ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಮಾವೋವಾದಿಗಳ ಮಾವಿನ ಭ್ರಾಂತಿಯ ಕತೆ

ಚೇರ್ಮನ್ ಮಾವೋನ ಆರಾಧನೆಯ ಮಾಧ್ಯಮವಾಗಿತ್ತು. ಇದಕ್ಕೆ ಎರಡು ವರ್ಷಗಳ ಹಿನ್ನೆಲೆಯೂ ಇತ್ತು. 1966ರಲ್ಲಿ ಮಾವೋ, ರೆಡ್ ಗಾರ್ಡ್ಸ್ ಎಂಬ ಕೆಂಪಂಗಿ ದಳವನ್ನು ಹುಟ್ಟುಹಾಕಿ ‘ಪ್ರತಿಗಾಮಿ’ ಅಧಿಕಾರಿಗಳ ಹಾಗೂ ಜನತೆಯ ವಿರುದ್ಧ ದಂಗೆ ಏಳಲು ಕರೆ ನೀಡಿದ್ದ. ಬೂರ್ಜ್ವಾ ಅಂಶಗಳು, ಸಾಂಪ್ರ ದಾಯಿಕ ಆಲೋಚನೆ ಹಾಗೂ ಜೀವನ ವಿಧಾನಗಳನ್ನು ಶುದ್ಧೀಕರಿಸುಭಿವುದು ಅಂದರೆ ನಾಶ ಮಾಡು ವುದು ಅದರ ಗುರಿಯಾಗಿತ್ತು

ಮಾವೋವಾದಿಗಳ ಮಾವಿನ ಭ್ರಾಂತಿಯ ಕತೆ

ಹರೀಶ್‌ ಕೇರ ಹರೀಶ್‌ ಕೇರ Apr 10, 2025 6:26 AM

ಕಾಡುದಾರಿ

ಈಗ ಹೇಗೂ ಮಾವಿನ ಹಣ್ಣಿನ ಕಾಲ. ಹೀಗಾಗಿ ಮಾವು ತಿನ್ನುತ್ತಾ ಇದನ್ನು ಓದೋಣ. ಮಾವಿನ ಮೂಲವೇ ಭಾರತ ಆದ್ದರಿಂದ ಅದರ ವೈಜ್ಞಾನಿಕ ಹೆಸರು ‘ಮ್ಯಾಂಜಿಫೆರಾ ಇಂಡಿಕಾ’ ಎಂದು ಇಟ್ಟಿದ್ದಾರೆಂದು ನಮಗೆ ಗೊತ್ತು. ಭಾರತದ ಪ್ರತಿಯೊಬ್ಬನ ಬಾಲ್ಯದ ನೆನಪೂ ಮಾವಿನ ಜೊತೆಗೆ ಒಂದಲ್ಲ ಒಂದು ರೀತಿಯಲ್ಲಿ ತಳುಕು ಹಾಕಿಕೊಂಡಿರಬಹುದು. ಆದರೆ ಮಾವು ಎಂದರೇನೆಂದೇ ತೀರ ಇತ್ತೀಚಿನವರೆಗೂ ತಿಳಿದಿಲ್ಲದ ದೇಶಗಳೂ ಇದ್ದವು. ಇಲ್ಲಿ ಈಗ ನಾನು ಹೇಳಲು ಹೊರಟಿರು ವುದು ಅಂಥ ದೇಶವಾಗಿದ್ದ ಚೀನಾದಲ್ಲಿ ನಡೆದ, ಅಸಂಗತ ಪ್ರಹಸನದಂಥ ಇತಿಹಾಸದ ಘಟನಾ ವಳಿಗಳ ಸರಣಿ. ಸುಮಾರು ಒಂದೂವರೆ ವರ್ಷ ಕಾಲ ಇಡೀ ಚೀನಾ ವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದ್ದ ಒಂದು ವಿಲಕ್ಷಣ ಗೀಳಿನ ಕತೆ ಇದು.

ಇದಕ್ಕೆ ಕಾರಣವಾದದ್ದು ಮಾವು, ಮತ್ತು ಆಗಿನ ಚೀನಾ ಡಿಕ್ಟೇಟರ್ ಆಗಿದ್ದ ಮಾವೋ ಝೆಡಾಂಗ್. ಇದು ನಡೆದದ್ದು ಐವತ್ತೇಳು ವರ್ಷಗಳ ಹಿಂದೆ, 1968ರಲ್ಲಿ. ಅದು ಚೀನಾದ ಅತ್ಯಂತ ಅಸ್ತವ್ಯಸ್ತ ಮತ್ತು ಹಿಂಸಾತ್ಮಕ ದಶಕ. ಸಾಂಸ್ಕೃತಿಕ ಕ್ರಾಂತಿ ಎಂಬ ಹೆಸರಿನಿಂದ ನಡೆದ ಸಾಮೂಹಿಕ ಹಿಂಸೆಯ ಕಾಲ. ಈ ಅವಧಿಯಲ್ಲಿ ಚೀನಾದಲ್ಲಿ ಒಂದು ವಿಚಿತ್ರವಾದ ಉನ್ಮಾದ ಆವರಿಸಿತು. ಅದರ ಕೇಂದ್ರ ದಲ್ಲಿದ್ದುದು ಮಾವಿನಹಣ್ಣು. ಆ ಕಾಲದಲ್ಲಿ ಅದೊಂದು ಪೂಜಾವಸ್ತುವಾಗಿತ್ತು.

ಚೇರ್ಮನ್ ಮಾವೋನ ಆರಾಧನೆಯ ಮಾಧ್ಯಮವಾಗಿತ್ತು. ಇದಕ್ಕೆ ಎರಡು ವರ್ಷಗಳ ಹಿನ್ನೆಲೆಯೂ ಇತ್ತು. 1966ರಲ್ಲಿ ಮಾವೋ, ರೆಡ್ ಗಾರ್ಡ್ಸ್ ಎಂಬ ಕೆಂಪಂಗಿ ದಳವನ್ನು ಹುಟ್ಟುಹಾಕಿ ‘ಪ್ರತಿಗಾಮಿ’ ಅಧಿಕಾರಿಗಳ ಹಾಗೂ ಜನತೆಯ ವಿರುದ್ಧ ದಂಗೆ ಏಳಲು ಕರೆ ನೀಡಿದ್ದ. ಬೂರ್ಜ್ವಾ ಅಂಶಗಳು, ಸಾಂಪ್ರದಾಯಿಕ ಆಲೋಚನೆ ಹಾಗೂ ಜೀವನ ವಿಧಾನಗಳನ್ನು ಶುದ್ಧೀಕರಿಸುಭಿವುದು ಅಂದರೆ ನಾಶ ಮಾಡುವುದು ಅದರ ಗುರಿಯಾಗಿತ್ತು.

ಇದನ್ನೂ ಓದಿ: Harish Kera Column: ಅನಾಮಧೇಯನ ಆಗಮನ ಮತ್ತು ನಿರ್ಗಮನ

ಧಾರ್ಮಿಕ ಎಂದೆನಿಸಿಕೊಂಡ ಎಲ್ಲವನ್ನೂ ಇವು ನಾಶ ಮಾಡಿದವು. ಎರಡು ವರ್ಷದಲ್ಲಿ ಈ ರೆಡ್ ಗಾರ್ಡ್ ಬಣಗಳು ಹಾಹಾಕಾರವನ್ನೇ ಸೃಷ್ಟಿಸಿದ್ದವು. ಸಾವಿರಾರು ಜನರನ್ನು ಕೊಂದು ಹಾಕಿದ್ದವು. ಹಳೆಯ ಮೂರ್ತಿಪೂಜೆ, ದೇವಾಲಯಗಳು, ಲೈಬ್ರರಿಗಳು, ಗ್ರಂಥಗಳನ್ನೆಲ್ಲ ಸರ್ವನಾಶಗೈದವು. 1968ರ ಹೊತ್ತಿಗೆ ಇವು ಭಸ್ಮಾಸುರನಂತೆ ಬೆಳೆದು ನಿಂತಿದ್ದವು. ತಮ್ಮತಮ್ಮ ಹೊಡೆದಾಡಿ ಕೊಳ್ಳುತ್ತಿದ್ದವು.

ಮಾವೋ ತಾನೇ ಸೃಷ್ಟಿಸಿದ ಈ ಭಸ್ಮಾಸುರರನ್ನು ಮಟ್ಟ ಹಾಕಲು ಮುಂದಾದ. ಸರಕಾರಿ ಫ್ಯಾಕ್ಟರಿ ಗಳಲ್ಲಿದ್ದ ಸುಮಾರು 30000 ಕಾರ್ಮಿಕರನ್ನು ಒಟ್ಟುಮಾಡಿ ಬೀಜಿಂಗ್‌ನ ಕ್ವಿಂಗ್ವಾ ವಿಶ್ವವಿದ್ಯಾ ಲಯದಲ್ಲಿದ್ದ ಕೆಂಪು ಗಾರ್ಡ್‌ಗಳ ದಮನಕ್ಕೆ ಕಳುಹಿಸಿದ. ಇವರು ಹೋಗಿ ರೆಡ್ ಗಾರ್ಡ್‌ಗಳನ್ನು ಸೆರೆಹಿಡಿದರು. ಈ ಹೊಯ್ದಾಟದಲ್ಲಿ ನೂರಾರು ಜನ ಸತ್ತರು. ಈ ಕಾರ್ಮಿಕರಿಗೆ ಧನ್ಯವಾದ ಹೇಳುವುದಕ್ಕೆಂದು ಮಾವೋ, 40 ಮಾವಿನ ಹಣ್ಣುಗಳನ್ನು ಚಂದವಾಗಿ ಪ್ಯಾಕ್ ಮಾಡಿ ಕಳಿಸಿದ.

ಈ ಮಾವಿನ ಹಣ್ಣುಗಳು ಕೂಡ ಚೀನಾದಲ್ಲಿ ಬೆಳೆದುದಾಗಿರಲಿಲ್ಲ. ಅದು ಹಿಂದಿನ ದಿನ ಬೀಜಿಂಗ್‌ಗೆ ಬಂದು ಮಾವೋನನ್ನು ಭೇಟಿಯಾದ ಪಾಕಿಸ್ತಾನದ ವಿದೇಶಾಂಗ ಸಚಿವ ನೀಡಿದ್ದ ಗಿಫ್ಟ್‌ ಆಗಿತ್ತು. ಆಗ ಮಾವು ಚೀನಾಗೆ ಅಪರಿಚಿತ ಹಣ್ಣು, ಅಲ್ಲಿ ಅದು ಬೆಳೆಯುತ್ತಿರಲಿಲ್ಲ. ಅದರ ಹೆಸರು ಕೂಡ ಯಾರಿಗೂ ತಿಳಿದಿರಲಿಲ್ಲ. ಮಾವೋ ನೀಡಿದ ಈ ಗಿಫ್ಟ್ ಊಹಿಸಲಸಾಧ್ಯ ಪರಿಣಾಮ ಬೀರಿತು. ‌

7 R

ಮಾವು ಪಡೆದ ಈ ಕಾರ್ಮಿಕರು ದಿನವಿಡೀ ಅದನ್ನು ಕಣ್ತುಂಬ ನೋಡಿ ಧನ್ಯರಾದರು. ಮೂಸಿ ಆನಂದತುಂದಿಲರಾದರು. ಮುಟ್ಟಿ ಪುಳಕಗೊಂಡರು. ಈ ಮ್ಯಾಜಿಕ್ ಫ್ರುಟ್ ಏನಿರಬಹುದೆಂದು ವಿಸ್ಮಿತರಾದರು. ಈ ಮೂಲಕ ಮಾವೋ ಮಾತನಾಡದೆಯೇ ಒಂದು ಸಂದೇಶವನ್ನು ರವಾನಿಸಿ ದಂತಿತ್ತು.

ಸಾಂಸ್ಕೃತಿಕ ಕ್ರಾಂತಿ ಇಲ್ಲಿಗೆ ಮುಕ್ತಾಯವಾಗಿದೆಯೆಂದೂ, ಈಗ ನಾಯಕತ್ವ ವಿದ್ಯಾರ್ಥಿ ರೆಡ್‌ ಗಾರ್ಡ್‌ ಗಳಿಂದ ಕಾರ್ಮಿಕರ ಕೈಗೆ ಹೋಗಿದೆಯೆಂದೂ ಆತ ಸಾಂಕೇತಿಕವಾಗಿ ಮಾವಿನ ಮೂಲಕ ಹೇಳಿದಂತಿತ್ತು. ಮಿಲಿಟರಿ ಭದ್ರತೆಯಲ್ಲಿ ಕಳಿಸಲಾದ ಈ ಮಾವನ್ನು ನೋಡಿಯೇ ಇದನ್ನೇನು ಮಾಡುವುದು ಎಂಬ ಚರ್ಚೆ ಕಾರ್ಮಿಕರಲ್ಲಿ ಶುರುವಾಯಿತು.

ಹಂಚಿಕೊಂಡು ತಿನ್ನುವುದೇ ಅಥವಾ ಇಟ್ಟುಕೊಂಡು ನಮಿಸುವುದೇ? ಹೆಚ್ಚಿನವರೆ ಅದನ್ನು ಫಾರ್ಮಾಲ್ಡಿಹೈಡ್ ತಂದು ಸಂರಕ್ಷಿಸಿ ಇಟ್ಟರು. ನಂತರ ಅದನ್ನೇ ಹೋಲುವ ಮೇಣದ ಪ್ರತಿಕೃತಿ ಗಳನ್ನು ಮಾಡಿಸಿ ಗ್ಲಾಸ್ ಕವರ್ ಮಾಡಿಟ್ಟುಕೊಂಡರು. ಶಾಂಘಾಯ್‌ನ ಒಂದು ಫ್ಯಾಕ್ಟರಿಗೆ ಒಂದು ಮಾವಿನಹಣ್ಣನ್ನು ಕಳಿಸಲು ವಿಶೇಷ ವಿಮಾನವನ್ನೇ ನಿಯೋಜಿಸಿದರು. ಈ ಮಾವಿನಹಣ್ಣುಗಳು ಕೊಳೆತು ಇನ್ನೇನು ಹಾಳಾಗಬಹುದು ಎನಿಸಿದಾಗ ಅದನ್ನು ನೀರಿನಲ್ಲಿ ಕುದಿಸಿ, ‘ಪವಿತ್ರ ನೀರು’ ಎಂದು ಕರೆದು ಅದನ್ನು ಹಂಚಿ ಕುಡಿದರು. ಹೆಚ್ಚಿನವರೆ ಮಾವಿನಲ್ಲಿ ಮಾವೋನನ್ನೇ ಕಂಡರು. ಅದರ ಬಗ್ಗೆ ಕತೆ ಕಟ್ಟಿದರು, ಹಾಡು ರಚಿಸಿದರು. ಅದು ಅಮೃತಫಲ ಎಂದರು.

ಈ ಮಾವಿನ ಉನ್ಮಾದ ಇಡೀ ದೇಶದುದ್ದಕ್ಕೂ ಹರಡಲು ತಡವಾಗಲಿಲ್ಲ. ರೆಡ್ ಗಾರ್ಡ್‌ಗಳೇನೋ ದೇವಾಲಯಗಳನ್ನು ನಾಶ ಮಾಡಿದ್ದರು, ಆದರೆ ಆರಾಧನೆಯ ಪ್ರವೃತ್ತಿಯನ್ನು ನಾಶ ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ. ಅದೀಗ ಮಾವಿನಲ್ಲಿ ಹೊಸ ದೇವರನ್ನು ಕಂಡುಕೊಂಡಿತ್ತು. ಬೌದ್ಧ ಹಾಗೂ ದಾವೋ ಸಂಪ್ರದಾಯಗಳಲ್ಲಿ ಬೆಳೆದು ಬಂದಿದ್ದ ಕೆಲವು ಆರಾಧನಾ ಕ್ರಮಗಳ ಮೂಲಕ ಈ ಮಾವನ್ನು ಪೂಜಿಸಲಾಯಿತು.

ಫ್ಯಾಕ್ಟರಿಗಳಲ್ಲಿ ಒಂದು ಮಂಟಪ ಮಾಡಿ ಅದರ ನಡುವೆ ಮಾವಿನ ಪ್ರತಿಕೃತಿ ಇಟ್ಟು, ಮುಂಜಾನೆ ಸಂಜೆ ಅದಕ್ಕೆ ನಮಸ್ಕರಿಸಲಾಗುತ್ತಿತ್ತು. ತನಗೆ ಬಂದ ಗಿಫ್ಟನ್ನು ತಾನು ಬಳಸದೆ ದೇಶದ ಪ್ರಜೆಗಳಿಗಾಗಿ ಬಿಟ್ಟುಕೊಟ್ಟ ಮಾವೋ ಝೆಡಾಂಗ್‌ನ ಸ್ವಾರ್ಥರಹಿತ ಮನಸ್ಥಿತಿಯನ್ನು ಹಾಡಿ ಹೊಗಳಲಾಯಿತು. ಆದರೆ ಅವರ‍್ಯಾರಿಗೂ ಗೊತ್ತಿಲ್ಲದಿದ್ದ ಸಂಗತಿಯೆಂದರೆ, ಮಾವೋ ಮಾವು ಮಾತ್ರವಲ್ಲ, ಯಾವ ಹಣ್ಣನ್ನೂ ತಿನ್ನುತ್ತಿರಲಿಲ್ಲ!

ಅವನಿಗೆ ಹಣ್ಣುಗಳೆಂದರೇ ದ್ವೇಷ. ತನಗೆ ಬೇಕಿಲ್ಲದಿದ್ದ ಈ ಹಣ್ಣನ್ನು ಕೊಟ್ಟು ಕಳಚಿಕೊಂಡಿದ್ದ ಮಾವೋನನ್ನು ಚೀನಾದ ಭ್ರಾಂತ ಜನ ಪರಮ ಸ್ವಾರ್ಥತ್ಯಾಗಿಯಂತೆ ಕಂಡುಬಿಟ್ಟಿದ್ದರು. ಈ ಮಾವಿನ ಹಣ್ಣುಗಳು ಶಾಶ್ವತತೆಯ, ನಿರಂತರತೆಯ ಪ್ರತೀಕವೆಂದು ಕಾಣಲಾಯಿತು. ಈ ಉನ್ಮಾದ ವನ್ನು ಚೀನಾದ ಕಮ್ಯುನಿಸ್ಟ್ ಪಾರ್ಟಿ ತನ್ನ ಪ್ರೊಪಗಾಂಡದ ಬಳಕೆಗ ಬಹು ಚೆನ್ನಾಗಿಯೇ ಬಳಸಿಕೊಂಡಿತು.

ಮಾವಿನ ಚಿತ್ರವುಳ್ಳ ಬೆಡ್‌ಶೀಟ್ ಗಳು, ಟ್ರೇಗಳು, ವಾಶ್‌ಬೇಸಿನ್‌ಗಳು ಮುಂತಾದ ದಿನಬಳಕೆ ವಸ್ತುಗಳು, ಮಾವಿನ ಪರಿಮಳದ ಸೋಪು- ಸಿಗರೇಟುಗಳನ್ನೆಲ್ಲ ಹೊರತಂದಿತು. ಜನ ಮುಗಿ ಬಿದ್ದು ಕೊಂಡರು. ಆ ವರ್ಷದ ನ್ಯಾಶನಲ್ ಡೇ ಪರೇಡ್‌ನಲ್ಲಿ ಮಾವಿನ ದೊಡ್ಡ ದೊಡ್ಡ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ರಾರಾಜಿಸಿದವು.

ಗೈಜೌ ಪ್ರಾಂತ್ಯದಲ್ಲಿ ನೂರಾರು ರೈತರು ಒಂದು ಮಾವಿನ ಕಪ್ಪು ಬಿಳುಪು ಭಾವಚಿತ್ರಕ್ಕಾಗಿ ದೊಣ್ಣೆ ಗಳಿಂದ ಬಡಿದಾಡಿಕೊಂಡರು. ಎಲ್ಲರಿಗೂ ಈ ಮಾವಿನ ಹುಚ್ಚು ಹಿಡಿದಿತ್ತೇನು? ಇದಕ್ಕೆಲ್ಲ ಮಾರು ಹೋಗದ ವ್ಯಕ್ತಿಗಳು ಅಬ್ಬ ಇಬ್ಬರಾದರೂ ಇದ್ದರು. ಆದರೆ ಅವರ ಮೇಲೆ ದಾರುಣ ಹಗಳಾದವು. ಇದು ಹುಚ್ಚು!

ಇದೊಂದು ಹಣ್ಣು ಅಷ್ಟೇ, ಎಲ್ಲ ಹಣ್ಣುಗಳಂತೆ ಇದೂ ಕೊಳೆಯುತ್ತೆ ಎಂದ ಝಾಂಗ್ ಹೊಂಗ್ತು ಎಂಬ ಕಲಾವಿದನನ್ನು ಜೈಲಿಗೆ ಹಾಕಲಾಯಿತು. ಟೀಕೆಯನ್ನು ಸಹಿಸದ ಪ್ರಭುತ್ವ ಇರುವ ಎಲ್ಲ ದೇಶಗಳಲ್ಲೂ ಆಗುವುದು ಇದೇ ತಾನೆ. ಇದು ಗೆಣಸಿಗಿಂತ ಬೇರೆಯಲ್ಲ ಎಂದು ಟೀಕಿಸಿದ ಒಬ್ಬ ದಂತವೈದ್ಯನನ್ನು ಸಾರ್ವಜನಿಕವಾಗಿ ಅವಮಾನಿಸಿ, ಗಲ್ಲಿಗೆ ಏರಿಸಲಾಯಿತು.

ಇದೆಲ್ಲ ಒಂದೂವರೆ ವರ್ಷ ನಡೆಯಿತು. ನಂತರ ಈ ಮಾವಿನ ಹುಚ್ಚು ನಿಧಾನವಾಗಿ ಇಳಿಯಿತು. ಸಾಂಸ್ಕೃತಿಕ ಕ್ರಾಂತಿಯ ಭ್ರಾಂತಿ ಇಳಿದಂತೆ ಈ ಭ್ರಾಂತಿಯೂ ಇಳಿಯಿತು. ಮೇಣದ ಪ್ರತಿಕೃತಿ ಗಳನ್ನು ಕರೆಂಟ್ ಇಲ್ಲದಾಗ ಉರಿಸಲಾಯಿತು. 1974ರಲ್ಲಿ ಫಿಲಿಪ್ಪೀನ್ಸ್‌ನ ಇಮೆಲ್ಡಾ ಮಾರ್ಕೋಸ್ ಚೀನಾಕ್ಕೆ ಭೇಟಿ ನೀಡಿದಾಗ ಒಂದಷ್ಟು ಮಾವಿನ ಹಣ್ಣುಗಳನ್ನು ಒಯ್ದಳು.

ಆಗ ಮಾವೋನ ಹೆಂಡತಿ ಜಿಯಾಂಗ್ ಖಿಂಗ್ ಇವುಗಳನ್ನು ಮತ್ತೆ ಕಾರ್ಮಿಕರಿಗೆ ಕಳಿಸಿ, ಹಿಂದಿ ನಂಥದೇ ಸಮೂಹ ಸನ್ನಿ ಸೃಷ್ಟಿಸಲು ಯತ್ನಿಸಿದಳು. ಆದರೆ ಮಾವೋಗೆ ಇದ್ದ ಪ್ರಭಾವಳಿ ಜಿಯಾಂಗ್‌ಗೆ ಇರಲಿಲ್ಲ. ಕಾರ್ಮಿಕರು ಆಕೆಗೆ ಥ್ಯಾಂಕ್ಸ್ ಹೇಳಿ ಹಣ್ಣುಗಳನ್ನು ತಿಂದರು. ಮರುವರ್ಷ ಮಾವೋ ಉತ್ತರಾಧಿಕಾರಿ ಘೋಷಿಸದೇ ಕಾಯಿಲೆ ಬಿದ್ದ. ಜಿಯಾಂಗ್ ‘ಮಾವಿನ ಹಾಡು’ ಎಂದು ಸಿನಿಮಾ ತಯಾರಿಸಿ ಪ್ರದರ್ಶಿಸಿ ತನ್ನ ಅಧಿಕಾರ ಸ್ಥಾಪಿಸಲು ನೋಡಿದಳು.

ಆದರೆ ಆಕೆಯನ್ನು ಕಮ್ಯುನಿಸ್ಟ್ ಪಾರ್ಟಿ ಬಂಧಿಸಿ ಜೈಲಿಗೆ ಕಳಿಸಿ ಸಿನಿಮಾವನ್ನು ಹಿಂದೆಗೆದು ಕೊಂಡು ನಾಶಪಡಿಸಿತು. ಇಂದು ಚೀನಾಗೆ ಮಾವು ಅಪರಿಚಿತವೇನಲ್ಲ. ಹೆಚ್ಚಿನ ಮಾವು ಬೆಳೆಯುವ ದೇಶಗಳಲ್ಲಿ ಭಾರತದ ನಂತರ ಚೀನಾಗೀಗ ಎರಡನೇ ಸ್ಥಾನ. ಮಾವಿನ ಕುರಿತು ಅಲ್ಲಿದ್ದ ನಿಗೂಢತೆ ಹೊರಟುಹೋಗಿದೆ. ಆದರೆ ಇತಿಹಾಸದಲ್ಲಿ ಸಾಂಸ್ಕೃತಿಕ ಕ್ರಾಂತಿಯ ಜೊತೆಗೆ ಈ ‘ಮ್ಯಾಂಗೋ ಕಲ್ಟ್’ ಸಮೂಹಸನ್ನಿ ಕೂಡ ಉಳಿದುಕೊಂಡಿದೆ. ಚೀನಾದ ಆಡಳಿತ ಇಂಥ ಮೂರ್ಖತನಗಳನ್ನೆಲ್ಲ ಮುಚ್ಚಿಹಾಕಲು ಸಾಕಷ್ಟು ಪ್ರಯತ್ನಿಸುತ್ತದೆ; ಆದರೂ ಇವೆಲ್ಲ ಕೈನುಸುಳಿ ಹೊರಗೆ ಬಂದು ಬಿಡುತ್ತದೆ.

ಇತಿಹಾಸಜ್ಞರು, ರಾಜನೀತಿಜ್ಞರು ಈ ಘಟನಾವಳಿಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಟ್ಟಿzರೆ. ದೇಶಕ್ಕೆ ದೇಶವೇ ಈ ಥರ ಮರುಳಾಗುವುದೆಂದರೇನು? ಆದರೆ ಅರ್ಥೈಸಿಕೊಳ್ಳಲು ಅಷ್ಟು ಕಷ್ಟ ವೇನೂ ಪಡಬೇಕಿಲ್ಲ. ಹಿಟ್ಲರ್‌ನಂಥ ಭ್ರಾಂತನನ್ನೇ ನಾಜಿಗಳು ಆಯ್ಕೆ ಮಾಡಲಿಲ್ಲವೇ? ಪ್ರತಿ ದೇಶದಲ್ಲೂ ಪ್ರತಿ ಕಾಲಘಟ್ಟದಲ್ಲೂ ಇಂಥ ಹಲವರು ಜನತೆಯ ಮನದ ಮೇಲೆ ಸಾಮೂಹಿಕ ಪ್ರಭುತ್ವ ಸಾಧಿಸಲು ಯತ್ನಿಸುತ್ತಾರೆ.

ಕೆಲವರು ಯಶಸ್ವಿಯಾಗುತ್ತಾರೆ, ಇನ್ನು ಹಲವರು ನಗೆಪಾಟಲಿಗೀಡಾಗುತ್ತಾರೆ ಅಷ್ಟೆ. ತಾತ್ವಿಕವಾಗಿ ಆಧುನಿಕತೆ, ವಿಜ್ಞಾನ - ತಂತ್ರಜ್ಞಾನ ಬೆಳೆದಂತೆ ಇದು ಕಡಿಮೆಯಾಗಬೇಕು; ಆದರೆ ಹಾಗಾಗುವು ದಿಲ್ಲ ಎಂಬುದನ್ನು ಹಲವು ನಿದರ್ಶನಗಳು ಸಾಬೀತುಪಡಿಸಿವೆ.

ನ್ನೂ ಒಂದು ಕುತೂಹಲದ ವಿಷಯವೂ ಇಲ್ಲೇ ಬರಲಿ. ಈ ಎಲ್ಲ ಘಟನೆಗಳೂ ನಡೆಯುವ 13 ವರ್ಷಗಳ ಮೊದಲೇ, ಅಂದರೆ 1955ರ ಭಾರತ ಕೂಡ ಚೀನಾಗೆ ಮಾವು ಕಳಿಸುವ ಮೂಲಕ ಡಿಪ್ಲೊಮಸಿಗೆ ಮುಂದಾಗಿತ್ತು. ಆಗ ಭಾರತಕ್ಕೆ ಬಂದಿದ್ದ ಚೀನಾದ ಪ್ರಧಾನಿ ಚೌ ಎನ್ ಲೈ ತಮಗೆ ನೀಡಿದ್ದ ಗಿಫ್ಟ್‌ ಗಳಿಗೆ ಪ್ರತಿಯಾಗಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕೆಲವು ಮಾವಿನ ಗಿಡಗಳನ್ನು ಚೀನಾಗೆ ಕಳಿಸಲು ಮುಂದಾಗಿದ್ದರು.

ವಿದೇಶಾಂಗ ಸಚಿವಾಲಯ ಬಹು ಕಷ್ಟದಿಂದ 8 ಮಾವಿನ ಗಿಡಗಳನ್ನು ಚೀನಾಗೆ ಕಳಿಸಿತ್ತು. ಅವು ಮುಂದೆ ಏನಾದವು ಎಂದೇ ಗೊತ್ತಾಗಲಿಲ್ಲ. ಆದರೆ 1962ರಲ್ಲಿ ಮರೆಮೋಸದ ಯುದ್ಧ ಸಾರಿದ ಚೀನಾ, ಭಾರತದ ಈ ಹಾರ್ದಿಕ ಡಿಪ್ಲೊಮಸಿಯ ಪ್ರಯತ್ನವನ್ನು ಮಟಾಶ್ ಮಾಡಿತು.