ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Box Office Clash: 2026ರ ಸಂಕ್ರಾಂತಿಗೆ ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಪೈಪೋಟಿ; ಒಂದೇ ದಿನ 3 ಬಹು ನಿರೀಕ್ಷಿತ ಚಿತ್ರಗಳು ರಿಲೀಸ್‌

Pongal 2026: ಮುಂದಿನ ವರ್ಷದ ಸಂಕ್ರಾಂತಿ ವೇಳೆಗೆ ಬಾಕ್ಸ್‌ ಆಫೀಸ್‌ನಲ್ಲಿ ಬಹುದೊಡ್ಡ ಕ್ಲ್ಯಾಶ್‌ ನಡೆಯಲಿದೆ. ಜ. 9ರಂದು ದಕ್ಷಿನ ಭಾರತದ 3 ಬಹು ನಿರೀಕ್ಷಿತ ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಯಾವೆಲ್ಲ ಚಿತ್ರಗಳು ಒಂದೇ ಬಾರಿಗೆ ತೆರೆಗೆ ಅಪ್ಪಳಿಸಲಿವೆ ಎನ್ನುವ ವಿವರ ಇಲ್ಲಿದೆ.

2026ರ ಸಂಕ್ರಾಂತಿಯಂದು 3 ಬಹು ನಿರೀಕ್ಷಿತ ಚಿತ್ರಗಳು ರಿಲೀಸ್‌

ಜೂ.ಎನ್‌ಟಿಆರ್‌ ಮತ್ತು ವಿಜಯ್‌.

Profile Ramesh B Mar 26, 2025 3:41 PM

ಹೈದರಾಬಾದ್‌: ಸಾಮಾನ್ಯವಾಗಿ ಹಬ್ಬದಂದು, ಸಾರ್ವಜನಿಕ ರಜೆಯ ದಿನಗಳಲ್ಲಿ ಸ್ಟಾರ್‌ಗಳ ಚಿತ್ರಗಳನ್ನು ರಿಲೀಸ್‌ ಮಾಡಲಾಗುತ್ತದೆ. ಕೆಲವೊಮ್ಮೆ ವಿಶೇಷ ಸಂದರ್ಭಗಳಲ್ಲಿ ಒಂದೇ ದಿನ ದೊಡ್ಡ ದೊಡ್ಡ ಚಿತ್ರಗಳು ಬಿಡುಗಡೆಯಾಗಿ ಭಾರೀ ಪೈಪೋಟಿ ಏರ್ಪಡುತ್ತದೆ. 2026 ಅಂತಹ 2 ಬಹು ದೊಡ್ಡ ಕ್ಲ್ಯಾಶ್‌ಗೆ ಸಾಕ್ಷಿಯಾಗುವ ಸಾಧ್ಯತೆ ದಟ್ಟವಾಗಿದೆ. ಸ್ಯಾಂಡಲ್‌ವುಡ್‌ ನಟ ಯಶ್‌ (Yash) ಅವರ 'ಟಾಕ್ಸಿಕ್‌' (Toxic) ಮತ್ತು ಬಾಲಿವುಡ್‌ ಸ್ಟಾರ್‌ ರಣಬೀರ್‌ ಕಪೂರ್‌ ನಟನೆಯ 'ಲವ್‌ & ವಾರ್‌' (Love & War) ಮುಂದಿನ ವರ್ಷದ ಯುಗಾದಿ ವೇಳೆಗೆ ತೆರೆಗೆ ಬರಲಿದೆ. 'ಟಾಕ್ಸಿಕ್‌' ಮಾ. 19ರಂದು ಮತ್ತು 'ಲವ್‌ & ವಾರ್‌' ಮಾ. 20ರಂದು ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಸಂಕ್ರಾಂತಿ ಪ್ರಯುಕ್ತ ಜ. 9ರಂದು ಒಂದೇ ದಿನ ದಕ್ಷಿಣ ಭಾರತದ 3 ಬಹು ನಿರೀಕ್ಷಿತ ಚಿತ್ರಗಳು ತೆರೆಗೆ ಬಂದು ಬಾಕ್ಸ್‌ ಆಫೀಸ್‌ನಲ್ಲಿ ಮತ್ತೊಂದು ಸುತ್ತಿನ ಕ್ಲ್ಯಾಶ್‌ ನಡೆಯಲಿದೆ.

ಸಂಕ್ರಾಂತಿ ಅಥವಾ ಪೊಂಗಲ್‌ ದಕ್ಷಿಣ ಭಾರತೀಯರಿಗೆ ಬಹು ಮುಖ್ಯ ಹಬ್ಬ. ಹೀಗಾಗಿ ಪ್ರತೀ ವರ್ಷ ತಮಿಳು ಅಥವಾ ತೆಲುಗಿನ ಮುಖ್ಯ ಚಿತ್ರಗಳು ತೆರೆಗೆ ಅಪ್ಪಳಿಸುತ್ತವೆ. ಅದರಂತೆ ಮುಂದಿನ ವರ್ಷದ ಪೊಂಗಲ್‌ಗೆ ಬಹು ನಿರೀಕ್ಷಿತ ಒಂದಲ್ಲ ಎರಡಲ್ಲ 3 ಚಿತ್ರಗಳು ತೆರೆಗೆ ಬರಲು ಸಜ್ಜಾಗಿವೆ. ಕಾಲಿವುಡ್‌ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ನಟಿಸುತ್ತಿರುವ ಕೊನೆಯ ಚಿತ್ರ 'ಜನ ನಾಯಕನ್‌ʼ, ಜೂ.ಎನ್‌ಟಿಆರ್‌-ಪ್ರಶಾಂತ್‌ ನೀಲ್‌ ಕಾಂಬಿನೇಷ್‌ನ ಹೆಸರಿಡದ ಟಾಲಿವುಡ್‌ ಚಿತ್ರ ಮತ್ತು ಸುಧಾ ಕೊಂಗಾರ-ಶಿವ ಕಾರ್ತಿಕೇಯನ್ ಅವರ ʼಪರಾಶಕ್ತಿʼ ತಮಿಳು ಸಿನಿಮಾ 2026ರ ಜ. 9ರಂದು ತೆರೆಗೆ ಬರಲಿವೆ. ವಿಶೇಷ ಎಂದರೆ ಈ 3 ಚಿತ್ರಗಳೂ ಈಗಾಗಲೇ ಭಾರೀ ನಿರೀಕ್ಷೆ ಮೂಡಿಸಿವೆ.

ʼಜನ ನಾಯಕನ್‌ʼ

ಕನ್ನಡ ಮೂಲದ ಕೆವಿಎನ್ ಪ್ರೊಡಕ್ಷನ್ ನಿರ್ಮಾತೃ ವೆಂಕಟ್ ಕೆ. ನಾರಾಯಣ್ ನಿರ್ಮಾಣದ, ಎಚ್‌.ವಿನೋದ್‌ (H.Vinoth) ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಪಾಲಿಟಿಕಲ್‌ ಥ್ರಿಲ್ಲರ್‌ ʼಜನ ನಾಯಕನ್‌ʼನ ಚಿತ್ರೀಕರಣ ಸದ್ಯ ನಡೆಯುತ್ತಿದೆ. ವಿಜಯ್‌ ಸಕ್ರಿಯ ರಾಜಕೀಯದತ್ತ ಮುಖ ಮಾಡಿರುವುದರಿಂದ ಇದು ಅವರ ಕೊನೆಯ ಚಿತ್ರ ಎನಿಸಿಕೊಂಡಿದೆ. ಇದೇ ಕಾರಣಕ್ಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತೀಚೆಗೆ ಚಿತ್ರತಂಡ ಮುಂದಿನ ವರ್ಷದ ಜ. 9ರಂದು ರಿಲೀಸ್‌ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಿಯಾಮಣಿ, ಬಾಬ್ಬಿ ಡಿಯೋಲ್‌, ಗೌತಮ್‌ ವಾಸುದೇವ್‌ ಮೆನನ್‌, ನರೇನ್‌, ವರಲಕ್ಷ್ಮೀ ಶರತ್‌ಕುಮಾರ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಜೂ.ಎನ್‌ಟಿಆರ್‌-ಪ್ರಶಾಂತ್‌ ನೀಲ್‌ ಚಿತ್ರ

ʼಕೆಜಿಎಫ್‌ʼ ಸರಣಿ, ʼಸಲಾರ್‌ʼ ಚಿತ್ರಗಳ ಮೂಲಕ ಪರಭಾಷಿಕರನ್ನು ಸೆಳೆದ ಸ್ಯಾಂಡಲ್‌ವುಡ್‌ ನಿರ್ದೇಶಕ ಪ್ರಶಾಂತ್‌ ನೀಲ್‌ ಸದ್ಯ ಟಾಲಿವುಡ್‌ ಸೂಪರ್‌ ಸ್ಟಾರ್‌ ಜೂ.ಎನ್‌ಟಿಆರ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಆದರೆ ಟೈಟಲ್‌ ಅಂತಿಮವಾಗಿಲ್ಲ. ಈ ಸಿನಿಮಾದಲ್ಲಿ ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾವನ್ನು 2026ರ ಜ. 9ರಂದು ರಿಲೀಸ್‌ ಮಾಡುವುದಾಗಿ ಚಿತ್ರತಂಡ ಈ ಹಿಂದೆಯೇ ಘೋಷಿಸಿತ್ತು.

ʼಪರಾಶಕ್ತಿʼ

ಈ 2 ಚಿತ್ರಗಳ ಜತೆಗೆ ಪೈಪೋಟಿ ಕೊಡಲು ಮತ್ತೊಂದು ಸಿನಿಮಾವೂ ಸಜ್ಜಾಗುತ್ತಿದೆ. ಅದುವೇ ತಮಿಳಿನ ʼಪರಾಶಕ್ತಿʼ. ರಾಷ್ಟ್ರ ಪ್ರಶಸ್ತಿ ವಿಜೇತ ಸುಧಾ ಕೊಂಗಾರ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಶಿವ ಕಾರ್ತಿಕೇಯನ್‌, ರವಿ ಮೋಹನ್‌, ಅಥರ್ವ ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ನಾಯಕಿಯಾಗಿ ಕನ್ನಡತಿ ಶ್ರೀಲೀಲಾ ಈ ಸಿನಿಮಾ ಮೂಲಕ ಕಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಈ ಚಿತ್ರವೂ 2026ರ ಜ. 9ರಂದು ತೆರೆಗೆ ಬರಲಿದೆ ಎನ್ನಲಾಗಿದೆ. ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ.

ಬಾಕ್ಸ್‌ ಆಫೀಸ್‌ ಕ್ಲ್ಯಾಶ್‌ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ. ಕೊನೆ ಕ್ಷಣದಲ್ಲಿ ಯಾವುದಾದರೂ ಚಿತ್ರಗಳ ರಿಲೀಸ್‌ ಡೇಟ್‌ ಬದಲಾಗುವ ಸಾಧ್ಯತೆಯೂ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.