Wednesday, 9th October 2024

ಕೇಂದ್ರ ಸಚಿವ ನಾರಾಯಣ್ ರಾಣೆ ವಿರುದ್ದ ಎಫ್‌ಐಆರ್‌

ಮುಂಬೈ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ್ ರಾಣೆ ಮೇಲೆ ಎರಡು ಎಫ್‌ಐಆರ್‌ಗಳನ್ನು ದಾಖಲಿಸ ಲಾಗಿದೆ.

‘ದೇಶದ ಸ್ವಾತಂತ್ರ್ಯ ದಿನದ ಬಗ್ಗೆಯೇ ಸಿಎಂಗೆ ತಿಳಿದಿಲ್ಲ’ ಎಂದು ರಾಣೆ ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಮಂಗಳವಾರ ಈ ಸಂಬಂಧ ಪುಣೆಯಲ್ಲಿ ಒಂದು ದೂರು ದಾಖಲಾಗಿದೆ. ನಾಸಿಕ್‌ನಲ್ಲಿ ಮತ್ತೊಂದು ದೂರನ್ನು ದಾಖಲಿಸಲಾಗಿದೆ.  ಶಿವಸೇನೆ ಸ್ಥಳೀಯ ಮುಖ್ಯಸ್ಥರ ದೂರಿನ ಮೇರೆಗೆ ನಾಸಿಕ್ ಸೈಬರ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಯುವ ಸೇನೆಯ ದೂರಿನ ಮೇರೆಗೆ ಪುಣೆ ನಗರದ ಚತುರ್ ಶೃಂಗಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ಸೋಮವಾರ ರಾಯಗಢ ಜಿಲ್ಲೆಯಲ್ಲಿ ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ, ಈಚೆಗೆ ಮೋದಿ ಸಂಪುಟ ಸೇರಿದ್ದ, ಮಾಜಿ ಶಿವಸೇನಾ ಮುಖ್ಯಸ್ಥ ರಾಣೆ, ಉದ್ಧವ್ ಠಾಕ್ರೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘ಠಾಕ್ರೆ ಆಗಸ್ಟ್‌ 15ರಂದು ರಾಜ್ಯದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದ ಸಂದರ್ಭದಲ್ಲಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷಗಳ ಲೆಕ್ಕವನ್ನೇ ಮರೆತಿದ್ದರು. ಮುಖ್ಯಮಂತ್ರಿಯಾದವರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದರು.

ಈ ಬೆನ್ನಲ್ಲೇ ರಾಣೆ ಹೇಳಿಕೆಗೆ ಆಡಳಿತರೂಢ ಶಿವಸೇನೆಯಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳು ಬಂದಿದ್ದವು.

ರತ್ನಗಿರಿ- ಸಿಂಧುದುರ್ಗದ ಶಿವಸೇನಾ ಸಂಸದ ವಿನಾಯಕ್ ರಾವತ್, ‘ರಾಣೆ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಬಿಜೆಪಿ ನಾಯಕರನ್ನು ಮೆಚ್ಚಿಸಲು ರಾಣೆ ಶಿವಸೇನೆ ಹಾಗೂ ನಾಯಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಮೋದಿ ಅವರಿಗೆ ದಾರಿ ತೋರಿಸಬೇಕು’ ಎಂದು ಟೀಕಿಸಿದ್ದರು.

ಇದೇ ಸಂದರ್ಭ, ರಾಣೆ ಜನಾಶೀರ್ವಾದ ಯಾತ್ರೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಒಟ್ಟು 42 ಎಫ್‌ಐಆರ್‌ಗಳನ್ನು ಮುಂಬೈ ಪೊಲೀಸರು ದಾಖಲಿಸಿದ್ದಾರೆ. ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆ ಹಾಗೂ ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.