ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಹೈಕುಗಳು: ಜಪಾನಿನ ಕೊಡುಗೆ

ಹೈಕು ಬರವಣಿಗೆಯನ್ನು ಪ್ರಖ್ಯಾತಿಗೆ ತಂದವರು ಮತ್ಸುಒ ಬಾಶೋ ಎಂಬ ಪ್ರಸಿದ್ಧ ಕವಿ. ಅವರು ಆ ದಿನಗಳಲ್ಲಿ ತನ್ನ ಹೈಕುಗಳ ಮೂಲಕ ಜಪಾನಿನ ಕಾವ್ಯವೈಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ಹೈಕುಗಳಲ್ಲಿ ಪ್ರಕೃತಿ, ಬೌದ್ಧತತ್ವಗಳು ಹಾಗೂ ಮಾನವೀಯ ಅನುಭವಗಳ ಗಂಭೀರತೆಯಿದೆ.

ಹೈಕುಗಳು: ಜಪಾನಿನ ಕೊಡುಗೆ

ಸಂಪಾದಕರ ಸದ್ಯಶೋಧನೆ

ಜಪಾನಿನ ಬಗ್ಗೆ ಬರೆದು ಅಲ್ಲಿನ ಹೈಕುಗಳ ಬಗ್ಗೆ ಬರೆಯದಿದ್ದರೆ ಹೇಗೆ? ಆಗ ಅದು ಅಪೂರ್ಣ ವಾದೀತು. ಹೈಕುಗಳು ಅಕ್ಷರ ಲೋಕದಲ್ಲಿ ಜಪಾನಿನಷ್ಟೇ ಪ್ರಸಿದ್ಧ. ಹೈಕುಗಳು ಎಂದ ಮಾತ್ರಕ್ಕೆ ತಕ್ಷಣ ಯಾರಾದರೂ ಜಪಾನಿಗೆ ಕನೆಕ್ಟ ಆಗುವಷ್ಟು ಅವು ಜನಪ್ರಿಯ. ಸರಳವಾಗಿ ಹೇಳಬೇಕೆಂದರೆ, ಹೈಕುಗಳು ಎಂದರೆ, ಅತ್ಯಂತ ಸಣ್ಣ ರೂಪದ ಪದ್ಯ ವಿಧಾನ. ಚುಟುಕಾಗಿ ಪ್ರಬಲವಾದ ಭಾವನೆ ಗಳನ್ನು ವ್ಯಕ್ತಪಡಿಸುವ ಕಾವ್ಯ ನಿರೂಪಣೆ. ಇನ್ನೂ ಸಂಕ್ಷಿಪ್ತವಾಗಿ ಹೇಳುವುದಾದರೆ, ನಿರ್ದಿಷ್ಟ ಸಾಲು ಮತ್ತು ಅಕ್ಷರಗಳಿರುವ ಹನಿಗವನ. ಹೈಕುಗಳು ಮಾತ್ರ ಜಪಾನಿನ ಸಾಹಿತ್ಯದಲ್ಲಿಯೇ ಅಲ್ಲ, ಇಡೀ ಜಗತ್ತಿನಲ್ಲಿ ತನ್ನ ವಿಶಿಷ್ಟತೆಯಿಂದ ಪ್ರಖ್ಯಾತವಾಗಿವೆ. ಇವು ಬೌದ್ಧ ತತ್ತ್ವಚಿಂತನೆ, ಪ್ರಕೃತಿ ಪ್ರೀತಿ ಮತ್ತು ಕ್ಷಣಿಕತೆಯ ಆಶಯಗಳ ಪ್ರತಿಬಿಂಬವಾಗಿವೆ.

ಹೈಕುಗಳ ಮೂಲವನ್ನು ಹುಡುಕುತ್ತಾ ಹೋದರೆ ಅದು ಹದಿನೇಳನೇ ಶತಮಾನದಷ್ಟು ಹಿಂದಕ್ಕೆ ಹೋಗಿ ನಿಲ್ಲಬಹುದು. ಇವು ’ಹೈಕಾಯಿ ನೋ ರೆಂಗಾ’ ಅಥವಾ ’ಹೋಕು’ ಎಂಬ ಪದ್ಯ ವಿಧಾನ ದಿಂದ ಉಗಮವಾಯಿತು ಅಂತ ಹೇಳುತ್ತಾರೆ. ’ಹೈಕಾಯಿ ನೋ ರೆಂಗಾ’ ಮೊದಲ ಸಾಲನ್ನು ’ಹೋಕು’ ಎಂದು ಕರೆಯಲಾಗುತ್ತಿತ್ತು.

ಇದನ್ನೂ ಓದಿ: Vishweshwar Bhat Column: ಬಿಳಿ ಸಾಕ್ಸ್‌ ಸ್ವಚ್ಛತೆ ನಿಜವಾ?

ನಂತರ ಈ ಹೋಕುಗಳು ಸ್ವತಂತ್ರ ಕವನ ರೂಪದಲ್ಲಿ ಹೈಕುಗಳಾದವು. ಹೈಕು ಬರವಣಿಗೆಯನ್ನು ಪ್ರಖ್ಯಾತಿಗೆ ತಂದವರು ಮತ್ಸುಒ ಬಾಶೋ ಎಂಬ ಪ್ರಸಿದ್ಧ ಕವಿ. ಅವರು ಆ ದಿನಗಳಲ್ಲಿ ತನ್ನ ಹೈಕುಗಳ ಮೂಲಕ ಜಪಾನಿನ ಕಾವ್ಯವೈಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಅವರ ಹೈಕುಗಳಲ್ಲಿ ಪ್ರಕೃತಿ, ಬೌದ್ಧತತ್ವಗಳು ಹಾಗೂ ಮಾನವೀಯ ಅನುಭವಗಳ ಗಂಭೀರತೆಯಿದೆ.

ಬಾಶೋನ ನಂತರ, ಯೋಸಾ ಬುಸೋನ್ ಮತ್ತು ಕೋಬಯಾಶಿ ಇಸ್ಸಾ ಎಂಬುವವರು ಹೈಕು ಸಾಹಿತ್ಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಇಸ್ಸಾ ತಮ್ಮ ಹೈಕುಗಳಲ್ಲಿ ಸಾಮಾನ್ಯ ಜನರ ನೋವು, ದುರಂತ ಮತ್ತು ನಗುವನ್ನು ಸೂಕ್ಷ್ಮವಾಗಿ ಚಿತ್ರಿಸಿದರು. ನಂತರದ ಕಾಲಘಟ್ಟದಲ್ಲಿ ಮಾಸೊಕಾ ಶಿಕಿ ಎಂಬವರು ಹೈಕು ಎಂಬ ಪದವನ್ನು ಅಽಕೃತವಾಗಿ ಪರಿಚಯಿಸಿದರು.

ಸಾಂಪ್ರದಾಯಿಕವಾಗಿ, ಹೈಕುಗಳು ಮೂರು ಸಾಲುಗಳಿಂದ ಕೂಡಿರುತ್ತವೆ ಮತ್ತು ಈ ಮೂರು ಸಾಲು ಗಳಲ್ಲಿ ಕ್ರಮವಾಗಿ 5-7-5 (ಉದಾ : ಪ್ರೀತಿಯ ಮಳೆ/ ಸುರಿಯಲಿ; ಜಗದ/ ಕೊಳೆ ಹೋಗಲಿ) ಅಕ್ಷರ ಗಳಿರುತ್ತವೆ. ಹೈಕುಗಳಲ್ಲಿ ಇಲ್ಲದದ್ದು ಎಂದರೆ ಅನಗತ್ಯ ವಿವರಣೆ, ಅಲಂಕಾರಿಕ ಭಾಷೆ ಅಥವಾ ವ್ಯಾಖ್ಯಾನ. ಬದಲಿಗೆ, ಇವು ಪ್ರಕೃತಿಯ ಒಂದು ಕ್ಷಣವನ್ನು, ಒಂದು ದೃಶ್ಯವನ್ನು ಅಥವಾ ಒಂದು ಭಾವನೆಯನ್ನು ನೇರವಾಗಿ, ಸ್ಪಷ್ಟವಾಗಿ ಕಟ್ಟಿಕೊಡುತ್ತವೆ.

ಅಕ್ಷರಗಳಲ್ಲಿ ಹೇಳದಿರುವ ಎಷ್ಟೋ ಸಂಗತಿಗಳು ಹೈಕುಗಳಲ್ಲಿ ವ್ಯಕ್ತವಾಗಿರುತ್ತವೆ. ಹೈಕುಗಳು ಕೆಲವೇ ಪದಗಳಲ್ಲಿ ಏನನ್ನೋ ಹೇಳುತ್ತಾ, ನಮ್ಮಂದು ಹಠಾತ್ ಮೌನವನ್ನು ಸೃಷ್ಟಿಸಿ ಬಿಡುತ್ತವೆ. ನಮ್ಮಂದು ಹೊಸ ದರ್ಶನ ಮಾಡಿಸುತ್ತದೆ. ಹೈಕು ಕೇವಲ ಜಪಾನಿಗಷ್ಟೇ ಸೀಮಿತವಾಗಿಲ್ಲ. ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಗಳಲ್ಲಿ ಹೈಕುಗಳ ಕಾವ್ಯ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಹೈಕು ತನ್ನ ಸರಳತೆಯ ಮೂಲಕ ಬೋಧನಾತ್ಮಕ ಮತ್ತು ಮನಸ್ಸಿಗೆ ತಕ್ಷಣ ಪ್ರವೇಶಿಸುವ ಕಾವ್ಯರೂಪ ವಾಗಿದೆ.

ಪಾಶ್ಚಾತ್ಯ ಸಾಹಿತ್ಯಕಾರರೂ ಇದನ್ನು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಇಪ್ಪತ್ತನೇ ಶತಮಾನದಲ್ಲಿ ಹೈಕು ಜಾಗತಿಕ ಅಕ್ಷರಲೋಕದವನ್ನು ವ್ಯಾಪಿಸಿತು. ಪಶ್ಚಿಮದಲ್ಲಿ ಎಜ್ರಾ ಪೌಂಡ್, ಆಲೆನ್ ಗಿನ್ಸ್‌ ಬರ್ಗ್ ಮುಂತಾದ ಕವಿಗಳು ಹೈಕು ಶೈಲಿಯಲ್ಲಿ ತಮ್ಮದೇ ಆದ ನವೀನ ಪ್ರಯೋಗಗಳನ್ನು ಮಾಡಿದರು. ಹೈಕು ಬರವಣಿಗೆಯಲ್ಲಿ ಜೆನ್ ಬೌದ್ಧ ಧ್ಯಾನದ ಪ್ರಭಾವ ದಟ್ಟವಾಗಿದೆ.

ಹೈಕು ಕೂಡ ಅದೇ ತಾತ್ವಿಕ ನೆಲೆಯಲ್ಲಿ ಅರಳುತ್ತವೆ. ಇದು ಓದುಗನಿಗೆ ಆ ಕ್ಷಣವನ್ನು ಶುದ್ಧವಾಗಿ, ಚಿಂತನೆ ಇಲ್ಲದೆ ಅನುಭವಿಸಲು ಅವಕಾಶ ಮಾಡಿಕೊಡುತ್ತದೆ. ಹೈಕು ಬರೆಯುವುದು ಸರಳವಾಗಿ ತೋಚಬಹುದು, ಆದರೆ ಅದು ಅತ್ಯಂತ ನಿಖರವಾದ ಕಲೆಯಾಗಿದೆ. ಪ್ರಸ್ತುತ ಸಂವೇದನೆಯನ್ನು ಹಿಡಿದುಕೊಳ್ಳುವುದು ಮತ್ತು ಕೇವಲ ಮೂರೇ ಸಾಲುಗಳಲ್ಲಿ ಅದರ ಅರ್ಥವನ್ನೂ, ಭಾವವನ್ನೂ ಹೇಳುವುದು ನಿಜಕ್ಕೂ ಕಲೆಯ ವಿಷಯ.

ಕನ್ನಡ ಕವಿಗಳೂ ಹೈಕು ಶೈಲಿಯಿಂದ ಪ್ರಭಾವಿತರಾಗಿರುವುದು ವಿಶೇಷ. ಎ.ಕೆ.ರಾಮಾನುಜನ್, ಎಚ್.ಎಸ್.ಶಿವಪ್ರಕಾಶ್, ಡಾ.ಎಚ್.ಟಿ.ಪೋತೆ ಸೇರಿದಂತೆ ಅನೇಕರು ಕನ್ನಡದಲ್ಲಿ ಹೈಕು ಕೃಷಿ ಯನ್ನು ಮಾಡಿದ್ದಾರೆ.