Wednesday, 11th December 2024

ಮಿತ ಆಹಾರವೇ ಕಾಯಕದ ಶಕ್ತಿ

ಡಾ.ಪರಮೇಶ್
ಶ್ರೀಗಳ ಆಪ್ತ ವೈದ್ಯರು ಹಾಗೂ ನಿರ್ದೇಶಕರು, ಸಿದ್ಧಗಂಗಾ ಆಸ್ಪತ್ರೆ

ಶ್ರೀಗಳು ಆಹಾರ ಕ್ರಮದಲ್ಲಿ ಅನುಸರಿಸುತ್ತಿದ್ದ ಕ್ರಮಗಳೆಲ್ಲವೂ ಅವರ ಜೀವಿತದ ಕೊನೆಯವರೆಗೂ ಒಂದು ಚೂರು ಕೂಡ ಬದಲಾಗುತ್ತಿರಲಿಲ್ಲ. ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಶ್ರೀಗಳು ಎಲ್ಲಿಯೇ ಹೋದರೂ ಅಲ್ಲಿ ಪ್ರಸಾದ ಸ್ವೀಕರಿಸುತ್ತಿರಲಿಲ್ಲ. ಯಾಕಂದರೆ ಶಿವನಿಗೆ ಪ್ರಸಾದ ಆನಂತರ ನನ್ನ ಪ್ರಸಾದ ಎನ್ನುವುದು ಅವರು ಪಾಲಿಸಿಕೊಂಡು ಬಂದ ನಿಯಮ.

ಅದೆಷ್ಟೇ ದೂರ ಹೋಗಿರಲಿ ಮತ್ತೆ ಸಿದ್ಧಗಂಗಾ ಮಠಕ್ಕೆ ಬಂದು ತಮ್ಮ ಪ್ರಿಯ ಶಿವನಿಗೆ ಪೂಜೆಯ ಪ್ರಸಾದ ಅರ್ಪಿಸಿ ನಂತರ ತಮ್ಮ ಆಹಾರ ಸ್ವೀಕರಿಸುತ್ತಿದ್ದರು. ಒಮ್ಮೆ ದೂರದ ಗುಲ್ಬರ್ಗಾದಲ್ಲಿ ಧಾರ್ಮಿಕ ಕಾರ್ಯಕ್ರಮವಿತ್ತು. ಬೆಳಗ್ಗೆ ಶಿವಪೂಜೆ ಮುಗಿಸಿ ಪ್ರಸಾದ ಸ್ವೀಕರಿಸಿ ಹೊರಟ ಶ್ರೀಗಳು ಅಂದು ಮಾರನೆಯ ದಿನ ಬೆಳಗ್ಗೆ ಬರುವವರೆಗೂ ಯಾವುದೇ ಪ್ರಸಾದವನ್ನು ಸ್ವೀಕರಿಸುತ್ತಿರಲಿಲ್ಲ. ಜೊತೆಗೆ ಒಂದು ತೊಟ್ಟು ನೀರನ್ನೂ ಕೂಡ ಶ್ರೀಗಳು ಕುಡಿಯುತ್ತಿರಲಿಲ್ಲ.

ಮೊದಲೆಲ್ಲಾ ಶ್ರೀಗಳು ಶಿವಪೂಜೆಗೆಂದು ತೆರಳಿದರೆ ಅಲ್ಲಿ ಪೂಜೆ ಮುಗಿದ ನಂತರ ಇವರ ಮೆನು ಏನಿತ್ತು ಅದನ್ನೇ ತಯಾರಿಸಲು ಹೇಳಿ ತಿನ್ನುತ್ತಿದ್ದರು. ಶ್ರೀಗಳು ೯೦ ದಾಟಿದ ನಂತರ ಭಕ್ತರ ಮನೆಯಲ್ಲಿ ಶಿವಪೂಜೆ ಮಾಡುವುದು ಕಡಿಮೆಯಾಗುತ್ತಾ ಬಂತು.
ಅಲ್ಲಿಂದ ಎಲ್ಲಿಯೇ ಹೋದರು ವಾಪಸ್ಸು ಮಠಕ್ಕೆ ಬರುವವರೆಗೂ ಆಹಾರ ಸ್ವೀಕರಿಸುತ್ತಿರ ಲಿಲ್ಲ. ಶ್ರೀಗಳಿಗೆ ಆಹಾರವೆಂದರೆ ಅದು ದೇಹವನ್ನ ಸಾಗಿಸಲು ಬೇಕಾದ ಒಂದು ಸಾಧನ ವಷ್ಟೇ. ‘ಮಿತವಾದ ಆಹಾರವೇ ಕಾಯಕದ ಶಕ್ತಿ.

ಆಹಾರಕ್ಕಾಗಿ ಮನುಷ್ಯ ಜೀವನ ಪೂರ್ತಿ ಹೋರಾಡುತ್ತಾನೆ. ಅದಕ್ಕಾಗಿಯೇ ಬದುಕಿದವನಂತೆ ವರ್ತಿಸುತ್ತಾನೆ. ಆದರೆ ಒಮ್ಮೆ ಆತ ಆಹಾರ ಮತ್ತು ಬದುಕಿನ ಭೋಗಗಳ ಬಗ್ಗೆ ನಿರಾಸಕ್ತಿ ಬೆಳಸಿಕೊಂಡರೆ ಆತ ಬದುಕಿನಲ್ಲಿ ಹೊಸದನ್ನು ಕಾಣುತ್ತಾನೆ. ವ್ಯಾಮೋಹ ಗಳು ಮನುಷ್ಯನನ್ನ ಬಂಧಿಸಿದಷ್ಟು ಆತ ಮಹಾತ್ಮನಾಗುವ ಎಲ್ಲಾ ಅವಕಾಶಗಳನ್ನ ಕಳೆದುಕೊಳ್ಳುತ್ತಾ ಹೋಗುತ್ತಾನೆ’ ಎಂಬುದು ಶ್ರೀಗಳು ಸದಾ ಹೇಳುತ್ತಿದ್ದ ಮಾತುಗಳಾಗಿತ್ತು.

ಈ ಹಿಂದೆ ಶ್ರೀಗಳು ಮಠವನ್ನು ಕಟ್ಟುವಾಗ ಅದೆಷ್ಟು ಬಾರಿ ಹಸಿದುಕೊಂಡು ಮಲಗಿಕೊಂಡಿದ್ದರು ಎಂಬುದು ಯಾರಿಗೂ
ಗೊತ್ತಾಗುತ್ತಿರಲಿಲ್ಲ. ಎಲ್ಲಾ ಇದ್ದರೂ ಶ್ರೀಗಳಿಗೆ ಮಠದ ಮಕ್ಕಳ ನಾಳೆಗಳಿಗೂ ಆಹಾರ ಶೇಖರಣೆಯಾಗಬೇಕಿತ್ತು. ಅದರ ಬಗ್ಗೆಯೇ
ಹೆಚ್ಚಿನ ಯೋಚನೆ ಅವರಲ್ಲಿ ಸುಳಿದಾಡುತ್ತಿತ್ತು. ಹಸಿವಾದಾಗ ಏನಾದರೂ ಆಹಾರ ಸ್ವೀಕರಿಸಲೇಬೇಕು ಎನ್ನುವುದು ನಿಯಮ ವಲ್ಲ ಆಹಾರ ಬೇಕಾದ ಸಮಯದಲ್ಲಿ ಶಿವನ ಧ್ಯಾನದಲ್ಲಿ ಮುಳುಗಿದರೆ ಸಾಕು ಶಿವನ ನಾಮಾಮೃತದ ಮುಂದೆ ಇನ್ನಾವುದೇ ಆಹಾರಗಳು ಬೇಕೆನಿಸದು ಎಂದು ಶ್ರೀಗಳು ಹೇಳುತ್ತಿದ್ದರು.

ಆಹಾರಕ್ಕಾಗಿಯೇ ಬದುಕಿ ಮಕ್ಕಳು ಮೊಮ್ಮೊಕ್ಕಳು ಮುಂದಿನ ಮೂರು ತಲೆಮಾರಿಗೂ ಮಿಗುವಂತೆ ಆಸ್ತಿ ಮಾಡುವವರೇ ಜಾಸ್ತಿ.
ಉಳ್ಳವರ ಮುಂದೆ ಜೋಳಿಗೆ ಹಿಡಿದು ಹೊರಟ ಈ ತಪಸ್ವಿ ತನಗಿಂತ ಮಕ್ಕಳಿಗಾಗಿ ಬೇಡುತ್ತಿದ್ದರು. ಉಳಿದಂತೆ ನಿರುಮ್ಮಳವಾಗಿ ಕುಳಿತು ಶಿವನ ಧ್ಯಾನ ಮಾಡುತ್ತಾ ಮಕ್ಕಳ ಹಸಿವನ್ನ ನೀಗಿಸಿದ ಸಂತೃಪ್ತಿಯಲ್ಲಿ ಕಳೆಯುತ್ತಿದ್ದರು. ‘ಆಹಾರ ಶಿವನದ್ದು ಅವನು ಎಲ್ಲರಿಗೂ ಎಲ್ಲೆಡೆಯಲ್ಲಿಯೂ ಅದರ ಸಂಪನ್ಮೂಲಗಳನ್ನ ಇಟ್ಟಿರುತ್ತಾನೆ. ಅದು ಒಂದು ಕೈಯಿಂದ ಇನ್ನೊಂದು ಹೊಟ್ಟೆಗೆ ತಲುಪಿಸುವುದೇ ದಾಸೋಹ’ ಎಂದು ನಂಬಿದ್ದ ಶ್ರೀಗಳು ಅದನ್ನೇ ನಿಜ ಮಾಡಿದ್ದರು.