Mahashivratri 2025: ಆಳಂದ ದರ್ಗಾದಲ್ಲಿ ಶಿವಲಿಂಗಕ್ಕೆ ಪೂಜೆ; ನಿಷೇಧಾಜ್ಞೆಯಿಂದ ಜನಜೀವನ ಅಸ್ತವ್ಯಸ್ತ
Mahashivratri 2025: ಆಳಂದ ಪಟ್ಟಣದ ಹಜರತ್ ಲಾಡ್ಲೆ ಮಶಾಕ್ ದರ್ಗಾದಲ್ಲಿ ರಾಘವ ಚೈತನ್ಯ ಲಿಂಗ ಪೂಜೆಗೆ ಹೈಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಜನರ ಓಡಾಟ, ವ್ಯಾಪಾರ-ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದೆ.


ಆಳಂದ: ಶಿವರಾತ್ರಿಯಂದು (Mahashivratri 2025) ಪಟ್ಟಣದ ಹಜರತ್ ಲಾಡ್ಲೆಮಶಾಕ್ ದರ್ಗಾದಲ್ಲಿ (Ladle mashaik Dargah) ರಾಘವ ಚೈತನ್ಯ ಲಿಂಗ ಪೂಜೆಯ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಂಡಿದ್ದು, ಇದರಿಂದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನತೆಗೆ ಅಡೆತಡೆ ಉಂಟಾಗಿದೆ. ಬುಧವಾರ ಬೆಳಗ್ಗೆಯಿಂದಲೇ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದ್ದು, ಜನರ ಓಡಾಟ, ವ್ಯಾಪಾರ-ವ್ಯವಹಾರ ಸಂಪೂರ್ಣ ಸ್ಥಗಿತಗೊಂಡಿದೆ. ಪ್ರಮುಖ ರಸ್ತೆಗಳಲ್ಲಿನ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಲು ಪೊಲೀಸರು ಒತ್ತಾಯಿಸಿದ್ದು, ಹಣ್ಣು-ತರಕಾರಿ ಮಾರಾಟಕ್ಕೂ ಅವಕಾಶ ನೀಡಲಾಗಿಲ್ಲ. ದ್ವಿಚಕ್ರ ವಾಹನ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಇದರಿಂದಾಗಿ ದೇವಾಲಯಗಳಿಗೆ ತೆರಳುವ ಭಕ್ತರು ಪರದಾಡುವ ಸ್ಥಿತಿಯಾಗಿದೆ.
ನಗರಕ್ಕೆ ಬರುವ ಬಸ್‌ಗಳನ್ನು ಐದು-ಆರು ಕಿಲೋಮೀಟರ್ ದೂರದಲ್ಲಿ ನಿಲ್ಲಿಸಲಾಗಿದ್ದು, ಪ್ರಯಾಣಿಕರು ಪಾದಯಾತ್ರೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರು, ವಯೋವೃದ್ಧರು, ಮಕ್ಕಳು ಹೃದಯವಿದ್ರಾವಕ ಅನುಭವಗಳನ್ನು ಎದುರಿಸುತ್ತಿದ್ದಾರೆ.
ಬಂದೋಬಸ್ತ್ ಕಾರ್ಯದಲ್ಲಿ ನಿಯೋಜಿತ ಪೊಲೀಸ್ ಸಿಬ್ಬಂದಿಗೂ ಸಮರ್ಪಕ ಆಹಾರ ಸಿಗದೆ ಪರದಾಡುವಂತಾಗಿದೆ. ಕೆಲ ಸಿಬ್ಬಂದಿ ಔಷಧ ಅಂಗಡಿಗಳಿಗೆ ತೆರಳಿ ಶಕ್ತಿವರ್ಧಕ ಮಾತ್ರೆಗಳು ತೆಗೆದುಕೊಳ್ಳುವಂತಹ ದುರ್ಬಲ ಸ್ಥಿತಿ ಎದುರಿಸಿದ್ದಾರೆ. ಈ ಪರಿಸ್ಥಿತಿಯ ವಿರುದ್ಧ ವ್ಯಾಪಾರಸ್ಥರು ಹಾಗೂ ಜನತೆ ಆಕ್ರೋಶ ವ್ಯಕ್ತಪಡಿಸಿದ್ದು, ದೇವಾಲಯಕ್ಕೆ ತೆರಳಲು, ನಿತ್ಯದ ಆರ್ಥಿಕ ಚಟುವಟಿಕೆಗಳನ್ನು ನಿರ್ವಹಿಸಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.

ಸಾರಿಗೆ ನಿರ್ಬಂಧ:
ಶಿವರಾತ್ರಿಯ ಹಿನ್ನೆಲೆಯಲ್ಲಿ ಹಜರತ್ ಲಾಡ್ಲೆ ಮಶಾಕ್ ದರ್ಗಾ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರು ಜಿಲ್ಲಾಡಳಿತದ ಆದೇಶದಂತೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಇದರ ಭಾಗವಾಗಿ, ಪ್ರಮುಖ ಸಾರಿಗೆ ಮಾರ್ಗಗಳಲ್ಲಿ ಐದು ಕಿಲೋಮೀಟರ್ ಅಂತರದಲ್ಲಿ ವಾಹನ ಸಂಚಾರವನ್ನು ತಡೆಹಿಡಿದಿದ್ದಾರೆ, ಇದರಿಂದಾಗಿ ಸಾರ್ವಜನಿಕರು ಭಾರೀ ತೊಂದರೆ ಅನುಭವಿಸುತ್ತಿದ್ದಾರೆ.
ದೂರದ ಊರಿನಿಂದ ಬಂದ ಜನರು ನಗರದ ಹೊರಭಾಗದಲ್ಲೇ ಬಸ್‌ಗಳಿಂದ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ವಯೋವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಈ ನಿರ್ಬಂಧ ಹಗಲಿರುಳು ಹತ್ತಿರದ ಸ್ಥಳಕ್ಕೂ ನಡೆದುಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟುಮಾಡಿದೆ. ಅಗತ್ಯ ಸೇವೆಗಳು, ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳು ಹಾಗೂ ಕೆಲಸಕ್ಕೆ ಹೋಗುವವರೂ ಈ ನಿರ್ಬಂಧದ ಹೊಡೆತಕ್ಕೆ ಒಳಗಾಗಿದ್ದು, ಸಾರಿಗೆ ಸಂಸ್ಥೆಗಳಿಗೆ ಸಡಿಲಿಕೆ ನೀಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಶ್ರೀ ಕಾಶಿ ವಿಶ್ವನಾಥ ದೇಗುಲದಲ್ಲಿ ಶಿವಲಿಂಗ ಸ್ಪರ್ಶಿಸಿದ ಸೂರ್ಯರಶ್ಮಿ
ಕೋಲಾರ: ಮಹಾ ಶಿವರಾತ್ರಿಯಂದು ಕೋಲಾರ ತಾಲೂಕಿನ ಕೊರಗಂಡಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಕಾಶಿ ವಿಶ್ವನಾಥ ದೇವಾಲಯದಲ್ಲಿ ಶಿವಲಿಂಗವನ್ನು ಸೂರ್ಯರಶ್ಮಿ ಸ್ಪರ್ಶಿಸಿದೆ. ಅಭಿಷೇಕದ ವೇಳೆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಹಾದು ಹೋಗುವ ಮೂಲಕ ಪ್ರಕೃತಿಯ ವಿಸ್ಮಯಕ್ಕೆ ದೇಗುಲ ಸಾಕ್ಷಿಯಾಯಿತು.
ಉತ್ತರಾಯಣ ಮಾಘಮಾಸದ ಮಹಾ ಶಿವರಾತ್ರಿಯ ಪರ್ವ ಕಾಲದಲ್ಲಿ ಸೂರ್ಯನ ಕಿರಣಗಳು ಶಿವಲಿಂಗವನ್ನು ಸ್ಪರ್ಶಿಸಿವೆ. ಇಂದು ಬೆಳಗ್ಗೆ 6.28 ರಿಂದ 7.15 ರ ನಡುವೆ ಸೂರ್ಯನ ಕಿರಣಗಳು ಕಾಶಿ ವಿಶ್ವೇಶ್ವರ ಸ್ವಾಮಿಯನ್ನು ಸ್ಪರ್ಶಿಸಿದ್ದು, ಮೊದಲು ನಂದಿಯನ್ನು ಹಾದು ಹೋದ ಸೂರ್ಯನ ಕಿರಣಗಳು ನಂತರ ಶಿವಲಿಂಗದ ಮೇಲೆ ಪ್ರಕಾಶಮಾನವಾಗಿ ಬೆಳಗಿದವು.
ಪೂಜೆಯಲ್ಲಿ ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ಮತ್ತಿತರರು ಭಾಗಿಯಾಗಿದ್ದರು. ಪ್ರಧಾನ ಅರ್ಚಕ ಶ್ರೀನಾಥ್ ದೀಕ್ಷಿತ್ ಅವರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.