Actor Mammootty: ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿಗೆ ಕ್ಯಾನ್ಸರ್? ಚಿತ್ರೀಕರಣದಲ್ಲಿ ಭಾಗವಹಿಸದಿರುವುದಕ್ಕೆ ಆಪ್ತರು ಹೇಳಿದ್ದೇನು?
Actor Mammootty: ಮಾಲಿವುಡ್ ಮೆಗಾಸ್ಟಾರ್, ಬಹುಭಾಷಾ ಕಲಾವಿದ, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಭಿನಯಿಸಿರುವ ಮಮ್ಮುಟ್ಟಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವದಂತಿ ಹರಡಿದ್ದು, ಇದನ್ನು ಆಪ್ತರು ನಿರಾಕಸಿಸಿದ್ದಾರೆ. ಗಾಳಿ ಸುದ್ದಿ ನಂಬದಂತೆ ಮನವಿ ಮಾಡಿದ್ದಾರೆ.

ಮಮ್ಮುಟ್ಟಿ.

ತಿರುವನಂತಪುರಂ: ಮಾಲಿವುಡ್ ಮೆಗಾಸ್ಟಾರ್, ಬಹುಭಾಷಾ ಕಲಾವಿದ, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಅಭಿನಯಿಸಿರುವ ಮಮ್ಮುಟ್ಟಿ (Actor Mammootty) ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವದಂತಿ ಹರಡಿದೆ. ಇದೇ ಕಾರಣಕ್ಕೆ ಅವರು ಸದ್ಯ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಸುದ್ದಿ ಕೇಳಿ ಅವರ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದರು. ಇದೀಗ ಮಮ್ಮುಟ್ಟಿ ಆಪ್ತರು ಈ ವದಂತಿಯನ್ನು ತಳ್ಳಿ ಹಾಕಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ರಮ್ಜಾನ್ ಉಪವಾಸದ ಕಾರಣ ಅವರು ಸದ್ಯ ಶೂಟಿಂಗ್‌ಗೆ ಬ್ರೇಕ್ ನೀಡಿದ್ದಾರೆ, ಅದಾದ ಬಳಿಕ ಎಂದಿನಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
73 ವರ್ಷದ ಮಮ್ಮುಟ್ಟಿ ಈಗಲೂ ಯುವಕರು ನಾಚುವಂತೆ ಫಿಟ್ & ಫೈನ್ ಆಗಿದ್ದಾರೆ. ಈ ಮಧ್ಯೆ ಕ್ಯಾನ್ಸರ್ ವದಂತಿ ಹರಡಿದ್ದು ಅಭಿಮಾನಿಗಳಿಗೆ ಆಘಾತ ತಂದಿತ್ತು. ಇದೀಗ ಅವರ ತಂಡ ಈ ಗಾಳಿಸುದ್ದಿಯನ್ನು ನಿರಾಕರಿಸಿ, ʼʼಇದೊಂದು ವದಂತಿಯಷ್ಟೇ. ರಮ್ಜಾನ್ ಉಪವಾಸ ಕೈಗೊಂಡಿರುವ ಕಾರಣ ಅವರು ರಜೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ರಮ್ಜಾನ್ ಬಳಿಕ ತಾವು ಒಪ್ಪಿಕೊಂಡಿರುವ ಮಹೇಶ್ ನಾರಾಯಣ ನಿರ್ದೇಶನದ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಸಿನಿಮಾದಲ್ಲಿ ಮಲಯಾಳಂನ ಮತ್ತೋರ್ವ ಸೂಪರ್ ಸ್ಟಾರ್ ಮೋಹನ್‌ಲಾಲ್ ಕೂಡ ನಟಿಸುತ್ತಿದ್ದಾರೆ. ಯಾರೂ ಆಧಾರ ರಹಿತ ಗಾಳಿ ಸುದ್ದಿಯನ್ನು ನಂಬಬೇಡಿ ಮತ್ತು ಹರಡಬೇಡಿʼʼ ಎಂದು ಮನವಿ ಮಾಡಿದೆ.
ಮಮ್ಮುಟ್ಟಿ ಅವರ ಎಕ್ಸ್ ಪೋಸ್ಟ್ ಇಲ್ಲಿದೆ:
30 Days to Go for #Bazooka
— Mammootty (@mammukka) March 11, 2025
Hitting Screens Worldwide On April 10#BazookaFromApril10 pic.twitter.com/aWNTllvuE0
ರಾಷ್ಟ್ರ ಪ್ರಶಸ್ತಿ ವಿಜೇತ ನಟ
ಮಮ್ಮುಟ್ಟಿ ವಿವಿದ ಭಾಷೆಗಳಲ್ಲಿ ಇದುವರೆಗೆ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1971ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಅವರು 5 ದಶಕಗಳಿಂದ ನಿರಂತರವಾಗಿ ನಟಿಸುತ್ತಲೇ ಬಂದಿದ್ದಾರೆ. ಮಲಯಾಳಂ ಜತೆಗೆ ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ 3 ಬಾರಿ ರಾಷ್ಟ್ರ ಪ್ರಶಸ್ತಿ ಮುಡುಗೇರಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Pathaan 2: ಶಾರುಖ್ ಖಾನ್ ಎದುರು ವಿಲನ್ ಆಗಿ ಅಬ್ಬರಿಸ್ತಾರಾ ಅಲ್ಲು ಅರ್ಜುನ್? ʼಪಠಾಣ್ 2ʼ ಚಿತ್ರದಲ್ಲಿರಲಿದೆ ಸ್ಟಾರ್‌ಗಳ ಸಮಾಗಮ
ಕನ್ನಡಲ್ಲೂ ನಟನೆ
ವಿಶೇಷ ಎಂದರೆ ಮಮ್ಮುಟ್ಟಿ ಕನ್ನಡ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. 2012ರಲ್ಲಿ ತೆರೆಕಂಡ ಅಭಯಸಿಂಹ ನಿರ್ದೇಶನದ ʼಶಿಕಾರಿʼ ಸಿನಿಮಾದಲ್ಲಿ ಮಮ್ಮುಟ್ಟಿ ದ್ವಿಪಾತ್ರದಲ್ಲಿ ನಟಿಸಿದ್ದರು. ಅಲ್ಲದೆ ಕನ್ನಡ ಕಲಿತು ತಮ್ಮ ಪಾತ್ರಕ್ಕೆ ಸ್ವತಃ ಅವರೇ ಡಬ್ ಮಾಡಿದ್ದರು. ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಲು ಈ ಚಿತ್ರ ವಿಫಲವಾಗಿದ್ದರೂ ವಿಮರ್ಶಕರ ಗಮನ ಸೆಳೆದಿತ್ತು. ಅಲ್ಲದೆ 2009ರಲ್ಲಿ ರಿಲೀಸ್ ಆದ ʼಚಟ್ಟಂಬಿನಾಡುʼ ಮಲಯಾಳಂ ಚಿತ್ರದಲ್ಲಿನ ಕನ್ನಡ ಡೈಲಾಗ್‌ಗಳನ್ನು ಹೇಳಿ ಮಮ್ಮುಟ್ಟಿ ಗಮನ ಸೆಳೆದಿದ್ದರು.
ಸದ್ಯದ ಪ್ರಾಜೆಕ್ಟ್
ಸದ್ಯ ಮಮ್ಮುಟ್ಟಿ ಮಲಯಾಳಂನ ʼಕಲಂಕಾವಲ್ʼ ಮತ್ತು ʼಎಂಎಂಎಂಎನ್ʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಎಂದರೆ ಮಹೇಶ್ ನಾರಾಯಣ್ ನಿರ್ದೇಶನದ ʼಎಂಎಂಎಂಎನ್ʼ ಸಿನಿಮಾದಲ್ಲಿ ಅನೇಕ ವರ್ಷಗಳ ಬಳಿಕ ಮಲಯಾಳಂ ಸೂಪರ್ ಸ್ಟಾರ್‌ಗಳಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ತೆರೆ ಮೇಲೆ ಒಂದಾಗುತ್ತಿದ್ದು, ನಯನತಾರಾ, ಫಹಾದ್ ಫಾಸಿಲ್, ಕುಂಜಕ್ಕೋ ಬಾಬನ್ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುಮಾರು 150 ದಿನಗಳ ಕಾಲ ಸಿನಿಮಾದ ಶೂಟಿಂಗ್ ನಡೆಯಲಿದೆ. ಸದ್ಯ ಅವರ ʼಬಝೂಕʼ ಚಿತ್ರ ರಿಲೀಸ್‌ಗೆ ರೆಡಿ ಆಗಿದೆ. ದಕ್ಷಿಣ ಭಾರತದ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಅವರು ಮಮ್ಮುಟ್ಟಿ ಅವರ ಪುತ್ರ.