Basanagowda Patil Yatnal: ಯತ್ನಾಳ್ ಮೌನದ ಗುಟ್ಟೇನು ?
ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿನಡೆಸುತ್ತಿದ್ದ ಯತ್ನಾಳ್ ಶೋಕಾಸ್ ನೋಟಿಸ್‌ಗೆ ಉತ್ತರಿಸಿದ ಬಳಿಕವೂ ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿದ್ದರು. ಆದರೆ ಮೂರು ದಿನಗಳ ಹಿಂದೆ ನಡೆದ ಆಪ್ತರ ಸಭೆಯ ಬಳಿಕ ಬಹಿರಂಗ ಹೇಳಿಕೆಯನ್ನು ಸಂಪೂರ್ಣ ವಾಗಿ ನಿಲ್ಲಿಸಿರುವ ಯತ್ನಾಳ್, ಮಾಧ್ಯಮ ಗಳು ಪ್ರಶ್ನಿಸಿದರೂ ‘ವಿಜಯೇಂದ್ರ ಕಡೆಗೇ ಹೋಗಿ’ ಎನ್ನುವ ಮೂಲಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ

ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್

ಪದೇಪದೆ ಮಾತನಾಡಿ ವರಿಷ್ಠರ ಎದುರು ಕೆಟ್ಟವರಾಗಬೇಡಿ ಎಂದು ಆಪ್ತರಿಂದ ಸಲಹೆ
ನಿತ್ಯ ವಿಜಯೇಂದ್ರ ವಿರುದ್ಧ ಟೀಕಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗು ತ್ತಿದೆ.
ಇನ್ಮುಂದೆ ಬಹಿರಂಗ ಹೇಳಿಕೆ ನೀಡದಿರಲು ತೀರ್ಮಾನ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನಿತ್ಯ ಬೆಂಕಿಯುಂಡೆ ಉಗುಳುತ್ತಿದ್ದ ಬಂಡಾಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕಳೆದ ಮೂರು ದಿನಗಳಿಂದ ‘ಮೌನ’ಕ್ಕೆ ಶರಣಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ಇದಕ್ಕೆ ಕಾರಣ ‘ಆಪ್ತ’ರ ಆಪ್ತ ಸಲಹೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಹೌದು, ನಿತ್ಯ ಬೆಳಗ್ಗೆ ಮಾಧ್ಯಮಗಳ ಮುಂದೆ ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆ ಸುತ್ತಿದ್ದ ಯತ್ನಾಳ್ ಶೋಕಾಸ್ ನೋಟಿಸ್‌ಗೆ ಉತ್ತರಿಸಿದ ಬಳಿಕವೂ ವಿಜಯೇಂದ್ರ ವಿರುದ್ಧ ನೇರ ಆರೋಪ ಮಾಡಿದ್ದರು. ಆದರೆ ಮೂರು ದಿನಗಳ ಹಿಂದೆ ನಡೆದ ಆಪ್ತರ ಸಭೆಯ ಬಳಿಕ ಬಹಿರಂಗ ಹೇಳಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿರುವ ಯತ್ನಾಳ್, ಮಾಧ್ಯಮ ಗಳು ಪ್ರಶ್ನಿಸಿದರೂ ‘ವಿಜಯೇಂದ್ರ ಕಡೆಗೇ ಹೋಗಿ’ ಎನ್ನುವ ಮೂಲಕ ಅಂತರ ಕಾಯ್ದು ಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Basanagouda Patil Yatnal: ಯತ್ನಾಳ್‌ಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿಯಿಂದ ಮತ್ತೆ ನೋಟಿಸ್
ಆರಂಭದಲ್ಲಿ ಶೋಕಾಸ್ ನೋಟಿಸ್‌ನಿಂದಾಗಿ ಮೌನಕ್ಕೆ ಶರಣಾಗಿದ್ದಾರೆ ಎನ್ನುವ ಮಾತು ಗಳು ಕೇಳಿಬಂದಿತ್ತು. ಆದರೆ ಆಪ್ತರ ಸಭೆಯಲ್ಲಿ, ನಿತ್ಯ ವಿಜಯೇಂದ್ರ ವಿರುದ್ಧ ಟೀಕಿಸುವು ದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದೆ. ಆದ್ದರಿಂದ ಮುಂದಿನ ಕೆಲ ದಿನಗಳ ಕಾಲ ಯತ್ನಾಳ್ ಮೌನವಾಗಿರುವುದು ಲೇಸು ಎನ್ನುವ ಅಭಿಪ್ರಾಯ ಕೇಳಿಬಂದಿತ್ತು. ಇದರ ಬೆನ್ನಲ್ಲೇ, ಯತ್ನಾಳ್ ಮೌನಕ್ಕೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ರಾಜ್ಯ ಬಿಜೆಪಿ ಸಂಘಟನೆಯಲ್ಲಿ ಬಹು ದೊಡ್ಡ ಹಿನ್ನಡೆಯಾಗಿದ್ದರೂ, ಯತ್ನಾಳ್ ನಿತ್ಯ ವಾಗ್ದಾಳಿ ನಡೆಸುವುದನ್ನೇ ಮುಂದಿಟ್ಟು ಕೊಂಡು ಸಂಘಟನೆಯಲ್ಲಿನ ಹಿನ್ನಡೆಯನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿವೆ. ಆದ್ದರಿಂದ ಮುಂದಿನ ದಿನದಲ್ಲಿ ಯತ್ನಾಳ್ ಅವರು ಮಾಧ್ಯಮಗಳ ಮುಂದೆ ಮಾತನಾಡು ವುದಕ್ಕಿಂತ ಮೌನವಾಗಿಯೇ ತಮ್ಮ ಹೋರಾಟವನ್ನು ಮುಂದುವರಿಸಲಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಬೇಕು ಎನ್ನುವುದಿದ್ದರೆ ಅದನ್ನು ಬಣದ ಇತರೆ ನಾಯಕರ ಮೂಲಕ ವಿಷಯ ಮುಟ್ಟಿಸುವ ಲೆಕ್ಕಾಚಾರದಲ್ಲಿ ಯತ್ನಾಳ್ ಬಣ ನಾಯಕ ರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂಟಿ ಭೇಟಿಗೆ ತೀರ್ಮಾನ
ಸದ್ಯ ಎಲ್ಲವೂ ಶಾಂತವಾಗಿದ್ದರೂ ವಿಜಯೇಂದ್ರ ವಿರೋಧಿ ಬಣದಿಂದ ಪ್ರಯತ್ನ ಮುಂದುವರಿಯುವುದು ಖಚಿತ ಎನ್ನಲಾಗಿದೆ. ದೆಹಲಿ ನಾಯಕರನ್ನು ಮುಂದಿನ ದಿನದಲ್ಲಿ ಗುಂಪಾಗಿ ಭೇಟಿಯಾಗುವುದಕ್ಕಿಂತ ವೈಯಕ್ತಿಕವಾಗಿ ದೆಹಲಿ ಸಂಪರ್ಕವನ್ನು ಬಳಸಿಕೊಂಡು ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿಯಲ್ಲಿನ ಸಂಘಟನೆಯ ಸಮಸ್ಯೆಗೆ ಸಂಬಂಧಿಸಿದಂತೆ ವರದಿ ನೀಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲರ ವಿರುದ್ಧ ಕ್ರಮವಹಿಸಿ
ಇನ್ನು ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿರುವ ವಿಷಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪ್ರಮುಖವಾಗಿ, ಯತ್ನಾಳ್ ಅವರು ಮಾಧ್ಯಮದ ಮುಂದೆ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೆ ಯತ್ನಾಳ್ ರೀತಿಯಲ್ಲಿಯೇ, ರೇಣುಕಾಚಾರ್ಯ ಅವರು ನಿತ್ಯ ಮಾತ ನಾಡುತ್ತಿದ್ದಾರೆ, ಆದರೆ ಅವರ ವಿರುದ್ಧ ಯಾವುದೇ ಕ್ರಮವನ್ನು ಏಕೆ ತೆಗೆದುಕೊಂಡಿಲ್ಲ? ಇದೇ ರೀತಿ ಕಳೆದೊಂದು ವರ್ಷದಿಂದ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಬಾರ್ ಅವರು ಪಕ್ಷದಲ್ಲಿಟ್ಟುಕೊಂಡೇ ಕಾಂಗ್ರೆಸ್ ನಾಯಕರ ಪರವಾಗಿ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಏಕೆ ಕ್ರಮವಹಿಸಿಲ್ಲ ಎನ್ನುವ ಬಗ್ಗೆಯೂ ಮುಂದಿನ ದಿನದಲ್ಲಿ ಪ್ರಶ್ನಿಸಲು ಬಣ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.