ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Yagati Raghu Nadig Column: ಹಿತಶತ್ರುಗಳ ಚಾಡಿಮಾತಿಗೆ ಹಿತೈಷಿಯ ಬಲಿ !

ನಾಗರಹಾವು ಚಿತ್ರೀಕರಣದ ಪ್ರತಿ ಘಟ್ಟದಲ್ಲೂ ನನ್ನನ್ನು ತಿದ್ದಿ-ತೀಡಿ ಹುರಿದುಂಬಿಸಿದ ಪುಟ್ಟ ಣ್ಣ, ಮಕ್ಕಳಿಗೆ ಮಿಠಾಯಿಯ ಆಸೆ ತೋರಿಸುವಂತೆ, ‘ನಿನ್ನ ಪಾಲಿನ ಕರ್ತವ್ಯವನ್ನು ನಿಷ್ಠೆ ಯಿಂದ ನಿರ್ವಹಿಸಿದರೆ ಕನ್ನಡದ ಚಿತ್ರಪ್ರೇಮಿಗಳನ್ನು ರಂಜಿಸು ತ್ತೀಯೆ, ಕಾರು-ಬಂಗಲೆ ಎಲ್ಲ ವನ್ನೂ ಪಡೆಯುತ್ತೀಯೆ’ ಎಂದು ಹೇಳಿ ಪ್ರೀತಿಯ ಮಹಾ ಪೂರವನ್ನೇ ಹರಿಸಿದರು. ಅವರು ಹೇಳಿದ್ದೇ ನಿಜವಾಯಿತು, ಆದರೆ ನಾನು ಅವರಿಗೇನೂ ಕೊಡಲಾಗಲಿಲ್ಲ. ‘ನಾಗರಹಾವು’ ನಂತರ ಅವರ ಮುಂದಿನ ಚಿತ್ರಗಳಲ್ಲಿ ನನಗೆ ಅವಕಾಶ ವಿರಲಿಲ್ಲ. ಉದ್ಯಮದ ಕೆಲವರು ನಮ್ಮಿಬ್ಬರ ನಡುವೆ ಹುಳಿ ಹಿಂಡಿದ್ದೇ ಇದಕ್ಕೆ ಕಾರಣ.

ಹಿತಶತ್ರುಗಳ ಚಾಡಿಮಾತಿಗೆ ಹಿತೈಷಿಯ ಬಲಿ !

ಅಂಕಣಕಾರ ಯಗಟಿ ರಘು ನಾಡಿಗ್

Profile Ashok Nayak Mar 2, 2025 6:29 AM

ರಸದೌತಣ

ಯಗಟಿ ರಘು ನಾಡಿಗ್

naadigru@gmail.com

ಇದೇ ಅಂಕಣದಲ್ಲಿ 2 ವಾರದ ಹಿಂದೆ ಪ್ರಸ್ತುತಪಡಿಸಲಾಗಿದ್ದ, ನಟ ವಿಷ್ಣುವರ್ಧನ್ ಅವರ ಕುರಿತಾದ ‘ಬಬ್ಬೂರ್‌ಕಮ್ಮೆಗೆ ಬದುಕೋದ್ ಗೊತ್ತು ರೀ..!’ ಶೀರ್ಷಿಕೆಯ ಲೇಖನವನ್ನು ಓದಿದವರಲ್ಲಿ ಬಹಳಷ್ಟು ಮಂದಿ, “ವಿಷ್ಣು ಅವರು ಇಷ್ಟೆ ನೋವನ್ನು ಅನುಭವಿಸಿದ್ದು ನಮಗೆ ಗೊತ್ತೇ ಇರಲಿಲ್ಲ" ಎಂದಿದ್ದರ ಜತೆಗೆ, “ವಿಷ್ಣು ಅವರನ್ನು ತಮ್ಮ ಚಿತ್ರದ ಮೂಲಕ ಸುಂದರವಾಗಿ ಕಡೆದು ನಿಲ್ಲಿಸಿದ್ದು ಪುಟ್ಟಣ್ಣನವರಾದರೂ ತರುವಾಯದ ಮತ್ತಾವ ಚಿತ್ರ ದಲ್ಲೂ ವಿಷ್ಣುರಿಗೆ ಅವರು ಪಾತ್ರವನ್ನು ನೀಡಲಿಲ್ಲವೇಕೆ? ಇವರಿಬ್ಬರ ಜೋಡಿಯ ಏಕೈಕ ಚಿತ್ರವಾದ ‘ನಾಗರಹಾವು’ ಏನೆ ರಸಮಯ ಪ್ರಸಂಗಗಳನ್ನು ಒಳಗೊಂಡಿತ್ತು? ಎಂಬು ದನ್ನೆಲ್ಲಾ ಕಟ್ಟಿಕೊಡಿ" ಅಂತ ವಾಟ್ಸಾಪ್ /ಇ-ಮೇಲ್ ಮೂಲಕ ಆಗ್ರಹಿಸಿದ್ದಾರೆ. ಇವರೆಲ್ಲರ ಪ್ರೀತಿಗೆ ನಾನು ಋಣಿ. ಈ ವಿಷಯಕ್ಕೆ ಸಂಬಂಧಿಸಿ ಮನದಾಳದಲ್ಲಿ ಕೆನೆಗಟ್ಟಿರುವ ಕೆಲ ಪ್ರಸಂಗಗಳನ್ನು ಹಂಚಿಕೊಳ್ಳಲು ಬಯಸುವೆ. ಅದರ ಮೊದಲ ಕಂತು ಇದು, ಒಪ್ಪಿಸಿ ಕೊಳ್ಳಿ...

***

ಹಾಗೆ ನೋಡಿದರೆ, ಡಾ.ರಾಜ್‌ಕುಮಾರ್ ಅವರು ‘ಕರುಳಿನ ಕರೆ’, ‘ಮಲ್ಲಮ್ಮನ ಪವಾಡ’, ‘ಸಾಕ್ಷಾತ್ಕಾರ’ ಚಿತ್ರಗಳಲ್ಲಿ ಪುಟ್ಟಣ್ಣನವರೊಟ್ಟಿಗೆ ಕೆಲಸ ಮಾಡಿದ್ದುಂಟು. ಮಿಕ್ಕಂತೆ ಶ್ರೀನಾಥ್ (ಶರಪಂಜರ, ಶುಭಮಂಗಳ, ಧರ್ಮಸೆರೆ, ಮಾನಸ ಸರೋವರ, ಧರಣಿ ಮಂಡಲ ಮಧ್ಯದೊಳಗೆ), ಗಂಗಾಧರ್ (ಗೆಜ್ಜೆಪೂಜೆ, ಶರಪಂಜರ, ಕಥಾಸಂಗಮ) ಕಲ್ಯಾಣ್ ಕುಮಾರ್ (ಬೆಳ್ಳಿಮೋಡ, ಸಾವಿರ ಮೆಟ್ಟಿಲು, ಕಾಲೇಜುರಂಗ, ಕಥಾಸಂಗಮ), ಅಂಬರೀಶ್, (ನಾಗರ ಹಾವು, ಹಿಂದಿಯ ಜಹ್ರೀಲಾ ಇನ್ಸಾನ್, ಶುಭಮಂಗಳ, ಬಿಳೀಹೆಂಡ್ತಿ, ಪಡುವಾರಹಳ್ಳಿ ಪಾಂಡವರು, ರಂಗನಾಯಕಿ, ಮಸಣದ ಹೂವು), ಜೈಜಗದೀಶ್ (ಫಲಿತಾಂಶ, ಪಡುವಾರ ಹಳ್ಳಿ ಪಾಂಡವರು, ಧರಣಿ ಮಂಡಲ ಮಧ್ಯದೊಳಗೆ), ರಾಮಕೃಷ್ಣ (ಪಡುವಾರಹಳ್ಳಿ ಪಾಂಡವರು, ರಂಗನಾಯಕಿ, ಅಮೃತ ಘಳಿಗೆ, ಮಾನಸ ಸರೋವರ, ಋಣಮುಕ್ತಳು) ಮುಂತಾದ ಕಲಾವಿದರು ಪುಟ್ಟಣ್ಣನವರೊಂದಿಗೆ ಒಂದಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಕೈಜೋ ಡಿಸಿದ್ದುಂಟು ಹಾಗೂ ಈ ಚಿತ್ರಗಳು ಅವರಿಗೆ ಸಾಕಷ್ಟು ಮೈಲೇಜ್ ನೀಡಿದ್ದುಂಟು. ಆದರೆ, ಈ ವಿಷಯದಲ್ಲಿ ವಿಷ್ಣು ನಿಜಕ್ಕೂ ದುರದೃಷ್ಟವಂತರು. ಏಕೆಂದರೆ, ‘ನಾಗರಹಾವು’ ಚಿತ್ರದ ಭರ್ಜರಿ ಯಶಸ್ಸಿನ ಹೊರತಾಗಿಯೂ ವಿಷ್ಣು-ಪುಟ್ಟಣ್ಣ ಜೋಡಿಯ ಪುನರಾವರ್ತನೆ ಆಗಲೇ ಇಲ್ಲ.

ಇದನ್ನೂ ಓದಿ: Yagati Raghu Nadig Column: ಎಲ್ಲಿಗೆ ಪಯಣಾ...ಯಾವುದೋ ದಾರೀ, ಏಕಾಂಗಿ ಸಂಚಾರಿ!

ಹೀಗೇಕೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿದ್ದರಲ್ಲಿ ಅಚ್ಚರಿಯೇನಿಲ್ಲ. ಈ ಕುರಿತಾಗಿ ವಿಷ್ಣುವರ್ಧನ್ ಅವರೇ ಒಂದೆಡೆ ಹೇಳಿಕೊಂಡಿರುವ ಮಾತು ಇಲ್ಲಿ ಉಲ್ಲೇಖನೀಯ: “ಪುಟ್ಟಣ್ಣನವರ ಬಗ್ಗೆ ಏನಾದರೂ ಹೇಳುವುದೆಂದರೆ, ನಮ್ಮ ಅಪ್ಪನ ಬಗ್ಗೆಯೇ ಮಾತ ನಾಡಿದಂತೆ; ಕಾರಣ ಅವರು ನನ್ನ ಚಿತ್ರಜೀವನದ ಮಹಾಶಿಲ್ಪಿ. ನಾಗರ ಹಾವು ಚಿತ್ರಕ್ಕೆ ನನ್ನ ಆಯ್ಕೆಯಾದ ನಂತರ ಅವರು ಆ ಕಾದಂಬರಿಯನ್ನು ನನಗೆ ನೀಡುತ್ತಾ, ‘ಇದನ್ನು ಶ್ರದ್ಧೆಯಿಂದ ಓದು. ಬರೋಬ್ಬರಿ 25 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಒಬ್ಬ ಹೀರೋವನ್ನ ಪರಿಚಯಿಸ್ತಾ ಇದ್ದೇನೆ’ ಎಂದರು. ನಾನಂತೂ ಆನಂದದಿಂದ ಪುಳಕಿತ ನಾದೆ. ನಾಗರಹಾವು ಚಿತ್ರೀಕರಣದ ಪ್ರತಿ ಘಟ್ಟದಲ್ಲೂ ನನ್ನನ್ನು ತಿದ್ದಿ-ತೀಡಿ ಹುರಿದುಂಬಿ ಸಿದ ಪುಟ್ಟಣ್ಣ, ಮಕ್ಕಳಿಗೆ ಮಿಠಾಯಿಯ ಆಸೆ ತೋರಿಸುವಂತೆ, ‘ನಿನ್ನ ಪಾಲಿನ ಕರ್ತವ್ಯ ವನ್ನು ನಿಷ್ಠೆಯಿಂದ ನಿರ್ವಹಿಸಿದರೆ ಕನ್ನಡದ ಚಿತ್ರಪ್ರೇಮಿಗಳನ್ನು ರಂಜಿಸುತ್ತೀಯೆ, ಕಾರು-ಬಂಗಲೆ ಎಲ್ಲವನ್ನೂ ಪಡೆಯುತ್ತೀಯೆ’ ಎಂದು ಹೇಳಿ ಪ್ರೀತಿಯ ಮಹಾ ಪೂರವನ್ನೇ ಹರಿಸಿದರು. ಅವರು ಹೇಳಿದ್ದೇ ನಿಜವಾಯಿತು, ಆದರೆ ನಾನು ಅವರಿಗೇನೂ ಕೊಡಲಾಗ ಲಿಲ್ಲ. ‘ನಾಗರಹಾವು’ ನಂತರ ಅವರ ಮುಂದಿನ ಚಿತ್ರಗಳಲ್ಲಿ ನನಗೆ ಅವಕಾಶ ವಿರಲಿಲ್ಲ. ಉದ್ಯಮದ ಕೆಲವರು ನಮ್ಮಿಬ್ಬರ ನಡುವೆ ಹುಳಿ ಹಿಂಡಿದ್ದೇ ಇದಕ್ಕೆ ಕಾರಣ. ಆದರೆ ಅದು ಹೆಚ್ಚು ದಿನ ನಿಲ್ಲಲಿಲ್ಲ. ಒಮ್ಮೆ ಮಾತಿಗೆ ಸಿಕ್ಕ ಪುಟ್ಟಣ್ಣ, ‘ಎಲ್ಲ ಚಿತ್ರದಲ್ಲೂ ನಿನ್ನನ್ನು ಹಾಕಲು ಆಗೋಲ್ಲ, ನಿನಗೆ ತಕ್ಕ ಪಾತ್ರ ಇರಬೇಕು. ನಾಗರಹಾವು ಚಿತ್ರದ ಅಪ್ಪನಂಥ ಚಿತ್ರ ಮಾಡ್ತೇನೆ, ಆಗ ನಿನ್ನನ್ನ ಹಾಕಿಕೊಳ್ತೇನೆ ಮರೀ. ನಾನು ಮುಂದೆ ತೆಗೆಯಲಿರುವ ಚಿಕವೀರ ರಾಜೇಂದ್ರ, ಸುರಪುರದ ರಾಜಾ ವೆಂಕಟಪ್ಪ ನಾಯಕ ಚಿತ್ರಗಳಲ್ಲಿ ನೀನೇ ಹೀರೋ ಕಣೋ’ ಎಂದರು. ಸಾಲದೆಂಬಂತೆ, ವೆಂಕಟಪ್ಪ ನಾಯಕ ಚಿತ್ರಕ್ಕಾಗಿ ಲಂಡನ್ನಿನ ಸಿನಿಮಾ ವಸ್ತುಸಂಗ್ರಹಾಲಯದಿಂದ 40 ಅಡಿ ಮೈಕ್ರೋ ಫಿಲಂ ತರಿಸಿ ಚಿತ್ರಕಥೆ ಯನ್ನೂ ಮಾಡಿದ್ದರು. ಆದರೆ ದುರದೃಷ್ಟವಶಾತ್ ಈ ಬಯಕೆ ನೆರವೇರಲಿಲ್ಲ. ನಾನು ಎಲ್ಲವನ್ನೂ ದೇವರಿಗೆ-ಗುರುಗಳಿಗೆ ಅರ್ಪಿಸಿ ಮೌನಕ್ಕೆ ಶರಣಾದೆ..."

Yagati ok

ಕನ್ನಡ ಚಿತ್ರೋ ದ್ಯಮದ ಕೆಲ ಬೃಹಸ್ಪತಿಗಳು ಪುಟ್ಟಣ್ಣ ಮತ್ತು ವಿಷ್ಣು ನಡುವೆ ಕೆಲಕಾಲ ತಂದಿಟ್ಟು ತಮಾಷೆ ನೋಡಿದ್ದುಂಟು. ಈ ನೆಲೆಯಲ್ಲಿ ವಿಷ್ಣು ಹಂಚಿಕೊಂಡಿರುವ ಮಾತುಗಳು ಅಪ್ಪಟ ಸತ್ಯ. ಸಾಲದೆಂಬಂತೆ, ಅವರಿವರ ಚಾಡಿಮಾತನ್ನು ನಂಬಿ ಬಿಡುವ ಸ್ವಭಾವ ಪುಟ್ಟಣ್ಣನವರಲ್ಲಿತ್ತು. ಅದರಿಂದ ವೈಯಕ್ತಿಕವಾಗಿ ನಷ್ಟವಾಗಿದ್ದು ವಿಷ್ಣುರಿಗೆ ಹಾಗೂ ಈ ಇಬ್ಬರ ಜೋಡಿಯಲ್ಲಿ ಮತ್ತಷ್ಟು ಚಿತ್ರಗಳನ್ನು ಕಣ್ತುಂಬಿಕೊಳ್ಳಲು ತವಕಿಸು ತ್ತಿದ್ದ ಚಿತ್ರ ಪ್ರೇಮಿಗಳಿಗೆ.

ಒರಟು ಕಲ್ಲಿನಂತಿದ್ದ ತಮ್ಮನ್ನು ಕೆತ್ತಿ ಸುಂದರ ಮೂರ್ತಿಯಾಗಿಸಿದ ಶಿಲ್ಪಿ ಪುಟ್ಟಣ್ಣ ಎಂಬ ‘ಗುರುಭಾವ’ ವಿಷ್ಣುರವರಲ್ಲಿ ಮಾಸಿರಲಿಲ್ಲ. ಆದರೆ ಅದೇಕೋ ಏನೋ, ವಿಷ್ಣು ಅದೆಷ್ಟೇ ಪ್ರೀತಿ-ವಾತ್ಸಲ್ಯ ತೋರಿದರೂ ಪುಟ್ಟಣ್ಣನವರಿಗೆ ಅದು ಬೂಟಾಟಿಕೆ ಯಂತೆ ಕಾಣುತ್ತಿತ್ತು. ಇದಕ್ಕೆ ಕಾರಣ, ಮೇಲೆ ಉಲ್ಲೇಖಿಸಿದಂತೆ, ವಿಷ್ಣು ಕುರಿತಾಗಿ ಪುಟ್ಟಣ್ಣ ನವರಿಗೆ ಅವರಿವರು ಹೇಳಿದ್ದ ಚಾಡಿಮಾತು. ಈ ಎಲ್ಲದರ ಫಲವಾಗಿ ವಿಷ್ಣು-ಪುಟ್ಟಣ್ಣ ನಡುವೆ ಒಂಥರಾ ‘ಲವ್-ಹೇಟ್’ ರಿಲೇಷನ್‌ಷಿಪ್ ಇತ್ತು. ಮಹಾನ್ ಹಠವಾದಿಯಾದ ಪುಟ್ಟಣ್ಣ, ವಿಷ್ಣು ಕುರಿತಾದ ತಮ್ಮ ಅಸಮಾಧಾನವನ್ನು ಆಗಾಗ ಕಾರಿಕೊಳ್ಳದೆ ಬಿಡುತ್ತಿರಲಿಲ್ಲ. ಒಮ್ಮೆ, ಪುಟ್ಟಣ್ಣ ನಿರ್ದೇಶನದ ಚಿತ್ರವೊಂದರ ಸೆಟ್‌ಗೆ ವಿಷ್ಣು ಬಂದರು. ಮುಂದಿನ ಚಿತ್ರದಲ್ಲಿ ತಮಗೊಂದು ಪಾತ್ರ ನೀಡುವಂತೆ ಪುಟ್ಟಣ್ಣನವರನ್ನು ಕೇಳುವುದು ಅವರ ಇರಾದೆ ಯಾಗಿತ್ತು. ಆತ್ಮೀಯ ಮಾತುಗಳಿಂದಲೇ ಅವರನ್ನು ಬರಮಾಡಿಕೊಂಡ ಪುಟ್ಟಣ್ಣ, ಕೊನೆ ಕೊನೆಗೆ ವಿಷ್ಣುವನ್ನು ಹಂಗಿಸಲು ಶುರುಮಾಡಿದರು. ಇಷ್ಟಾಗಿಯೂ ವಿಷ್ಣು ಹಲ್ಲು ಕಚ್ಚಿಕೊಂಡು ಸುಮ್ಮನಿದ್ದರು. ಅದಕ್ಕೆ ಕಾರಣವಾಗಿದ್ದು ಮತ್ತದೇ- ‘ಪುಟ್ಟಣ್ಣ ನನ್ನನ್ನು ಕೆತ್ತಿದ ಶಿಲ್ಪಿ’ ಎಂಬ ಉದಾತ್ತಭಾವ. ಆದರೆ, ಪುಟ್ಟಣ್ಣನವರ ಕೊಂಕುಮಾತು ತಾರಕಕ್ಕೆ ಹೋದಾಗ ನಿಜಕ್ಕೂ ಬೇಸರಗೊಂಡ ವಿಷ್ಣು, “ಗುರುಗಳೇ, ಇನ್ನೆಂದೂ ನಿಮ್ಮಲ್ಲಿ ಪಾತ್ರಕ್ಕಾಗಿ ಕೈ ಒಡ್ಡೋಲ್ಲ, ನಿಮಗೆ ಮನಸ್ಸಾದ ದಿನ ಫೋನ್ ಮಾಡಿ, ಪುಟ್ಟ ಮಗುವಿನಂತೆ ಓಡಿಬಂದು ನಿರ್ವಹಿಸಿಕೊಟ್ಟು ಹೋಗ್ತೇನೆ" ಎನ್ನುತ್ತಾ ಗದ್ಗದಿತರಾಗೇ ಆ ಸೆಟ್‌ನಿಂದ ನಿರ್ಗಮಿಸಿದರು. ಪುಟ್ಟಣ್ಣ-ವಿಷ್ಣು ಜೋಡಿಯ ಮತ್ತೊಂದು ಚಿತ್ರ ಬರುವುದಕ್ಕೆ ಅಡಚಣೆಯಾಗಿದ್ದೇಕೆ ಎಂಬುದು ನಿಮಗೀಗ ಸೂಕ್ಷ್ಮವಾಗಿ ಅರ್ಥವಾಗಿರಬೇಕು!

ಇಷ್ಟೆಲ್ಲ ಅವಮಾನವಾಗಿದ್ದರೂ ವಿಷ್ಣುಗೆ ಪುಟ್ಟಣ್ಣನವರಲ್ಲಿನ ಗುರುಭಕ್ತಿ, ಪ್ರೀತಿ-ವಾತ್ಸಲ್ಯ ಕಮ್ಮಿಯಾಗಿರಲಿಲ್ಲ. ಆದರೆ ಅದರ ಅಭಿವ್ಯಕ್ತಿಗೆ ಮುಂದಾದಾಗಲೆ ಪುಟ್ಟಣ್ಣ ಅದನ್ನು ‘ಹಳದಿ ಕನ್ನಡಕ’ದಿಂದಲೇ ನೋಡುತ್ತಿದ್ದರು. ತಾವು ಕಟ್ಟಿದ ಮನೆಯನ್ನು ತೋರಿಸಲೆಂದು ವಿಷ್ಣು ಪುಟ್ಟಣ್ಣರನ್ನು ಆಹ್ವಾನಿಸಿ ಪ್ರೀತ್ಯಾದರದಿಂದ ಊಟ ಹಾಕಿದರೆ, “ನಿನ್ನ ಶ್ರೀಮಂತಿಕೆ, ಮನೆಯ ಭವ್ಯತೆಯನ್ನು ತೋರಿಸಲೆಂದು ಹೀಗೆ ನನ್ನನ್ನು ಕರೆದು ಊಟ ಹಾಕ್ತಿದ್ದೀಯಾ" ಎಂದುಬಿಟ್ಟರು ಪುಟ್ಟಣ್ಣ! ಆದರೆ, ‘ನಾಗರಹಾವು’ ಚಿತ್ರದ ವೇಳೆ, “ನಿನ್ನ ಪಾಲಿನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದರೆ ಕನ್ನಡದ ಚಿತ್ರಪ್ರೇಮಿಗಳನ್ನು ರಂಜಿಸು ತ್ತೀಯೆ, ಕಾರು-ಬಂಗಲೆ ಎಲ್ಲವನ್ನೂ ಪಡೆಯುತ್ತೀಯೆ" ಎಂದು ಹರಸಿದ್ದೂ ಇದೇ ಪುಟ್ಟಣ್ಣನವರೇ! ‘ಹಾಲು-ಜೇನು’ ರೀತಿಯಿದ್ದ ‘ವಿಷ್ಣು-ಪುಟ್ಟಣ್ಣ’ ಜೋಡಿಯ ನಡುವೆ ಚಿತ್ರೋದ್ಯಮದ ಕೆಲ ಶಕುನಿಗಳು ನಿಂಬೆಹುಳಿ ಹಿಂಡಿದ್ದರ ಪರಿಣಾಮವಿದು!

ಇಂಥ ‘ಲವ್-ಹೇಟ್’ ರಿಲೇಷನ್‌ಷಿಪ್‌ನ ಫಲಾನುಭವಿಗಳಾಗಿದ್ದ ಪುಟ್ಟಣ್ಣ-ವಿಷ್ಣು ನಡು ವಿನ ಅಸಮಾಧಾನದ ತೆರೆ ಕೊನೆಗೊಮ್ಮೆ ಕಳಚಿ ಮೊದಲಿನಂತೆ ಪ್ರೀತಿ-ವಿಶ್ವಾಸ ಚಿಗುರಿ ದಾಗ, ಪುಟ್ಟಣ್ಣ ಹನಿಗೂಡಿದ ಕಂಗಳಲ್ಲಿ ವಿಷ್ಣುವನ್ನೇ ದಿಟ್ಟಿಸುತ್ತಾ, “ಲೋ ಬಂಗಾರ, ನಿನ್ನನ್ನ ಅವರಿವರೆ ಚಿತ್ರದಲ್ಲಿ ಹಾಕ್ಕೊಂಡು ಗಂಟುಮಾಡ್ಕೊಂಡಿದ್ದು ಸಾಕು ಕಣೋ... ನಾನೇ ನಿನ್ನದೊಂದು ಚಿತ್ರವನ್ನ ನಿರ್ಮಿಸಿ ನಿರ್ದೇಶಿಸುತ್ತೇನೆ" ಎಂದರು. ಆಗ, ತಮಗೆ ಮತ್ತೊಬ್ಬ ‘ಚಾಮಯ್ಯ ಮೇಷ್ಟ್ರು’ ಸಿಕ್ಕಿದ್ರು ಎಂಬಂತೆ ಸಂಭ್ರಮಿಸಿದ್ದರು ವಿಷ್ಣು ಎಂಬ ‘ರಾಮಾಚಾರಿ’...

ಆದರೆ ವಿಧಿ ಬಿಡಬೇಕಲ್ಲ! ಪ್ರಸಂಗವೊಂದನ್ನು ವಿವರಿಸಿದರೆ ಅದು ನಿಮಗೆ ಮನದಟ್ಟಾ ದೀತು. ಡಾ.ಅನುಪಮಾ ನಿರಂಜನ ಅವರ ‘ಋಣ’ ಕಾದಂಬರಿಯನ್ನಿಟ್ಟುಕೊಂಡು ‘ಋಣಮುಕ್ತಳು’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸಲು ಪುಟ್ಟಣ್ಣ ಬಯಸಿದರು. ಅದರ ಚಿತ್ರ ಕಥೆ-ಸಂಭಾಷಣೆ-ಹಾಡುಗಳೂ ಸಿದ್ಧವಾದವು. ಕಥೆಯ ಕೇಂದ್ರಬಿಂದುವಾದ ತಾಯಿಯ ಪಾತ್ರಕ್ಕೆ ಯಾರನ್ನು ಹಾಕಬೇಕು ಎಂಬ ಲೆಕ್ಕಾಚಾರ ಸುಳಿದಾಗ, ನಿರ್ಮಾಪಕ ತಿಪಟೂರು ಸುಬ್ಬಣ್ಣ, “ಈ ಪಾತ್ರಕ್ಕೆ ಭಾರತಿ ವಿಷ್ಣುವರ್ಧನ್ ಅವರನ್ನು ಹಾಕಬಹುದ.." ಎಂಬ ಸಲಹೆಯಿತ್ತರು. ಇದರ ಹಿನ್ನೆಲೆಯಲ್ಲೂ ಒಂದು ಗಮ್ಮತ್ತಿದೆ. ಪುಟ್ಟಣ್ಣ ಹಾಗೂ ವಿಷ್ಣು ವರ್ಧನ್ ಇಬ್ಬರ ಕುಟುಂಬಕ್ಕೂ ಆಪ್ತರಾಗಿದ್ದ ಈ ಸುಬ್ಬಣ್ಣನವರಿಗೆ ಇವರಿಬ್ಬರ ಜೋಡಿ ಯಲ್ಲಿ ಚಿತ್ರವೊಂದನ್ನು ನಿರ್ಮಿಸಬೇಕೆಂಬ ಬಯಕೆ ಗುಂಗೆಹುಳುವಿನಂತೆ ಕೊರೆಯುತ್ತಿತ್ತು. ಅದನ್ನವರು ಪುಟ್ಟಣ್ಣನವರಲ್ಲಿ ತೋಡಿಕೊಂಡಿದ್ದೂ ಉಂಟು. ಆಗ ಪುಟ್ಟಣ್ಣ, “ಅಯ್ಯೋ ಸುಬ್ಬಣ್ಣಾ, ನಿಮಗೆ ಗೊತ್ತಾಗೋಲ್ಲ... ನಾನು ಮತ್ತು ವಿಷ್ಣು ಮತ್ತೆ ಜತೆಯಾದೆವು ಅಂದ್ರೆ ಪ್ರೇಕ್ಷಕರು ತುಂಬಾ ಆಸೆ, ನಿರೀಕ್ಷೆ ಇಟ್ಕೊಂಡಿರ್ತಾರೆ ಕಣ್ರೀ... ಅವನನ್ನು ಹಾಕಿಕೊಂಡರೆ ಒಳ್ಳೆಯ ಪಾತ್ರವನ್ನೇ ಮಾಡಿಸಬೇಕು. ಅಂಥ ಕಥೆ ಮೊದಲು ಸಿಗಲಿ..." ಎಂದಿದ್ದರು.

‘ಋಣಮುಕ್ತಳು’ ಚಿತ್ರದ ಕೇಂದ್ರಪಾತ್ರಕ್ಕೆ ಭಾರತಿಯವರನ್ನು ಹಾಕಿಕೊಳ್ಳಿ ಎಂಬ ಸುಬ್ಬಣ್ಣರ ಸಲಹೆಗೆ ಪುಟ್ಟಣ್ಣ ತಲೆಯಾಡಿಸಿದ್ದರಾದರೂ, ಬಹಿರಂಗವಾಗಿ ಇನ್ನೂ ಘೋಷಿ ಸಿರಲಿಲ್ಲ. ಒಮ್ಮೆ ವಿಷ್ಣು-ಭಾರತಿ ದಂಪತಿ ಹೀಗೆಯೇ ಪುಟ್ಟಣ್ಣನವರನ್ನು ನೋಡಿಕೊಂಡು ಹೋಗಲು ಅವರ ಮನೆಗೆ ಬಂದರು. ಉಭಯಕುಶಲೋಪರಿಯ ನಂತರ ಇಬ್ಬರೂ ಹೊರಟು ನಿಂತಾಗ, ಭಾರತಿಯವರಿಗೆ ಕುಂಕುಮ ನೀಡಲು ಮುಂದಾದ ಪುಟ್ಟಣ್ಣನವರ ಪತ್ನಿ ನಾಗಲಕ್ಷಮ್ಮ ಅಪ್ರಯತ್ನವಾಗಿ ಪುಟ್ಟಣ್ಣನವರೆಡೆಗೆ ತಿರುಗಿ, “ಏನೂಂದ್ರೇ, ನೀವು ಹುಡುಕ್ತಾ ಇದ್ದ ಭಾರತಮಾತೆ ನಮ್ ಮನೆಗೇ ಬಂದು ಬಿಟ್ಟಿದ್ದಾರಲ್ರೀ.." ಎಂದರು. ಈ ಒಗಟು ಅರ್ಥವಾಗದೆ ವಿಷ್ಣು-ಭಾರತಿ ಗೊಂದಲಗೊಂಡಾಗ ಮಾತಿಗಿಳಿದ ಪುಟ್ಟಣ್ಣ, “ನನ್ನ ಋಣಮುಕ್ತಳು ಚಿತ್ರದ ಮುಖ್ಯಪಾತ್ರಾನ ನೀನು ಮಾಡಬೇಕು ತಾಯೀ..." ಎನ್ನುತ್ತಿದ್ದಂತೆ ಭಾರತಿಯವರ ಕಂಗಳು ಕೊಳಗಳಾದವು. ಆಗ ಪುಟ್ಟಣ್ಣ, “ಯಾಕವ್ವಾ ಕಣ್ಣೀರು?" ಎಂದು ಕೇಳಿದಾಗ ವಿಷ್ಣು, “ಗುರುಗಳೇ, ಇದು ದುಃಖಾಶ್ರುವಲ್ಲ, ಆನಂದಬಾಷ್ಪ. ನೀವೊಂದು ಚಿತ್ರ ನಿರ್ಮಿಸೋಕ್ಕೆ ಹೊರಟಿದ್ದೀರಿ ಅಂತ ಗೊತ್ತಾಗಿ, ಪಾತ್ರವನ್ನು ಕೇಳೋಕ್ಕೆ ಇಬ್ರೂ ಬಂದಿದ್ವಿ" ಎಂದರು. ಈಗ ಕಣ್ಣೀರಾಗುವ ಸರದಿ ಪುಟ್ಟಣ್ಣನವರದ್ದಾಗಿತ್ತು, ಅವರು ಸ್ವಲ್ಪ ಸಾವರಿಸಿ ಕೊಂಡು ವಿಷ್ಣುವಿನ ಕಂಗಳನ್ನೇ ದಿಟ್ಟಿಸುತ್ತಾ, “ಆದ್ರೆ ಪುಟ್ಟೋನೇ... ಈ ಚಿತ್ರದಲ್ಲೂ ನಿನಗೆ ತಕ್ಕನಾದ ಪಾತ್ರ ಇಲ್ವ ಬಂಗಾರಾ" ಎನ್ನುತ್ತಾ ಅವರ ತಲೆ ನೇವರಿಸಿದರು.

ಪುಟ್ಟಣ್ಣನವರ ಹಸ್ತದ ಸ್ಪರ್ಶಸುಖದ ತೇಲುತ್ತಿದ್ದ ವಿಷ್ಣು, “ಪರವಾಗಿಲ್ಲ ಗುರುಗಳೇ... ಅದಕ್ಕಾಗಿ ನನ್ನ ಉಸಿರು ಇರೋವರೆಗೂ ಕಾಯ್ತಾನೇ ಇರ್ತೀನಿ... ಚಿತ್ರರಂಗದಲ್ಲಿ ನನಗೆ ನೀವೇ ಮರುಜನ್ಮ ನೀಡಬೇಕು" ಎಂದರು ಗದ್ಗದಿತರಾಗಿ. ಆದರೆ, ಆ ಕಾಲ ಬರಲೇ ಇಲ್ಲ...

(ಮುಂದುವರಿಯುವುದು)