ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral News: ಶಾಲಾ ಬಸ್‍ಗೆ ಹೊತ್ತಿಕೊಂಡ ಬೆಂಕಿ: 15 ವಿದ್ಯಾರ್ಥಿಗಳ ಪಾಲಿಗೆ ಹೀರೋ ಆದ ಚಾಲಕ

ಅಮೆರಿಕದಲ್ಲಿ 15 ವಿದ್ಯಾರ್ಥಿಗಳನ್ನೊಳಗೊಂಡ ಶಾಲಾ ಬಸ್‍ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಈ ವಿಚಾರ ತಿಳಿದ ಕೂಡಲೇ ಚಾಲಕ ವಿದ್ಯಾರ್ಥಿಗಳನ್ನು ಬಸ್‍ನಿಂದ ಸ್ಥಳಾಂತರಿಸಿದ್ದಾನೆ. ಇದರಿಂದ ಯಾವುದೇ ಹಾನಿ ಸಂಭವಿಸಿಲ್ಲ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಬಸ್‍ ಚಾಲಕನ ಸಮಯೋಚಿತ ಕ್ರಮಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಾಲಾ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ; ಕೊನೆಗೆ ಆಗಿದ್ದೇನು?

Profile pavithra Mar 1, 2025 1:32 PM

ವಾಷಿಂಗ್ಟನ್‌: ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಶಾಲಾ ಬಸ್‍ನ ಬೆಂಕಿ ಅನಾಹುತದಲ್ಲಿ ಬಸ್ ಚಾಲಕನ ಸಮಯೋಚಿತ ಕ್ರಮದಿಂದ 15 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಾಲಾ ಬಸ್‍ನ ಹಿಂಭಾಗದ ಟೈರ್‌ಗೆ ಅಚಾನಕ್‍ ಆಗಿ ಬೆಂಕಿ ಹೊತ್ತಿಕೊಂಡಿತ್ತು. ಈ ವಿಚಾರ ಚಾಲಕನಿಗೆ ತಿಳಿದ ಕೂಡಲೇ ಆತ ಬಸ್ ನಿಲ್ಲಿಸಿ, 15 ವಿದ್ಯಾರ್ಥಿಗಳನ್ನು ಕೂಡಲೇ ಸ್ಥಳಾಂತರಿಸಿದ್ದಾನೆ. ಇದರಿಂದ ಯಾವುದೇ ದುರಂತ ಸಂಭವಿಸಿಲ್ಲ. ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ಓಹಿಯೋ ಬಸ್ ಚಾಲಕ ಈ ಧೈರ್ಯ ಮತ್ತು ಸಾಹಸ ಪ್ರದರ್ಶಿಸಿದ್ದಕ್ಕಾಗಿ ಇದೀಗ ಆತ ಸೋಶಿಯಲ್ ಮೀಡಿಯಾದಲ್ಲಿ ಹೀರೋ ಆಗಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ನಂತರ, ಕ್ಲೀವ್ಲ್ಯಾಂಡ್ ಹೈಟ್ಸ್ ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿತು. ಈ ಘಟನೆಯ ಹಲವು ಫೋಟೊಗಳನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆದ ಫೋಟೊಗಳಲ್ಲಿ ಬಸ್‌ನಲ್ಲಿ ಬೆಂಕಿ ಜ್ವಾಲೆಗಳು ಉರಿಯುವುದು ಕಂಡುಬಂದಿದೆ. ಮಕ್ಕಳನ್ನು ಮತ್ತೊಂದು ವಾಹನದ ಮೂಲಕ ಶಾಲೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಅಗ್ನಿಶಾಮಕ ದಳದವರು ಮಾಹಿತಿ ನೀಡಿದ್ದಾರೆ.



ಈ ಘಟನೆಯ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೇಸ್‍ಬುಕ್‍ನ ಕಾಮೆಂಟ್ ವಿಭಾಗದಲ್ಲಿ ಹಲವರು ಚಾಲಕನ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಜೀವವನ್ನು ಉಳಿಸಿದ ಬಸ್ ಚಾಲಕನನ್ನು ಹಲವರು ಹೊಗಳಿದ್ದಾರೆ. ಇತರರು ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ನಡುವೆ, ಕ್ಲೀವ್ಲ್ಯಾಂಡ್ ಹೈಟ್ಸ್-ಯೂನಿವರ್ಸಿಟಿ ಹೈಟ್ಸ್ ಸಿಟಿ ಸ್ಕೂಲ್ ಜಿಲ್ಲಾ ಅಧೀಕ್ಷಕ ಲಿಜ್ ಕಿರ್ಬಿ ಈ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗದಿದ್ದಕ್ಕೆ ಮತ್ತು ವಿದ್ಯಾರ್ಥಿಗಳನ್ನು ಕಾಪಾಡಿದ ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಶಾಲಾ ಮಕ್ಕಳಿದ್ದ ಬಸ್‌ ಪಲ್ಟಿ... ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ - ವಿಡಿಯೊ ಇಲ್ಲಿದೆ

ಬಸ್ ಅಪಘಾತ‌; ವಿದ್ಯಾರ್ಥಿನಿ ಬಲಿ

ಚೆನ್ನೈ: ತಮಿಳುನಾಡಿನ ಕುರುಮತ್ತೂರು ಪಂಚಾಯತ್‌ನ ಚಿನ್ಮಯ ವಿದ್ಯಾಲಯಕ್ಕೆ ಸೇರಿದ ಬಸ್ ಅಪಘಾತಕ್ಕೀಡಾಗಿದೆ. ಶ್ರೀಕಂಠಪುರಂನ ವಳಕ್ಕೈ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. ಈ ಬಸ್‌ನಲ್ಲಿ 15 ವಿದ್ಯಾರ್ಥಿಗಳಿದ್ದರು ಎಂದು ತಿಳಿದು ಬಂದಿದೆ. ಬಸ್ಸು ಹೆದ್ದಾರಿಗೆ ಹೋಗಲು ಇಳಿಜಾರಿನಲ್ಲಿ ಚಲಿಸುತ್ತಿದ್ದಾಗ ನಾಲ್ಕೈದು ಸುತ್ತು ಪಲ್ಟಿಯಾಗಿದೆ. ಬಸ್ಸು ಶಾಲೆ ಮುಗಿದ ನಂತರ ವಿದ್ಯಾರ್ಥಿಗಳನ್ನು ಮನೆಗೆ ಬಿಡಲು ಕರೆದೊಯ್ಯುವಾಗ ಈ ಘಟನೆ ಸಂಭವಿಸಿದ್ದು, ವಿದ್ಯಾರ್ಥಿನಿ ಸ್ಥಳದಲ್ಲೇ ಬಲಿಯಾಗಿದ್ದಾಳೆ. ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿನಿಯನ್ನು ನೇದ್ಯ ಎಸ್. ರಾಜೇಶ್ (11) ಗುರುತಿಸಲಾಗಿದ್ದು, ಬಸ್‌ನ ಹೊರಕ್ಕೆ ಬಿದ್ದು ಚಕ್ರದ ಅಡಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಪೊಲೀಸ್ ವರದಿಯ ಪ್ರಕಾರ, ಶಾಲಾ ಬಸ್ ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಲೆ ಹಾಗೂ ಚಾಲಕನ ವಿರುದ್ಧ ದೂರು ದಾಖಲಾಗಿದೆ.