ವಿಶೇಷ ವರದಿ: ಜ್ಞಾನದೀಪ್ತಿ ಟಿ ವಿಜಯಪುರ
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಗಜಾನನ ಮಹಾಮಂಡಳ ವತಿಯಿಂದ ಅನ್ನದಾನ
ಕರೋನಾ ಮಹಾಮಾರಿ ಸಂದರ್ಭದಲ್ಲಿ ರಸ್ತೆ ಬದಿ ಬದುಕುವ ಜನರು, ಒಂದು ಹೊತ್ತಿನ ತುತ್ತಿಗೂ ಪರದಾಡುವಂತಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲ ಹೋಟೆಲ್‌ಗಳು ಬಂದ್ ಆದ ಕಾರಣ ತಮ್ಮ ಮನೆಯವರನ್ನು ಆಸ್ಪತ್ರೆಗೆ ದಾಖಲಿಸಿದ ಮನೆ ಯವರಿಗೆ, ಪರಿಚಾರಕರಿಗೆ ಹೊತ್ತಿನ ಊಟವು ಸಹ ಸಿಗುತ್ತಿಲ್ಲ.
ಇಂತಹ ಸಮಯದಲ್ಲಿ ನಗರದ ಗಜಾನನ ಮಹಾಮಂಡಳ ಉತ್ಸವ ಹಸಿದ ಹೊಟ್ಟೆಗಳನ್ನು ತುಂಬಿಸುವ ಕಾರ್ಯಮಾಡುತ್ತಿದೆ.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಗಜಾನನ ಮಹಾಮಂಡಳ ಪದಾಧಿಕಾರಿಗಳು ಕೋವಿಡ್ ಸೋಂಕಿತರ ಸಂಬಂಧಿಕರಿಗೆ ಸುರಕ್ಷಿತವಾದ ಕ್ರಮ ಅನುಸರಿಸಿ ಗುಣಮಟ್ಟದ ಆಹಾರ ಪದಾರ್ಥ ಸಿದ್ಧಪಡಿಸಿ ಉಚಿತ ವಾಗಿ ಹಂಚಿಕೆ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರತಿವರ್ಷ ಅತ್ಯಂತ ವಿಜೃಂಭನೆಯಿಂದ ಗಣೇಶೋತ್ಸವ ಆಚರಿಸುವ ಮೂಲಕ ಸೈ ಎನ್ನಿಸಿಕೊಳ್ಳುತ್ತಿದ್ದ ಗಜಾನನ ಮಹಾ ಮಂಡಳ ಈ ಬಾರಿ ನಿತ್ಯ ದಾಸೋಹ ಮಾಡುವ ಮೂಲಕ ಬಡ-ಬಗ್ಗರ ಪರಿಚಾರಕರ ಹೊಟ್ಟೆ ತುಂಬಿಸುವ ಮೂಲಕ ಉಳಿದ ಎಲ್ಲ ಮಂಡಳ, ಸಮಿತಿಗಳಿಗೆ ಮಾದರಿಯಾಗುವಂತಹ ಕಾರ್ಯ ಮಾಡುತ್ತಿದೆ.
೨೪*೭ ಸೇವೆ: ಇನ್ನು ಈ ಮಹಾಮಂಡಳದಲ್ಲಿ ಸತತ ಎರಡು ತಂಡಗಳು ಪ್ರತಿದಿನ ಕಾರ್ಯನಿರ್ವಹಿಸುತ್ತವೆ. ಸ್ವಯಂ ಸೇವಕರು ಪ್ರತಿದಿನ ಎಲ್ಲ ಆಸ್ಪತ್ರೆಗಳಿಗೆ ಹೋಗಿ ಅಗತ್ಯ ಅಂತರ ಕಾಯ್ದುಕೊಂಡು ಆಹಾರ ಪೊಟ್ಟಣಗಳನ್ನು ಪೂರೈಸುತ್ತಿದ್ದಾರೆ. ಈ ತಂಡದಲ್ಲಿ ರಾಜೇಂದ್ರ ವಾಲಿ, ಶಿವಾಜಿ ಪಾಟೀಲ, ವಿನಾಯಕ ದಹಿಂಡೆ, ಅಡಕಿ, ಸನ್ನಿಗವಿಮಠ ಇತರ ಸ್ವಯಂ ಸೇವಕರು ಈ ಕಾರ್ಯದ ಉಸ್ತುವಾರಿ ಹೊತ್ತು ರೋಗಿಗಳಿಗೆ ಸೇವೆ ಒದಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ಈ ತಂಡ ಆಯಾ ಬಡಾವಣೆಯ ನಾಗರಿಕರಿಕರಿಗೆ ಔಷಧಿ ಬೇಕಾದರೆ, ಗ್ಯಾಸ್ ಬೇಕಾದರೆ ಅಥವಾ ಇತರ ವಸ್ತುಗಳು ಬೇಕಾದರೂ ಸಹ ಅವರ ನೆರವಿಗೆ ಧಾವಿಸುತ್ತಿದೆ.
***
ಸಂಕಷ್ಟದ ಸಮಯದಲ್ಲಿ ನಮ್ಮದೊಂದು ಅಳಿಲು ಸೇವೆ ಮಾತ್ರ. ದಿನ ನಾವು ಅವಶ್ಯವಿರುವವರಿಗೆ ಆಹಾರ ಪೊಟ್ಟಣಗಳನ್ನು ವಿತರಿಸುತ್ತೇವೆ. ಸ್ವತಃ ಮುಂದೆ ನಿಂತು ನಾನು ಎಲ್ಲ ಕಾರ್ಯವನ್ನು ಪರಿಶೀಲಿಸುತ್ತೇನೆ. ಕಡ್ಡಾಯವಾಗಿ ಸುರಕ್ಷತೆಯನ್ನು ನೋಡಿ, ಎಲ್ಲ ಕೆಲಸವನ್ನು ಮಾಡಲಾಗುತ್ತದೆ. ನಮ್ಮ ಈ ಕಾರ್ಯದಿಂದ ಹಸಿದ ಹೊಟ್ಟೆಗಳು ತುಂಬಿದರೆ ಸಾಕು ನಮಗೆ ಸಾರ್ಥಕತೆ ಸಲ್ಲುತ್ತದೆ.
– ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾಜಿ ಸಚಿವ ಹಾಗೂ
ಮಂಡಳದ ಮಾರ್ಗದರ್ಶಕ