Rishab Shetty: ರಾಷ್ಟ್ರ ಪ್ರಶಸ್ತಿ, ಕಮರ್ಷಿಯಲ್ ಹಿಟ್; ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರಗಳಿವು
ನಟರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಬಳಿಕ ನಿರ್ದೇಶನದಲ್ಲಿಯೂ ಮಿಂಚಿದ ಅನೇಕ ಪ್ರತಿಭಾವಂತರಿದ್ದಾರೆ. ಅಂತಹವರಲ್ಲಿ ಸ್ಯಾಂಡಲ್ವುಡ್ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕೂಡ ಒಬ್ಬರು. 2012ರಲ್ಲಿ ರಿಲೀಸ್ ಆದ 'ತುಗ್ಲಕ್' ಸಿನಿಮಾ ಮೂಲಕ ಅವರು ಸ್ಯಾಂಡಲ್ವುಡ್ಗೆ ಕಾಲಿಟ್ಟರು. ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಆ ಬಳಿಕ ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನಕ್ಕೂ ಇಳಿದರು. ನಿರ್ದೇಶನದಲ್ಲಿಯೂ ಛಾಪು ಮೂಡಿಸಿದ ಅವರು ರಾಷ್ಟ್ರ ಪ್ರಶಸ್ತಿಯನ್ನೂ ಮುಡುಗೇರಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಇದುವರೆಗೆ 5 ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದು, ಇವೆಲ್ಲ ಬಾಕ್ಸ್ ಆಫೀಸ್ನಲ್ಲಿ ಹಿಟ್ ಆಗುವ ಜತೆಗೆ ಪ್ರೇಕ್ಷಕರ ಗಮನವನ್ನೂ ಸೆಳೆದಿವೆ. ಜು. 7 ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅವರು ನಿರ್ದೇಶಿಸಿದ ಚಿತ್ರಗಳ ವಿವರ ಇಲ್ಲಿದೆ:

ರಿಷಬ್ ಶೆಟ್ಟಿ.


ʼರಿಕ್ಕಿʼ
ಸ್ಯಾಂಡಲ್ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ʼರಿಕ್ಕಿʼ (Ricky) ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ರಿಷಬ್ ಶೆಟ್ಟಿ ಎನ್ನುವ ಅದ್ಭುತ ನಿರ್ದೇಶಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರದಲ್ಲಿ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದರು. ಮೊದಲ ಚಿತ್ರದಲ್ಲೇ ರಿಷಬ್ ಶೆಟ್ಟಿ ನಕ್ಸಲೈಟ್ನಂತಹ ಸೂಕ್ಷ್ಮ ವಿಚಾರವನ್ನು ಕೈಗೆತ್ತಿಕೊಂಡಿದ್ದರು. 2016ರ ಜನವರಿಯಲ್ಲಿ ತೆರೆಕಂಡ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಜತೆಗೆ ಹಾಡುಗಳೂ ಜನಪ್ರಿಯವಾದವು.

ʼಕಿರಿಕ್ ಪಾರ್ಟಿʼ
ಕರಾವಳಿ ಪ್ರತಿಭೆಗಳಾದ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ಕಾಂಬಿನೇಷನ್ನ 2ನೇ ಚಿತ್ರ ʼಕಿರಿಕ್ ಪಾರ್ಟಿʼ (Kirik Party). ಇದು ಕೂಡ 2016ರಲ್ಲೇ ತೆರೆಕಂಡಿತು. ʼರಿಕ್ಕಿʼ ವರ್ಷಾರಂಭದಲ್ಲಿ ರಿಲೀಸ್ ಆಗಿದ್ದರೆ ʼಕಿರಿಕ್ ಪಾರ್ಟಿʼ ವರ್ಷಾಂತ್ಯದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಮೊದಲ ಚಿತ್ರದಲ್ಲಿ ಗಂಭೀರ ವಿಚಾರವನ್ನು ಕೈಗೆತ್ತಿಕೊಂಡಿದ್ದ ರಿಷಬ್ ʼಕಿರಿಕ್ ಪಾರ್ಟಿʼ ಮೂಲಕ ಕಾಲೇಜು ಸ್ಟೋರಿಯನ್ನು ಯುವ ಜನತೆಗೆ ಇಷ್ವಾಗುವ ರೀತಿಯಲ್ಲಿ ಪ್ರಸ್ತುಪಡಿಸಿದ್ದರು. ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗಡೆ ಎಂಬ ಹೊಸ ಪ್ರತಿಭೆಗಳು ನಾಯಕಿಯರಾಗಿ ಸ್ಯಾಂಡಲ್ವುಡ್ಗೆ ಪರಿಚಿತರಾದರು. ಈ ಸಿನಿಮಾ ತೆಲುಗಿಗೂ ರಿಮೇಕ್ ಆಗಿದೆ.

ʼಸ.ಹಿ.ಪ್ರಾ.ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈʼ
ರಿಷಬ್ ಶೆಟ್ಟಿ ನಿರ್ದೇಶನದ ಈ ಮಕ್ಕಳ ಚಿತ್ರ ʼಸ.ಹಿ.ಪ್ರಾ.ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈʼ (Sa.Hi.Pra.Shaale Kasaragodu, Koduge: Ramanna Rai) 2018ರಲ್ಲಿ ರಿಲೀಸ್ ಆಯ್ತು. ಗಡಿನಾಡು ಕಾಸರಗೋಡಿನ ಕನ್ನಡಿಗರು ಎದುರಿಸುವ ಭಾಷಾ ಸಮಸ್ಯೆನ್ನು ನವಿರಾಗಿ ಪ್ರಸ್ತುತಪಡಿಸಿದ ರಿಷಬ್ ಶೆಟ್ಟಿ ಅವರ ನೈಪುಣ್ಯತೆಗೆ ಪ್ರೇಕ್ಷಕರು ಮನ ಸೋತಿದ್ದರು. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹಿಟ್ ಅಗಿದ್ದಲ್ಲೇ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡತ್ತು. ಅನಂತ್ ನಾಗ್, ರಂಜನ್ ಎಸ್., ಸಪ್ತಾ ಪಾವೂರು ಮತ್ತಿತರರು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಯಕ್ಷಗಾನದಂತಹ ತುಳುನಾಡ ಸಂಸ್ಕೃತಿಯನ್ನೂ ಈ ಚಿತ್ರದಲ್ಲಿ ಪರಿಚಯಿಸಲಾಗಿತ್ತು.

ʼಕಾಂತಾರʼ
ಇಡೀ ಭಾರತೀಯ ಚಿತ್ರರರಂಗವೇ ಸ್ಯಾಂಡಲ್ವುಡ್ನತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ ʼಕಾಂತಾರʼ (Kantara). ರಿಷನ್ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ದೇಶಿಸಿದ ಈ ಚಿತ್ರ ಕರಾವಳಿಯ ವಿಶಿಷ್ಟ ಭೂತಾರಾಧನೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಈ ಸಿನಿಮಾದ ಶಿವ ಪಾತ್ರಕ್ಕಾಗಿ ರಿಷಬ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸುಮಾರು 16 ಕೋಟಿ ರೂ. ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಗಳಿಸಿದ್ದು ಬರೋಬ್ಬರಿ 450 ಕೋಟಿ ರೂ. 2022ರಲ್ಲಿ ತೆರೆಕಂಡ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಸಪ್ತಮಿ ಗೌಡ, ಅಚ್ಯುತ್ ಕುಮಾರ್, ಕಿಶೋರ್ ಕುಮಾರ್ ಮತ್ತಿತರರು ಅಭಿನಯಿಸಿದ್ದರು.

ʼಕಾಂತಾರ: ಚಾಪ್ಟರ್ 1ʼ
ಸದ್ಯ ಸಿನಿಪ್ರಿಯರು ಕುತೂಹಲದಿಂದ ಎದುರು ನೋಡುತ್ತಿರುವ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಚಿತ್ರ ʼಕಾಂತಾರʼದ ಪ್ರೀಕ್ವೆಲ್. ʼಕಾಂತಾರʼದ ಕಥೆ ನಡೆಯುವ ಮುನ್ನ ಏನಾಗಿತ್ತು ಎನ್ನುವುದನ್ನು ಈ ಭಾಗದಲ್ಲಿ ರಿಷಬ್ ವಿವರಿಸಲಿದ್ದಾರೆ. ನಟನೆಯ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಅ. 2ರಂದು ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ.