Narada Sanchara: ನಿತೀಶರ ಉತ್ತರಾಧಿಕಾರಿ?
ಬಿಜೆಪಿಯ ಒಂದಿಷ್ಟು ಕಾರ್ಯಕರ್ತರು, “ನಿತೀ ಶರು ಈಚೀಚೆಗೆ ಸಾರ್ವಜನಿಕವಾಗಿ ಏನೇನೋ ಬಡ ಬಡಿಸುವುದು ಜಾಸ್ತಿಯಾಗುತ್ತಿರುವುದು ಗೊತ್ತಿ ರುವ ಸಂಗತಿಯೇ. ಸಾಲದೆಂಬಂತೆ, ಅವರು ಪ್ರತಿನಿಧಿ ಸುವ ಸಂಯುಕ್ತ ಜನತಾದಳ ಪಕ್ಷದ ವರ್ಚ ಸ್ಸೂ ಕ್ರಮೇಣ ಕುಗ್ಗುತ್ತಿದೆ. ಹೀಗಾಗಿ ಮಗ ನಿಶಾಂತ್ ರನ್ನು ತಮ್ಮ ಉತ್ತರಾಧಿಕಾರಿಯಾಗಿ ಬಿಂಬಿಸಲು ‘ಪಲ್ಟು ರಾಮ್’ ನಿತೀಶರು ಏನೋ ಪ್ಲಾನ್ ಮಾಡಿರಬೇಕು. ಅದರ ಭಾಗವೇ ಈ ಎಲ್ಲ ಕಸರತ್ತುಗಳು" ಎಂದು ತಮ್ಮ ತಮ್ಮಲ್ಲೇ ಗುಸುಗುಸು ಮಾತನಾಡಿಕೊಳ್ಳು ತ್ತಿದ್ದಾರಂತೆ!!
ನಾರದ ಸಂಚಾರ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ದೇಶದ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು. ಕಾಲಾನುಕಾಲಕ್ಕೆ ಮತ್ತು ಇಚ್ಛಾನುಸಾರವಾಗಿ ರಾಜಕೀಯ ಮೈತ್ರಿಪಾಳಯಗಳನ್ನು ಬದಲಿ ಸುವ ಕಾರಣದಿಂದ ‘ಪಲ್ಟು ರಾಮ್’ ಎಂಬ ಕುಖ್ಯಾತಿಯೂ ನಿತೀಶರ ಹೆಗಲೇರಿ ಬಿಟ್ಟಿದೆ. ಅಷ್ಟಕ್ಕೂ ಅದು ಅವರೇ ಮಾಡಿಕೊಂಡ ಯಡವಟ್ಟಾಗಿರುವುದರಿಂದ, ಇದರಲ್ಲಿ ಮಿಕ್ಕವರ ಕೈವಾಡವೇನೂ ಇಲ್ಲವೆನ್ನಿ! ಇಂಥ ವಿಲಕ್ಷಣ ರಾಜಕಾರಣಿಯಾದ ನಿತೀಶರು ತಮ್ಮ ಏಕೈಕ ಪುತ್ರ ನಿಶಾಂತ್ ಕುಮಾರ್ ಅವರನ್ನು ರಾಜಕೀಯ ಕ್ಷೇತ್ರದಿಂದ ಮತ್ತು ಪ್ರಚಾರದ ಪ್ರಭಾವಲಯದಿಂದ ದೂರವಿರಿಸಿದ್ದುಂಟು. ಎಂಜಿನಿಯ ರಿಂಗ್ ಪದವಿ ಪಡೆದಿರುವ ಹೆಗ್ಗಳಿಕೆ ನಿಶಾಂತ್ ಅವರದ್ದು.
ವಾಸ್ತವವಾಗಿ, ನಿಶಾಂತ್ ಅವರು ಜೀವನೋಪಾಯಕ್ಕಾಗಿ ಏನು ಮಾಡುತ್ತಾರೆ ಎಂಬುದು ಆ ರಾಜ್ಯ ದ ಬಹುತೇಕರಿಗೆ ತಿಳಿದಂತಿಲ್ಲ. ತಮಗೆ ಅಧ್ಯಾತ್ಮದತ್ತ ಒಲವಿದೆ ಎಂಬುದಾಗಿ ನಿಶಾಂತ್ ಅವರೇ ಒಮ್ಮೆ ಹೇಳಿಕೊಂಡಿದ್ದುಂಟು. ಇಂಥವರು ಕೆಲ ದಿನಗಳ ಹಿಂದೆ ಅಪರೂಪಕ್ಕೆ ಎಂಬಂತೆ ತಮ್ಮ ತಂದೆಯವರ ಜತೆ ಸಾರ್ವಜನಿಕ ವಾಗಿ ಕಾಣಿಸಿಕೊಂಡಾಗ ರಾಜಕೀಯದ ಪಡಸಾಲೆಗಳಲ್ಲಿ ಒಂದ ಷ್ಟು ಸಂಚಲನ ಮೂಡಿದ್ದುಂಟು. ಏಕೆಂದರೆ, ಆ ಸಂದರ್ಭದಲ್ಲಿ ಹಾಜರಿದ್ದ ಮಾಧ್ಯಮ ಮಿತ್ರ ರೊಂದಿಗೆ ನಿಶಾಂತರು ಹೀಗೆಯೇ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತಾ, ತಂದೆ ನಿತೀಶ ರನ್ನೂ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಮ್ಮ ತಾತನನ್ನೂ ಬಾಯ್ತುಂಬಾ ಹೊಗಳಲು ಶುರು ಮಾಡಿಬಿಟ್ಟರಂತೆ.
ಇದನ್ನೂ ಓದಿ: Narada Sanchara: ಹೀಗೊಬ್ಬ ಸೂತ್ರಧಾರಿ
ಈ ಬೆಳವಣಿಗೆಯನ್ನು ವಾರೆಗಣ್ಣಲ್ಲೇ ಗಮನಿಸಿದ ಬಿಜೆಪಿಯ ಒಂದಿಷ್ಟು ಕಾರ್ಯಕರ್ತರು, “ನಿತೀ ಶರು ಈಚೀಚೆಗೆ ಸಾರ್ವಜನಿಕವಾಗಿ ಏನೇನೋ ಬಡ ಬಡಿಸುವುದು ಜಾಸ್ತಿಯಾಗುತ್ತಿರುವುದು ಗೊತ್ತಿ ರುವ ಸಂಗತಿಯೇ. ಸಾಲದೆಂಬಂತೆ, ಅವರು ಪ್ರತಿನಿಧಿಸುವ ಸಂಯುಕ್ತ ಜನತಾದಳ ಪಕ್ಷದ ವರ್ಚ ಸ್ಸೂ ಕ್ರಮೇಣ ಕುಗ್ಗುತ್ತಿದೆ. ಹೀಗಾಗಿ ಮಗ ನಿಶಾಂತ್ ರನ್ನು ತಮ್ಮ ಉತ್ತರಾಧಿಕಾರಿಯಾಗಿ ಬಿಂಬಿಸಲು ‘ಪಲ್ಟು ರಾಮ್’ ನಿತೀಶರು ಏನೋ ಪ್ಲಾನ್ ಮಾಡಿರಬೇಕು. ಅದರ ಭಾಗವೇ ಈ ಎಲ್ಲ ಕಸರತ್ತುಗಳು" ಎಂದು ತಮ್ಮ ತಮ್ಮಲ್ಲೇ ಗುಸುಗುಸು ಮಾತನಾಡಿಕೊಳ್ಳುತ್ತಿದ್ದಾರಂತೆ!!
ಬಿಜೆಪಿ ಕಾರ್ಯಕರ್ತರ ಊಹೆ ನಿಜವಿದ್ದರೂ ಇರಬಹುದು ಅಂತ ಕಲಹಪ್ರಿಯ ನಾರದರ ಜಿಜ್ಞಾಸೆ. ಯಾಕಂದ್ರೆ, ಬಿಹಾರ ರಾಜ್ಯದ ಸಚಿವರಲ್ಲೊಬ್ಬರಾದ ಶ್ರವಣ್ ಕುಮಾರ್ ಅವರು ಇತ್ತೀಚೆಗೆ ಮಾತ ನಾಡುತ್ತಾ, “ಪಕ್ಷದ ಅಭಿವೃದ್ಧಿ ಕಾರ್ಯಸೂಚಿಯನ್ನು ಮುನ್ನಡೆಸಲು ಯುವ ನಾಯಕರೊಬ್ಬರ ಅಗತ್ಯವಿದೆ" ಎಂಬ ಸೋಬಾನೆ ರಾಗ ಹಾಡಿದ್ದು ನಾರದರಿಗೆ ಕೇಳಿಸಿದೆ.
ಹೀಗಾಗಿ, ‘ಅಧ್ಯಾತ್ಮ-ಮುಖಿ’ಯಾಗಿದ್ದ ನಿಶಾಂತ್ ಕುಮಾರ್ ಅವರು ಸಾರ್ವಜನಿಕ ಸಭೆಗಳಲ್ಲಿ ಹೀಗೆ ‘ಜನಮುಖಿ’ಯಾಗಿ ಮನಬಿಚ್ಚಿ ಮಾತನಾಡುತ್ತಿರುವುದು, ಅಪ್ಪನನ್ನು ಯರ್ರಾಬಿರ್ರಿ ಹೊಗಳು ತ್ತಿರುವುದು ಅವರು ರಾಜಕೀಯ ಪ್ರವೇಶಿಸುವುದರ ‘ಮುಂಗಾರು ಮಳೆ’ಯ ಸೂಚನೆಯೇ ಎಂಬುದು ನಾರದರಿಗೆ ಖಾತ್ರಿಯಾಗಿದೆ. ಮುಂದಿನದನ್ನು ಬೆಳ್ಳಿತೆರೆಯ ಮೇಲೆ ನೋಡಿ ಆನಂದಿಸುವಿರಂತೆ, ಅಲ್ಲಿಯವರೆಗೂ ಸ್ವಲ್ಪ ಕಾದುಕೊಂಡಿರಿ!
ತಾವರೆಯೋ ಅರವಿಂದನೋ?
ದೆಹಲಿ ವಿಧಾನಸಭಾ ಚುನಾವಣೆ ಸಂಪನ್ನಗೊಂಡಿದೆ. ಮತ ದಾರರು ಇವಿಎಂ ಗುಂಡಿಯನ್ನು ಅದುಮಿ ಚಲಾಯಿಸಿದ ಮತಗಳು ಮತಯಂತ್ರದಲ್ಲೇ ಬೆಚ್ಚಗೆ ಕೂತಿದ್ದು ಫಲಿತಾಂಶವಿನ್ನೂ ಹೊರ ಬೀಳಬೇಕಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಮುನ್ನುಡಿದಿರುವಂತೆ ದಿಲ್ಲಿ ಗದ್ದುಗೆಯ ಮೇಲೆ ‘ತಾವರೆ’ ಅರಳಲಿದೆ, ಅರ್ಥಾತ್ ಬಿಜೆಪಿಯು ಗೆಲುವಿನ ನಗೆ ಬೀರಲಿದೆ.
ಆದರೆ ನಮ್ ಬ್ರಹ್ಮಾಂಡ ಗುರುಗಳು ಈ ಬಗ್ಗೆ ಮಾತನಾಡುತ್ತಾ, “ಸಮೀಕ್ಷೆ ಮಾಡಿದೋರ ಮುಂಡಾ ಮೋಚ್ತು. ಆದರೆ ‘ತಾವರೆ’ ಅರಳಲಿದೆ ಅನ್ನೋದನ್ನ ‘ಅರವಿಂದ’ ಅರಳಲಿದೆ ಅಂತ ಯಾಕೆ ಅನ್ಕೋ ಬಾರ‍್ದು? ಹಾಗಾದಲ್ಲಿ ‘ಅರವಿಂದ ಕೇಜ್ರಿವಾಲ್’ ಅರಳಲಿದ್ದಾರೆ ಅಂತಾಯ್ತಲ್ಲ? ಇಷ್ಟಾಗಿಯೂ ಬಿಜೆಪಿಯೇ ಅರಳಿತು ಅಂತಿಟ್ಕೊಳ್ಳಿ, ಆಗ ‘ಮುದುಡಿದ ತಾವರೆ ಅರಳಿತು’ ಅಂದ್ರಾಯ್ತು, ಅಷ್ಟೇ..." ಎಂದು ವಿಲಕ್ಷಣವಾಗಿ ವಿಶ್ಲೇಷಿಸಿ ವಜ್ರಮುನಿ ರೀತಿಯಲ್ಲಿ ಗಹಗಹಿಸಿ ನಕ್ಕರಂತೆ.