Samarjit Lankesh: ಸಮರ್ಜಿತ್ ಲಂಕೇಶ್ ಕೈ ಹಿಡಿದ ಅದೃಷ್ಟ; ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅವಕಾಶ
ಇಂದ್ರಜಿತ್ ಲಂಕೇಶ್ ಅವರ ʼಗೌರಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಸಮರ್ಜಿತ್ ಲಂಕೇಶ್ ಸದ್ಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಮುಂಬರುವ ಚಿತ್ರದಲ್ಲಿ ಸಮರ್ಜಿತ್ ಅಭಿನಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಮರ್ಜಿತ್ ಲಂಕೇಶ್ (ಇನ್‌ಸ್ಟಾಗ್ರಾಂ ಚಿತ್ರ).

ಬೆಂಗಳೂರು: ಕಳೆದ ವರ್ಷ ತೆರೆಕಂಡ 'ಗೌರಿ' (Gowri) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕನ್ನಡದ ಹಿರಿಯ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ (Samarjit Lankesh) ಲಕ್ ಬದಲಾಗಿದೆ. ಇಂದ್ರಜಿತ್ ಲಂಕೇಶ್ ಆ್ಯಕ್ಷನ್ ಕಟ್ ಹೇಳಿದ್ದ 'ಗೌರಿ' ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಇದು ಕಮಾಲ್ ಮಾಡದಿದ್ದರೂ ಸಮರ್ಜಿತ್ ಸಿನಿಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಅವರು ಬಾಲಿವುಡ್ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈ ನಡುವೆ ಅವರು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಮಾತ್ರವಲ್ಲ ಈಗಾಗಲೇ ಅವರು ತಮ್ಮ ಪಾಲಿನ ಚಿತ್ರೀಕರಣವನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಹಾಗಾದರೆ ಇದು ಯಾವ ಚಿತ್ರ? ಯಾರೆಲ್ಲ ನಟಿಸುತ್ತಿದ್ದಾರೆ? ಇಲ್ಲಿದೆ ವಿವರ.
ಸ್ಯಾಂಡಲ್‌ವುಡ್ ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂದಿನ ಚಿತ್ರ ʼವೃಷಭʼ (Vrushabha)ದಲ್ಲಿ ಸಮರ್ಜಿತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ನಾಯಕನಾಗಿ ಬಹು ಭಾಷಾ ನಟ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯಿಸುತ್ತಿದ್ದಾರೆ. ಅವರ ಮಗನ ಪಾತ್ರದಲ್ಲಿ ಸಮರ್ಜಿತ್ ನಟಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಂದೆ-ಮಗನ ಬಾಂಧವ್ಯದ ಕಥೆ
ನಂದ ಕಿಶೋರ್ ಅವರ ಮೊದಲ ಪ್ಯಾನ್ ಇಂಡಿಯಾ ಚಿತ್ರ ಈ ʼವೃಷಭʼ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ಕೊನೆಯ ಹಂತದ ಶೂಟಿಂಗ್‌ಗೆ ಸಿದ್ದತೆ ನಡೆಸಲಾಗುತ್ತಿದೆ. ಭರಪೂರ ಆ್ಯಕ್ಷನ್ ದೃಶ್ಯಗಳನ್ನು ಹೊಂದಿರುವ ಈ ಸಿನಿಮಾದ ಕಥೆ ತಂದೆ-ಮಗನ ಬಾಂಧವ್ಯದ ಸುತ್ತ ಸಾಗುತ್ತದೆ. ಜತೆಗೆ ತೆರೆಮೇಲೆ 500 ವರ್ಷಗಳ ಹಿಂದಿನ ಕಥೆಯನ್ನು ಅನಾವರಣಗೊಳಿಸಲಿದೆ ಎನ್ನಲಾಗಿದೆ.
500 ವರ್ಷಗಳ ಹಿಂದಿನ ಕಥೆಯೊಂದಿಗೆ ಪ್ರಸ್ತುತ ಕಾಲಘಟ್ಟದ ಸನ್ನಿವೇಶವೂ ಜತೆ ಜತೆಗೆ ಸಾಗುವ ಈ ಚಿತ್ರದಲ್ಲಿ ಸಾಕಷ್ಟು ಫ್ಯಾಂಟಸಿ ಅಂಶಗಳೂ ಇವೆಯಂತೆ. ಈ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚಿತ್ರ ತೆರೆ ಕಾಣುವ ಸಾಧ್ಯತೆ ಇದೆ.
ಈ ಚಿತ್ರದಲ್ಲಿ ಮೋಹನ್ ಲಾಲ್ ಅವರ ಮಗನ ಪಾತ್ರದಲ್ಲಿ ಸಮರ್ಜಿತ್ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಅಧಿಕೃತ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಮೊದಲಿಗೆ ಈ ಪಾತ್ರಕ್ಕೆ ಆಯ್ಕೆಯಾಗಿದ್ದ ಬಹುಭಾಷಾ ನಟ ರೋಷನ್ ಮೇಕ ಅನಿವಾರ್ಯ ಕಾರಣಗಳಿಂದ ಹೊರ ನಡೆದಿದ್ದರಿಂದ ಸಮರ್ಜಿತ್‌ಗೆ ಅವಕಾಶ ಲಭಿಸಿದೆ. ಕಳೆದ 4 ತಿಂಗಳಿನಿಂದಲೂ ಈ ಚಿತ್ರದಲ್ಲಿ ತೊಡಗಿಸಿಕೊಂಡಿರುವ ಸಮರ್ಜಿತ್ ಮುಂಬೈ ಮತ್ತಿತರ ಕಡೆಗಳಲ್ಲಿ ನಡೆದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಕುದುರೆ ಸವಾರಿ, ಕತ್ತಿ ವರಸೆ ಮುಂತಾದ ಕಸರತ್ತು ಕಲಿತಿದ್ದಾರೆ.
ಈ ಸುದ್ದಿಯನ್ನೂ ಓದಿ: Actor Yash: ʼರಾಮಾಯಣʼ ಅಖಾಡಕ್ಕೆ ರಾಕಿ ಭಾಯ್ ಎಂಟ್ರಿ; ಮುಂಬೈಯಲ್ಲಿ ಶೂಟಿಂಗ್ ಆರಂಭಿಸಿದ ಯಶ್
2023ರಲ್ಲಿ ಆರಂಭವಾದ ಈ ಚಿತ್ರ ಅನಿವಾರ್ಯ ಕಾರಣಗಳಿಂದ ಕೆಲವು ದಿನಗಳ ಕಾಲ ಸ್ಥಗಿತಗೊಂಡಿತ್ತು. ಇದೀಗ ಚಿತ್ರೀಕರಣ ಪುನರಾರಂಭಗೊಂಡಿದೆ. ಮಲಯಾಳಂ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಶೂಟಿಂಗ್ ನಡೆಯುತ್ತಿದ್ದು, ಬಳಿಕ ಕನ್ನಡ, ತಮಿಳು ಮತ್ತು ಹಿಂದಿಗೆ ಡಬ್ ಆಗಲಿದೆ. ಈ ಚಿತ್ರದಲ್ಲಿ ಕನ್ನಡತಿ ರಾಗಿಣಿ ದ್ವಿವೇದಿ, ಚಂದ್ರಕಾಂತ್, ರಾಮಚಂದ್ರ ರಾಜು, ನೇಹಾ ನಕ್ಸೇನಾ, ಯಶೋದಾ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.