ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Spirit Row: ದಿನಕ್ಕೆ 8 ಗಂಟೆ ಕೆಲಸ; ದೀಪಿಕಾ ಪಡುಕೋಣೆ ನಿಲುವಿಗೆ ರಶ್ಮಿಕಾ ಹೇಳಿದ್ದೇನು?

Rashmika Mandanna: ಪ್ರತಿ ದಿನ ಎಷ್ಟು ಗಂಟೆ ಶೂಟಿಂಗ್‌ ನಡೆಸಿದರೂ ನಟಿಸಲು ಸಿದ್ಧ ಎಂದು ರಶ್ಮಿಕಾ ಮಂದಣ್ಣ ತಿಳಿಸಿದ್ದಾರೆ. ವಿವಿಧ ಚಿತ್ರರಂಗಗಳಲ್ಲಿ ಕೆಲಸ ಮಾಡುವ ಅವಧಿ ವ್ಯತ್ಯಸ್ತವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. ಆ ಮೂಲಕ ಕೆಲವು ದಿನಗಳಿಂದ ನಡೆಯುತ್ತಿರುವ ಕೆಲಸ ಅವಧಿಯ ಚರ್ಚೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೀಪಿಕಾ ಪಡುಕೋಣೆ ಪರ ಬ್ಯಾಟ್‌ ಬೀಸಿದ್ರಾ ರಶ್ಮಿಕಾ?

Profile Ramesh B Jul 7, 2025 5:56 PM

ಮುಂಬೈ: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ ನಟಿ, ಕನ್ನಡತಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಹಲವು ದಿನಗಳ ಕಾಲ ಚಿತ್ರೀಕರಣದಿಂದ ಬ್ರೇಕ್‌ ಪಡೆದಿದ್ದ ಅವರು ಮತ್ತೆ ಬಣ್ಣದ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕೆಲವು ದಿನಗಳ ಹಿಂದೆ ಟಾಲಿವುಡ್‌ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ (Sandeep Reddy Vanga) ಆ್ಯಕ್ಷನ್‌ ಕಟ್‌ ಹೇಳುತ್ತಿರುವ, ಪ್ರಬಾಸ್‌ ಅಭಿನಯದ ತೆಲುಗು ಚಿತ್ರ ʼಸ್ಪಿರಿಟ್‌ʼನಲ್ಲಿ ದೀಪಿಕಾ ನಾಯಕಿಯಾಗಿ ನಟಿಸುತ್ತಾರೆ ಎನ್ನಲಾಗಿತ್ತು. ಆ ಬಳಿಕ ಅವರು ಪ್ರತಿ ದಿನ 8 ಗಂಟೆಗಿಂತ ಹೆಚ್ಚು ಸಮಯ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಚಿತ್ರದಿಂದ ಹೊರಬಂದಿದ್ದರು. ಇದಾದ ನಂತರ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಧಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಹಲವರು ದೀಪಿಕಾ ಪರವಾಗಿ ಬ್ಯಾಟ್‌ ಬೀಸಿದರೆ ಇನ್ನು ಕೆಲವರು ಸಂದೀಪ್‌ ರೆಡ್ಡಿ ವಂಗಾ ಬೆಂಬಲಕ್ಕೆ ನಿಂತರು. ಸದ್ಯ ವಿವಿಧ ಚಿತ್ರರಂಗದಲ್ಲಿ ಬ್ಯುಸಿಯಾಗಿರುವ, ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಈ ವಿಚಾರವಾಗಿ ಮಾತನಾಡಿದ್ದಾರೆ.

ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ತಾವು ಕಾರ್ಯ ನಿರ್ವಹಿಸುವ ಅವಧಿಯ ಬಗ್ಗೆ ಚರ್ಚೆ ನಡೆಸಬೇಕು ಎಂದು ಅವರು ತಿಳಿಸಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣ ಗೊತ್ತಿಲ್ಲದೇ ಹೇಳಿರಬೇಕು, ಕ್ಷಮಿಸಿಬಿಡೋಣ: ನಟಿ ಹರ್ಷಿಕಾ ಪೂಣಚ್ಚ

ʼʼಸದ್ಯ ಇಡೀ ದೇಶವೇ ಕೆಲಸದ ಅವಧಿ ಬಗ್ಗೆ ಮಾತನಾಡುತ್ತಿದೆ. ಚಿತ್ರರಂಗಕ್ಕೆ ಸಂಬಂಧಿಸಿ ಕೆಲಸದ ಅವಧಿಯನ್ನು ನಿರ್ಧರಿಸುವುದು ಅವರವರಿಗೆ ಬಿಟ್ಟ ವಿಚಾರ. ಈ ಬಗ್ಗೆ ಎರಡೂ ಕಡೆಯವರು ಮಾತನಾಡಿ ನಿರ್ಧರಿಸಬೇಕುʼʼ ಎಂದು ಹೇಳಿದ್ದಾರೆ.

ವಿವಿಧ ಚಿತ್ರರಂಗಗಳಲ್ಲಿ ತೊಡಗಿಸಿಕೊಂಡಿರುವ ರಶ್ಮಿಕಾ ಇದೊಂದು ವಿಶೇಷ ಅನುಭವ ಎಂದು ಹೇಳಿದ್ದಾರೆ. ಜತೆಗೆ ಚಿತ್ರೀಕೆಣದ ರೀತಿ ವ್ಯತ್ಯಸ್ತವಾಗಿರುತ್ತದೆ ಎಂದಿದ್ದಾರೆ. ʼʼನಾನು ವಿವಿಧ ಚಿತ್ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ದಕ್ಷಿಣ ಭಾರತದ ಚಿತ್ರರಂಗಗಳಾದ ಕನ್ನಡ, ತೆಲುಗು ಅಥವಾ ತಮಿಳಿನಲ್ಲಿ ಶೂಟಿಂಗ್‌ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ತನಕ ಇರುತ್ತದೆ. ಇನ್ನು ಹಿಂದಿಯಲ್ಲಿ ಕೆಲಸದ ಅವಧಿ ಬೆಳಗ್ಗೆ 9ರಿಂದ ರಾತ್ರಿ 9. ಎರಡೂ ಅವಧಿಯ ಕೆಲಸಕ್ಕೆ ನಾನು ಸಿದ್ಧ. ನನ್ನ ಚಿತ್ರಗಳಿಗೆ ಇವು ಅಗತ್ಯವಾಗಿರುವುದರಿಂದ ಎರಡೂ ರೀತಿಯ ಕೆಲಸಕ್ಕೆ ನಾನು ಬದ್ಧಳಾಗಿರುತ್ತೇನೆʼʼ ಎಂದು ರಶ್ಮಿಕಾ ತಿಳಿಸಿದ್ದಾರೆ.

‘ʼಚಿತ್ರೀಕರಣ ಬೆಳಗ್ಗೆ 9ಕ್ಕೆ ಆರಂಭವಾಗಿ 9ಕ್ಕೆ ಮುಗಿಯಬೇಕಿರುತ್ತದೆ. ಆದರೆ ಕೆಲವೊಮ್ಮೆ ಇದು ಮುಂದಿನ ದಿನದವರೆಗೂ ಸಾಗುತ್ತದೆ. ಈ ಮೂಲಕ ನಿರಂತರ 36 ಗಂಟೆ, 48 ಗಂಟೆ ನಿದ್ದೆ ಇಲ್ಲದೆ ಕೆಲಸ ಮಾಡಿದಂತಾಗುತ್ತದೆ. ಸಿನಿಮಾ ಶೂಟ್​ನಲ್ಲಿ ಈ ರೀತಿ ಆಗೋದು ಸಾಮಾನ್ಯ’ʼ ಎಂದು ಹೇಳಿದ್ದಾರೆ.

ʼ‘ಕೆಲಸ ಮಾಡುವ ವಿಚಾರದಲ್ಲಿ ಎಲ್ಲರಿಗೂ ಅವರದ್ದೇ ಆದ ಅಭಿಪ್ರಾಯಗಳಿವೆ. ಹೀಗಾಗಿ ಕೆಲಸ ಆರಂಭಿಸುವ ಮೊದಲೇ ಈ ಬಗ್ಗೆ ನಿರ್ದೇಶಕರ ಜತೆ ಮುಕ್ತವಾಗಿ ಮಾತುಕತೆ ನಡೆಸುವುದು ಉತ್ತಮʼʼ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ʼʻಕೊಡವ ಸಮುದಾಯದಿಂದ ಇಲ್ಲಿಯವರೆಗೆ ಯಾರೂ ಸಿನಿಮಾ ಇಂಡಸ್ಟ್ರಿಗೆ ಬಂದಿಲ್ಲ, ನಾನೇ ಫಸ್ಟ್ ಅನ್ನಿಸುತ್ತೆʼʼ ಎಂದು ಹೇಳುವ ಮೂಲಕ ಹೊಸದೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದರು.