ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Russian woman rescued: ಗೋಕರ್ಣದ ದಟ್ಟಾರಣ್ಯದ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾ ಮಹಿಳೆಯ ರಕ್ಷಣೆ!

Russian woman rescued: ಗೋಕರ್ಣದ ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ, ಗುಹೆಯೊಳಗೆ ಅಪರಿಚಿತರು ವಾಸಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಈ ವೇಳೆ ಪರಿಶೀಲಿಸಿದಾಗ, ರಷ್ಯಾ ಮಹಿಳೆಯೊಬ್ಬರು, ಇಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ. ಹೀಗಾಗಿ ಅವರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.

ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಿದ್ದ ರಷ್ಯಾ ಮಹಿಳೆಯ ರಕ್ಷಣೆ!

Profile Prabhakara R Jul 12, 2025 4:39 PM

ಕಾರವಾರ: ಗೋಕರ್ಣದ ರಾಮತೀರ್ಥ ಗುಡ್ಡದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮೂಲದ ಮಹಿಳೆ ಮತ್ತು ಆಕೆಯ ಇಬ್ಬರು ಚಿಕ್ಕ ಮಕ್ಕಳನ್ನು ಪೊಲೀಸರು ರಕ್ಷಿಸಿದ್ದಾರೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ವಾಸಿಸುತ್ತಿದ್ದ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 40 ವರ್ಷದ ರಷ್ಯಾ ಮೂಲದ ನಿನಾ ಕುಟಿನಾ ಅಲಿಯಾಸ್​ ಮೋಹಿ ಎಂಬ ಮಹಿಳೆ (Russian woman rescued) ತನ್ನ 6 ವರ್ಷದ ಮಗಳು ಪ್ರೆಯಾ ಮತ್ತು 4 ವರ್ಷದ ಮಗಳು ಅಮಾ ಜತೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿತ್ತು. ಅವರನ್ನು ಪೊಲೀಸರು ರಕ್ಷಿಸಿದ್ದಾರೆ.

ಬುಧವಾರ ಸಂಜೆ ಗೋಕರ್ಣ ಪೊಲೀಸ್ ಠಾಣೆಯ ನಿರೀಕ್ಷಕ ಶ್ರೀಧರ್ ಎಸ್.ಆರ್ ಮತ್ತು ಅವರ ತಂಡ ರಾಮತೀರ್ಥ ಗುಡ್ಡದ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಗುಹೆಯ ಹೊರಗೆ ಬಟ್ಟೆಗಳು ನೇತಾಡುತ್ತಿರುವುದನ್ನು ಗಮನಿಸಿದ್ದಾರೆ. ಇದರಿಂದ ಅಪರಿಚಿತರು ವಾಸಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿ, ಪರಿಶೀಲಿಸಿದಾಗ, ರಷ್ಯಾ ಮೂಲದ ನಿನಾ ಕುಟಿನಾ ತನ್ನ ಇಬ್ಬರು ಮಕ್ಕಳೊಂದಿಗೆ ಗುಹೆಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದೆ.

ಬ್ಯುಸಿನೆಸ್​ ವೀಸಾ ಮೂಲಕ ರಷ್ಯಾದಿಂದ ಭಾರತಕ್ಕೆ ಬಂದಿದ್ದ ನೀನಾ ಕುಟಿನಾ ಗೋವಾದಲ್ಲಿದ್ದರು. ಹಿಂದೂ ಧರ್ಮ ಹಾಗೂ ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಗೆ ಆಕರ್ಷಿತರಾಗಿದ್ದ, ಕುಟಿನಾ ಕರಾವಳಿ ನಗರವಾದ ಗೋಕರ್ಣಕ್ಕೆ ಬಂದು, ಕಳೆದ ಒಂದು ವಾರದಿಂದ ಮಕ್ಕಳೊಂದಿಗೆ ಈ ಕಾಡಿನ ಗುಹೆಯಲ್ಲಿ ಏಕಾಂತದಲ್ಲಿ ವಾಸಿಸುತ್ತಿದ್ದರು.

ಪೊಲೀಸರ ವಿಚಾರಣೆ ವೇಳೆ, ನಿನಾ ಕುಟಿನಾ ಅವರು ದೇವರ ಪೂಜೆ ಮತ್ತು ಧ್ಯಾನಕ್ಕಾಗಿ ಗೋವಾದಿಂದ ಮಕ್ಕಳೊಂದಿಗೆ ಬಂದಿದ್ದು, ಗುಹೆಯಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ. ಆ ಗುಹೆಯೊಳಗೆ ದೇವರ ಪೋಟೋಗಳನ್ನು ಇಟ್ಟುಕೊಂಡು ಪೂಜೆ ಮಾಡಿರುವುದು, ಆಧ್ಯಾತ್ಮಿಕ ಶಾಂತಿಗಾಗಿ ಪ್ರಕೃತಿಯ ನಡುವೆ ಧ್ಯಾನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ವೇಳೆ ರಾಮತೀರ್ಥ ಗುಡ್ಡದಲ್ಲಿ ಈ ಹಿಂದೆ ಗುಡ್ಡ ಕುಸಿತ ಸಂಭವಿಸಿದ್ದರಿಂದ ಇದು ಅಪಾಯಕಾರಿ ಪ್ರದೇಶವಾಗಿದೆ. ಅಲ್ಲದೇ, ಹಾವುಗಳು ಸೇರಿ ವಿಷಕಾರಿ ಜಂತುಗಳ ವಾಸವಿರುವ ಕಾರಣ ಅಲ್ಲಿ ವಾಸಿಸುವುದು ಅಪಾಯಕಾರಿ ಎಂದು ಮಹಿಳೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಳಿಕ ಪೊಲೀಸರು, ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತವಾಗಿ ಗುಹೆಯಿಂದ ಕೆಳಗೆ ಕರೆತಂದಿದ್ದಾರೆ. ನಂತರ ಅವರ ಇಚ್ಛೆಯಂತೆ ಕುಮಟಾ ತಾಲೂಕಿನ ಬಂಕಿಕೋಡ್ಲು ಗ್ರಾಮದಲ್ಲಿರುವ ಶಂಕರ ಪ್ರಸಾದ ಫೌಂಡೇಶನ್ ಎಂಬ ಎನ್‌ಜಿಒ ಸಂಸ್ಥೆಯ ಯೋಗರತ್ನ ಸರಸ್ವತಿ ಸ್ವಾಮೀಜಿಯ ಆಶ್ರಮಕ್ಕೆ ಮಹಿಳಾ ಪೊಲೀಸ್ ಸಿಬ್ಬಂದಿಯ ರಕ್ಷಣೆಯಲ್ಲಿ ಕರೆದೊಯ್ದಿದ್ದಾರೆ.

ಅಧ್ಯಾತ್ಮದ ಒಲವು; ಭಾರತದಲ್ಲೇ ಉಳಿಯಲು ನಿರ್ಧರಿಸಿದ್ದ ಮಹಿಳೆ!

ಆಧ್ಯಾತ್ಮಿಕತೆಗೆ ಆಕರ್ಷಿತರಾಗಿರುವ ವಿದೇಶಿ ಮಹಿಳೆ, ಭಾರತದಲ್ಲೇ ಉಳಿಯುವ ಉದ್ದೇಶದಿಂದ ಪಾಸ್‌ಪೋರ್ಟ್ ಮತ್ತು ವೀಸಾ ವಿವರಗಳನ್ನು ನೀಡಲು ಆರಂಭದಲ್ಲಿ ನಿರಾಕರಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು, ಯೋಗರತ್ನ ಸರಸ್ವತಿ ಸ್ವಾಮೀಜಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಮೂಲಕ ಸಮಾಲೋಚನೆ ನಡೆಸಿದಾಗ, ಪಾಸ್‌ಪೋರ್ಟ್ ಮತ್ತು ವೀಸಾ ಕಾಡಿನಲ್ಲಿ ಅಥವಾ ಗುಹೆಯಲ್ಲೇ ಬಿದ್ದಿರಬಹುದು ಎಂದು ತಿಳಿಸಿದ್ದಾರೆ.

ಪರಿಣಾಮವಾಗಿ, ತಾಯಿ ಮತ್ತು ಇಬ್ಬರು ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸ್ವೀಕಾರ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಸುರಕ್ಷಿತವಾಗಿ ಇರಿಸಲಾಗಿದೆ. ಈ ನಡುವೆ, ಗೋಕರ್ಣ ಪೊಲೀಸರು ಅರಣ್ಯ ಇಲಾಖೆಯ ಸಿಬ್ಬಂದಿಯೊಂದಿಗೆ ಶೋಧ ಕಾರ್ಯಾಚರಣೆ ನಡೆಸಿ, ಗುಹೆ ಸುತ್ತಮುತ್ತ ವಿದೇಶಿ ಮಹಿಳೆಯ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಪತ್ತೆಹಚ್ಚಿದ್ದಾರೆ. ಪರಿಶೀಲನೆ ನಡೆಸಿದಾಗ, ವೀಸಾ ಅವಧಿ 2017ರ ಏಪ್ರಿಲ್‌ 17ರಂದು ಮುಕ್ತಾಯವಾಗಿರುವುದು ತಿಳಿದು ಬಂದಿದೆ.

ಈ ಸಂಬಂಧ ಬೆಂಗಳೂರು ಎಫ್‌ಆರ್‌ಆರ್‌ಒ ಕಚೇರಿಯನ್ನು ಸಂಪರ್ಕಿಸಿ ಪತ್ರವ್ಯವಹಾರ ನಡೆಸಲಾಗಿದ್ದು, ವೀಸಾ ಅವಧಿ ಮೀರಿದ ಈ ರಷ್ಯಾ ಮೂಲದ ಮಹಿಳೆ ಮತ್ತು ಮಕ್ಕಳನ್ನು ಮರಳಿ ರಷ್ಯಾಕ್ಕೆ ಕಳುಹಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.