Film Festival: ಬೆಂಗಳೂರು ಚಲನಚಿತ್ರೋತ್ಸವಕ್ಕೆ ಆಹ್ವಾನ ವಿವಾದ; ನಟ, ನಟಿಯರ ಪಟ್ಟಿ ಬಿಡುಗಡೆ ಮಾಡಿದ ಆಯೋಜಕರು
Film Festival: ದರ್ಶನ್, ಸುದೀಪ್, ಧ್ರುವ ಸರ್ಜಾ, ದುನಿಯಾ ವಿಜಯ್ ಸೇರಿ ಎಲ್ಲಾ ಕಲಾವಿದರಿಗೆ ಆಹ್ವಾನ ಪತ್ರಿಕೆ ತಲುಪಿದೆ ಎನ್ನಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಪ್ರೋಟೊಕಾಲ್ ಪ್ರಕಾರ ಕಲಾವಿದರಿಗೆ ಆಹ್ವಾನ ನೀಡಲಾಗಿದ್ದು, ಕೆಲವರಿಗೆ ಅಧ್ಯಕ್ಷ ಸಾಧು ಕೋಕಿಲ ಅಹ್ವಾನ ನೀಡಿದ್ದರೆ, ಇನ್ನು ಕೆಲವರಿಗೆ ಫಿಲ್ಮ್ ಫೆಸ್ಟಿವಲ್ ಪಿಆರ್‌ಒ ಹಾಗೂ ಅಂಚೆ ಮೂಲಕ ಅಹ್ವಾನ ಕಳುಹಿಸಲಾಗಿದೆ.


ಬೆಂಗಳೂರು: ಕಲಾವಿದರಿಗೆ ನಟ್ಟು ಬೋಲ್ಟ್ ಟೈಟ್ ಮಾಡ್ತೇವೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಚಿತ್ರರಂಗ ಹಾಗೂ ವಿಪಕ್ಷಗಳ ಪ್ರಮುಖರು ಕಿಡಿಕಾರಿದ್ದಾರೆ. ಇನ್ನು ಡಿಸಿಎಂ ಡಿಕೆಶಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೆಲ ಕೈ ನಾಯಕರು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಹ್ವಾನ ನೀಡದ್ದರೂ ಪ್ರಮುಖ ನಟ, ನಟಿಯರು ಹಾಜರಾಗಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಆಯೋಜಕರಿಂದ ತಮಗೆ ಆಹ್ವಾನವೇ ತಲುಪಿಲ್ಲ ಎಂದು ಕೆಲ ಕಲಾವಿದರು ಹೇಳಿರುವುದಿಂದ ಈ ಬಾರಿಯ ಚಲನಚಿತ್ರೋತ್ಸವ ವಿವಾದ ಕೇಂದ್ರಬಿಂದುವಾಗಿದೆ. ಈ ನಡುವೆ ತಾವು ಎಲ್ಲರಿಗೂ ಆಹ್ವಾನ ತಲುಪಿಸಿದ್ದೇವೆ ಎಂದು ಹೇಳಿರುವ ಆಯೋಜಕರು, ಯಾವ ಯಾವ ನಟ, ನಟಿಯರಿಗೆ ಆಹ್ವಾನ ನೀಡಲಾಗಿದೆ ಎಂಬ ಪಟ್ಟಿ ಮಾಡಿದ್ದಾರೆ.
ದರ್ಶನ್, ಸುದೀಪ್, ಧ್ರುವ ಸರ್ಜಾ, ದುನಿಯಾ ವಿಜಯ್ ಸೇರಿ ಎಲ್ಲಾ ಕಲಾವಿದರಿಗೆ ಆಹ್ವಾನ ಪತ್ರಿಕೆ ತಲುಪಿದೆ ಎನ್ನಲಾಗಿದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಪ್ರೋಟೊಕಾಲ್ ಪ್ರಕಾರ ಕಲಾವಿದರಿಗೆ ಆಹ್ವಾನ ನೀಡಲಾಗಿದ್ದು, ಕೆಲವರಿಗೆ ಅಧ್ಯಕ್ಷ ಸಾಧು ಕೋಕಿಲ ಅಹ್ವಾನ ನೀಡಿದ್ದರೆ, ಇನ್ನು ಕೆಲವರಿಗೆ ಫಿಲ್ಮ್ ಫೆಸ್ಟಿವಲ್ ಪಿಆರ್‌ಒ ಹಾಗೂ ಅಂಚೆ ಮೂಲಕ ಅಹ್ವಾನ ಕಳುಹಿಸಲಾಗಿದೆ. ಹೀಗಾಗಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ, ನಟಿಯರಿಗೂ ಆಹ್ವಾನ ನೀಡಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಮುಖರು ಹೇಳಿದ್ದಾರೆ.

ಆಹ್ವಾನ ನೀಡಿರುವವರ ಪಟ್ಟಿಯಲ್ಲಿ ಕೆಲವರಿಗೆ ಆಹ್ವಾನ ತಲುಪಿದ್ದು, ಸಹಿ ಹಾಕುವ ಮೂಲಕ ಸ್ವೀಕರಿಸಿದ್ದಾರೆ. ಇನ್ನು ಕೆಲವರಿಗೆ ಇನ್ನೂ ಆಹ್ವಾನ ಪತ್ರಿಕೆಯೇ ತಲುಪಿಲ್ಲ ಎನ್ನಲಾಗುತ್ತಿದೆ. ಅದೇ ರೀತಿ ಮನೆಯಲ್ಲಿ ಇರದ ಕಾರಣ ಕೆಲವರಿಗೆ ಅಂಚೆಯಲ್ಲಿ ಕಳುಹಿಸಿರುವ ಆಹ್ವಾನ ಪತ್ರಿಕೆ ವಾಪಸ್ ಬಂದಿದೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ | Ramanagara Movie: ವಿದ್ಯಾವಂತ ದೇಶಾಭಿಮಾನಿ ರೈತನ ಕಥೆ ‘ರಾಮನಗರ’ ಚಿತ್ರದ ಹಾಡು, ಟ್ರೈಲರ್ ರಿಲೀಸ್
ನಟ ಡಾಲಿ ಧನಂಜಯ್ ಮನೆ ಬದಲಿಸಿದ್ದ ಕಾರಣ ಅವರಿಗೆ ನೀಡಲಾಗಿಲ್ಲ ಎಂಬ ಒಕ್ಕಣೆ ಪಟ್ಟಿಯಲ್ಲಿದೆ. ಮಾನ್ವಿತಾ ಅವರು ಆಹ್ವಾನವನ್ನು ವಾಪಸ್ ಕಳಿಸಿದ್ದಾರೆ, ಫೋನ್ ರಿಸೀವ್ ಮಾಡಿಲ್ಲ ಎಂಬ ಒಕ್ಕಣೆ ಇದೆ. ನಟ ಚಿಕ್ಕಣ್ಣ ಸಹ ಆಹ್ವಾನವನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅಶೋಕ್ ಅವರು ಸಹ ಆಹ್ವಾನ ಪತ್ರಿಕೆ ವಾಪಸ್ ಕಳಿಸಿದ್ದಾರೆ ಎಂಬ ಒಕ್ಕಣೆ ಇದೆ.
ರವಿಚಂದ್ರನ್, ಶ್ರೀನಾಥ್, ಸುಧಾರಾಣಿ, ಮಾಲಾಶ್ರಿ, ಅನುರಾಧಾ, ಮಾಳವಿಕಾ ಅವಿನಾಶ್, ಅವಿನಾಶ್, ಡಿಂಗ್ರಿ ನಾಗರಾಜ್, ನಿಶ್ವಿಕಾ ನಾಯ್ಡು, ಪೂಜಾ ಗಾಂಧಿ, ಅರ್ಜುನ್ ಜನ್ಯ, ಗಿರಿಜಾ ಲೋಕೇಶ್, ಸೃಜನ್ ಲೋಕೇಶ್, ಜಯಂತ್ ಕಾಯ್ಕಿಣಿ, ರಮೇಶ್ ಅರವಿಂದ್, ಧ್ರುವ ಸರ್ಜಾ, ಟಿಎನ್ ಸೀತಾರಾಮ್, ಸುರೇಶ್ ಹಬ್ಳೀಕರ್, ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಉಮಾಶ್ರೀ, ಪದ್ಮಾವಾಸಂತಿ, ಮುಖ್ಯಮಂತ್ರಿ ಚಂದ್ರು ಹೀಗೆ ಹಲವಾರು ನಟ-ನಟಿಯರಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ.
ಈ ಸುದ್ದಿಯನ್ನೂ ಓದಿ | DK Shivakumar: ಖರ್ಗೆ ಮಾತಿಗೆ ಬದ್ಧ: ಡಿ.ಕೆ.ಶಿವಕುಮಾರ್
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಒಟ್ಟು 515 ಸಿನಿಮಾ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲು ಪಟ್ಟಿ ಮಾಡಿಕೊಳ್ಳಲಾಗಿತ್ತು ಎಂಬ ಮಾಹಿತಿಯನ್ನು ಆಯೋಜಕರು ನೀಡಿದ್ದಾರೆ. ಅದರಲ್ಲಿ 400 ಜನರಿಗೆ ಆಹ್ವಾನ ನೀಡಲಾಗಿದೆ. 100 ಸೆಲೆಬ್ರಿಟಿಗಳನ್ನು ವಿಐಪಿಗಳೆಂದು ಪರಿಗಣಿಸಲಾಗಿದೆ. 15 ಮಂದಿಯನ್ನು ವಿವಿಐಪಿ ಎಂದು ಪರಿಗಣಿಸಲಾಗಿದೆ ಎಂದು ಆಯೋಜಕರು ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ ಚಿತ್ರೋತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಹಾಜರಾಗಿದ್ದು ಸುಮಾರು 20 ಮಂದಿ ಮಾತ್ರ ಎಂದು ತಿಳಿದುಬಂದಿದೆ.