ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Meta Changes Rules: 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇನ್ಮುಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಲು ಸಾಧ್ಯವಿಲ್ಲ

ಹದಿಹರೆಯದವರ ಸುರಕ್ಷತೆಯನ್ನು ಗಮನದಲ್ಲಿಟ್ಟು ಮೆಟಾ ತನ್ನ ನಿಯಮದಲ್ಲಿ ಕೆಲವೊಂದು ಬದಲಾವಣೆ ತಂದಿದೆ. ಇನ್ನುಮುಂದೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ಪೋಷಕರ ಅನುಮತಿಯಿಲ್ಲದೆ ಇನ್‌ಸ್ಟಾಗ್ರಾಮ್‌ ಲೈವ್ ಬಳಸಲು ಸಾಧ್ಯವಾಗುವುದಿಲ್ಲ. ನಗ್ನತೆಯನ್ನು ಒಳಗೊಂಡಿರುವ ಚಿತ್ರಗಳನ್ನು ಮಸುಕಾಗಿಸುವ ವೈಶಿಷ್ಟ್ಯಕ್ಕೂ ಈಗ ಪೋಷಕರ ಅನುಮೋದನೆ ಬೇಕಾಗುತ್ತದೆ.

ಹದಿಹರೆಯದವರಿಗೆ ಇನ್ಮುಂದೆ ಇನ್‌ಸ್ಟಾಗ್ರಾಮ್‌ ಲೈವ್‌ ಸ್ಟ್ರೀಮ್‌ ಸಾಧ್ಯವಿಲ್ಲ

ಸಾಂದರ್ಭಿಕ ಚಿತ್ರ.

Profile Ramesh B Apr 8, 2025 9:13 PM

ಹೊಸದಿಲ್ಲಿ: ಹದಿಹರೆಯದವರ ಸುರಕ್ಷತೆಯನ್ನು ಗಮನದಲ್ಲಿಟ್ಟು ಮೆಟಾ ತನ್ನ ನಿಯಮದಲ್ಲಿ ಕೆಲವೊಂದು ಬದಲಾವಣೆ ತಂದಿದೆ (Meta changes rules). ಕಂಪನಿಯು ಈಗ ಹದಿಹರೆಯದ ಸುರಕ್ಷತಾ ವೈಶಿಷ್ಟ್ಯಗಳನ್ನು ಇನ್‌ಸ್ಟಾಗ್ರಾಮ್‌ ಜತೆಗೆ ಫೇಸ್‌ಬುಕ್‌ ಮತ್ತು ಮೆಸೆಂಜರ್‌ಗೂ ವಿಸ್ತರಿಸಿದೆ. ಇನ್‌ಸ್ಟಾಗ್ರಾಮ್‌ ಲೈವ್ ಮೇಲಿನ ನಿರ್ಬಂಧವು ಪ್ರಮುಖ ಬದಲಾವಣೆಗಳಲ್ಲಿ ಒಂದು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹದಿಹರೆಯದವರು ಪೋಷಕರ ಅನುಮತಿಯಿಲ್ಲದೆ ಇನ್‌ಸ್ಟಾಗ್ರಾಮ್‌ ಲೈವ್ ಬಳಸಲು ಸಾಧ್ಯವಾಗುವುದಿಲ್ಲ. ನಗ್ನತೆಯನ್ನು ಒಳಗೊಂಡಿರುವ ಚಿತ್ರಗಳನ್ನು ಮಸುಕಾಗಿಸುವ ವೈಶಿಷ್ಟ್ಯಕ್ಕೂ ಈಗ ಪೋಷಕರ ಅನುಮೋದನೆ ಬೇಕಾಗುತ್ತದೆ.

ಅದೇ ರೀತಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಫೇಸ್‌ಬುಕ್‌ ಮತ್ತು ಮೆಸೆಂಜರ್‌ಗೆ ಬಳಕೆದಾರರಿಗೆ ಸುರಕ್ಷತಾ ಕ್ರಮಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ.



ಕಳೆದ ವರ್ಷ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಲಾದ ಹದಿಹರೆಯದ ಖಾತೆಗಳ (Instagram teen features) ವ್ಯವಸ್ಥೆಯನ್ನು ಕಂಪನಿಯು ಫೇಸ್‌ಬುಕ್‌ ಮತ್ತು ಮೆಸೆಂಜರ್‌ನಲ್ಲಿಯೂ ಪರಿಚಯಿಸಲಿದೆ. ಈ ಹದಿಹರೆಯದ ಖಾತೆಗಳು ಸ್ವಯಂಚಾಲಿತವಾಗಿ 18 ವರ್ಷದೊಳಗಿನ ಬಳಕೆದಾರರಿಗೆ ಕಠಿಣ ಸುರಕ್ಷತಾ ಸೆಟ್ಟಿಂಗ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಪೋಷಕರು ದೈನಂದಿನ ಸಮಯ ಮಿತಿಗಳನ್ನು ಹೊಂದಿಸಬಹುದು. ಕೆಲವು ಗಂಟೆಗಳಲ್ಲಿ ಬಳಕೆಯನ್ನು ನಿರ್ಬಂಧಿಸಬಹುದು ಮತ್ತು ಮಕ್ಕಳು ಯಾರಿಗೆ ಸಂದೇಶ ಕಳುಹಿಸುತ್ತಿದೆ ಎಂಬುದನ್ನು ವೀಕ್ಷಿಸಬಹುದು.

ಹೊಸ ಅಪ್‌ಡೇಟ್‌ನಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರು ಈ ಡೀಫಾಲ್ಟ್ ಸೆಟ್ಟಿಂಗ್‌ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಪೋಷಕರ ಒಪ್ಪಿಗೆಯ ಅಗತ್ಯವಿದೆ. ಈ ನವೀಕರಿಸಿದ ವೈಶಿಷ್ಟ್ಯಗಳನ್ನು ಮೊದಲು ಅಮೆರಿಕ, ಇಂಗ್ಲೆಂಡ್‌, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಪರಿಚಯಿಸಲಾಗುತ್ತದೆ. ಅದಾದ ಬಳಿಕ ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಬಳಕೆಗೆ ಬರಲಿದೆ. ಇನ್‌ಸ್ಟಾಗ್ರಾಮ್‌ ಬಳಸುವ 13ರಿಂದ 15 ವರ್ಷ ವಯಸ್ಸಿನವರಲ್ಲಿ ಶೇ. 90ಕ್ಕೂ ಹೆಚ್ಚಿನ ಮಕ್ಕಳಿಗೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ವಿಶ್ವಾದ್ಯಂತ ಸುಮಾರು 54 ಮಿಲಿಯನ್ ಹದಿಹರೆಯದವರು ಪ್ರಸ್ತುತ ಪರಿಚಯಿಸಲಾದ ಹದಿಹರೆಯದ ಖಾತೆ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ ಎಂದು ಮೆಟಾ ಹೇಳಿದೆ.

ಹದಿಹರೆಯದ ಬಳಕೆದಾರರನ್ನು ರಕ್ಷಿಸಲು ಸರ್ಕಾರಗಳು ಟೆಕ್ ಕಂಪನಿಗಳ ಮೇಲೆ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಜಾರಿಗೆ ಬರುತ್ತಿದೆ. ಇಂಗ್ಲೆಂಡ್‌ನಲ್ಲಿ ಆನ್‌ಲೈನ್‌ ಸುರಕ್ಷತಾ ಕಾಯ್ದೆ ಮಾರ್ಚ್‌ನಲ್ಲಿ ಜಾರಿಗೆ ಬಂದಿದ್ದು, ಇದು ಮಕ್ಕಳ ಮೇಲಿನ ದೌರ್ಜನ್ಯ, ಭಯೋತ್ಪಾದನೆ ಮತ್ತು ಆನ್‌ಲೈನ್‌ ವಂಚನೆಯಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸುತ್ತದೆ. ಆತ್ಮಹತ್ಯೆಯಂತಹ ಅಪಾಯಕಾರಿ ಚಟುವಟಿಕೆಗಳಿಂದ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ರಕ್ಷಣೆ ನೀಡಲು ಹೆಚ್ಚುವರಿ ಕ್ರಮ ಅಗತ್ಯ ಎನ್ನುವುದು ತಜ್ಞರ ಅಭಿಮತ.

ಕಳೆದ ಸೆಪ್ಟೆಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಹದಿಹರೆಯದ ವೈಶಿಷ್ಟ್ಯಗಳನ್ನು ಪರಿಚಯಿಸುವಾಗ ಮೆಟಾದ ಅಂದಿನ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್ ಕ್ಲೆಗ್, ಪೋಷಕರಿಗೆ ಹೆಚ್ಚಿನ ನಿಯಂತ್ರಣವನ್ನು ನೀಡುವುದು ತಮ್ಮ ಗುರಿ ಎಂದು ಹೇಳಿದ್ದರು. ಹೊಸ ನಿಯಮಗಳು ಆನ್‌ಲೈನ್‌ನಲ್ಲಿರುವ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಅನೇಕ ಪೋಷಕರು ಇನ್ನೂ ಲಭ್ಯವಿರುವ ಸುರಕ್ಷತಾ ಫೀಚರ್‌ಗಳನ್ನು ಬಳಸುವುದಿಲ್ಲ ಎಂದು ಕ್ಲೆಗ್ ಹೇಳಿದ್ದರು.