ದೆಹಲಿ ಟೆಸ್ಟ್ ನಿರ್ಧಾರ ಸಮರ್ಥಿಸಿಕೊಂಡ ಬಿಸಿಸಿಐ ಕಾರ್ಯದರ್ಶಿ ಸೈಕಿಯಾ
SA Test in Delhi: ಪ್ರತಿ ವರ್ಷ ಮಳೆಗಾಲ ಮುಗಿದು ಚಳಿಗಾಲ ಕಾಲಿಡುವಾಗ ದಿಲ್ಲಿಯ ಹವಾಮಾನ ಹದಗೆಡುವುದು ಸಾಮಾನ್ಯ ವಿಷಯ. ಇತ್ತೀಚೆಗಿನ ವರ್ಷಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುವುದು ಹೆಚ್ಚಳವಾಗಿದೆ. ಹೀಗಿರುವಾಗ ಇದೇ ಸಮಯದಲ್ಲಿ ಇಲ್ಲಿ ಟೆಸ್ಟ್ ಪಂದ್ಯ ಆಯೋಜಿಸಿದ್ದು ಸರಿಯಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು.


ನವದೆಹಲಿ: ನವೆಂಬರ್‌ನಲ್ಲಿ ದಿಲ್ಲಿಯಲ್ಲಿ ಟೆಸ್ಟ್(SA Test in Delhi) ಪಂದ್ಯವನ್ನು ಆಯೋಜಿಸುವ ನಿರ್ಧಾರವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಕಾರ್ಯದರ್ಶಿ ದೇವಜಿತ್ ಸೈಕಿಯಾ(Devajit Saikia) ಸಮರ್ಥಿಸಿಕೊಂಡಿದ್ದಾರೆ. ಮುಂಬರುವ 2025-26ರ ತವರಿನ ಅಂತಾರಾಷ್ಟ್ರೀಯ ಋತುವಿನಲ್ಲಿ ವೆಸ್ಟ್‌ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ತಂಡದೆದುರಿನ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಇತ್ತೀಚೆಗೆ ಪ್ರಕಟಿಸಿತ್ತು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನವದೆಹಲಿಯಲ್ಲಿ (ನ. 14-18) ಆಯೋಜಿಸಿದ್ದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದರು.
ಪ್ರತಿ ವರ್ಷ ಮಳೆಗಾಲ ಮುಗಿದು ಚಳಿಗಾಲ ಕಾಲಿಡುವಾಗ ದಿಲ್ಲಿಯ ಹವಾಮಾನ ಹದಗೆಡುವುದು ಸಾಮಾನ್ಯ ವಿಷಯ. ಇತ್ತೀಚೆಗಿನ ವರ್ಷಗಳಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರುವುದು ಹೆಚ್ಚಳವಾಗಿದೆ. ಹೀಗಿರುವಾಗ ಇದೇ ಸಮಯದಲ್ಲಿ ಇಲ್ಲಿ ಟೆಸ್ಟ್ ಪಂದ್ಯ ಆಯೋಜಿಸಿದ್ದು ಸರಿಯಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ನೂತನ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಟೆಸ್ಟ್ ಪಂದ್ಯಕ್ಕೆ ಸ್ಥಳವನ್ನು ಅಂತಿಮಗೊಳಿಸುವ ಮೊದಲು ಮಂಡಳಿಯು ಎಲ್ಲಾ ಪಾಲುದಾರರೊಂದಿಗೆ ಚರ್ಚೆ ನಡೆಸಿದೆ ಮತ್ತು ಮಾಲಿನ್ಯ ಸಮಸ್ಯೆ ಪ್ರತಿ ವರ್ಷವೂ ಸಂಭವಿಸುವುದಿಲ್ಲ ಎಂದು ಬಿಸಿಸಿಐ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವೇಳಾಪಟ್ಟಿಯ ಭಾಗವಾಗಿ ಭಾರತವು ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಆಯೋಜಿಸಲಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಅಹ್ಮದಾಬಾದ್ (ಅ.2ರಿಂದ 6) ಮತ್ತು ಕೋಲ್ಕತಾ (ಅ.10ರಿಂದ 14) ದಲ್ಲಿ ನಡೆಯಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನವದೆಹಲಿಯಲ್ಲಿ (ನ. 14-18) ಮತ್ತು ದ್ವಿತೀಯ ಟೆಸ್ಟ್ ಗುವಾಹಟಿ (ನ. 22-16) ಯಲ್ಲಿ ನಡೆಯಲಿದೆ.
ಇದನ್ನೂ ಓದಿ BCCI central contract: ಬಿಸಿಸಿಐ ಕೇಂದ್ರ ಗುತ್ತಿಗೆ ಎಂದರೇನು?, ಆಟಗಾರರಿಗೆ ಸಿಗುವ ಸೌಲಭ್ಯಗಳೇನು?
ಟೆಸ್ಟ್ ಸರಣಿ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೂರು ಏಕದಿನ ಪಂದ್ಯಗಳು ಅನುಕ್ರಮವಾಗಿ ರಾಂಚಿ (ನ. 30), ರಾಯಪುರ (ಡಿ. 3) ಮತ್ತು ವಿಶಾಖಪಟ್ಟಣ (ಡಿ. 6) ದಲ್ಲಿ ನಡೆಯಲಿವೆ. ಬಳಿಕ ಈ ತಂಡಗಳ ನಡುವೆ ಟಿ20 ಸರಣಿಯ ಐದು ಪಂದ್ಯಗಳು ಅನುಕ್ರಮವಾಗಿ ಕಟಕ್ (ಡಿ. 9), ಮುಲ್ಲನಪುರ (ಡಿ. 11), ಧರ್ಮಶಾಲಾ (ಡಿ. 14), ಲಕ್ನೋ (ಡಿ. 17) ಮತ್ತು ಅಹ್ಮದಾಬಾದ್ (ಡಿ. 19) ನಲ್ಲಿ ನಡೆಯಲಿವೆ.