Friday, 13th December 2024

ಗುರುವಿನ ಅನುಗ್ರಹ

ಅಶ್ವಿನಿಮೂರ್ತಿ ಅಯ್ಯನಕಟ್ಟೆ

ಬದುಕು ನಿತ್ಯವೂ ಕಲಿಕೆಯ ವೇದಿಕೆ. ಹೊಚ್ಚ ಹೊಸ ವಿಷಯಗಳು ಸದಾ ಕಣ್ಣೆದುರು ಕಾಣುತ್ತಿರುತ್ತವೆ. ಓಡುವ ಮೋಡ, ಹಾರುವ
ಹಕ್ಕಿ, ಈಜುವ ಮೀನು ಎಲ್ಲವೂ ಅಚ್ಚರಿಯೇ!

ಜೀವನದ ಒಂದು ಹಂತದವರೆಗೆ ನಮಗೆ ಗುರಿಯೇ ಮುಖ್ಯ. ಬದುಕಿನಲ್ಲಿ ಯಶಸ್ವಿಯಾದೆವು ಎಂಬ ಭಾವನೆ ಮನಸ್ಸಿಗೆ ಬರುವುದೇ
ತಡ ಅಶಾಂತಿ ಕಾಡತೊಡಗುತ್ತದೆ. ಇನ್ನೇನೋ ಬೇಕು, ಅದಲ್ಲ , ಅದಲ್ಲ ಎಂಬ ಭಾವನೆ ಮೂಡುತ್ತದ ! ಆಗ ಹುಡುಕಾಟ ಆರಂಭಿಸುತ್ತೇವೆ. ಮನಸಿನ ಕೂಗಿಗೆ, ಮನಸಿನ ತುಮುಲಕ್ಕೆ ಉತ್ತರ ಬೇಕೆಂಬ ಹಂಬಲ. ಎಲ್ಲಿ? ಎತ್ತ ? ಹ್ಯಾಗೆ ಎಂಬ ಗೊಂದಲ ಗಳಿಗೆ ಪರಿಹಾರ ಮಾರ್ಗ ಎಲ್ಲಿ ಸಿಗುತ್ತದೆ ಎಂಬ ಪ್ರಶ್ನೆಗೆ ಗುರುಗಳ ಅನ್ವೇಷಣೆಗೆ ಕಾರಣವಾಗುತ್ತದೆ.

‘ಗುರು’ – ಗು ಎಂದರೆ ಅಂಧಕಾರ, ರ ಬೆಳಕು. ಅಜ್ಞಾನವನ್ನು ದೂರವಾಗಿಸಿ ಜ್ಞಾನದ ಬೆಳಕನ್ನು ಮೂಡಿಸುವವನು ನಿಜವಾದ ಗುರು. ನಾವು ಪ್ರತಿಯೊಂದು ಕಾರ್ಯ ಆರಂಭಿಸುವಾಗಲೂ ‘ಗುರುಬಲ’ವಿದೆಯಾ ಎಂದು ವಿಚಾರಿಸಿಕೊಂಡೇ ಮುಂದು ವರಿಯುತ್ತೇವೆ.

ಓಂ ಗುರುಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ ಗುರುದೇವ ಜಗತ್ಸರ್ವಂ ತಸ್ಮೈ ಶ್ರೀ ಗುರುವೇ ನಮಃ ಶಂಕರಾ ಚಾರ್ಯರು ರಚಿಸಿದ ಈ ಶ್ಲೋಕ ಗುರುವಿನ ಮಹತ್ವವನ್ನು ಸಾರುತ್ತದೆ. ಸಂಸ್ಕೃತದಲ್ಲಿ ಗುರುವೆಂದರೆ ದೈವ ಸ್ವರೂಪಿ ಬೃಹಸ್ಪತಿ.
ಬೃಹಸ್ಪತಿಯು ನಮ್ಮ ಪ್ರತಿಯೊಂದು ಕಾರ್ಯಗಳ ಮೇಲೂ ಬಹಳಷ್ಟು ಪ್ರಭಾವ ಬೀರುತ್ತಾನೆ ಎಂದು ನಾವು ಗಾಢವಾಗಿ ನಂಬು ತ್ತೇವೆ. ಹಾಗಾಗಿ ಯಾವುದೇ ಕಾರ್ಯಪ್ರವೃತ್ತರಾಗುವ ಮುನ್ನ ವಿಚಾರಿಸಿ ಮುಂದಡಿಯಿಡುವುದು ಪದ್ಧತಿ.

ಒಬ್ಬ ಉತ್ತಮ ಗುರುವನ್ನು ಪಡೆಯುವುದು ಆತ್ಮ ಜ್ಞಾನವನ್ನು ಹೊಂದಲು ಪೂರ್ವ ತಯಾರಿ. ಸಾವಿರಾರು ಸೂರ್ಯ ಚಂದ್ರರು
ಬಂದರೂ ಹೃದಯದ ಒಳಗಿನ ಅಜ್ಞಾನದ ಕತ್ತಲೆ ಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಇದನ್ನು ಗುರು ಅನುಗ್ರಹದಿಂದ ಮಾತ್ರ ತೊಡೆದು ಹಾಕಲಾಗುತ್ತದೆ ಎಂದು ಗುರುನಾನಕ್‌ರು ಹೇಳುತ್ತಿದ್ದರು.

ಜೀವನದ ಪ್ರತಿ ಹಂತದಲ್ಲಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹಲವರು ನಮಗೆ ಗುರುಗಳಾಗಿ ದಾರಿ ದೀಪವಾಗಿರುತ್ತಾರೆ. ಪ್ರಕೃತಿ ನಮಗೆ ಬಹಳಷ್ಟನ್ನು ಕಲಿಸುತ್ತದೆ. ಪುಟ್ಟ ಮಗುವಿಗೆ ಅಮ್ಮನೇ ಮೊದಲ ಗುರು. ಮಗುವಿಗೆ ಶಾಲೆಯಲ್ಲಿ ಶಿಕ್ಷಕರು ವಿವಿಧ ವಿಷಯಗಳನ್ನು ಕಲಿಸುತ್ತಾ ಪ್ರಪಂಚಕ್ಕೆ ತೆರೆದುಕೊಳ್ಳಲು ಸಹಾಯ ಮಾಡುತ್ತಾರೆ.

ಪ್ರಚಲಿತ ಪ್ರಪಂಚದಲ್ಲಿ ಗುರುವೆಂದರೆ ಶಿಕ್ಷಕ, ಆಧ್ಯಾತ್ಮಿಕ ಸಲಹೆಗಾರ ಅಥವಾ ಆಧ್ಯಾತ್ಮಿಕ ನಿರ್ದೇಶಕ. ಸುಪ್ತ ಆಧ್ಯಾತ್ಮಿಕ
ಜ್ಞಾನವನ್ನು ಜಾಗೃತಿ ಗೊಳಿಸುವವನು. ಒಬ್ಬ ಗುರು ಯಾವಾಗಲೂ ಶಿಷ್ಯನನ್ನು ಅಜ್ಞಾನ ದಿಂದ ಜ್ಞಾನದೆಡೆಗೆ, ಅರಿವಿನ ಮಾರ್ಗದೆಡೆಗೆ ಕೊಂಡೊಯ್ಯುತ್ತಾನೆ.

ಶಿಷ್ಯನ ಲೌಕಿಕ ಜಗತ್ತಿನ ವಿಷಯಗಳು ಗುರುವಿಗೆ ನಗಣ್ಯ. ಗುರುವಿನ ಗಮನವೇನಿದ್ದರೂ ಶಿಷ್ಯನಿಗೆ ಮುಕ್ತಿಮಾರ್ಗವನ್ನು ಭೋಧಿಸುವುದು. ಭಗವಂತನ ಬಳಿ ಸಾಗುವ ಹಾದಿಯನ್ನು ಭಕ್ತನಿಗೆ ತೋರಿಸುವವನೇಗುರು. ಗುರು ಶಿಷ್ಯರ ನಡುವೆ ಇರುವುದು ಒಂದು ಅಲೌಕಿಕ ಸಂಬಂಧ.

ಮನುಷ್ಯ ಜನ್ಮವೆಂದರೆ ನವರಸ, ನವ ಭಾವಗಳನ್ನು ತುಂಬಿರುವುದು. ನಿತ್ಯವೂ ಸಂಘರ್ಷವೇ. ಮುಗಿಯದ ಬೇಡಿಕೆಗಳು, ಅಸಂತುಷ್ಟ ಮನಸು. ಕೊನೆ ಮೊದಲಿಲ್ಲದ ದುರಾಸೆಗಳು. ಇವೆಲ್ಲ ಭಾವನೆಗಳು ನಮ್ಮ ಲೌಕಿಕ ಪ್ರಪಂಚದಲ್ಲಿ ಸಾಮಾನ್ಯ. ಆದರೆ ನಮ್ಮ ಕಟ್ಟ ಕಡೆಯ ಗುರಿಯೊಂದೇ ಅದು ಮುಕ್ತಿ, ಭಗವಂತನ ಸಾನ್ನಿಧ್ಯ. ಅಲ್ಲಿಗೆ ತಲುಪಲು ಸಾಧನೆಯ ಅಗತ್ಯವಿದೆ. ಸಾಧನೆಯ ಪಥವನ್ನು ತಿಳಿಸಲು ಸೂಕ್ತ ಗುರುಗಳು ಸಿಗಬೇಕು.

ನಮ್ಮಲ್ಲಿ ಎಷ್ಟೋ ಗುರುಗಳು, ಮಾರ್ಗದರ್ಶಕರು ಇದ್ದಾರೆ. ಅವರು ಹಾಕಿಕೊಟ್ಟ ಗಟ್ಟಿಯಾದ ಸನಾತನ ಸಂಸ್ಕೃತಿಯ ಅಡಿಪಾಯ ನಮ್ಮೊಂದಿಗಿದೆ. ಭಗವಂತ ಹಾಗೂ ಭಕ್ತರನ್ನು ಹತ್ತಿರವಾಗಿಸುವಲ್ಲಿ ಗುರುವಿನ ಕೊಡುಗೆ ಬಹಳಷ್ಟಿದೆ. ಗುರುವಿನ ಮಾರ್ಗದರ್ಶನದಲ್ಲಿ ನಿಷ್ಠೆಯಿಂದ ಮುಂದೆ ಸಾಗುವವನಿಗೆ ಯಶಸ್ಸು ಸಿದ್ಧ, ನೆಮ್ಮದಿಯೂ ಲಭ್ಯ, ಮುಕ್ತಿಯೂ ಪ್ರಾಪ್ತಿಯಾ ದೀತು.