Maha Kumbh 2025: ಕುಂಭಮೇಳದಲ್ಲಿ ಪವಿತ್ರಸ್ನಾನಗೈದ ಮಹಿಳೆಯರ ಫೋಟೊ, ವಿಡಿಯೊಗಳನ್ನು ಮಾರಾಟಕ್ಕಿಟ್ಟ ದುಷ್ಕರ್ಮಿಗಳು
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಈಗಾಗಲೇ ಕೋಟ್ಯಂತರ ಮಂದಿ ಪವಿತ್ರ ಸ್ನಾನ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನ ಜನರು ತ್ರಿವೇಣಿ ಸ್ನಾನ ಮಾಡಿದ್ದಾರೆ. ಆದರೆ ಇದೀಗ ಈ ಹಿಂದೂಗಳ ಈ ಪವಿತ್ರ ಧಾರ್ಮಿಕ ಆಚರಣೆಗೆ ಧಕ್ಕೆ ತರುವಂತಹ ಕೆಲಸವೊಂದನ್ನು ಕಿಡಿಗೇಡಿಗಳು ಮಾಡಿದ್ದು, ಕುಂಭಮೇಳದಲ್ಲಿ ಪವಿತ್ರ ಸ್ನಾನ ಗೈದ ಮಹಿಳೆಯರ ಸ್ನಾನದ ವಿಡಿಯೋಗಳನ್ನು ಮಾರಾಟಕ್ಕಿಟ್ಟಿದ್ದಾರೆ.

ಮಹಿಳೆಯರ ಸ್ನಾನದ ವಿಡೀಯೋ ಮಾರಾಟ

ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ (Maha Kumbh 2025) ವಿಶ್ವದ ಅತಿ ದೊಡ್ಡ ಧಾರ್ಮಿಕ ಯಾತ್ರೆ. ಲಕ್ಷಾಂತರ ಜನರು ಈಗಾಗಲೇ ಪವಿತ್ರ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನ ಜನರು ತ್ರಿವೇಣಿ ಸ್ನಾನ ಮಾಡಿದ್ದಾರೆ. ಆದರೆ ಇದೀಗ ಈ ಹಿಂದೂಗಳ ಈ ಪವಿತ್ರ ಧಾರ್ಮಿಕ ಆಚರಣೆಗೆ ಧಕ್ಕೆ ತರುವಂತಹ ಕೆಲಸವೊಂದನ್ನು ಕಿಡಿಗೇಡಿಗಳು ಮಾಡಿದ್ದು, ಕುಂಭಮೇಳದಲ್ಲಿ ಪವಿತ್ರ ಸ್ನಾನಗೈದ ಮಹಿಳೆಯರ ಸ್ನಾನದ ವಿಡಿಯೋಗಳನ್ನು ಮಾರಾಟಕ್ಕಿಟ್ಟಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವ ಮಹಿಳಾ ಭಕ್ತರ ಫೋಟೊಗಳು ಹಾಗೂ ಆಕ್ಷೇಪಾರ್ಹ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ, ಮಾರಾಟ ಮಾಡುತ್ತಿದ್ದ ಆರೋಪವೂ ಕೇಳಿ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದು, ಕುಂಭಮೇಳದಲ್ಲಿ ಮಹಿಳೆಯರು ಸ್ನಾನ ಮಾಡುವುದನ್ನು ಅಕ್ರಮವಾಗಿ ವಿಡಿಯೊ ರೆಕಾರ್ಡ್ ಮಾಡಿ ಟೆಲಿಗ್ರಾಮ್ ಚಾನೆಲ್‌ಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದ ಕೂಡಲೇ ಎಚ್ಚೆತ್ತ ಪೊಲೀಸರು ಈ ದುಷ್ಕೃತ್ಯ ವೆಸಗಿದ ಪಾಪಿಗಳ ಎಡೆಮುಡಿ ಕಟ್ಟಿದ್ದಾರೆ.
ಉತ್ತರ ಪ್ರದೇಶ ಪೊಲೀಸ್ ಮುಖ್ಯಸ್ಥ ಪ್ರಶಾಂತ್ ಕುಮಾರ್ ಅವರ ನಿರ್ದೇಶನದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಈ ಧಾರ್ಮಿಕ ಆಚರಣೆಯ ಕುರಿತಾಗಿ ದಾರಿ ತಪ್ಪಿಸುವ ಸೋಶಿಯಲ್ ಮೀಡಿಯಾ ಕಂಟೆಂಟ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಮೊದಲಿಗೆ ಫೆ. 17ರಂದು ಮಹಿಳಾ ಯಾತ್ರಿಕರ ಆಕ್ಷೇಪಾರ್ಹ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಇನ್‌ಸ್ಟಾಗ್ರಾಂ ಖಾತೆಯೊಂದರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಇನ್ ಸ್ಟಾಗ್ರಾಂನ ಮಾತೃಸಂಸ್ಥೆಯಾದ ಮೆಟಾದಿಂದ ಆ ಖಾತೆ ನಿರ್ವಹಕರ ಬಗ್ಗೆ ಮಾಹಿತಿ ಕೇಳಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಮೆಟಾ ಸಂಸ್ಥೆ ನೀಡುವ ಮಾಹಿತಿಯ ಆಧಾರದ ಮೇಲೆ ಆ ಖಾತೆಯನ್ನು ನಿರ್ವಹಿಸುತ್ತಿರುವವರು ಯಾರು ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದರು.
ಈ ಸುದ್ದಿಯನ್ನು ಓದಿ: Maha Kumbh 2025: ಕುಂಭಮೇಳದ ಬಗ್ಗೆ ತಪ್ಪು ಮಾಹಿತಿ ಹರಡಿದ 14 ಎಕ್ಸ್ ಖಾತೆಗಳ ವಿರುದ್ಧ ಕಠಿಣ ಕ್ರಮ
ಇದೀಗ ಮತ್ತೆರೆಡು ದಿನಗಳ ಕಾಲಾವಧಿಯಲ್ಲಿ ಅಂತದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಫೆ. 19ರಂದು ಇಂತಹ ಮತ್ತೊಂದು ಪ್ರಕರಣ ದಾಖಲಾಗಿದೆ. ಟೆಲಿಗ್ರಾಂ ಆ್ಯಪ್ ಮೂಲಕ ವಿಡಿಯೊಗಳನ್ನು ಮಾರಾಟಕ್ಕಿಟ್ಟಿರುವ ವಿಚಾರ ಬೆಳಕಿಗೆ ಬಂದಿದ್ದು, ಚಾನಲ್ ವಿರುದ್ಧ ಕಾನೂನು ಕ್ರಮ ಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Such Social Media Profiles/Telegram Groups are being identified. FIR being registered against them.@Uppolice @kumbhMelaPolUP https://t.co/yhnqR1Xmtq
— Vaibhav Krishna (@Krishna_VK12) February 19, 2025
ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಉತ್ತರ ಪ್ರದೇಶದಲ್ಲಿ ಇಬ್ಬರನ್ನು ಬಂಧಿಸಿದ್ದು, ಮಹಿಳೆಯರ ಫೋಟೊ, ವಿಡಿಯೊಗಳನ್ನು ಹಂಚಿಕೊಳ್ಳುವುದು ಅವರ ಖಾಸಗಿತನಕ್ಕೆ ಧಕ್ಕೆಯುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಕೊತ್ವಾಲಿ ಕುಂಭಮೇಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕುಂಭಮೇಳಕ್ಕೆ ಸಂಬಂಧಿಸಿ ಪೊಲೀಸರ ಸಾಮಾಜಿಕ ಮಾಧ್ಯಮ ತಂಡವು ಕಾರ್ಯಾಚಾರಿಸುತ್ತಿದ್ದು, ವಿವಾದಾತ್ಮಕ ಪೋಸ್ಟ್ ಗಳ ಮೇಲೆ ನಿಗಾ ಇಡುತ್ತಿದೆ. ಅದರಂತೆ ಮಹಿಳೆಯರು ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವ ಮತ್ತು ಬಟ್ಟೆ ಬದಲಾಯಿಸುತ್ತಿರುವಂತಹ ವಿಡಿಯೋಗಳನ್ನು ಕೆಲವು ಕಿಡಿಗೇಡಿಗಳು ಸೆರೆಹಿಡಿದು ಅದನ್ನು ಕೆಲವು ಪ್ಲಾಟ್ ಫಾರಂಗಳಲ್ಲಿ ಅಪ್‌ಲೋಡ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನೂ ಕೆಲವೆಡೆ ಅಂಥ ಫೋಟೋಗಳನ್ನು ಮಾರಾಟ ಮಾಡುತ್ತಿರುವ ಆಘಾತಕಾರಿ ವಿಚಾರವೂ ಬಯಲಾಗಿದೆ.
500 ರೂ.ಗೆ ನಿಮ್ಮ ಫೋಟೊಕ್ಕೆ ಪುಣ್ಯಸ್ನಾನ
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ಪೋಸ್ಟರ್ ವೈರಲ್ ಆಗಿತ್ತು. ಅದರಲ್ಲಿ ಕುಂಭಮೇಳ ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಹೀಗಾಗಿ, ನೀವು ಪ್ರಯಾಗ್‌ರಾಜ್‌ಗೆ ಬರಲಾಗದಿದ್ದರೆ, ನಿಮ್ಮ ಫೋಟೊವನ್ನು ವ್ಯಾಟ್ಸ್‌ಆ್ಯಪ್ ಕಳುಹಿಸಿ, 500 ರೂ. ಪಾವತಿಸಿದರೆ ನಿಮ್ಮ ಫೋಟೊವನ್ನು ಪವಿತ್ರ ತ್ರಿವೇಣಿ ಸಂಗ್ರಮದಲ್ಲಿ ಮುಳುಗಿಸಿ ನಿಮಗೆ ಪುಣ್ಯ ಸಿಗುವಂತೆ ಮಾಡಲಾಗುವುದು ಎಂದು ಪೋಸ್ಟ್‌ನಲ್ಲಿ ಬರೆಯಲಾಗಿತ್ತು. ಇದಕ್ಕೆ ಭಾರೀ ಪರ ವಿರೋಧಗಳು ಅಭಿಪ್ರಾಯ ವ್ಯಕ್ತವಾಗಿದ್ದವು.