Wednesday, 11th December 2024

ಮದುವೆ ದಿನ ನೇತ್ರದಾನದ ಪ್ರತಿಜ್ಞೆ

ಸುರೇಶ ಗುದಗನವರ

ವಧು-ವರರು ತಮ್ಮ ಮದುವೆಯ ದಿನ ನೇತ್ರದಾನದ ನಿರ್ಧಾರ ತೆಗೆದುಕೊಂಡಿದ್ದು ನಿಜಕ್ಕೂ ಒಂದು ಆದರ್ಶ ನಡೆ. ಇಂತಹ ಮದುವೆಯನ್ನು ಕಂಡ ಅತಿಥಿಗಳು ಸಹ ತಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಧಾರ ತೆಗೆದುಕೊಂಡರು!

ಮದುವೆ ಮಂಟಪದಲ್ಲಿ ವಧು- ವರರು ನೇತ್ರದಾನ ಬಗ್ಗೆ ಜಾಗೃತಿ ಮೂಡಿಸಿ, ಅದಕ್ಕೆ ಪ್ರೋತ್ಸಾಹಿಸುವ ಕಾರ್ಯ ನಿಜಕ್ಕೂ ಅಭಿಮಾನ ಹುಟ್ಟಿಸುವಂತಹದ್ದು. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಮದುಮಗ, ಮದುಮಗಳು ಸೇರಿದಂತೆ ಮದುವೆಗೆ ಆಗಮಿಸಿದ ಎಪ್ಪ ತ್ತೊಂದು ಜನರು ನೇತ್ರದಾನಕ್ಕೆ ಪ್ರತಿಜ್ಞೆ ಮಾಡುವ ಮೂಲಕ ನವಜೀವನಕ್ಕೆ ಕಾಲಿಡುವ ಅಂದಿನ ಸಂಭ್ರಮವನ್ನು ಅರ್ಥ ಪೂರ್ಣವಾಗಿಸಿದ್ದಾರೆ.

ಹುಬ್ಬಳ್ಳಿಯ ಲಿಂಗರಾಜ ನಗರದ ಸುಮಂಗಳಾ ಹಾಗೂ ಲಿಂಗರಾಜ ಅಂಗಡಿ ದಂಪತಿ ಪುತ್ರ ಸುಚಿತ್ ಅವರ ವಿವಾಹವು ಸದವತ್ತಿ ತಾಲೂಕಿನ ಚಚಡಿ ಗ್ರಾಮದ ಸುಜಾತಾ ಹಾಗೂ ವೀರಪ್ಪ ಹಲ್ಯಾಳ ದಂಪತಿಯ ಪುತ್ರಿ ರಜನಿ ಜೊತೆ ಗೋಕುಲ ರಸ್ತೆಯ ಚವ್ಹಾನ ಗ್ರೀನ್ ಗಾರ್ಡನ್‌ನಲ್ಲಿ ನೆರವೇರಿಸಿತು. ತಮ್ಮ ಮರಣದ ಬಳಿಕ ನೇತ್ರದಾನ ಮಾಡುವುದಾಗಿ ಅಂದು ನವದಂಪತಿ ಶಪಥ ಮಾಡಿದರು. ಈ ನವ ಜೋಡಿಗೆ ನೇತ್ರ ತಜ್ಞರಾದ ಎಂ.ಎಂ.ಜೋಶಿ, ಶ್ರೀನಿವಾಸ ಜೋಶಿ ಹಾಗೂ ಅನಿಕೇತ ಶಾಸ್ತ್ರಿ ಅವರು ತಮ್ಮ ಸಂಸ್ಥೆಯ ನೇತ್ರದಾನದ ನೋಂದಣಿ ಪತ್ರ ನೀಡಿದರು.

ಮದುವೆ ಮಂಟಪದಲ್ಲಿದ್ದ ವಧು-ವರರ ಈ ಆದರ್ಶ ನಡವಳಿಕೆಯು ಮದುವೆಗೆ ಬಂದಿದ್ದ ಅತಿಥಿಗಳಲ್ಲೂ ಸೂರ್ತಿ ತುಂಬಿತು. ನವದಂಪತಿಗಳಿಂದ ಪ್ರೇರಣೆಯಾಗಿ ಮದುವೆಗೆ ಬಂದ ಹಲವರು ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಇತ್ತೀಚಿಗೆ ನಿಧನರಾಗಿದ್ದ ಪುನೀತ ರಾಜಕುಮಾರ ನೇತ್ರದಾನ ಮಾಡಿ ಮಾದರಿಯಾಗಿದ್ದರು. ಪುನೀತ ರಾಜಕುಮಾರ ಪ್ರೇರಣೆಯಿಂದ ಮದುಮಗ ಸುಚಿತ್ ನೇತ್ರದಾನ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ ಈಗ
ಪುನೀತ್ ಹಾದಿಯನ್ನು ತುಳಿದಿದೆ. ಮದುವೆ ಮಂಟಪದಲ್ಲಿಯೇ ನೇತ್ರದಾನ ಪತ್ರಕ್ಕೆ ಸಹಿ ಹಾಕಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ನಮ್ಮ ದೇಶದಲ್ಲಿ ೧೫ ಲಕ್ಷ ಜನರಿಗೆ ನೇತ್ರದ ಅವಶ್ಯಕತೆ ಇದೆ. ಪ್ರತಿದಿನ ಅನೇಕರು ಮೃತರಾಗುತ್ತಾರೆ. ಬಹುತೇಕರು ನೇತ್ರದಾನ ಮಾಡದೇ ಅಂತ್ಯಕ್ರಿಯೆಗೆ ಒಳಗಾಗುತ್ತಾರೆ. ಅವರ ಕಣ್ಣುಗಳು ಮಣ್ಣು ಸೇರುತ್ತವೆ. ಅದೇ ಕಣ್ಣುಗಳನ್ನು ದಾನ ಮಾಡಿದರೆ ಎಷ್ಟೋ ಅಂಧರ ಬಾಳಿಗೆ ಬೆಳಕಾಗಲು ಸಾಧ್ಯ ಎಂದು ನೇತ್ರದಾನದ ನಂತರ ನವದಂಪತಿ ಅಭಿಪ್ರಾಯಪಟ್ಟಿದ್ದಾರೆ.

ನೇತ್ರದಾನ ವಾಗ್ದಾನವನ್ನು ಒಳಗೊಂಡ ಈ ವಿಶೇಷ ವಿವಾಹ ಸಮಾರಂಭಕ್ಕೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಶ್ರೀ ಗುರು ಸಿದ್ಧರಾಜಯೋಗಿಂದ್ರ ಮಹಾಸ್ವಾಮಿಗಳು, ಮನಗುಂಡಿಯ ಶ್ರೀ ಬಸವಾನಂದ ಮಹಾಸ್ವಾಮಿಗಳು, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಿರಕೋಳದ ಶ್ರೀ ಗುರುಸಿದ್ಧ ಶಿವಾಚಾರ್ಯರು ಮುಂತಾದ ಸ್ವಾಮಿಗಳು ಮತ್ತು ಹಲವು ಗಣ್ಯರು ಸಾಕ್ಷಿಯಾದರು.