ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಪ್ರತಿ ದೇವಾಲಯದ ಹಿಂದೆ ಧಾರ್ಮಿಕ ಕಾರಣಗಳೇನೇ ಇರಲಿ, ಅದನ್ನು ಕಟ್ಟಿದ ಕತೆಯೇ ರೋಚಕ. ಯಾವುದೋ ಒಂದು ಬೋಳುಗುಡ್ಡದ ಮೇಲೆ ರಾತ್ರೋರಾತ್ರಿ ಒಂದು ಕಲ್ಲನ್ನು ನೆಟ್ಟರೆ ಸಾಕು, ಅದು ಬೆಳಗಾಗುವ ಹೊತ್ತಿಗೆ ಒಂದು ಪುಣ್ಯಕ್ಷೇತ್ರವಾಗಿರುತ್ತದೆ. ಅದರ ಸುತ್ತಮುತ್ತ ನೂರಾರು ಕತೆಗಳು ಹುಟ್ಟಿ ಕೊಳ್ಳುತ್ತವೆ.

ಸ್ವಚ್ಛ ಭಾರತದಂತೆ, ಸ್ವಚ್ಛ ದೇಗುಲ ಆಂದೋಲನವೂ ಆಗಲಿ !

ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅಂಕಣ

ನೂರೆಂಟು ವಿಶ್ವ

vbhat@me.com

ನಾನು ಕಾಲಕಾಲಕ್ಕೆ ಪುಣ್ಯಕ್ಷೇತ್ರಗಳಿಗೆ ಹೋಗುವ ಜಾಯಮಾನ ಇಟ್ಟುಕೊಂಡವ. ಭಾರತದ ಬಹುತೇಕ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಇದಕೆ ಪ್ರಚೋದನೆ ನೀಡಿದ್ದು ಓಶೋ ಅವರ ‘ನನ್ನ ಪ್ರೀತಿಯ ಭಾರತ’ (ಈ ಕೃತಿಯನ್ನು ನಾನೇ ಸುಮಾರು ಮೂವತ್ತೇಳು ವರ್ಷಗಳ ಹಿಂದೆ ಕನ್ನಡಕೆ ಅನುವಾದ ಮಾಡಿದ್ದೇನೆ) ಹಾಗೂ ‘ಭಾರತದ ಆತ್ಮ: ದೇಗುಲಗಳು’ ಎಂಬ ಕೃತಿಗಳು. ಭಾರತದಲ್ಲಿ ರುವ ದೇವಾಲಯ ಹಾಗೂ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡದೇ ದೇಶವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾರಣ ಭಾರತದ ಅಂತಃಸತ್ವವಿರುವುದೇ ಈ ಪುಣ್ಯಕ್ಷೇತ್ರಗಳಲ್ಲಿರುವ ದೇಗುಲಗಳಲ್ಲಿ. ಭಾರತದ ದೇವಾಲಯಗಳು ಕೇವಲ ಧಾರ್ಮಿಕ ನಂಬಿಕೆಗಳ ತಾಣವಷ್ಟೇ ಅಲ್ಲ, ಅವು ನಮ್ಮ ಶ್ರದ್ಧೆ ಹಾಗೂ ಸಂಸ್ಕೃತಿಯ ನೆಲೆವೀಡು ಸಹ ಹೌದು. ಅಲ್ಲದೇ ಇವು ನಮ್ಮ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೂಡುತಾಣಗಳೂ ಹೌದು.

ಈ ಎಲ್ಲ ಸಂಗತಿಗಳನ್ನು ಓಶೋ ಬಹಳ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. ಪ್ರತಿ ದೇವಾಲಯ, ಪುಣ್ಯಕ್ಷೇತ್ರದ ಜತೆಗೆ ಹಲವು ನಂಬಿಕೆ, ಐತಿಹ್ಯ, ಪೌರಾಣಿಕ, ಚಾರಿತ್ರಿಕ ಮಹತ್ವದ ಕತೆಗಳಿವೆ. ಈ ದೇಶದ ಆತ್ಮವಿರುವುದೇ ಪುಣ್ಯಕ್ಷೇತ್ರಗಳಲ್ಲಿ. ಪುಣ್ಯ ಗಳಿಕೆ, ಪಾಪ ನಾಶಕ್ಕಿಂತ ಜ್ಞಾನವರ್ಧನೆಯ ಭಾವ ಬೆಳೆಸಿಕೊಂಡರೆ, ದೇವಾಲಯಗಳ ಭೇಟಿ ಫಲಪ್ರದವಾಗುತ್ತದೆಂಬ ಓಶೋ ಮಾತು ಸತ್ಯ.

ಇದನ್ನೂ ಓದಿ: Vishweshwar Bhat Column: ಗಂಡನನ್ನು ಹೇಗೆ ಕರೆಯುವುದು ?

ಪ್ರತಿ ದೇವಾಲಯದ ಹಿಂದೆ ಧಾರ್ಮಿಕ ಕಾರಣಗಳೇನೇ ಇರಲಿ, ಅದನ್ನು ಕಟ್ಟಿದ ಕತೆಯೇ ರೋಚಕ. ಯಾವುದೋ ಒಂದು ಬೋಳುಗುಡ್ಡದ ಮೇಲೆ ರಾತ್ರೋರಾತ್ರಿ ಒಂದು ಕಲ್ಲನ್ನು ನೆಟ್ಟರೆ ಸಾಕು, ಅದು ಬೆಳಗಾಗುವ ಹೊತ್ತಿಗೆ ಒಂದು ಪುಣ್ಯಕ್ಷೇತ್ರವಾಗಿರುತ್ತದೆ. ಅದರ ಸುತ್ತಮುತ್ತ ನೂರಾರು ಕತೆಗಳು ಹುಟ್ಟಿಕೊಳ್ಳುತ್ತವೆ.

ಜನ ಮುಗಿಬಿದ್ದು ತಮ್ಮ ಶ್ರದೆ, ನಂಬಿಕೆಗಳನ್ನು ಧಾರೆಯೆರೆಯಲಾರಂಭಿಸುತ್ತಾರೆ. ಸಾವಿರಾರು ಭಕ್ತರು ಎಲ್ಲೆಲ್ಲಿಂದಲೋ ಬರಲಾರಂಭಿಸುತ್ತಾರೆ. ಇದರಿಂದ ಜನರಿಗೆ ಏನು ಪ್ರಯೋಜನವಾಗು ವುದೋ ಗೊತ್ತಿಲ್ಲ, ಆದರೆ ಸಾಂತ್ವನ, ನೆಮ್ಮದಿಯಂತೂ ಸಿಗುತ್ತದೆ.

waste near river ok

ಹೀಗಾಗಿ ದೇಶದ ಯಾವುದೇ ದೇವಾಲಯ, ಮಠ, ಪುಣ್ಯಕ್ಷೇತ್ರ, ಧಾರ್ಮಿಕ ಕೇಂದ್ರಗಳಿಗೆ ಹೋಗಿ, ಜನವೋ ಜನ. ಎಲ್ಲೆಡೆ ಜನಜಂಗುಳಿ. ಅದರಲ್ಲೂ ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಕಾಲಿಡಲು ಆಗದಷ್ಟು ಜನಜಾತ್ರೆ. ನಾನು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿರುವ ಅತ್ಯಂತ ಪ್ರಸಿದ್ಧ ಯಾತ್ರಾಸ್ಥಳ ಶಿರಡಿಗೆ ಹೋಗಿದ್ದು ನಾಲ್ಕು ವರ್ಷಗಳ ಹಿಂದೆ. ಶ್ರೀ ಸಾಯಿ ಬಾಬಾ ಅವರ ಕತೆ, ವೃತ್ತಾಂತ, ಪವಾಡಗಳ ಬಗೆ ಕೇಳಿದ್ದೆ. ಆದರೆ ಶಿರಡಿಯನ್ನೇ ನೋಡಿರಲಿಲ್ಲ.

ತಿರುಪತಿಯ ನಂತರ ಅತ್ಯಂತ ಹೆಚ್ಚು ಭಕ್ತರು, ಜನರು ಭೇಟಿ ನೀಡುವ ಕ್ಷೇತ್ರವೆಂದರೆ ಶಿರಡಿ. ಶನಿವಾರ ಹಾಗೂ ರಜಾದಿನಗಳಲ್ಲಿ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುತ್ತಾರೆ. ಉಳಿದ ದಿನ ಏನಿಲ್ಲ ವೆಂದರೂ 30-40 ಸಾವಿರ ಮಂದಿ ಅಲ್ಲಿಗೆ ಬರುತಾರೆ. ಇಂಥ ಸಂದರ್ಭಗಳಲ್ಲಿ ಎಂಟು-ಹತ್ತು ತಾಸು ಕ್ಯೂದಲ್ಲಿ ನಿಲ್ಲಬೇಕಾಗುತ್ತದೆ. ಭಕ್ತರಲ್ಲೂ ಪಕ್ಷಪಾತ.

ಹಣವುಳ್ಳವರು, ಹಣವಿಲ್ಲದವರು ಎಂಬ ಎರಡು ವರ್ಗ. ಹಣವಿಲ್ಲದವರಿಗೆ ಉಚಿತ ದರ್ಶನ. ಹೀಗಾಗಿ ಗಂಟೆಗಟ್ಟಲೆ ಕಾಯಲೇಬೇಕು. ಹೆಚ್ಚು ಹಣಕೊಟ್ಟು, ಪ್ರಭಾವ ಬೀರಿದರೆ ದೇವರ ಸನ್ನಿ ಧಾನಕ್ಕೆ ತಾಪ್ಡೇತೋಪ್ಡು ಪ್ರವೇಶ. ಹತ್ತು ನಿಮಿಷಗಳಲ್ಲಿ ದರ್ಶನ ಮುಗಿಸಿ ಹೊರಬರಬಹುದು. ಈ ಪದ್ಧತಿ ಎಲ್ಲ ಪುಣ್ಯಕ್ಷೇತ್ರಗಳಲ್ಲೂ ಜಾರಿಗೆ ಬಂದಿದೆ. ಆದರೆ ಉಚಿತ ದರ್ಶನಕ್ಕಾಗಿ ಕ್ಯೂದಲ್ಲಿ ಐದಾರು ಗಂಟೆ ನಿಲ್ಲುವ ಭಕ್ತರ ಗೋಳನ್ನು ನೋಡಲಾಗುವುದಿಲ್ಲ. ಅದರಲ್ಲೂ ವೃದ್ಧರು, ಕಾಯಿಲೆ ಪೀಡಿತರ ಸಂಕಟ ಅಷ್ಟಿಷ್ಟಲ್ಲ.

ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಭಕ್ತರು ಹರಿದು ಬರುವ ಪುಣ್ಯಕ್ಷೇತ್ರಗಳ ಅಸಲಿ ಸಮಸ್ಯೆ ಯೇನೆಂದರೆ, ಸ್ವಚ್ಛತೆಯ ಕೊರತೆ. ಎಡೆ ಹೊಲಸು, ಗಬ್ಬುನಾತ, ಅವ್ಯವಸ್ಥೆ, ಸುಲಿಗೆ, ಪೀಡನೆ, ದೇವರ ದರ್ಶನಕೆ ಲಂಚ. ಗರ್ಭಗುಡಿಯಲ್ಲಿ ದೇವರ ಹತ್ತಿರ ನಿಂತು, ಹೆಚ್ಚು ಕಾಲ ಇದ್ದು ದರ್ಶನ ಪಡೆಯಲು ಲಂಚ. ಪ್ರಸಾದಕ್ಕೂ ಲಂಚ. ಪೂಜೆಗೆ ಲಂಚ. ಸಾಕ್ಷಾತ್ ದೇವರ ಸಾನ್ನಿಧ್ಯದ ಲಂಚಾವತಾರ ಪ್ರದರ್ಶನ! ಹೀಗಿರುವಾಗ ಮನಸ್ಸಿನಲ್ಲಿ ಪುಣ್ಯಭಾವ ಸೃಜಿಸುವುದಾದರೂ ಹೇಗೆ?

ದೇವಾಲಯದ ಪ್ರಾಂಗಣದಲ್ಲಿಯೇ ಸ್ವಚ್ಛತೆ, ಸೌಂದರ್ಯ ನೆಗೆದು ಬಿದ್ದಿರುತ್ತದೆ. ಎಂದರಲ್ಲಿ ಕಸ, ಪ್ಲಾಸ್ಟಿಕ್, ತುಂಬಿತುಳುಕುವ ಕಸದ ತೊಟ್ಟಿಗಳು, ಬೀದಿನಾಯಿ, ಕಿತ್ತುಹೋದ ಫುಟ್‌ಪಾತ್, ರಸ್ತೆಗಳು, ಫ್ಲೆಕ್ಸ್‌ ಬೋರ್ಡ್, ಭಿಕ್ಷುಕರು, ಬಣ್ಣ ಮಾಸಿದ ಗೋಡೆಗಳು, ಎಂದರಲ್ಲಿ ನೇತುಬಿದ್ದಿರುವ ವಾಯರ್‌ ಗಳು... ಎಲ್ಲಿ ನೋಡಿದರೂ ಅಸ್ತವ್ಯಸ್ತ, ಅವ್ಯವಸ್ಥೆ... ದೇಗುಲದ ಪ್ರಾಂಗಣದೊಳಗೆ ಕಪ್ಪುಮಸಿ ಯಿಂದ ಆವೃತವಾದ ಚಾವಣಿ, ಗೋಡೆಗಳು, ಗರ್ಭಗುಡಿ ಪ್ರವೇಶ ದ್ವಾರದಲ್ಲಿ ದೊಡ್ಡ ಟಿವಿ ಪರದೆ, ಆನೆಯ ಕಾಲಿನ ಗಾತ್ರದ ಪೈಪುಗಳು, ನೂರಾರು ತಂತಿಗಳು... ದಿನಕ್ಕೆ ಲಕ್ಷಾಂತರ ಜನ ಭೇಟಿ ಕೊಡುವ ಜಾಗದಲ್ಲಿ ಸೌಂದರ್ಯದ ಬಗೆ ಕನಿಷ್ಠ ಪ್ರಜ್ಞೆಯೂ ಬೇಡವೇ? ಗಲೀಜು, ಹೊಲಸು ಜಾಗದಲ್ಲಿ ಭಕ್ತಿ ಅಲ್ಲ, ವಾಕರಿಕೆ ಮೂಡುತ್ತದೆ.

ಆದರೆ ಅದ್ಯಾಕೋ ಗೊತ್ತಿಲ್ಲ, ಎಲ್ಲರೂ ಈ ಗಲೀಜು ವಾತಾವರಣವನ್ನೇ ಸಹಿಸಿಕೊಂಡು ಬರುತ್ತಾರೆ. ಲಕ್ಷಾಂತರ ಮಂದಿ ಭೇಟಿ ನೀಡುವ ಜಾಗದಲ್ಲಿ ಇವೆಲ್ಲ ಸಹಜ ಎಂದು ವಾದಿಸುವವರಿದ್ದಾರೆ. ಆದರೆ ಇದು ಒಂದು ದಿನದ ಮಾತಲ್ಲ. ವರ್ಷವಿಡೀ ಇಷ್ಟೇ ಜನ ಆಗಮಿಸುತ್ತಾರೆಂದ ಮೇಲೆ ಈ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ತಾನೆ? ಅವ್ಯವಸ್ಥೆಯೇ ವ್ಯವಸ್ಥೆಯಾಗಲು ಬಿಡಬಾರದಲ್ಲ? ದೈವತ್ವದಂತೆ ಶುಚಿತ್ವವೂ ಅಷ್ಟೇ ಮಹತ್ವದ್ದು.

ಹೊಲಸು ವಾತಾವರಣದಲ್ಲಿ ಭಕ್ತಿ ಸುರಿಸುವುದಿಲ್ಲ. ಕೆಲವು ಸಲ ಅಲ್ಲಿನ ಅವ್ಯವಸ್ಥೆ ನೋಡಿದರೆ, ಯಾಕಾದರೂ ಬಂದೆವಪ್ಪ, ಮನೆಯಲ್ಲಿಯೇ ಕುಳಿತು ದೇವರಿಗೆ ನಮಸ್ಕಾರ ಮಾಡಬಹುದಿತ್ತಲ್ಲ, ಈ ಹೊಲಸನ್ನು ನೋಡಲು ಹಣ, ಸಮಯ ಖರ್ಚು ಮಾಡಿಕೊಂಡು ಇಷ್ಟು ದೂರ ಬರಬೇಕಿತ್ತಾ?’ ಎಂದು ಒಳಮನಸ್ಸಿಗೆ ಅನಿಸದೇ ಹೋಗುವುದಿಲ್ಲ.

ಹಾಗೆಂದು ಶಿರಡಿಯಂಥ ಕ್ಷೇತ್ರಕ್ಕೆ ಹಣಕಾಸಿನ ತೊಂದರೆ ಇಲ್ಲವೇ ಇಲ್ಲ. ಪ್ರತಿ ವರ್ಷ 400 ಕೋಟಿ ರುಪಾಯಿಯಷ್ಟು ವರಮಾನವಿದೆ. ಭಾರತದ ಶ್ರೀಮಂತ ಕ್ಷೇತ್ರಗಳ ಪೈಕಿ ಇದೂ ಒಂದು. ಇದು ಸರಕಾರದ ಮುಜರಾಯಿ ಇಲಾಖೆಯ ಹಂಗಿನಲ್ಲೂ ಇಲ್ಲ. ಶಿರಡಿ ಸಂಸ್ಥಾನ ಟ್ರಸ್ಟ್ ಈ ಕ್ಷೇತ್ರದ ಮೇಲುಸ್ತುವಾರಿ ಹೊತ್ತಿದೆ. ಹತ್ತಾರು ಕೋಟಿ ರುಪಾಯಿ ಖರ್ಚು ಮಾಡಿದರೆ, ಇಡೀ ಕ್ಷೇತ್ರಕ್ಕೆ ಹೊಸ ರೂಪ ಕೊಡುವುದೇನೂ ಕಷ್ಟವಲ್ಲ.

ನೂರಾರು ಸ್ವಯಂಸೇವಕರನ್ನು ನಿಯೋಜಿಸಿದರೆ, ಇಡೀ ಪ್ರಾಂಗಣವನ್ನು ಸ್ವಚ್ಛವಾಗಿಡಬಹುದು. ಆದರೆ ಇಂಥ ಪ್ರಾಥಮಿಕ ಸಂಗತಿಯನ್ನೂ ಅರ್ಥ ಮಾಡಿಕೊಳ್ಳದವರು ಜವಾಬ್ದಾರಿಯುತ ಸ್ಥಾನದಲ್ಲಿ ಹೇಗಿರುತ್ತಾರೋ, ಆಶ್ಚರ್ಯವಾಗುತ್ತದೆ. ಅವರಿಗೆ ಗಲೀಜು ವಾತಾವರಣದಲ್ಲಿ ಇದ್ದೂ ಇದ್ದು ಅಭ್ಯಾಸವಾಗಿ, ಏನೂ ಅನಿಸದ ಸ್ಥಿತಿ ತಲುಪಿರುತಾರೆ. ಆದರೆ ಜೀವನದಲ್ಲಿ ಮೊದಲ ಬಾರಿಗೆ ಹೋದವರಿಗೆ, ಬಹಳ ಬೇಸರವಾಗುತ್ತದೆ. ಇನ್ನೊಮ್ಮೆ ಹೋಗಲು ಮನಸ್ಸು ಒಪ್ಪುವುದಿಲ್ಲ.

ಅದಾದ ಬಳಿಕ ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ ನಾಸಿಕ್ ಗೆ ಸನಿಹದಲ್ಲಿರುವ ತ್ರ್ಯಂಭಕೇಶ್ವರ ಹಾಗೂ ಔರಂಗಾಬಾದ್ ಸಮೀಪವಿರುವ ಗೃಷ್ಣೇಶ್ವರ ಜ್ಯೋತಿರ್ಲಿಂಗ ದರ್ಶನಕ್ಕೆಂದು ಹೋದರೆ, ಅಲ್ಲೂ ಅದೇ ಪರಿಸ್ಥಿತಿ. ದೇವಾಲಯದ ಸುತ್ತ ಕೊಳಚೆ ಮೋರಿನ ದರ್ಶನ, ಗಬ್ಬುನಾತ. ‘ಸಾರ್, ಅದು ಮೋರಿ ಅಲ್ಲ, ಪವಿತ್ರ ಗೋದಾವರಿ ನದಿ’ ಎಂದು ಅಲ್ಲಿಯೇ ಇದ್ದ ಪೂಜಾರಿಯೊಬ್ಬರು ಹೇಳಿದರು.

ದೇಗುಲದ ಗರ್ಭಗುಡಿಯಿಂದ ಹಿಂಭಾಗದಲ್ಲಿ ಹತ್ತು ಮೀಟರ್ ದೂರದಲ್ಲಿ ಒಂದು ಕಾಲದ ಸುಂದರ, ಪವಿತ್ರ ಗೋದಾವರಿ ನದಿ, ಬಚ್ಚಲುಮನೆಯ ಹೊಲಸು ನೀರು ಹರಿಯುವ ಕೊಳಚೆಯಾಗಿ ಪರಿವರ್ತಿತವಾಗಿತ್ತು. ಮುನ್ನೂರು ವರ್ಷಗಳ ಹಿಂದೆ ಕಟ್ಟಿಸಿದ ಗಾಯತ್ರಿದೇವಿ ಮಂದಿರ ಪಾಳು ಬಿದ್ದಿದೆ. ದೇಗುಲದ ಸುತ್ತ ಅಂಗಡಿಗಳು, ಬೋಂಡಾ, ಬಜ್ಜಿ ಕರಿಯುವ ಹೋಟೆಲ್ಲುಗಳು. ಸ್ವಚ್ಛತೆ ಕಾಲ್ಕಿತ್ತು ಬಹಳ ವರ್ಷಗಳೇ ಆಗಿವೆ.

ದೇವರ ಮೇಲೆ ಭಾರ ಹಾಕಿ ಸಾಗಬೇಕು. ದೇವಾಲಯದೊಳಗೆ ಪ್ರವೇಶಿಸಿದರೆ, ಎಕ್ಸ್‌ರೇ ರೂಮಿ ನೊಳಕ್ಕೋ, ಹಳೇ ಟೆಂಟ್ ಸಿನಿಮಾ ಥಿಯೇಟರಿನೊಳಕ್ಕೋ ಹೋದ ಅನುಭವ. ಜ್ಯೋತಿರ್ಲಿಂಗದ ಸನಿಹ ಹೋದರೆ ಪುರೋಹಿತರೆಂಬ ಮಾಫಿಯಾ ದರ್ಬಾರು. ಭಕ್ತಾದಿಗಳಿಗೆಲ್ಲ ಜ್ಯೋತಿರ್ಲಿಂಗವನ್ನು ಕೈಯಿಂದಲೇ ಸ್ಪರ್ಶಿಸಬೇಕೆಂಬ ಹಪಾಹಪಿ. ದೇವರ ಮೈಮಟ್ಟಿ ಮಾತಾಡಿಸುವ ಹಂಬಲ.

ಇನ್ನು ಕೆಲವರಿಗೆ ಜ್ಯೋತಿರ್ಲಿಂಗಕ್ಕೆ ಹಣೆಹಣೆ ತಾಕಿಸಿ ನಮಸ್ಕರಿಸುವ ಚಪಲ. ಬಂದವರೆಲ್ಲ ಕೈಯಲ್ಲಿ ಮುಟ್ಟಿದರೆ, ಹಣೆ ಹಚ್ಚಿದರೆ ಜ್ಯೋತಿರ್ಲಿಂಗದ ಸ್ವಚ್ಛತೆ, ಗತಿಯೇನಾಗಬೇಕು? ಜ್ಯೋತಿ ರ್ಲಿಂಗದ ಪ್ರಾಂಗಣದಲ್ಲಿ ದುಡ್ಡಿದ್ದವರದ್ದೇ ಕಾರುಬಾರು. ಪುರೋಹಿತರ ಕೈಯಲ್ಲಿ ‘ಪ್ರಸಾದ’ ಇಟ್ಟರೆ ಎಷ್ಟು ಹೊತ್ತಾದರೂ ಇರಬಹುದು. ನಿಮ್ಮ ಇಷ್ಟಾರ್ಥ ಕಾರ್ಯಸಿದ್ಧಿ. ಉಳಿದವರನ್ನು ನೂಕು ಗೋವಿಂದಾ, ನೂಕು!

ಗೃಷ್ಣೇಶ್ವರದಲ್ಲೂ ಇದೇ ಕತೆ. ಇನ್ನು ಈ ಕ್ಷೇತ್ರಗಳಿಗೆ ಹೊಂದಿಕೊಂಡಿರುವ ಕಪಾಳೇಶ್ವರ, ಪಂಚವಟಿ, ಸೀತಾ ಗುಹಾ, ಗೋದಾವರಿ ಸ್ನಾನಘಾಟ... ಹೀಗೆ ಎಲ್ಲೇ ಹೋದರೂ ಕೊಳಕು, ದುರ್ನಾತ. ಗೋದಾವರಿ ದಡವನ್ನು ಎಷ್ಟು ಹಾಳುಗೆಡವಬೇಕೋ ಅಷ್ಟು ಹಾಳುಗೆಡವಿದ್ದಾರೆ. ನದಿನೀರಲ್ಲಿ ಮುಳುಕು ಹಾಕಿದರೆ ಅದ್ಯಾವ ಸೀಮೆ ಪುಣ್ಯ ಬರುವುದೋ ಆ ಭಗವಂತನೇ ಹೇಳಬೇಕು. ಪ್ರಾಯಶಃ ಅಲ್ಲಿ ಮುಳುಗು ಹಾಕಿಯೂ ಏನೂ ಆಗಿಲ್ಲವೆಂದರೆ, ಅದು ಭಗವಂತನ ಪವಾಡ, ಲೀಲೆಯೇ ಇರಬೇಕು.

ನದಿಯನ್ನೂ ಕತ್ತು ಹಿಡಿದು, ಉಸುರುಗಟ್ಟಿಸಿ ಸಾಯಿಸುವುದು ಹೇಗೆ ಎಂಬುದನ್ನು ಇಲ್ಲಿ ಸಾಕ್ಷಾತ್ ನೋಡಬಹುದು. ಮೋದಿಯಲ್ಲ, ಖುದ್ದು ಆ ಭಗವಂತನೇ ಬಂದರೂ, ಈ ಪುಣ್ಯನದಿಯನ್ನು ರಕ್ಷಿಸುವುದು ಅಸಾಧ್ಯ! ಯಾವುದೇ ಕ್ಷೇತ್ರಗಳಿಗೆ ಹೋಗಿ, ಭಕ್ತರು, ಪ್ರವಾಸಿಗರು ಬರುವುದನ್ನೇ ಹೊಂಚುಹಾಕಿ ಕಾಯುತ್ತಿರುತ್ತಾರೆ. ಬರೀ ಮೋಸ, ದಗಲಬಾಜಿತನ. ದೇವರ ಪಕ್ಕದ ಇರುವ ಪುರೋಹಿತರಂತೂ ಭಕ್ತರನ್ನು ಸುಲಿಯಲು ಕಾಯುತ್ತಿರುತ್ತಾರೆ.

ಅವರಿಗೆ ಇದೊಂದು ದಂಧೆ. ದೇವರು ಒಂದು ಮಾರಾಟದ, ಪ್ರದರ್ಶನದ ವಸ್ತು. ಸಾವಿರಾರು ಕಿಮೀ ದೂರದಿಂದ ಆಗಮಿಸುವ ಭಕ್ತರ ಮನಸ್ಥಿತಿ ಅವರಿಗೆ ಅರ್ಥವಾಗುವುದಾದರೂ ಹೇಗೆ? ಆ ಪೂಜಾರಿಯೂ ಯಾರ‍್ಯಾರಿಗೋ ‘ಪ್ರಸಾದ’ ಕೊಟ್ಟೇ ಆ ಆಯಕಟ್ಟಿನ ಜಾಗದೊಳಕ್ಕೆ ಬಂದಿರುತ್ತಾನೆ ಅಥವಾ ಅವನ ಗಳಿಕೆಯಲ್ಲಿ ಬೇರೆಯವರ ಜತೆಗೂ ಪಾಲಿರುತ್ತದೆ. ಅಲ್ಲದೇ ಅವರಿಗೂ ಸೇಲ್ಸ್‌ ಮಾನೇಜರ್‌ಗೆ ನಿಗದಿಪಡಿಸಿದಂತೆ, ಟಾರ್ಗೆಟ್ ಫಿಕ್ಸ್ ಮಾಡಿರುತ್ತಾರೆ.

ಹೀಗಾದಾಗ ಪೂಜಾರಿ ಅಕ್ಷರಶಃ ದೇವರನ್ನಿಟ್ಟುಕೊಂಡು ದಂಧೆಗೇ ಇಳಿಯುತ್ತಾನೆ. ಹೀಗಾದರೆ ಭಕ್ತರ ಪಾಡೇನು? ದೇವರ ಗತಿಯೇನು? ದೀಪದ ಬುಡದ ಕತ್ತಲು! ತಪ್ಪು ಭಾವಿಸಬೇಡಿ. ನಾನು ಕಾಯಕ ಪ್ರೇಮಿ. ಕಾಯಕಕ್ಕಿಂತ ಮಿಗಿಲಾದ ದೈವವಿಲ್ಲ ಎಂದು ಭಾವಿಸಿದವನು. ಆದರೂ ಎದೆಗೂಡಿನಲ್ಲಿ ಭಕ್ತಿಯಿಂದ ಎಲ್ಲ ದೇವರುಗಳನ್ನೂ ಸಾಕಿಕೊಂಡವನು. ಮನುಷ್ಯ ಪ್ರಯತ್ನಕ್ಕಿಂತ ಮಿಗಿಲಾದ ಶಕ್ತಿಯಿದೆ, ಅದೇ ದೇವರು ಎಂದು ನಂಬಿದವನು. ‌

ಆದರೆ ನಮ್ಮ ಪುಣ್ಯಕ್ಷೇತ್ರಗಳು, ಪುಣ್ಯನದಿಗಳನ್ನು ನೋಡಿದರೆ, ಅತೀವ ಸಂಕಟವಾಗುತ್ತದೆ, ವೇದನೆಯಾಗುತ್ತದೆ. ಎಲ್ಲ ಕ್ಷೇತ್ರಗಳಂತೆ, ಧಾರ್ಮಿಕ ಕ್ಷೇತ್ರಗಳೂ ಭ್ರಷ್ಟವಾಗುತ್ತಿದೆಯೆಂಬ ನೋವು ಕಾಡುತ್ತದೆ. ‘ಹರ ಕೊಲ್ಲಲ್ ಪರ ಕಾಯ್ವನೇ’ ಎಂಬಂತೆ, ದೇಗುಲಗಳೇ ಈ ರೀತಿಯಾದರೆ, ನಮ್ಮ ನಂಬಿಕೆ, ಶ್ರದ್ಧೆಗಳ ಗತಿಯೇನು? ಪಾಪ-ಪುಣ್ಯಕ್ಕೆ ವ್ಯತ್ಯಾಸವೇನು? ಮುಂದೊಂದು ದಿನ (ಈಗಿನಿಂದಲೇ ಆರಂಭಿಸಬಹುದು) ದೇಗುಲಗಳನ್ನು ರಕ್ಷಿಸಿ, ದೇವರುಗಳನ್ನು ಕಾಪಾಡಿ’ ಎಂಬ ಅಭಿಯಾನ ಮಾಡಬೇಕಾಗಬಹುದು. ತಮಾಷೆಯಲ್ಲ, ಈಗ ತುರ್ತಾಗಿ ಆಗಬೇಕಿರುವುದೇ ಅದು. ‘ಸ್ವಚ್ಛ ಭಾರತ’ ಅಭಿಯಾನದಂತೆ, ‘ಸ್ವಚ್ಛ ದೇಗುಲ’ ಆಂದೋಲನವೂ ಆಗಬೇಕಿದೆ.

ಕಾರಣ ದೇಗುಲಗಳೂ ಮಲಿನವಾದರೆ, ನಮ್ಮ ಸಂಸ್ಕೃತಿ ನಾಶವಾದಂತೆ, ನಾಗರಿಕತೆ ಘಾಸಿಯಾದಂತೆ. ನಮ್ಮ ದೇಶದ ಪ್ರಮುಖ ಪುಣ್ಯಕ್ಷೇತ್ರಗಳಾದ ಕಾಶಿ, ಮಥುರಾ, ಪುರಿ ಮುಂತಾದ ಕಡೆಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಆದರೂ ಪ್ರತಿದಿನ ಹತ್ತಾರು ಸಾವಿರ ಭಕ್ತಾದಿಗಳು ಈ ಕ್ಷೇತ್ರಗಳಿಗೆ ಭೇಟಿ ಕೊಡುತ್ತಾರೆ.

ಇಲ್ಲಿಗೆ ಬರುವವರ ಸಂಖ್ಯೆ ಇಷ್ಟಾದರೂ ಕಮ್ಮಿಯಾಗಿಲ್ಲ. ಕಾರಣ ಈ ಕ್ಷೇತ್ರಗಳ ಮಹಿಮೆ ಹಾಗೂ ಮಹತ್ವ. ಇಲ್ಲಿಗೆ ಭೇಟಿ ನೀಡಿದ ಯಾರಿಗೇ ಆದರೂ ಅತೀವ ವಿಷಾದ, ಪಶ್ಚಾತ್ತಾಪ ಆಗದೇ ಹೋಗುವುದಿಲ್ಲ. ಯಾಕಾದರೂ ಬಂದೆವೋ ಎಂಬ ಕಹಿ ಭಾವ ಆಗದೇ ಹೋಗುವುದಿಲ್ಲ. ಪುಣ್ಯ ಕ್ಷೇತ್ರಗಳೆಂಬ ಕಾರಣಕ್ಕೆ ಎಲ್ಲಾ ಅಸಹನೀಯ, ಅಸಹ್ಯಗಳನ್ನೂ ಮಾಫು ಮಾಡಬೇಕು. ‌

ಕೆಲ ವರ್ಷಗಳ ಹಿಂದೆ ನಾನು ಪುರಿಗೆ ಹೋಗಿದ್ದೆ. ದೇಗುಲದಲ್ಲಿದ್ದ ಬಹುತೇಕ ಪುರೋಹಿತರು ಆನೆಕಾಲು ರೋಗದಿಂದ ಬಳಲುತ್ತಿದ್ದರು. ಭಕ್ತರಿಗೆ ಹಣ ಕೊಡುವಂತೆ ದಬಾಯಿಸುತ್ತಿದ್ದರು. ತಾವೇ ಕಿಸೆಗೆ ಕೈ ಹಾಕಿ ಹಣ ಕೀಳುತ್ತಿದ್ದರು. ಇಂಥ ದುಂಡಾವರ್ತನೆ ನೋಡಿ ಆಗಮಿಸಿದ್ದ ಭಕ್ತಾದಿಗಳು ಗರಬಡಿದು ಹೋಗಿದ್ದರು.

ಒಂದು ಸಲವಂತೂ ದೇವರ ಸನ್ನಿಧಾನದಲ್ಲಿಯೇ ಪುರೋಹಿತರ ನಡುವೆಯೇ ತಾರಾಮಾರಿ ಜಗಳ ವಾಯಿತು. ಭಕ್ತರ ಹಣದ ವಿಷಯ ಹಂಚಿಕೆಗೆ ಸಂಬಂಧಿಸಿದಂತೆ ಅವರ ನಡುವೆ ನಡೆದ ಕಲಹವನ್ನು ಜಗನ್ನಾಥ ಮೂಕ ಪ್ರೇಕ್ಷಕನಾಗಿ ಗಮನಿಸುತ್ತಿದ್ದ! ಮಥುರಾದಲ್ಲಿ ದೇಗುಲಕ್ಕೆ ಹೋಗುವ ದಾರಿ ಶ್ರೀಕೃಷ್ಣ ಪರಮಾತ್ಮನಿಗೇ ಪ್ರೀತಿ! ಇಲ್ಲದಿದ್ದರೆ ಇಂಥ ದಾರಿಯನ್ನು ಆತ ಸಹಿಸುತ್ತಿದ್ದನಾ? ಕೊಳೆಗೇರಿಯ ನೆನಪಾಗುತ್ತದೆ.

ಪಕ್ಕದ ಮಸೀದಿ, ಸನಿಹದಲ್ಲಿಯೇ ಮಾಂಸದ ಅಂಗಡಿ. ಆದರೂ ಭಕ್ತರು, ಪ್ರವಾಸಿಗರು ಹೋಗುತ್ತಾರೆ. ಎಷ್ಟೇ ಅಸಹನೀಯವಾದರೂ ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಇವನ್ನೆಲ್ಲ ಮರೆತು, ಮನೆಯಲ್ಲಿ ಮಥುರಾದ ಚಿತ್ರವನ್ನಿಟ್ಟು ಗಂಧದ ಕಡ್ಡಿ ಹಚ್ಚುತ್ತಾರೆ. ನಮ್ಮ ದೇವಾಲಯ, ಪುಣ್ಯಕ್ಷೇತ್ರಗಳ ಹುಳುಕುಗಳನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಲ್ಲ. ಆದರೆ ಈಗಿನ ಸ್ಥಿತಿಯಲ್ಲಿ ಅವನ್ನು ಭಕ್ತಿ ಕಾರಣಕ್ಕೆ ಒಪ್ಪಿಕೊಳ್ಳುವುದೂ ಕಷ್ಟವೇ.

ಶ್ರದ್ಧೆಯ ತಾಣಗಳನ್ನು ಹೊಲಸು ಮಾಡಿ ಬೇಕಾಬಿಟ್ಟಿಯಾಗಿಟ್ಟರೆ ಯಾರೂ ಕ್ಷಮಿಸುವುದಿಲ್ಲ. ದೇಗುಲಗಳು ಹೇಗಿರಬೇಕು ಎಂಬುದಕ್ಕೆ ಇಸ್ಕಾನ್ ಹಾಗೂ ಸ್ವಾಮಿ ನಾರಾಯಣ ಟ್ರಸ್ಟ್ ನಮಗೆ ಮೇಲ್ಪಂಕ್ತಿ ಹಾಕಿಕೊಟ್ಟಿವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ, ಯಾರೂ ನಮ್ಮನ್ನು ಕ್ಷಮಿಸುವು ದಿಲ್ಲ. ‌ನಿನ್ನ ಮನೆಯನ್ನು ಮೊದಲು ಚೆನ್ನಾಗಿಟ್ಟುಕೋ ಎಂದು ದೇವರಿಗೇ ಹೇಳಬೇಕಾಗಿ ಬಂದಿರುವುದು ದುರ್ದೈವ.