Landslide: ಭಾರೀ ಭೂಕುಸಿತ- 67ಜನರ ಜೀವ ಉಳಿಸಿದ ಶ್ವಾನ! ಏನಿದು ಘಟನೆ?
Dog alerted: ಒಂದು ಮೂಕ ಪ್ರಾಣಿ ಪ್ರವಾಹಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳಬೇಕಿದ್ದ ಜನರನ್ನು ರಕ್ಷಿಸಿ, ದೊಡ್ಡ ಹಾನಿಯನ್ನು ತಪ್ಪಿಸಿದ್ದು, 67 ಜನರ ಜೀವ ಉಳಿಸಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಧರಂಪುರ್ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಬಂದ ಪ್ರವಾಹದಿಂದ ನಾಯಿಯೊಂದು ನೂರಾರು ಜನರ ಪ್ರಾಣ ಉಳಿಸಿದ್ದು, ನಾಯಿಯ ಸಮಯಪ್ರಜ್ಞೆಗೆ ಜನ ಬೆರಗಾಗಿದ್ದಾರೆ.


ಮಂಡಿ: ಹಿಮಾಚಲ ಪ್ರದೇಶದಾದ್ಯಂತ (Himachal Pradesh) ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಮಂಡಿ (Mandi) ಜಿಲ್ಲೆಯ ಸಿಯಾಥಿ (Siyathi) ಗ್ರಾಮದಲ್ಲಿ ಸಾಕು ನಾಯಿಯೊಂದು ಬೊಗಳಿದ್ದರಿಂದ 67 ಜನರ ಜೀವ ಉಳಿದಿರುವ ಅಪರೂಪದ ಘಟನೆ ನಡೆದಿದೆ. ಜೂನ್ 30ರ ಮಧ್ಯರಾತ್ರಿ, ಧರಂಪುರ ಪ್ರದೇಶದ ಸಿಯಾಥಿ ಗ್ರಾಮದಲ್ಲಿ ಭಾರೀ ಮಳೆ ಸುರಿಯುತ್ತಿತ್ತು. ಗ್ರಾಮದ ನರೇಂದ್ರ ಎಂಬುವವರ ಮನೆಯ ಎರಡನೇ ಮಹಡಿಯಲ್ಲಿ ಮಲಗಿದ್ದ ಸಾಕು ನಾಯಿ ಇದ್ದಕ್ಕಿದ್ದಂತೆ ಜೋರಾಗಿ ಬೊಗಳಲು ಆರಂಭಿಸಿದೆ. ರಾತ್ರಿಯ ವೇಳೆ ಇಷ್ಟು ತೀವ್ರವಾಗಿ ಬೊಗಳುತ್ತಿರುವುದನ್ನು ಗಮನಿಸಿದ ನರೇಂದ್ರ, ಆಶ್ಚರ್ಯದಿಂದ ಎಚ್ಚರಗೊಂಡು ನಾಯಿ ಇರುವ ಜಾಗಕ್ಕೆ ತೆರಳಿದ್ದಾರೆ. ಅಲ್ಲಿ ಮನೆಯ ಗೋಡೆಯಲ್ಲಿ ದೊಡ್ಡ ಬಿರುಕು ಕಾಣಿಸಿದೆ.
ಕೆಲವೇ ಕ್ಷಣಗಳಲ್ಲಿ ಆ ಬಿರುಕಿನ ಮೂಲಕ ನೀರು ಮನೆಯೊಳಗೆ ಹರಿಯಲು ಆರಂಭಿಸಿದ್ದು, ನೀರು ಮನೆಗೆ ನುಗ್ಗುತ್ತಿರುವುದನ್ನು ಗಮನಿಸಿದ್ದಾರೆ. ಪ್ರವಾಹದ ಮುನ್ಸೂಚ್ಚನೆ ಅರಿತು ಎಚ್ಚೆತ್ತುಕೊಂಡ ನರೇಂದ್ರ ಅವರು, ಕೂಡಲೇ ಕೆಳಗಿನ ಮಹಡಿಯಲ್ಲಿ ಮಲಗಿದ್ದ ಕುಟುಂಬದವರನ್ನು ಎಬ್ಬಿಸಿ ಹೊರಬರಲು ಸೂಚಿಸಿದ್ದಾರೆ. ಜೊತೆಗೆ, ಸಮೀಪದಲ್ಲೆ ಇದ್ದ ಅಕ್ಕಪಕ್ಕದ ಮನೆಯವರನ್ನೂ ಎಬ್ಬಿಸಿ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಎಲ್ಲರೂ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದ್ದಾರೆ. ಈ ವೇಳೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಗ್ರಾಮಸ್ಥರು ಎಲ್ಲವನ್ನೂ ಬಿಟ್ಟು ಸುರಕ್ಷಿತ ಪ್ರದೇಶಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಬಾಡಿಗೆ ವಿಚಾರಕ್ಕೆ ಆಟೋ ಡ್ರೈವರ್ ಫುಲ್ ಕಿರಿಕ್! ಏನಿದು ವೈರಲ್ ಪೋಸ್ಟ್?
ಕೆಲವೇ ಕ್ಷಣಗಳಲ್ಲಿ, ಗ್ರಾಮಸ್ಥರ ಮನೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು,, ಅಲ್ಲೊಂದು ಇಲ್ಲೊಂದು ಎಂಬಂತೆ ಕಟ್ಟಡದ ಅವಶೇಷಗಳು ಮಾತ್ರ ಉಳಿದಿವೆ. ಒಟ್ಟಿನಲ್ಲಿ ನಾಯಿ ಸರಿಯಾದ ಸಮಯದಲ್ಲಿ ಬೊಗಳಿದ್ದರಿಂದ ಸುಮಾರು 67 ಮಂದಿ ಕೊನೆ ಕ್ಷಣದಲ್ಲಿ ಸಾವಿನಿಂದ ಪಾರಾಗಿದ್ದಾರೆ.
ಈ ದುರಂತದ ನಂತರ, ಸಮೀಪದ ಗ್ರಾಮಗಳ ಜನರು ಸಹಾಯಕ್ಕೆ ಧಾವಿಸಿದ್ದಾರೆ. ರಾಜ್ಯ ಸರ್ಕಾರವು ಪೀಡಿತ ಕುಟುಂಬಗಳಿಗೆ ತಕ್ಷಣದ ಪರಿಹಾರವಾಗಿ 10,000 ರೂ. ಘೋಷಿಸಿದೆ. ಈ ಘಟನೆಯು ಗ್ರಾಮಸ್ಥರಿಗೆ ಆಘಾತವನ್ನುಂಟು ಮಾಡಿದ್ದರೂ, ಸಾಕು ನಾಯಿಯ ಎಚ್ಚರಿಕೆಯಿಂದ ದೊಡ್ಡ ದುರಂತವೊಂದು ತಪ್ಪಿದೆ. ಸ್ಥಳೀಯರು ನಾಯಿಯನ್ನು ಶ್ಲಾಘಿಸಿದ್ದು, ಈ ಘಟನೆಯಿಂದ ಪ್ರಾಣಿಗಳ ಸಹಜ ಜಾಗೃತಿಯ ಮಹತ್ವವ ಎಲ್ಲರಿಗೂ ಮನದಟ್ಟಾಗಿದೆ.