LSG vs MI: 2025ರ ಐಪಿಎಲ್ 16ನೇ ಪಂದ್ಯಕ್ಕೆ ಲಖನೌ-ಮುಂಬೈ ಸಂಭಾವ್ಯ ಪ್ಲೇಯಿಂಗ್ XI ವಿವರ!
MI vs LSG Match Preview: ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡನೇ ಗೆಲುವಿನ ಹುಡುಕಾಟದಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಏಪ್ರಿಲ್ 4 ರಂದು ನಡೆಯುವ 16ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಮಹತ್ವದ ಪಂದ್ಯಕ್ಕೆ ಲಖನೌದ ಏಕನಾ ಕ್ರೀಡಾಂಗಣ ಸಜ್ಜಾಗಿದೆ.

ಮುಂಬೈಇಂಡಿಯನ್ಸ್‌ಗೆ ಲಖನೌ ಸೂಪರ್ ಜಯಂಟ್ಸ್ ಸವಾಲು.

ಲಖನೌ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಎರಡನೇ ಗೆಲುವಿನ ನಿರೀಕ್ಷೆಯಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಏಪ್ರಿಲ್ 4 ರಂದು ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುವ ಟೂರ್ನಿಯ 16ನೇ ಪಂದ್ಯದಲ್ಲಿ (MI vs LSG) ಕಾದಾಟ ನಡೆಸಲಿವೆ. ಈ ಎರಡೂ ತಂಡಗಳು ಇಲ್ಲಿಯವರೆಗೂ ಆಡಿದ ಮೂರು ಪ್ರತ್ಯೇಕ ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದು, ಇನ್ನುಳಿದ ಎರಡರಲ್ಲಿ ಸೋಲು ಅನುಭವಿಸಿವೆ. ಹಾಗಾಗಿ ಇದೀಗ ಎರಡನೇ ಗೆಲುವನ್ನು ತನ್ನದಾಗಿಸಿಕೊಳ್ಳಲು ಉಭಯ ತಂಡಗಳು ಎದುರು ನೋಡುತ್ತಿವೆ.
ಟೂರ್ನಿಯಲ್ಲಿ ತನ್ನ ಆರಂಭಿಕ ಎರಡು ಪಂದ್ಯಗಳನ್ನು ಸೋತಿದ್ದ ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್, ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಪಡೆದಿತ್ತು. ಇನ್ನು ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡ ತವರಿನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಇದೀಗ ತವರು ಅಂಗಣದಲ್ಲಿ ಮುಂಬೈ ಎದುರು ಶಕ್ತಿಯುತವಾಗಿ ಕಮ್‌ಬ್ಯಾಕ್ ಮಾಡಲು ಎಲ್‌ಎಸ್‌ಜಿ ಯೋಜನೆಯನ್ನು ಹಾಕಿಕೊಂಡಿದೆ.
ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ಸಂಘಟಿತ ಪ್ರದರ್ಶನವನ್ನು ತೋರಿತ್ತು. ಅದರಲ್ಲಿಯೂ ವಿಶೇಷವಾಗಿ ಮುಂಬೈ ವೇಗಿ ಅಶ್ವಿನಿ ಕುಮಾರ್ ಮಾರಕ ದಾಳಿ ನಡೆಸಿ 24 ರನ್ ನೀಡಿ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಮೊದಲು ಬ್ಯಾಟ್ ಮಾಡಿದ್ದ ಕೋಲ್ಕತಾವನ್ನು 116 ರನ್‌ಗಳಿಗೆ ಆಲ್‌ಔಟ್ ಮಾಡಲು ಕಾರಣರಾಗಿದ್ದರು. ಬಳಿಕ ಸಾಧಾರಣ ಗುರಿಯನ್ನು ಹಿಂಬಾಲಿಸಿದ್ದ ಮುಂಬೈ ಇಂಡಿಯನ್ಸ್, ಕೇವಲ 12.2 ಓವರ್‌ಗಳಿಗೆ ಗೆದ್ದು ಬೀಗಿತ್ತು. ಮುಂಬೈ ಪರ ಸ್ಪೋಟಕ ಬ್ಯಾಟ್ ಮಾಡಿದ್ದ ರಿಯಾನ್ ರಿಕೆಲ್ಟನ್ 41 ಎಸೆತಗಳಲ್ಲಿ 62 ರನ್‌ಗಳನ್ನು ಸಿಡಿಸಿದ್ದರು. ಇದರೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಗೆಲುವನ್ನು ತನ್ನದಾಗಿಸಿಕೊಂಡಿತ್ತು.
ಇನ್ನು ರಿಷಭ್ ಪಂತ್ ನಾಯಕತ್ವದ ಲಖನೌ ಸೂಪರ್ ಜಯಂಟ್ಸ್ ತಂಡ ತವರು ಅಂಗಣದ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 8 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಪಂಜಾಬ್ ತಂಡ, ಎಲ್ಲಾ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿತ್ತು. ಈ ಹಿನ್ನೆಲೆಯಲ್ಲಿ ಲಖನೌ ಸೋಲು ಅನುಭವಿಸಬೇಕಾಯಿತು. ಲಖನೌಗೆ ನಿಕೋಲಸ್ ಪೂರನ್ ಕೀ ಬ್ಯಾಟ್ಸ್‌ಮನ್ ಆಗಿದ್ದು, ಇವರು 189 ರನ್‌ಗಳ ಮೂಲಕ ಆರೆಂಜ್ ಕ್ಯಾಪ್ ಅನ್ನು ತನ್ನಲ್ಲಿಯೇ ಉಳಿಸಿಕೊಂಡಿದ್ದಾರೆ.
ಪಿಚ್ ರಿಪೋರ್ಟ್
ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಣ ಪಂದ್ಯ ನಡೆಯುವ ಲಖನೌದ ಏಕನಾ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಸಮತೋಲನದಿಂದ ಕೂಡಿದೆ. ಲಖನೌ ಹಾಗೂ ಪಂಜಾಬ್ ಕಳೆದ ಪಂದ್ಯವನ್ನು ಆಡಿದ್ದು ಕೂಡ ಇದೇ ಅಂಗಣದಲ್ಲಿ, ಹಾಗಾಗಿ ಇಲ್ಲಿ 170 ರನ್‌ಗಳು ಸರಾಸರಿ ಮೊತ್ತವಾಗಿದೆ. ಈ ಎರಡೂ ತಂಡಗಳಲ್ಲಿ ಬ್ಯಾಟಿಂಗ್ ವಿಭಾಗ ಅತ್ಯಂತ ಬಲಿಷ್ಠವಾಗಿರುವ ಕಾರಣ ಹೈಸ್ಕೋರಿಂಗ್ ನಿರೀಕ್ಷೆ ಮಾಡಬಹುದಾಗಿದೆ. ಇಲ್ಲಿನ ಕಂಡೀಷನ್ಸ್‌ನಲ್ಲಿ ಚೇಸಿಂಗ್ ಮಾಡಲು ನಾಯಕರು ಬಯಸುತ್ತಾರೆ. ಏಕೆಂದರೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಪಿಚ್ ಅನುಕೂಲವಾಗಲಿದೆ. ಅಲ್ಲದೆ ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಬರುವುದರಿಂದ, ಬೌಲರ್‌ಗಳಿಗೆ ಚೆಂಡಿನ ಮೇಲೆ ಹಿಡಿತ ಸಾಧಿಸಲು ಕಷ್ಟವಾಗುತ್ತದೆ.
ಮುಂಬೈ-ಲಖನೌ ಮುಖಾಮುಖಿ ದಾಖಲೆ
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಲಖನೌ ಸೂಪರ್ ಜಯಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಆರು ಬಾರಿ ಕಾದಾಟ ನಡೆಸಿವೆ. ಇದರಲ್ಲಿ ಎಲ್‌ಎಸ್‌ಜಿ ಐದು ಬಾರಿ ಗೆಲುವು ಪಡೆದಿದೆ. ಇನ್ನು ಮುಂಬೈ ಕೇವಲ ಒಂದು ಬಾರಿ ಗೆದ್ದಿದೆ. 2024ರ ಐಪಿಎಲ್ ಟೂರ್ನಿಯಲ್ಲಿ ಕೊನೆಯ ಬಾರಿ ಮುಖಾಮುಖಿಯಲ್ಲಿ ಮುಂಬೈ ಎದುರು ಲಖನೌ ತಂಡ 18 ರನ್‌ಗಳಿಂದ ಗೆಲುವು ಪಡೆದಿತ್ತು.
ಇತ್ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಲಖನೌ ಸೂಪರ್ ಜಯಂಟ್ಸ್: ಮಿಚೆಲ್ ಮಾರ್ಷ್, ಏಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ರಿಷಭ್ ಪಂತ್ (ನಾಯಕ, ವಿ.ಕೀ), ಆಯುಷ್ ಬದೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ದಿಗ್ವೇಶ್ ರಾಠಿ, ಶಾರ್ದುಲ್ ಠಾಕೂರ್, ಆವೇಶ್ ಖಾನ್, ರವಿ ಬಿಷ್ಣೋಯ್
ಇಂಪ್ಯಾಕ್ಟ್ ಪ್ಲೇಯರ್: ಪ್ರಿನ್ಸ್ ಯಾದವ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ (ವಿ.ಕೀ), ವಿಲ್ ಜ್ಯಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧಿರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಅಶ್ವಿನಿ ಕುಮಾರ್
ಇಂಪ್ಯಾಕ್ಟ್ ಪ್ಲೇಯರ್: ವಿಘ್ನೇಶ್ ಪುತ್ತೂರು
ಪಂದ್ಯದ ವಿವರ
ಐಪಿಎಲ್ 2025
16ನೇ ಪಂದ್ಯ
ಮುಂಬೈ ಇಂಡಿಯನ್ಸ್ vs ಲಖನೌ ಸೂಪರ್ ಜಯಂಟ್ಸ್
ದಿನಾಂಕ: ಏಪ್ರಿಲ್ 4, 2025
ಸಮಯ: ಸಂಜೆ 07:30
ಸ್ಥಳ: ಏಕನಾ ಕ್ರಿಕೆಟ್ ಕ್ರೀಡಾಂಗಣ, ಲಖನೌ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್‌ಸ್ಟ್ರೀಮಿಂಗ್: ಡಿಸ್ನಿ ಹಾಟ್‌ಸ್ಟಾರ್