ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Salary Hike: ಸಂಸದರಿಗೆ ಗುಡ್‌ನ್ಯೂಸ್‌ ನೀಡಿದ ಕೇಂದ್ರ; ಶೇ. 24ರಷ್ಟು ಸಂಬಳ ಹೆಚ್ಚಳ: ಎಷ್ಟಾಯ್ತು ವೇತನ?

Centre Announces Salary Hike: ಸಂಸದರು ಮತ್ತು ಮಾಜಿ ಸಂಸದರ ವೇತನ, ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಪರಿಷ್ಕರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ (ಮಾ. 24) ಪ್ರಕಟಿಸಿದೆ. ಅದರಂತೆ ಸಂಸದರ ಸಂಬಳ ಶೇ. 24ರಷ್ಟು ಏರಿಕೆಯಾಗಿದೆ. ಏ. 1ರಿಂದ ಇದು ಜಾರಿಗೆ ಬರಲಿದೆ.

ಸಂಸದರಿಗೆ ಗುಡ್‌ನ್ಯೂಸ್‌ ನೀಡಿದ ಕೇಂದ್ರ; ಶೇ. 24ರಷ್ಟು ಸಂಬಳ ಹೆಚ್ಚಳ

Profile Ramesh B Mar 24, 2025 7:11 PM

ಹೊಸದಿಲ್ಲಿ: ಕರ್ನಾಟಕದಲ್ಲಿ ಸಚಿವರು, ಶಾಸಕರು, ಸಭಾಪತಿ, ಸಭಾಧ್ಯಕ್ಷರ ವೇತನ ಹೆಚ್ಚಿಸುವ (Salary Hike) ಆದೇಶಕ್ಕೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಕೇಂದ್ರ ಸರ್ಕಾರ (Union Government) ಸಂಸದರ ಸಂಬಳವನ್ನು ಶೇ. 24ರಷ್ಟು ಏರಿಕೆ ಮಾಡಿದೆ. ಏ. 1ರಿಂದ ಇದು ಜಾರಿಗೆ ಬರಲಿದೆ. ಸಂಸದರು ಮತ್ತು ಮಾಜಿ ಸಂಸದರ ವೇತನ, ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಪರಿಷ್ಕರಿಸುವುದಾಗಿ ಕೇಂದ್ರ ಸರ್ಕಾರ ಸೋಮವಾರ (ಮಾ. 24) ಪ್ರಕಟಿಸಿದೆ. ಅದರಂತೆ ಸಂಸದರ ವೇತನದಲ್ಲಿ ಶೇ. 24ರಷ್ಟು ಹೆಚ್ಚಳವಾಗಲಿದೆ. ಇದು 2023ರ ಏ. 1ರಿಂದ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಂಸದೀಯ ವ್ಯವಹಾರಗಳ ಸಚಿವಾಲಯ (Ministry of Parliamentary Affairs) ಹೊರಡಿಸಿದ ಅಧಿಸೂಚನೆಯ ಪ್ರಕಾರ ಸಂಸದರ ಮಾಸಿಕ ವೇತನವು 1 ಲಕ್ಷ ರೂ.ಗಳಿಂದ 1.24 ಲಕ್ಷ ರೂ.ಗಳಿಗೆ ಏರಿಕೆಯಾಗಲಿದೆ. ಜತೆಗೆ ದೈನಂದಿನ ಭತ್ಯೆ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಳವಾಗಲಿದೆ. ಜತೆಗೆ ಸಂಸದರು ಮತ್ತು ಮಾಜಿ ಸಂಸದರ ಮಾಸಿಕ ಪಿಂಚಣಿಯನ್ನು 25,000 ರೂ.ಗಳಿಂದ 31,000 ರೂ.ಗಳಿಗೆ ಪರಿಷ್ಕರಿಸಲಾಗಿದೆ.



ಈ ಸುದ್ದಿಯನ್ನೂ ಓದಿ: Salary Hike: ಶಾಸಕರಿಗೆ ಯುಗಾದಿ ಸಿಹಿ, ವೇತನ- ಭತ್ಯೆ ದುಪ್ಪಟ್ಟು ಹೆಚ್ಚಳಕ್ಕೆ ರಾಜ್ಯಪಾಲರ ಸಹಿ

ಅಧಿಸೂಚನೆಯಲ್ಲಿ ಏನಿದೆ?

"ಸಂಸತ್ ಸದಸ್ಯರ ವೇತನ, ಭತ್ಯೆಗಳು ಮತ್ತು ಪಿಂಚಣಿ ಕಾಯ್ದೆ, 1954 (1954 ರ 30)ರ ಸೆಕ್ಷನ್ 8 ಎ ಯ ಸೆಕ್ಷನ್ 3 ಮತ್ತು ಉಪ-ವಿಭಾಗ (1 ಎ) ಯ ಉಪ-ವಿಭಾಗ (2)ರ ಅಡಿಯಲ್ಲಿ ನೀಡಲಾದ ಅಧಿಕಾರಗಳನ್ನು ಚಲಾಯಿಸುವ ಮೂಲಕ, ಕೇಂದ್ರ ಸರ್ಕಾರವು ಸದಸ್ಯರು ಮತ್ತು ಮಾಜಿ ಸಂಸತ್ ಸದಸ್ಯರ ವೇತನ, ದೈನಂದಿನ ಭತ್ಯೆ, ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಣದುಬ್ಬರದ ಆಧಾರದ ಮೇಲೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುತ್ತದೆ. 1961 (1961 ರ 43), 2023ರ ಏ. 1ರಿಂದ ಜಾರಿಗೆ ಬರಲಿದೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವೇತನ ಪರಿಷ್ಕರಣೆಯ ವಿವರ

ಸಂಬಳ: ಸಂಸದರ ಮಾಸಿಕ ವೇತನ 1,00,000 ರೂ.ಯಿಂದ 1,24,000 ರೂ.ಗೆ ಹೆಚ್ಚಳ.

ದಿನ ಭತ್ಯೆ: ಸಂಸದರ ದಿನದ ಭತ್ಯೆ 2,000 ರೂ.ಯಿಂದ 2,500 ರೂ.ಗೆ ಏರಿಕೆ.

ಪಿಂಚಣಿ: ಮಾಜಿ ಸಂಸದರ ಮಾಸಿಕ ಪಿಂಚಣಿ 25,000 ರೂ.ಯಿಂದ 31,000 ರೂ.ಗೆ ಹೆಚ್ಚಳ.

ಹೆಚ್ಚುವರಿ ಪಿಂಚಣಿ: ಮಾಜಿ ಸಂಸದರ ಹೆಚ್ಚುವರಿ ಪಿಂಚಣಿಯನ್ನು ವರ್ಷಕ್ಕೆ 2,000 ರೂ.ಗಳಿಂದ 2,500 ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಸಂಸದರಿಗೆ ಬೇರೆ ಏನೆಲ್ಲ ಅನುಕೂಲಗಳಿವೆ?

ಕ್ಷೇತ್ರದ ಭತ್ಯೆಯಾಗಿ ಪ್ರತಿ ತಿಂಗಳು 70,000 ರೂ. ಸಿಗುತ್ತದೆ. ಕಚೇರಿ ನಿರ್ವಹಣೆಗಾಗಿ ಪ್ರತಿ ತಿಂಗಳು 60,000 ರೂ. ಲಭಿಸುತ್ತದೆ. ಅಲ್ಲದೆ ಸಂಸದರಿಗೆ ಪ್ರತಿವರ್ಷ ತಾವೂ ಸೇರಿದಂತೆ ಕುಟುಂಬ ಸದಸ್ಯರು 34 ಬಾರಿ ಉಚಿತವಾಗಿ ವಿಮಾನ ಪ್ರಯಾಣ ಕೈಗೊಳ್ಳಬಹುದು. ಜತೆಗೆ ವೈಯಕ್ತಿಕವಾಗಿ ಹಾಗೂ ಸಂಸದರ ಕಾರ್ಯಗಳಿಗಾಗಿ ಉಚಿತವಾಗಿ ಫಸ್ಟ್‌ ಕ್ಲಾಸ್‌ ರೈಲು ಪ್ರಯಾಣ ಮಾಡಬಹುದು.