ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಕನಸುಗಾರನ ನಾಗರಹಾವು, ಕತೆಗಾರನಿಗೆ ಕೇರೆಹಾವು..!

ಕಳೆದ ಸಂಚಿಕೆಯಲ್ಲಿ, ‘ಕನ್ನಡನಾಡಿನ ವೀರ ರಮಣಿಯ’, ‘ಸಂಗಮ ಸಂಗಮ, ಅನು ರಾಗ ಸಂಗ ಸಂಗಮ’ ಮತ್ತು ‘ಬಾರೇ ಬಾರೇ, ಚೆಂದದ ಚೆಲುವಿನ ತಾರೆ’ ಹಾಡುಗಳ ಆಸುಪಾಸಿನ ಕಿರು ಸಂಗತಿಗಳನ್ನು ಓದಿದಿರಿ. ಹೇಳಲಿಕ್ಕೆ ಇನ್ನೂ ಸಾಕಷ್ಟಿದೆ, ಆದರೆ ಜಾಗದ ಸಮಸ್ಯೆ. ಮುಂದೆಂದಾ ದರೂ ಮಿಕ್ಕ ಸಂಗತಿಗಳ ಕಡೆಗೆ ಕಣ್ಣುಹಾಯಿ ಸೋಣ. ಅಲ್ಲಿಯವರೆಗೆ ‘ನಾಗರಹಾವು’ ಬಿಲ ವನ್ನು ಸೇರಿಕೊಂಡಿರಲಿ. ಈ ಸಲದ ಬರಹದೊಂದಿಗೆ ‘ನಾಗರಹಾವು’ ಸಂಬಂಧಿತ ಕಂತುಗಳು (ತಾತ್ಕಾಲಿಕ ವಾಗಿ) ಕೊನೆಗೊಳ್ಳುತ್ತವೆ.

ಕನಸುಗಾರನ ನಾಗರಹಾವು, ಕತೆಗಾರನಿಗೆ ಕೇರೆಹಾವು..!

ಹಿರಿಯ ಉಪಸಂಪಾದಕ ಹಾಗೂ ಅಂಕಣಕಾರ ಯಗಟಿ ರಘು ನಾಡಿಗ್

Profile Ashok Nayak Mar 30, 2025 7:19 AM

ರಸದೌತಣ

naadigru@gmail.com

ನಾಗರಹಾವು’ ಚಿತ್ರದ ಮಿಕ್ಕ ಗೀತೆಗಳದ್ದೇ ಒಂದು ತೂಕವಾದರೆ, ‘ಬಾರೇ ಬಾರೇ, ಚೆಂದದ ಚೆಲುವಿನ ತಾರೆ’ ಗೀತೆಯದ್ದೇ ಮತ್ತೊಂದು ತೂಕ. ಕಾರಣ, ರೊಮ್ಯಾಂಟಿಕ್ ಭಾವ ಮತ್ತು ತಾಂತ್ರಿಕತೆ ಎರಡೂ ಹದವಾಗಿ ಮಿಶ್ರಣಗೊಂಡು ಬೆಳ್ಳಿತೆರೆಯ ಮೇಲೆ ಬಿಂಬಿತವಾಗಿದ್ದರ ನಿದರ್ಶನವಿದು (ಕೆಲವು ತಿಂಗಳ ಹಿಂದೆ ಪುಟ್ಟಣ್ಣನವರ ಬಗ್ಗೆ ಬರೆದಿದ್ದ ಪ್ರತ್ಯೇಕ ಲೇಖನ ವೊಂದರಲ್ಲಿ ಈ ಹಾಡಿನ ಕುರಿತಾಗಿ ಪ್ರಾಸಂಗಿಕವಾಗಿ ಉಲ್ಲೇಖಿಸಿದ್ದೆ; ಆದರೆ ‘ನಾಗರಹಾವು’ ಬಗೆಗೇ ನಿರ್ದಿಷ್ಟವಾಗಿ ಇಲ್ಲಿ ಬರೆಯಬೇಕಾಗಿರುವುದರಿಂದ ಈ ಹಾಡಿನ ವಿಶೇಷತೆಯನ್ನು ‘ಬೈ-ಪಾಸ್’ ಮಾಡಿಕೊಂಡು ಹೋಗಲಾಗದು. ಹೀಗಾಗಿ, ಆ ಹಳೆಯ ಲೇಖನವನ್ನು ಓದಿದ ವರು ಇಲ್ಲಿ ಉಲ್ಲೇಖಿಸಲ್ಪಟ್ಟಿರುವ ಆ ವಿಶೇಷತೆ ಯನ್ನು ‘ಪುನರಾವರ್ತನೆ’ ಎಂದು ಭಾವಿಸ ಬಾರದಾಗಿ ವಿನಂತಿ!). ಅದೆಂದರೆ, ಮಾಮೂಲಿ ವೇಗದಲ್ಲಿ ಸಾಗುವ ದೃಶ್ಯ ಮತ್ತು ಸ್ಲೋ ಮೋಶನ್ ದೃಶ್ಯಗಳೆರಡನ್ನೂ ಒಂದೇ ‘ಫ್ರೇಮ್’ನಲ್ಲಿ ಬೆಸೆದಿದ್ದ ಪುಟ್ಟಣ್ಣನವರ ಚಾಕ ಚಕ್ಯತೆ. ಈ ಚಿತ್ರಣದಲ್ಲಿ ರಾಮಾಚಾರಿಯು ಹಾಡಿನ ಸಾಲು ಗಳನ್ನು ಗುನುಗುತ್ತಾ ವಾಡಿಕೆ ಯ ವೇಗದಲ್ಲಿ ಹೆಜ್ಜೆ ಹಾಕಿಕೊಂಡು ಬರುತ್ತಿದ್ದರೆ, ಅಲಮೇಲು ಪ್ರಣಯದ ಗುಂಗಲ್ಲಿ, ಸ್ಲೋಮೋಶನ್‌ನಲ್ಲಿ ತೇಲಿಕೊಂಡು ಬರುತ್ತಾಳೆ. ಒಟ್ಟು ಹಾಡಿನ ಕೆಲ ನಿಮಿಷಗಳು ಮಾತ್ರ ವೇ ವಾಡಿಕೆಯ ಚಲನೆಯ ಲಯದಲ್ಲಿದ್ದು, ಮಿಕ್ಕ ಭಾಗವೆಲ್ಲವೂ ಸ್ಲೋಮೋಶನ್‌ ನಲ್ಲಿ ಅಥವಾ ವಾಡಿಕೆಯ ಲಯ ಮತ್ತು ಸ್ಲೋಮೋಶನ್ ಲಯದ ಮಿಶ್ರಣದೊಂದಿಗೆ ಚಿತ್ರೀಕರಿಸ ಲ್ಪಟ್ಟಿರುವುದು ಇಲ್ಲಿನ ವಿಶೇಷ.

ಹಾಗೇ ಸುಮ್ಮನೆ ಕಲ್ಪಿಸಿಕೊಳ್ಳಿ. ಒಂದೆರಡು ಸಾಲಿನ ಮಾತು/ಹಾಡಿನ ಚಿತ್ರೀಕರಣದ ವೇಳೆ ಯ ಸಾಕಷ್ಟು ‘ಟೇಕ್-ರೀಟೇಕ್’ ಗಳಾಗುವ ಸಂಭವವಿರುವಾಗ, ಹೀಗೆ ರೊಮ್ಯಾಂಟಿಕ್ ಭಾವ ಮತ್ತು ತಾಂತ್ರಿಕತೆಯನ್ನು ಒಟ್ಟಾಗಿ ಬೆಸೆಯುವಾಗ ಮೂಡಿ ಬರಬೇಕಾದ ಪರಿಪೂರ್ಣತೆ ಯನ್ನು ಸಾಧಿಸಲು ಪುಟ್ಟಣ್ಣ ಆಯಾ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅದಿನ್ನೆಷ್ಟು ಕಾಟ ಕೊಟ್ಟಿರಬೇಕು ಅಂತ?! ಈಗ ಬಿಡಿ, ಸ್ಲೋಮೋಶನ್ ತಾಂತ್ರಿಕತೆಯ ಸಾಕಷ್ಟು ದೃಶ್ಯಗಳನ್ನು ನೋಡಿ ಬಿಟ್ಟಿದ್ದೇವೆ; ಆದರೆ ಈ ತಾಂತ್ರಿಕತೆಯು ಇನ್ನೂ ಅಂಬೆಗಾಲು ಇಡುತ್ತಿರುವಾಗಲೇ ಅದನ್ನು ಚೆನ್ನಾಗಿ ದುಡಿಸಿ ಕೊಂಡಿದ್ದು ಪುಟ್ಟಣ್ಣನವರ ಹಿರಿಮೆ.

Screenshot_4 ok

‘ತನಗೆ ಆಶ್ರಯವಿತ್ತ ಬಂಗಾರದ ಕಿಮ್ಮತ್ತೇನು ಎಂಬುದನ್ನು ವಜ್ರದ ಹರಳು ಮಾತ್ರವೇ ಹೇಳಬಲ್ಲದು’ ಎಂಬುದೊಂದು ಜಾಣನುಡಿ ನಮ್ಮ ನಡುವೆ ಚಾಲ್ತಿಯಲ್ಲಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ನಡೆದುಕೊಂಡವರು ಅಂದಿನ ಸೋವಿಯತ್ ರಷ್ಯಾ ಒಕ್ಕೂಟದ ಖ್ಯಾತ ಚಲನಚಿತ್ರ ನಿರ್ದೇಶಕ ಅಲಿ ಖಮರೇವ್. ಅವರು ಭಾರತ ಪ್ರವಾಸವನ್ನು ಕೈಗೊಂಡಿದ್ದರು, ಅಷ್ಟು ಹೊತ್ತಿಗಾಗಲೇ ‘ನಾಗರಹಾವು’ ಬಿಡುಗಡೆಯಾಗಿ ಭರ್ಜರಿ ಹೆಸರು ಮಾಡಿತ್ತು.

ಇದನ್ನೂ ಓದಿ: Yagati Raghu Naadig Column: ಛಾಯಾಗ್ರಾಹಕರಿಗೆ ಅರಿವಾಯ್ತು ʼಛಾಯೆʼಯ ಮಹತ್ವ !

ಇದು ಅಲಿ ಖಮರೇವ್ ಅವರ ಕಿವಿಗೂ ಬಿದ್ದು, ವೀಕ್ಷಣೆಗೆಂದು ಬೆಂಗಳೂರಿಗೆ ಧಾವಿಸಿ ಬಂದರು (ಇದಕ್ಕೂ ಸಾಕಷ್ಟು ವರ್ಷ ಮುಂಚೆ, ಬೈಲೋರಷ್ಯಾದಲ್ಲಿ (ಇಂದಿನ ಬೆಲಾರಸ್‌ ನಲ್ಲಿ) ನಡೆದಿದ್ದ ಚಲನಚಿತ್ರೋತ್ಸವದಲ್ಲಿ ಪುಟ್ಟಣ್ಣನವರ ‘ಗೆಜ್ಜೆಪೂಜೆ’ ಪ್ರದರ್ಶನಗೊಂಡು ಸಾಕಷ್ಟು ಮೆಚ್ಚುಗೆ ಪಡೆದಿತ್ತು. ಹೀಗಾಗಿ ‘ಆವಾರಾ’ ಮತ್ತಿತರ ಹಿಂದಿ ಚಲನಚಿತ್ರಗಳ ಮೂಲಕ ರಾಜ್ ಕಪೂರ್ ಖ್ಯಾತರಾದ ಥರದ ರಷ್ಯಾ ಮತ್ತು ಆಸುಪಾಸಿನ ಭಾಗದಲ್ಲಿ ಸಾಕಷ್ಟು ಖ್ಯಾತರಾಗಿದ್ದರು ಪುಟ್ಟಣ್ಣ. ಆದರೆ ಈ ವಿಷಯ ನಮ್ಮಲ್ಲಿ ಕೆಲವರ ಗಮನಕ್ಕೆ ಬಂದಿದ್ದು ಕಮ್ಮಿ!). ಪಟ್ಟಾಗಿ ಕೂತು ಚಿತ್ರವನ್ನು ವೀಕ್ಷಿಸಿದ ಖಮರೇವ್, ‘ಬಾರೇ ಬಾರೇ.. ’ ಹಾಡಿನಲ್ಲಿ ಮೂಡಿರುವ ರೊಮ್ಯಾಂಟಿಕ್ ಭಾವ, ಸ್ಲೋಮೋಶನ್ ತಂತ್ರವನ್ನು ಬಳಸಿರುವ ಪರಿ, ವಿಭಿನ್ನ ವೇಗದ ಚಿತ್ರಿಕೆಗಳನ್ನು ಒಂದೇ ಫ್ರೇಮ್‌ನಲ್ಲಿ ಬೆಸೆದಿರುವ ಪುಟ್ಟಣ್ಣನವರ ಚಾಕಚಕ್ಯತೆ ಕಂಡು “ಇದು ನಿಜಕ್ಕೂ ಅದ್ಭುತ, ಅಚ್ಚರಿದಾಯಕ" ಎಂದು ಉದ್ಗರಿಸಿದ್ದರ ಜತೆಗೆ, ವಯಸ್ಸಿನಲ್ಲಿ ಚಿಕ್ಕವರಾಗಿದ್ದರೂ ಪುಟ್ಟಣ್ಣ ನವರಲ್ಲಿ ಅಡಗಿದ್ದ ಕಲಾಸರಸ್ವತಿ ಯನ್ನು ಕಂಡು ಅವರಿಗೆ ತಲೆಬಾಗಿದರು. ಕಾರಣ, ‘ಪುಟ್ಟಣ್ಣ’ ಎಂಬ ಚಿನ್ನದ ಕಿಮ್ಮತ್ತೇನು ಎಂಬುದು ‘ಖಮರೇವ್’ ಎಂಬ ಆ ವಜ್ರದ ಹರಳಿಗೆ ಗೊತ್ತಿತ್ತು! ಪುಟ್ಟಣ್ಣನವರೂ ಅಷ್ಟೇ, ಸಾಕ್ಷಾತ್ ವಸಿಷ್ಠ ಮಹರ್ಷಿಗಳಿಂದಲೇ ‘ಬ್ರಹ್ಮರ್ಷಿ’ ಎಂದು ಕರೆಸಿಕೊಂಡಾಗ ಮಹರ್ಷಿ ವಿಶ್ವಾಮಿತ್ರರಿಗೆ ಆಗಿದ್ದಿರಬಹುದಾದ ಪುಳಕ ಮತ್ತು ಧನ್ಯತಾ ಭಾವವನ್ನು ಅನುಭವಿಸಿ ಬೀಗಿದರು!

ಪುಟ್ಟಣ್ಣನವರ ಖುಷಿಯ ಪರಂಪರೆ ಮುಂದುವರಿಯಲು ಮತ್ತಷ್ಟು ಕಾರಣಗಳಿದ್ದವು. ತಾವು ಸಂಕಲ್ಪಿಸಿ ತೊಡೆ ತಟ್ಟಿದ್ದಕ್ಕೆ ಸಾಬೀತು ಎಂಬಂತೆ, ಕಲ್ಪನಾರಿಗೆ ಪರ್ಯಾಯವಾಗಿ ಆರತಿ ಎಂಬ ನಾಯಕಿಯನ್ನು ಅವರು ಈ ಚಿತ್ರದಲ್ಲಿ ಕಡೆದು ಶಿಲ್ಪವಾಗಿಸಿದ್ದರು, ಒನಕೆ ಓಬವ್ವನ ಪಾತ್ರಕ್ಕೆ ನಿರಾಕರಿಸಿದ ಕಲ್ಪನಾರಿಗೆ “ನೀವಿಲ್ಲದೆಯೂ ಚಿತ್ರವನ್ನು ಯಶಸ್ವಿ ಯಾಗಿಸಬ" ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದರು. ‘ನಾಗರಹಾವು’ ರಾಜ್ಯ ದೆಡೆ ಭರ್ಜರಿ ಪ್ರದರ್ಶನ ಕಂಡಿದ್ದರ ಜತೆಗೆ, ‘ಬೆಂಗಳೂರಿನ 3 ಚಿತ್ರ ಮಂದಿರಗಳಲ್ಲಿ ಏಕ ಕಾಲಕ್ಕೆ ಶತದಿನೋತ್ಸವ ಆಚರಿಸಿದ ಮೊಟ್ಟಮೊದಲ ಕನ್ನಡ ಚಿತ್ರ’ ಎಂಬ ದಾಖಲೆ ಯನ್ನೂ ಬರೆಯಿತು, ಕ್ರಮೇಣ ವಿವಿಧೆಡೆ ರಜತೋತ್ಸವಕ್ಕೂ ಸಾಕ್ಷಿಯಾಯಿತು. 1972-73ರಲ್ಲಿ ‘ದ್ವಿತೀಯ ಅತ್ಯುತ್ತಮ ಚಿತ್ರ’ ರಾಜ್ಯ ಪ್ರಶಸ್ತಿಯನ್ನು ದಕ್ಕಿಸಿಕೊಂಡಿದ್ದರ ಜತೆಗೆ, ಅತ್ಯುತ್ತಮ ಚಿತ್ರಕಥೆ (ಪುಟ್ಟಣ್ಣ), ಅತ್ಯುತ್ತಮ ನಟ (ವಿಷ್ಣುವರ್ಧನ್), ಅತ್ಯುತ್ತಮ ನಟಿ (ಆರತಿ), ಅತ್ಯುತ್ತಮ ಪೋಷಕ ನಟ (ಕೆ.ಎಸ್.ಅಶ್ವಥ್), ಅತ್ಯುತ್ತಮ ಕಥಾ ಲೇಖಕ (ತರಾಸು), ಅತ್ಯುತ್ತಮ ಸಂಭಾಷಣೆಕಾರ (ಚಿ.ಉದಯಶಂಕರ್) ವಿಭಾಗಗಳಲ್ಲೂ ಪ್ರಶಸ್ತಿ ಗಳನ್ನು ಲೂಟಿ ಹೊಡೆಯಿತು. ಸಾಲದೆಂಬಂತೆ, ದಕ್ಷಿಣ ಭಾರತದ ಚಲನಚಿತ್ರ ನಿರ್ದೇಶಕರ ಸಂಘ ವು ‘1972ರ ಶ್ರೇಷ್ಠ ನಿರ್ದೇಶಕ’ ಎಂಬ ಪ್ರಶಸ್ತಿಯ ಕಿರೀಟವನ್ನು ಪುಟ್ಟಣ್ಣನವರ ಮುಡಿ ಗೇರಿಸಿತು. ‘ನಾಗರ ಹಾವು’ ಚಿತ್ರವನ್ನು ರಿಷಿಕಪೂರ್, ನೀತೂ ಸಿಂಗ್, ಮೌಸಮಿ ಚಟರ್ಜಿ, ಪ್ರಾಣ್ ಮುಂತಾ ದವರ ಮುಖ್ಯ ತಾರಾಗಣದಲ್ಲಿ ‘ಜಹ್ರೀಲಾ ಇನ್ಸಾನ್’ ಎಂಬ ಹೆಸರಿನಲ್ಲಿ ಹಿಂದಿಗೆ ರಿಮೇಕ್ ಮಾಡುವ ಬಗ್ಗೆಯೂ ಬಾಲಿವುಡ್‌ನ ನಿರ್ಮಾತೃಗಳೊಂದಿಗೆ ಆರಂಭಿಕ ಮಾತುಕತೆಗಳಾದವು. ಒಟ್ಟಿನಲ್ಲಿ, ಭಾರತದಾದ್ಯಂತ ತನ್ನದೇ ಆದ ರೀತಿಯಲ್ಲಿ ಹೆಡೆಯಾ ಡಿಸಿಬಿಟ್ಟಿತ್ತು ‘ನಾಗರ ಹಾವು’!

ಈ ಮೆಚ್ಚುಗೆಗಳ ಮಹಾಪೂರದ ನಡುವೆಯೇ ಒಂದು ‘ಅಪಸ್ವರ’ದ ದನಿ ತೇಲಿ ಬಂತು. ಅದನ್ನು ಹೊಮ್ಮಿಸಿದ್ದು ಚಿತ್ರದ ಮೂಲ ಕಥೆಗಾರ ತರಾಸು! ಪುಟ್ಟಣ್ಣನವರೂ ಪಾಲ್ಗೊಂ ಡಿದ್ದ ಕಾರ್ಯಕ್ರಮವೊಂದರಲ್ಲಿ ತರಾಸು ಮಾತ ನಾಡುತ್ತಾ, “ನಾನು ಬರೆದದ್ದು ‘ನಾಗರ ಹಾವು’, ಆದರೆ ಈಗ ತೆರೆಯ ಮೇಲೆ ಕಾಣಿಸಿಕೊಂಡಿ ರುವುದು ‘ಕೇರೆಹಾವು’; ನಿರ್ದೇ ಶಕ ಪುಟ್ಟಣ್ಣರಿಂದ ಸೃಷ್ಟಿಯಾಗಿರುವುದು ಚಿತ್ರಕಥೆಯಲ್ಲ, ಅದು ಚಿತ್ರವಧೆ" ಎಂದು ಬಿಟ್ಟರು! ಸಾಹಿತಿಯೊಬ್ಬರು ತಮ್ಮ ಬರಹಗಾರಿಕೆಯ ಮಾಧ್ಯಮ ದಲ್ಲಿ ಅನುಸರಿಸುವ ಶೈಲಿಯೇ ಬೇರೆ, ದೃಶ್ಯಮಾಧ್ಯಮದ ವ್ಯಾಕರಣವೇ ಬೇರೆ. ಬರಹದ ರೂಪದಲ್ಲಿದ್ದ ವಿಷಯವು ಬೆಳ್ಳಿ ತೆರೆಯ ಮೇಲೆ ಬಿಂಬಿತವಾದಾಗ ಮೂಲಸತ್ವವನ್ನು ಕಳೆದುಕೊಂಡು ರೆಕ್ಕೆಪುಕ್ಕಗಳೇ ವಿಜೃಂಭಿಸಿದ್ದರೆ ಮೂಲ ಕಥೆಗಾರರು ಹೀಗೊಂದು ನೋವಿನ ಮಾತಾಡುವುದರಲ್ಲಿ ಅರ್ಥ ವಿದೆ; ತರಾಸು ನಿರ್ದಿಷ್ಟವಾಗಿ ಯಾವ ನೆಲೆಯಲ್ಲಿ ‘ನಾಗರಹಾವು’ ಚಿತ್ರವನ್ನು ‘ಕೇರೆಹಾವು’ ಎಂದು ಕರೆದರೋ ಗೊತ್ತಿಲ್ಲ (ತರಾಸು ಅವರ ಕಾದಂಬರಿಯಲ್ಲಿ ರಾಮಾಚಾರಿ ಪ್ರೌಢ ಶಾಲೆಯ ಹುಡುಗನಷ್ಟೇ; ಆದರೆ ಪುಟ್ಟಣ್ಣ ಕಣಗಾಲರು ತಮ್ಮ ಕಲ್ಪನೆಯ ರಾಮಾಚಾರಿ ಯನ್ನು ಕಟ್ಟುವಾಗ ಚಿತ್ರಕಥೆಯಲ್ಲಿ ಅವನನನ್ನು ಕಾಲೇಜು ಹುಡುಗನನ್ನಾಗಿಯೂ ರೂಪಾಂತರಿಸಿ ಬಿಟ್ಟಿದ್ದರು; ಮಾತ್ರವಲ್ಲದೆ ಚಲನ ಚಿತ್ರದಂಥ ಜನಪ್ರಿಯ ಮಾಧ್ಯಮಕ್ಕೆ ಅಗತ್ಯವಾಗುವ ಒಂದಷ್ಟು ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದರು. ಇದು ತರಾಸು ಅವರ ಅಸಮಾಧಾನಕ್ಕೆ ಕಾರಣವಾಗಿತ್ತು!). ಆದರೆ ಕೃತಿಯಲ್ಲಿನ ತರಾಸು ಅವರ ಆಶಯ ವನ್ನು ಸೆಲ್ಯುಲಾಯ್ಡ್ ಮಾಧ್ಯಮದಲ್ಲಿ ಬಿಂಬಿಸುವಾಗ ಪುಟ್ಟಣ್ಣ ತಮ್ಮದೇ ಆದ ವ್ಯಾಕರಣ ವನ್ನು, ಶೈಲಿಯನ್ನು ಬಳಸಿದ್ದರಷ್ಟೇ. ಅದು ಜನಕ್ಕೆ ಇಷ್ಟವೂ ಆಗಿತ್ತು. ಹೀಗಾಗಿ ತರಾಸು ರವರ ಅಪಸ್ವರಕ್ಕೆ ಯಾರೂ ‘ಉಘೇ ಉಘೇ’ ಎನ್ನಲಿಲ್ಲ.‌ ಕೆಲ ತಿಂಗಳ ನಂತರ ಮತ್ತೊಂದು ಕಾರ್ಯಕ್ರಮದಲ್ಲಿ ಪುಟ್ಟಣ್ಣ-ತರಾಸು ಮುಖಾಮುಖಿ ಯಾಗಬೇಕಾಯಿತು. “ಇವತ್ತು ತರಾಸು ಅವರಿಂದ ಪುಟ್ಟಣ್ಣನವರ ಮುಖಕ್ಕೆ ಎರಡನೇ ಸುತ್ತಿನ ಮಂಗಳಾರತಿ ಖಾತ್ರಿ" ಎಂದೇ ಒಂದಿಷ್ಟು ವಿಘ್ನಸಂತೋಷಿಗಳು ಮನಸ್ಸಿನಲ್ಲೇ ಮಂಡಿಗೆ ತಿಂದಿದ್ದರು; ಆದರೆ, ಮೆಚ್ಚುಗೆಯೊಂದಿಗೆ ಪುಟ್ಟಣ್ಣನವರ ಬೆನ್ನು ಚಪ್ಪರಿಸಿ ಬಿಟ್ಟರು ತರಾಸು! ‘ಕೇರೆಹಾವು’ ಕೆರೆಯ ಪಾಲಾಗಿತ್ತು, ‘ನಾಗರಹಾವು’ ಮತ್ತೆ ಹೆಡೆಯಾಡಿಸಿತ್ತು...!

ಅಚ್ಚರಿಯ ಸಂಗತಿಯೆಂದರೆ, ತಮ್ಮ ಚಿತ್ರವನ್ನು ಅಥವಾ ಪ್ರಸ್ತುತಿಯ ಶೈಲಿಯನ್ನು ಪತ್ರ ಕರ್ತರಾಗಲೀ, ಉದ್ಯಮದವರಾಗಲೀ ಹಂಗಿಸಿದರೆ ವ್ಯಗ್ರರಾಗುತ್ತಿದ್ದ ಪುಟ್ಟಣ್ಣ, ‘ನಾಗರ ಹಾವು’ ಚಿತ್ರವನ್ನು ತರಾಸು ‘ಕೇರೆಹಾವು’ ಎಂದಿದ್ದಕ್ಕೆ ಕೊಂಚ ವ್ಯಂಗ್ಯವಾಡಿದ್ದರೇ ವಿನಾ ಕೋಪಿಸಿಕೊಂಡಿರಲಿಲ್ಲ. ಕಾರಣ, ಸರಸ್ವತೀಪುತ್ರರ ಸಾತ್ವಿಕ ಕೋಪವೂ ಎದುರಿರುವವರಿಗೆ ಒಂದು ವರವೇ ಎಂಬ ಗ್ರಹಿಕೆಯನ್ನು ಪುಟ್ಟಣ್ಣ ಮೈಗೂಡಿಸಿಕೊಂಡಿದ್ದರು. ಹೀಗಾಗಿ, ತರಾಸುರವರಿಂದ ಟೀಕೆ ಹೊಮ್ಮಿದಾಗ “ನೀವು ನನಗಿಂತ ದೊಡ್ಡವರು, ನೀವು ಹೊಗಳಿ ದರೂ ತೆಗಳಿದರೂ ನನಗದು ಆಶೀರ್ವಾದವೇ.." ಎಂದು ಪ್ರತಿಕ್ರಿಯಿಸಿ ನಕ್ಕಿದ್ದರು. ಕೆಲ ವರ್ಷದ ನಂತರ, ತರಾಸು ಅವರು ಅಸುನೀಗಿದಾಗ ಬೆಂಗಳೂರು ದೂರದರ್ಶನದವರು ಪುಟ್ಟಣ್ಣನವರ ‘ಬೈಟ್’ ತೆಗೆದು ಕೊಂಡರು; ಆಗಲೂ ಪುಟ್ಟಣ್ಣ ಸದರಿ ‘ಕೇರೆಹಾವು’ ಪ್ರಸಂಗವನ್ನು ಉಲ್ಲೇಖಿಸಿ, ತರಾಸು ಬಗೆಗೆ ತಮಗಿದ್ದ ಆ ಗೌರವದ ಮಾತನ್ನು ಪುನರು ಚ್ಚರಿಸಿದರು. ಅದು ಬಿ.ಆರ್.ಪಂತಲು ಅವರ ಗರಡಿಯಲ್ಲಿ ಚಿತ್ರ ನಿರ್ದೇಶನದ ಕಸುಬು ಗಾರಿಕೆಯನ್ನು ಕಲಿಯುವಾಗ ‘ಸಾರಸ್ವತ ಲೋಕದವರನ್ನು’ ನಡೆಸಿಕೊಳ್ಳುವುದಕ್ಕೆ ಸಂಬಂಧಿಸಿ ಪುಟ್ಟಣ್ಣ ನವರಿಗೆ ಆಗಿದ್ದ ಬೋಧನೆಗೆ ಮತ್ತು ಅದನ್ನವರು ಗ್ರಹಿಸಿ ಮೈಗೂಡಿ ಸಿಕೊಂಡಿದ್ದ ವಿನಯಕ್ಕೆ ಸಾಕ್ಷಿಯಾಗಿತ್ತು...