂದಿನಂತೆ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಈ ಬಾರಿಯೂ ಹಲವು ತಾರೆಯರ ಹಾಜರಿದ್ದು ಬೆಂಬಲ ಸೂಚಿಸಿದರು. ಬಾಲಿವುಡ್ ನಟಿ ಸೋನಂ ಕಪೂರ್, ಟಾಲಿವುಡ್ ನಟ ಚಿರಂಜೀವಿ ಹಾಗೂ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಪಂದ್ಯ ವೀಕ್ಷಿಸಿದರು. ಇವರ ಜತೆ ಬೆನ್ನು ನೋವಿನ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿರುವ ವೇಗಿ ಜಸ್‌ಪ್ರೀತ್ ಬುಮ್ರಾ, ಟಿ20 ನಾಯಕ ಸೂರ್ಯಕುಮಾರ್, ಯುವ ತಾರೆಗಳಾದ ತಿಲಕ್ ವರ್ಮ, ಅಭಿಷೇಕ್ ಶರ್ಮ ಹಾಜರಿದ್ದರು. ರೋಹಿತ್ ಪತ್ನಿ ರಿತಿಕಾ ಕೂಡ ಕಾಣಿಸಿಕೊಂಡಿದ್ದರು.
ಇಲ್ಲಿನ ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್ ಬಾರಿಸಿತು, ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಭಾರತ 42.3 ಓವರ್‌ಗಳಲ್ಲಿ 4 ವಿಕೆಟ್‌ನಷ್ಟಕ್ಕೆ 244 ರನ್ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಚೇಸಿಂಗ್ ವೇಳೆ ಅಮೋಘ ಬ್ಯಾಟಿಂಗ್ ನಡೆಸಿದ ಕೊಹ್ಲಿ 14 ತಿಂಗಳ ಬಳಿಕ ಶತಕ ಬಾರಿಸಿ ಸಂಭ್ರಮಿಸಿದರು. ಶ್ರೇಯಸ್ ಅಯ್ಯರ್ ಕೂಡ ಅರ್ಧಶತಕ ಬಾರಿಸಿ ಮಿಂಚಿದರು. 67 ಎಸೆತ ಎದುರಿಸಿದ ಅಯ್ಯರ್ 5 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 56 ರನ್ ಬಾರಿಸಿದರು. ಅಂತಿಮ ಹಂತದವರೆಗೂ ಬ್ಯಾಟಿಂಗ್ ನಡೆಸಿದ ಕೊಹ್ಲಿ 111 ಎಸೆತಗಳಿಂದ ಭರ್ತಿ 100 ರನ್ ಬಾರಿಸಿ ಅಜೇಯರಾಗಿ ಉಳಿದರು.