#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Makar Sankranti 2025: ಮಕರ ಸಂಕ್ರಮಣ; ಹೊರಗೆ ಸುಗ್ಗಿ, ಒಳಗೆ ಹುಗ್ಗಿ!

Makar Sankranti 2025: ದೇಶದೆಲ್ಲೆಡೆ ಇಂದು ಮಕರ ಸಂಕ್ರಾಂತಿಯ ಸಂಭ್ರಮ. ದೇಶದ ವಿವಿಧ ಭಾಗಗಳಲ್ಲಿ ಸಂಕ್ರಾಂತಿಯನ್ನು ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ವಿಶೇಷತೆಯ ಪರಿಚಯ ಇಲ್ಲಿದೆ.

Makar Sankranti 2025: ಮಕರ ಸಂಕ್ರಮಣ; ಹೊರಗೆ ಸುಗ್ಗಿ, ಒಳಗೆ ಹುಗ್ಗಿ!

Profile Ramesh B Jan 14, 2025 7:30 AM
ಬೆಂಗಳೂರು: ಬದಲಾವಣೆಯನ್ನು ನಾವೆಲ್ಲ ಬಯಸುತ್ತೇವೆ, ಸ್ವಾಗತಿಸುತ್ತೇವೆ. ಅದರಲ್ಲೂ ಬದಲಾವಣೆಯ ರೂಪದಲ್ಲಿ ಒಳಿತು ಬಂದಿತು, ಸುಖ-ಸಂತೋಷಗಳನ್ನು ತಂದಿತು ಎಂದಾದರೆ ಅದನ್ನು ಸಂಭ್ರಮದಿಂದ ಆಚರಿಸುತ್ತೇವೆ. ಮಕರ ಸಂಕ್ರಮಣ ಅಂತಹ ಕಾಲಗಳಲ್ಲಿ ಒಂದು. ಖಗೋಳ ರೀತ್ಯಾ ಹೇಳುವುದಾದರೆ, ದಕ್ಷಿಣದಿಂದ ಉತ್ತರದೆಡೆಗೆ ಸೂರ್ಯನು ತನ್ನ ಪಥವನ್ನು ಬದಲಿಸುವ ಕಾಲ; ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ಸಂಧಿ ಕಾಲ. ಆದರೆ ಮಕರ ಸಂಕ್ರಾಂತಿಯ ವಿಶೇಷತೆ ಅದಷ್ಟಕ್ಕೆ ಮುಗಿಯುವುದಿಲ್ಲ (Makar Sankranti 2025).
ಸೂರ್ಯನು ಇನ್ನೊಂದು ರಾಶಿಯನ್ನು ಪ್ರವೇಶಿಸುವ ಸಂಧಿ ಕಾಲ ಇದೊಂದೇ ಅಲ್ಲ, ಎಲ್ಲ 12 ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಮಣ ಸಂಭವಿಸುತ್ತದೆ. ಆದರೆ ಕಟಕ ಸಂಕ್ರಾಂತಿಯನ್ನು ದಕ್ಷಿಣಾಯಣವೆಂದು ಕರೆದರೆ, ಮಕರ ಸಂಕ್ರಾಂತಿಯನ್ನು ಉತ್ತರಾಯಣ ಎನ್ನುವುದು ಕ್ರಮ. ದಕ್ಷಿಣಾಯಣ ಆರಂಭವಾಗುತ್ತಿದ್ದಂತೆ ಹಗಲು ಕ್ರಮೇಣ ಕಡಿಮೆಯಾಗಿ, ರಾತ್ರಿ ದೀರ್ಘವಾಗುತ್ತಾ ನಡೆದರೆ, ಉತ್ತರಾಯಣದ ನಂತರ ರಾತ್ರಿ ಸಮಯವು ಕುಗ್ಗಿ ಹಗಲು ಹಿಗ್ಗತೊಡಗುತ್ತದೆ. ರಾತ್ರಿಯನ್ನು ತಮ, ಪಾಪ, ಅಶುಭ ಎಂದೆಲ್ಲಾ ಕರೆಯುವ ವಾಡಿಕೆಯಿದ್ದರೆ, ಬೆಳಕು ಎಂದರೆ ಜ್ಞಾನ, ಪುಣ್ಯ, ಶುಭ ಮುಂತಾದ ಮಂಗಳಕರವಾದ ಭಾವಗಳನ್ನು ಸಹಜವಾಗಿ ಮೂಡಿಸುತ್ತದೆ. ಧನು ಮಾಸದಲ್ಲಿ ಶುಭಕಾರ್ಯಗಳ ಮೇಲೆ ಹೇರಿದ್ದ ನಿಯಂತ್ರಣಗಳು ಸಡಿಲಗೊಂಡು, ಎಲ್ಲ ಶುಭಕಾರ್ಯಗಳಿಗೆ ಅನುವು ಮಾಡಿಕೊಡುವ ಪುಣ್ಯಕಾಲ. ಹಾಗಾಗಿ ಉತ್ತರಾಯಣದಲ್ಲಿ ವೈಕುಂಠದ ಬಾಗಿಲು ತೆರೆಯುತ್ತದೆ ಎನ್ನುತ್ತಾ, ಬದುಕಿಗೆ ಮಾತ್ರವಲ್ಲ, ಸಾಯುವುದಕ್ಕೂ ಸೂಕ್ತ ಸಮಯವೆಂದು ಕರೆಯಲಾಗುತ್ತದೆ.
ಪಾಪ-ಪುಣ್ಯ, ಶುಭಾಶುಭಗಳೆಲ್ಲ ಅವರವರ ನಂಬಿಕೆ ಎನ್ನಬಹುದು. ಆದರೆ ಒಳ್ಳೆಯ ಕೆಲಸಗಳನ್ನು ಮಾಡುವುದು, ಹಂಚಿ ತಿನ್ನುವುದು, ಬಂಧು-ಮಿತ್ರರೊಂದಿಗೆ ಕಲೆಯುವುದು, ಸಿಹಿ ಮಾಡಿ ಸಂಭ್ರಮಿಸುವುದು- ಇಂಥ ಯಾವುದಕ್ಕೂ ಸಂಕ್ರಾಂತಿಯಂಥ ಹಬ್ಬಗಳು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸುತ್ತವೆ. ಕಾರಣ ಇದು ಸುಗ್ಗಿಯ ಹಬ್ಬ. ಎಳ್ಳು-ಬೆಲ್ಲ, ಕಬ್ಬು-ಬಾಳೆಹಣ್ಣು ಸೇರಿದಂತೆ ಹೊಸಫಲಗಳನ್ನು ಆಪ್ತರಿಗೆ ಹಂಚಿ ಸಂಭ್ರಮಿಸುವುದು, ಹೊಸ ಅಕ್ಕಿ-ಬೇಳೆಗಳನ್ನು ಬಳಸಿ ಸಿಹಿ ಪೊಂಗಲ್‌ ಮಾಡುವುದು, ಸುಗ್ಗಿ-ಹುಗ್ಗಿ ಎನ್ನುತ್ತಾ ಹುಗ್ಗಿಯ ಜೊತೆಗೆ ಹೊಸ ಬೆಲ್ಲ-ಹುಣಸೆಹಣ್ಣಿನಲ್ಲಿ ಗೊಜ್ಜು ಮಾಡಿ ಸವಿಯುವುದು- ಇವೆಲ್ಲವಕ್ಕೆ ಹೆಚ್ಚಿನ ಶಾಸ್ತ್ರ-ನಂಬಿಕೆಗಳು ಬೇಕಿಲ್ಲ. ಬದಲಾವಣೆಯನ್ನು ಕಂಡು ಸಂಭ್ರಮಿಸುವ ಮನಸ್ಸಿದ್ದರೆ ಸಾಕು.
ಸಾಮಾಜಿಕವಾಗಿಯೂ ಇದು ಚಟುವಟಿಕೆಗಳು ಗರಿಗೆದರುವ ಕಾಲ. ಶುಭ ಕಾರ್ಯಗಳಿಗೆ ಚಾಲನೆ ದೊರೆಯುವ ಸಮಯದ ಜೊತೆಗೆ, ಚಳಿಯಲ್ಲಿ ಮುದುರಿದ್ದ ಮೈ-ಮನಗಳನ್ನು ಕೊಡವಿ ಎದ್ದು, ಊರೆಲ್ಲ ತಿರುಗುತ್ತ ʻಎಳ್ಳು ಬೀರುವʼ ಮೋಜಿನ ಸಮಯವಿದು. ಹಲವು ಪ್ರಾಂತ್ಯಗಳಲ್ಲಿ ಹಾಡು-ಹಸೆ-ನೃತ್ಯಗಳು ಈ ಆಚರಣೆಯ ಅವಿಭಾಜ್ಯ ಅಂಗಗಳೆನಿಸುವೆ. ಕುಸ್ತಿ ಸ್ಪರ್ಧೆಗಳು ಚಳಿಗೆ ಸೆಡ್ಡು ಹೊಡೆಯಲು ಜನರನ್ನು ಪ್ರಚೋದಿಸಿದರೆ, ಗಾಳಿಪಟದ ಉತ್ಸವಗಳು ಆಗಸವನ್ನು ರಂಗೇರಿಸುತ್ತವೆ. ಸಂಕ್ರಾಂತಿ ಮುಗಿದ ಕೆಲವೇ ದಿನಗಳಲ್ಲಿ ಊರ ಜಾತ್ರೆಗಳು, ಹಬ್ಬಗಳು, ಪರಿಷೆಗಳು, ರಥೋತ್ಸವಗಳು ನಾಡಿನೆಲ್ಲೆಡೆ ಗದ್ದಲ ಮಾಡಲಾರಂಭಿಸುತ್ತವೆ.
image-f617cf9c-95a9-4dc1-9a7b-298502bba8ef.jpg
ಸಂಕ್ರಾಂತಿ ಎಲ್ಲಿ-ಹೇಗೆ?
ಇದು ಹಲವು ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಎಳ್ಳು- ಬೆಲ್ಲ, ಸಕ್ಕರೆ ಅಚ್ಚು, ಕಬ್ಬು-ಕದಳಿಗಳನ್ನು ಆಪ್ತರಿಗೆ ಹಂಚುತ್ತಾ ಸಂಭ್ರಮಿಸುವ ಮಕರ ಸಂಕ್ರಾಂತಿ ಕರ್ನಾಟಕದಲ್ಲಿ ಕಾಣುವ ಕ್ರಮ. ಇದೇ ದಿನ ರಾಸುಗಳ ಮೈತೊಳೆದು, ಸಿಂಗರಿಸಿ ಕಿಚ್ಚು ಹಾಯಿಸುವುದು ರಾಜ್ಯದ ಹಲವೆಡೆಗಳಲ್ಲಿ ಚಾಲ್ತಿಯಲ್ಲಿದೆ. ಇದರಿಂದ ಅವುಗಳನ್ನು ಕಾಡುವ ಪೀಡೆಗಳು ತೊಲಗುತ್ತವೆ ಎಂಬುದು ಇದರ ಹಿಂದಿನ ನಂಬಿಕೆ. ʻಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿʼ ಎಂದು ಹಾರೈಸುವ ಕ್ರಮ ಮಹಾರಾಷ್ಟ್ರದಲ್ಲೂ ನಡೆದುಬಂದಿದೆ. ಸಿಹಿ-ಖಾರ ಪೊಂಗಲ್‌ ಸವಿಯುವ ಪದ್ಧತಿ ತಮಿಳುನಾಡಿನದ್ದು. ಕೇರಳದಲ್ಲಿ ಶಬರಿಮಲೆಯ ಮಕರ ಜ್ಯೋತಿಯನ್ನು ವೀಕ್ಷಿಸುವುದು ಅತ್ಯಂತ ಪವಿತ್ರ ಎಂಬ ನಂಬಿಕೆಯಿದೆ.
ಗುಜರಾತ್‌ನ ಹಲವೆಡೆಗಳಲ್ಲಿ ಈ ಸಮಯದಲ್ಲಿ ಗಾಳಿಪಟದ ಉತ್ಸವಗಳು ನಡೆಯುತ್ತವೆ. ಇದು ಜೋರು ಗಾಳಿಯ ಕಾಲವೂ ಹೌದಾದ್ದರಿಂದ, ಗಾಳಿಪಟ ಹಾರಿಸಲು ಚಿಣ್ಣರು ಹಿರಿಯರೆನ್ನದೆ ಎಲ್ಲ ವಯೋಮಾನದ ಉತ್ಸಾಹಿಗಳು ಸೇರುತ್ತಾರೆ, ಆಗಸವನ್ನೆಲ್ಲ ಬಣ್ಣಗಳಲ್ಲಿ ತುಂಬಿ ಸಂಭ್ರಮಿಸುತ್ತಾರೆ. ಪಶ್ಚಿಮ ಬಂಗಾಳದಲ್ಲೂ ಹೊಸ ಧಾನ್ಯಗಳು ಮತ್ತು ಬೆಲ್ಲವನ್ನು ಬಳಸಿ ಸಿಹಿ ಮಾಡಿ ಸಂಕ್ರಾಂತಿ ಆಚರಿಸುತ್ತಾರೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಇದನ್ನು ಭೋಗಾಲಿ ಬಿಹು ಎಂದು ಆಚರಿಸಿದರೆ, ಪಂಜಾಬ್‌, ಹರಿಯಾಣ ಪ್ರಾಂತ್ಯಗಳಲ್ಲಿ ಇದನ್ನು ಲೋಹ್ರಿ ಎನ್ನುತ್ತಾರೆ. ಮಕರ ಸಂಕ್ರಾಂತಿ, ಪೊಂಗಲ್‌, ಲೋಹ್ರಿ, ಬೋಗಾಲಿ ಬಿಹು, ದಹಿ ಚುರಾ, ತಿಲ್‌ ಸಂಕ್ರಾಂತ್‌ ಮುಂತಾದ ಹೆಸರಿನ ಸುಗ್ಗಿ ಹಬ್ಬಗಳು ದೇಶದ ಉದ್ದಗಲಕ್ಕೆ ಆಚರಿಸಲ್ಪಡುತ್ತವೆ. ಇದು ಭಾರತದಲ್ಲಿ ಮಾತ್ರವಲ್ಲ, ನೇಪಾಳ, ಥಾಯ್ಲೆಂಡ್‌, ಶ್ರೀಲಂಕಾ, ಮ್ಯಾನ್ಮಾರ್‌, ಕಾಂಬೋಡಿಯ ದೇಶಗಳಲ್ಲೂ ಆಚರಣೆಯಲ್ಲಿದೆ.
ನಮ್ಮನ್ನು ಪೊರೆಯುವ ಸೂರ್ಯ, ರಾಸುಗಳು, ಭೂಮಿಗೆ ಕೃತಜ್ಞತೆ ಸಲ್ಲಿಸುತ್ತ, ಪ್ರಕೃತಿಯಲ್ಲಿನ ಸಂಕ್ರಮಣವನ್ನು ಆಸ್ವಾದಿಸುತ್ತಾ, ಆಪ್ತರೊಂದಿಗೆ ಕಲೆತು, ಸಿಹಿ ತಿಂದು ಕಹಿ ಮರೆತು, ವರ್ಷವಿಡೀ ಸಮೃದ್ಧಿ ತುಂಬಿರಲಿ ಎಂದು ಹಾರೈಸುವ ಈ ಸಮಯ ಎಲ್ಲರಿಗೂ ಶುಭ ತರಲಿ.
https://youtu.be/PDS6kmePznA
ಈ ಸುದ್ದಿಯನ್ನೂ ಓದಿ: ಸಂಕ್ರಾಂತಿಯಂದು ಎಳ್ಳಿನ ಬಗ್ಗೆಯೇ ಒಂದಿಷ್ಟು ಒಳ್ಳೆಯ ಮಾತು