ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat Column: ಇಂದಿಗೂ ಜಪಾನಿನಲ್ಲಿ ಚಾಲ್ತಿಯಲ್ಲಿರುವ ಮಾನವ ರಿಕ್ಷಾ !

ತಮ್ಮ ಪೂರ್ವಿಕರು ಮಾಡಿಕೊಂಡು ಬಂದಿರುವ ಕಸುಬನ್ನು ಮುಂದುವರಿಸಿಕೊಂಡು ಹೋಗ ಬೇಕು ಎಂಬ ಕಾರಣದಿಂದ ಇನ್ನೂ ಆ ವೃತ್ತಿಗೆ ಅಂಟಿಕೊಂಡಿದ್ದಾರೆ. ಅವರು ಬೇರೆ ಯಾವ ರಂಗದದರೂ ಕಸಬು ಗಿಟ್ಟಿಸಿಕೊಳ್ಳಲು ಶಕ್ತರು. ಆದರೂ ಆ ಕಠಿಣ ವೃತ್ತಿಯನ್ನು ನೆಚ್ಚಿಕೊಂಡಿ ರುವುದು ಅವರ ಕಾಯಕ ನಿಷ್ಠೆಗೆ ನಿದರ್ಶನ.

ಇಂದಿಗೂ ಜಪಾನಿನಲ್ಲಿ ಚಾಲ್ತಿಯಲ್ಲಿರುವ ಮಾನವ ರಿಕ್ಷಾ !

ಇದೇ ಅಂತರಂಗ ಸುದ್ದಿ

ಜಪಾನಿಗೆ ಭೇಟಿ ನೀಡುವವರಿಗೆ ಇಂದಿಗೂ ಅಚ್ಚರಿ ಮೂಡಿಸುವ ಸಂಗತಿ ಅಂದರೆ ಎರಡು ಚಕ್ರಗಳಿರುವ, ಹಿಂಬದಿಯಲ್ಲಿ ಆಸನವನ್ನು ಹೊಂದಿರುವ ಗಾಡಿಯಲ್ಲಿ 2-3 ಜನರನ್ನು ಕುಳ್ಳಿರಿಸಿಕೊಂಡು ಎಳೆಯುವ ಪದ್ಧತಿ ಇನ್ನೂ ಅಸ್ತಿತ್ವದಲ್ಲಿರುವುದು. ನಮ್ಮ ದೇಶದ ಅನೇಕ ನಗರಗಳಲ್ಲಿ ಸೈಕಲ್ ರಿಕ್ಷಾಗಳಿವೆ. ಆದರೆ ಜಪಾನಿನಲ್ಲಿ ಈ ದಿನಗಳಲ್ಲೂ ಮಾನವ ರಿಕ್ಷಾ ಗಳಿವೆ. ಎಳೆಯುವ ಗಾಡಿಯಲ್ಲಿ ಕಟ್ಟುಮಸ್ತಾದ ಯುವಕರು ಪ್ರವಾಸಿಗರನ್ನು ಕುಳ್ಳಿರಿಸಿ ಕೊಂಡು ಅನಾಯಾಸವಾಗಿ 2-3 ಕಿ.ಮೀ. ದೂರ ಎಳೆದುಕೊಂಡು ಹೋಗುತ್ತಾರೆ. ಜಪಾನಿ ನಂಥ ಆಧುನಿಕ ಅಥವಾ ಮುಂದುವರಿದ ದೇಶದಲ್ಲಿ ಮಾನವ ರಿಕ್ಷಾ ಇನ್ನೂ ಜೀವಂತ ವಾಗಿರುವುದು ನಿಜಕ್ಕೂ ಸೋಜಿಗವೇ. ಇವರಿಗೆ ಜಪಾನಿ ಭಾಷೆಯಲ್ಲಿ ‘ರಿಕ್ಷಾಮನ್’ ಅಥವಾ ‘ಕುರುಮಾಯಾ’ ಎಂದು ಕರೆಯು ತ್ತಾರೆ. ಅವರು ಮೂಲತಃ ಮಹಾ ದಾಂಢಿಗರು. ಎಂಥ ದಢೂತಿಗಳು ಕುಳಿತರೂ ಅನಾಯಾಸವಾಗಿ ಎಳೆದುಕೊಂಡು ಹೋಗಬಲ್ಲರು. ಅವರಲ್ಲಿ ಕೆಲವರು ಸ್ಪುರದ್ರೂಪಿಗಳು. ಆದರೂ ಅವರು ಈ ವೃತ್ತಿಯನ್ನು ನೆಚ್ಚಿಕೊಂಡಿರಲು ಅದು ಅವರ ಕುಲಕಸುಬಾ ಗಿರುವುದೇ ಮುಖ್ಯ ಕಾರಣ.

ತಮ್ಮ ಪೂರ್ವಿಕರು ಮಾಡಿಕೊಂಡು ಬಂದಿರುವ ಕಸುಬನ್ನು ಮುಂದುವರಿಸಿಕೊಂಡು ಹೋಗಬೇಕು ಎಂಬ ಕಾರಣದಿಂದ ಇನ್ನೂ ಆ ವೃತ್ತಿಗೆ ಅಂಟಿಕೊಂಡಿದ್ದಾರೆ. ಅವರು ಬೇರೆ ಯಾವ ರಂಗದದರೂ ಕಸಬು ಗಿಟ್ಟಿಸಿಕೊಳ್ಳಲು ಶಕ್ತರು. ಆದರೂ ಆ ಕಠಿಣ ವೃತ್ತಿಯನ್ನು ನೆಚ್ಚಿಕೊಂಡಿರುವುದು ಅವರ ಕಾಯಕ ನಿಷ್ಠೆಗೆ ನಿದರ್ಶನ.

ರಿಕ್ಷಾ ಎಳೆಯುವ ಕಾರ್ಯವು ಶಾರೀರಿಕವಾಗಿ ಕಷ್ಟಕರವಾದದ್ದು. ಅದಕ್ಕೆ ಹೆಚ್ಚಿನ ಶಕ್ತಿ ಮತ್ತು ಸಹನೆ ಅಗತ್ಯ. ತಮ್ಮ ಗ್ರಾಹಕರನ್ನು ಅವರು ಹೇಳಿದ ವಿವಿಧ ಸ್ಥಳಗಳಿಗೆ ಸುರಕ್ಷಿತ ವಾಗಿ ಮತ್ತು ಸಮಯಕ್ಕೆ ಸರಿಯಾಗಿ ತಲುಪಿಸಲು ಬದ್ಧರು. ಇವರು ತಮ್ಮ ಕೆಲಸಕ್ಕೆ ಹೆಚ್ಚಿನ ಹಣವನ್ನು ಪ್ರವಾಸಿಗರಿಂದ ಸುಲಿಗೆ ಮಾಡುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಲಗೇಜ್‌ ನಿರ್ವಹಣೆ

19ನೇ ಶತಮಾನದ ಮಧ್ಯದಲ್ಲಿ ಜಪಾನಿನಲ್ಲಿ ಮಾನವ ರಿಕ್ಷಾಗಳು ಆರಂಭವಾದವು. ಇವು ಶೀಘ್ರದ ನಗರ ಸಾರಿಗೆಯಲ್ಲಿ ಪ್ರಮುಖ ಪಾತ್ರವಹಿಸಿದವು. ಈ ರಿಕ್ಷಾಕ್ಕೆ ಎರಡು ಚಕ್ರಗಳು ಮತ್ತು ಮುಂದೆ ಒಂದು ಹ್ಯಾಂಡಲ್ ಇರುತ್ತದೆ. ಅದನ್ನು ಒಬ್ಬ ವ್ಯಕ್ತಿ (ರಿಕ್ಷಾ ಚಾಲಕ) ತನ್ನ ಶಕ್ತಿಯಿಂದ ಎಳೆಯುತ್ತಾನೆ. ತೀರಾ ಘಟ್ಟ ಅಥವಾ ತೀರಾ ಇಳಕಲು ಇದ್ದರೂ ಎಳೆಯು ವುದು ಮತ್ತು ನಿಯಂತ್ರಿಸುವುದು ಕಷ್ಟವೇ. ಸಮತಟ್ಟಾದ ಪ್ರದೇಶಗಳಲ್ಲಿದ್ದರೆ ವಾಸಿ.

ಆದರೂ ಸಣ್ಣ-ಪುಟ್ಟ ಏರು-ಇಳಕಲುಗಳು ಇದ್ದೇ ಇರುವುದರಿಂದ, 2-3 ಜನರನ್ನು ಕುಳ್ಳಿರಿಸಿಕೊಂಡು ಎಳೆಯುವುದು ಅತ್ಯಂತ ಕಠಿಣ ಕೆಲಸವೇ. ಇವು ಆರಂಭದಲ್ಲಿ ಪ್ರವಾಸಿ ಗರು ಮತ್ತು ಶ್ರೀಮಂತ ವರ್ಗದವರಿಗಾಗಿ ಬಳಕೆಯಾಗುತ್ತಿದ್ದವು. ಈಗ ಅದನ್ನು ಹೆಚ್ಚಾಗಿ ಪ್ರವಾಸಿಗರು ಬಳಸುವಂತಾಗಿದೆ.

ಈ ರಿಕ್ಷಾಗಳು ಜಪಾನಿನ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ. ಪ್ರವಾಸಿಗರಿಗೆ ನಗರವನ್ನು ಅನುಭವಿಸಲು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಅರಿಯಲು ಇವು ಸಹಾಯಕ. ಟೋಕಿಯೊ, ಕ್ಯೋಟೋ, ಓಸಾಕಾ ಮುಂತಾದ ನಗರಗಳಲ್ಲಿ ಮಾನವ ರಿಕ್ಷಾ ಸೇವೆಗಳು ಇನ್ನೂ ಲಭ್ಯವಿದ್ದು, ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತವೆ.

ತಂತ್ರಜ್ಞಾನ ಮತ್ತು ಸಾರಿಗೆ ವ್ಯವಸ್ಥೆಗಳ ಅಭಿವೃದ್ಧಿಯೊಂದಿಗೆ, ಮಾನವ ರಿಕ್ಷಾಗಳ ಬಳಕೆ ಕಡಿಮೆಯಾಗಿದೆ. ಇಂದಿನ ದಿನಗಳಲ್ಲಿ, ಅವುಗಳನ್ನು ಮುಖ್ಯವಾಗಿ ಪ್ರವಾಸೋದ್ಯಮದ ಭಾಗವಾಗಿ ಬಳಸಲಾಗುತ್ತದೆ. ಇವರು ಗಾಡಿಯನ್ನು ಎಳೆಯುತ್ತಾ ನಗರದ ಬಗ್ಗೆ ಮಾಹಿತಿ ನೀಡುತ್ತಾ, ಪ್ರವಾಸಿ ಗೈಡ್‌ಗಳಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ರಿಕ್ಷಾ ಚಾಲಕರಿಗೆ ವಿಶೇಷ ತರಬೇತಿ ನೀಡಲಾಗುತ್ತದೆ ಮತ್ತು ಅವರು ತಮ್ಮ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಪ್ರಯತ್ನಿಸುತ್ತಾರೆ.

ಜಪಾನಿನ ರಿಕ್ಷಾ ಸಂಸ್ಕೃತಿ ಮತ್ತು ರಿಕ್ಷಾ ಚಾಲಕರ ಶ್ರಮವು ದೇಶದ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವೇ ಸರಿ. ಅವರು ತಮ್ಮ ಕಾರ್ಯದ ಮೂಲಕ ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ನಗರವನ್ನು ಹೊಸ ದೃಷ್ಟಿಕೋನದಿಂದ ಅನುಭವಿಸಲು ಸಹಾಯ ಮಾಡು ತ್ತಾರೆ.

ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವ ಮತ್ತು ಜನಪ್ರಿಯತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಟ್ಟುಮಸ್ತಾದ, ಸುಂದರ ಯುವತಿಯರೂ ಮಾನವ ರಿಕ್ಷಾ ಎಳೆಯು ವ ಕಾಯಕದತ್ತ ಆಕರ್ಷಿತರಾಗುತ್ತಿರುವುದು ವಿಶೇಷ. ಈ ಯುವತಿಯರು ಗಾಡಿ ಎಳೆಯು ತ್ತಿದ್ದರೆ, ಅವರ ಜತೆ ಸೆಲ್ಫಿ ತೆಗೆಸಿಕೊಳ್ಳುವುದು, ರೀಲ್ಸ ಮಾಡುವುದು ಜನಪ್ರಿಯವಾಗುತ್ತಿದೆ. ಗಂಡಸರಿಗೆ ಮಾತ್ರ ಸೀಮಿತವಾಗಿದ್ದ ಈ ರಿಕ್ಷಾ ಎಳೆಯುವ ವೃತ್ತಿಗೆ ಹೆಂಗಸರೂ ಪ್ರವೇಶಿಸಿ ದ್ದಾರೆ.

ಮನೆಮಾತಾದ ಜಾಹೀರಾತು

ಅಕಾಗಿ ನ್ಯೂಗುಯೋ (Akagi Nyuguyo) ಎಂಬ ಜಪಾನಿನ ಐಸ್‌ಕ್ರೀಮ್ ತಯಾರಿಕಾ ಕಂಪನಿಯು 25 ವರ್ಷಗಳ ಕಾಲ ತನ್ನ ಪ್ರಸಿದ್ಧ ಐಸ್‌ಕ್ರೀಮ್- ‘ಗರಿಗರಿ ಕುನ್’ (Garigari kun ) ಅನ್ನು 60 ಯೆನ್‌ಗೆ ಮಾರಾಟ ಮಾಡುತ್ತಾ ಬಂದಿತ್ತು. ಗರಿಗರಿ ಕುನ್ 1981ರಲ್ಲಿ ಮಾರು ಕಟ್ಟೆ ಪ್ರವೇಶಿಸಿತು ಮತ್ತು ಇಂದಿಗೂ ಅದು ಜಪಾನಿನಲ್ಲಿ ಅತ್ಯಂತ ಜನಪ್ರಿಯವಾದ ಐಸ್ ಕ್ರೀಮ್ ಪಾಪ್ಸಿಕಲ್ ಆಗಿ ಉಳಿದಿದೆ.

ಇದನ್ನು ಮುಖ್ಯವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದ್ದರೂ, ವಯಸ್ಕರು ಸಹ ಇದನ್ನು ಸಮಾನವಾಗಿ ಪ್ರೀತಿಸುತ್ತಾರೆ. ವಿಶಿಷ್ಟವಾದ ತೇವವಾದ ಬಣ್ಣ, ಮೆಲುಕು ಹಾಕಿ ದಾಗ ಬರುವ ಗರಿಗರಿ (crunchy) ಶಬ್ದ ಮತ್ತು ವಿವಿಧ ಫೇವರ್‌ಗಳು ಇದನ್ನು ಜನಪ್ರಿಯ ಗೊಳಿಸಿವೆ. ಆದರೆ ಉತ್ಪಾದನಾ ವೆಚ್ಚಗಳು ಹೆಚ್ಚಾದ ಕಾರಣ, ಈ ಕಂಪನಿಯು 2016ರಲ್ಲಿ ಇದರ ಬೆಲೆಯನ್ನು 60 ಯೆನ್‌ನಿಂದ 70 ಯೆನ್‌ಗೆ ಹೆಚ್ಚಿಸಲು ನಿರ್ಧರಿಸಿತು.

ಇದೊಂದು ಸಣ್ಣ ಬೆಲೆ ಏರಿಕೆ ಆಗಿದ್ದರೂ, ಗ್ರಾಹಕರಿಗೆ ಇದನ್ನು ಸಮರ್ಪಕವಾಗಿ ವಿವರಿ ಸುವ ಉದ್ದೇಶದಿಂದ, ಅಕಾಗಿ ನ್ಯೂಗುಯೋ ಒಂದು ವಿಶಿಷ್ಟವಾದ 60 ಸೆಕೆಂಡಿನ ವಾಣಿಜ್ಯ ಜಾಹೀರಾತನ್ನು ಬಿಡುಗಡೆ ಮಾಡಿತು. ಪ್ರಪಂಚದ ಬಹುತೇಕ ಭಾಗಗಳಲ್ಲಿ, 10 ಯೆನ್ (ಸುಮಾರು 10 ರುಪಾಯಿ) ಹೆಚ್ಚಳವು ತೀರಾ ಕ್ಷುಲ್ಲಕ ವಿಷಯವೇ. ಆದರೆ ಜಪಾನಿ ನಲ್ಲಿ, ಗ್ರಾಹಕರಿಗೆ ಯಾವುದೇ ಬೆಲೆ ಏರಿಕೆಯ ವಿವರಗಳನ್ನು ಪ್ರಾಮಾಣಿಕವಾಗಿ, ಸಂವೇದನಾ ಶೀಲ ರೀತಿಯಲ್ಲಿ ವಿವರಿಸಬೇಕಲ್ಲ?

ಈ ಜಾಹೀರಾತಿನಲ್ಲಿ, ಕಂಪನಿಯ ನೌಕರರು, ಮೇಲ್ದರ್ಜೆಯ ಅಧಿಕಾರಿಗಳು ಮತ್ತು ನಿರ್ವಾ ಹಕರು ಒಟ್ಟಾಗಿ ಬಂದು ಬೆಲೆ ಹೆಚ್ಚಳಕ್ಕಾಗಿ ಶ್ರದ್ಧೆಯಿಂದ ಕ್ಷಮೆ ಕೋರುತ್ತಾರೆ. ಅವರು ಬಹಳ ಗಂಭೀರ ಮತ್ತು ದುಃಖಿತ ಮುಖಭಾವದೊಂದಿಗೆ, ಬೆಲೆ ಏರಿಸಲು ತಾವು ಒಲ್ಲದ ಮನಸ್ಸಿನಿಂದ ಒಪ್ಪುತ್ತಿರುವುದಾಗಿ ಹೇಳುತ್ತಾರೆ.

ಈ ದೃಶ್ಯಗಳು ವಿಶೇಷವಾಗಿ ಪ್ರೇಕ್ಷಕರ ಹೃದಯವನ್ನು ಕಲಕುತ್ತವೆ. ಜಪಾನಿನಲ್ಲಿ, ಗ್ರಾಹಕ ರೊಂದಿಗೆ ನೇರವಾಗಿ ಸಂವಹಿಸಲು ಕಂಪನಿಗಳು ಈ ರೀತಿಯ ಪ್ರಾಮಾಣಿಕ ಮತ್ತು ವಿನಯ ಶೀಲ ಧೋರಣೆಯನ್ನು ಅನುಸರಿಸುವುದುಂಟು. ಈ ಜಾಹೀರಾತು ಏಕಾಏಕಿ ಬಹಳ ಜನಪ್ರಿಯವಾಯಿತು ಹಾಗೂ ಜನರು ಇದರ ಪ್ರಾಮಾಣಿಕತೆ ಮತ್ತು ಬೆಲೆ ಏರಿಕೆ ಅನಿವಾ ರ್ಯವನ್ನು ಮೆಚ್ಚಿದರು.

ಇದು ಅಪ್ಪಟ ಜಪಾನಿ ಸ್ಟೈಲ್‌. ಗ್ರಾಹಕರ ಮುಂದೆ ಸಾಧ್ಯವಾದಷ್ಟು ಪಾರದರ್ಶಕ ವಾಗಿರುವುದು ಅವರ ಸ್ವಭಾವ. ಇದ್ದಿದ್ದನ್ನು ಇದ್ದ ಹಾಗೆ ನಿವೇದಿಸಿಕೊಳ್ಳುವುದು ಅವರ ಹುಟ್ಟುಗುಣ. ಹೀಗಾಗಿ ಈ ಜಾಹೀರಾತು ಬಹುಬೇಗ ಮನೆಮಾತಾಯಿತು. ಈ ಘಟನೆಯು ಜಪಾನಿನ ವ್ಯಾಪಾರ ಸಂಸ್ಕೃತಿ, ಗ್ರಾಹಕನೊಂದಿಗೆ ಹೊಂದಿರುವ ಬಾಂಧವ್ಯ ಮತ್ತು ಅಕಾಗಿ ನ್ಯೂಗುಯೋ ಸಂಸ್ಥೆಯ ವಿನಮ್ರತೆಯ ಪ್ರತೀಕ ಎಂದು ಜನರು ಭಾವಿಸಿದರು.

ಬೆಲೆ ಏರಿಕೆಯು ಅನಿವಾರ್ಯವಾದರೂ, ಗ್ರಾಹಕರಿಗೆ ಅದನ್ನು ಸ್ಪಷ್ಟವಾಗಿ ತಿಳಿಸಿ, ಅವರೊಂದಿಗೆ ನೇರವಾಗಿ ಮಾತನಾಡಿ, ಅವರ ಭಾವನೆಗಳನ್ನು ಗೌರವಿಸುವ ಈ ಕ್ರಮ ಜಗತ್ತಿನ ಅನೇಕ ಕಂಪನಿಗಳಿಗೂ ಮಾದರಿಯಾಯಿತು. ಆ ಜಾಹೀರಾತಿನಲ್ಲಿರುವ ಪ್ರಮುಖ ಅಂಶಗಳೆಂದರೆ, ೧. ಗಂಭೀರ ಮುಖಭಾವ: ಜಾಹೀರಾತಿನಲ್ಲಿ ನೌಕರರು ಮತ್ತು ಕಂಪನಿಯ ಹಿರಿಯ ಅಧಿಕಾರಿಗಳು ತುಂಬಾ ಗಂಭೀರ ಮತ್ತು ದುಃಖಿತ ಮುಖಭಾವವನ್ನು ತಾಳುತ್ತಾರೆ. ೨. ಗೌರವಪೂರ್ಣ ಕ್ಷಮೆ: ಅವರು ಬೆಲೆ ಹೆಚ್ಚಳ ಮಾಡುವ ಅನಿವಾರ್ಯತೆಯನ್ನು ವಿವರಿಸುತ್ತಾ, ಗ್ರಾಹಕರೊಂದಿಗೆ ಕ್ಷಮೆ ಕೋರುತ್ತಾರೆ. ೩. ಅಂತರಂಗದ ದೃಶ್ಯಗಳು: ಕಂಪನಿ ಯ ಒಳಾಂಗಣದಲ್ಲಿ, ಉನ್ನತ ನಿರ್ವಾಹಕರು ಜನರ ಮುಂದೆ ನಿಂತು ತಲೆ ತಗ್ಗಿಸಿ ಕ್ಷಮೆ ಕೇಳುವ ದೃಶ್ಯಗಳು ಕಂಡುಬರುತ್ತವೆ. ೪. ಭಾವನಾತ್ಮಕ ಸಂಗೀತ: ಹಿನ್ನೆಲೆಯಲ್ಲಿ ನಿಧಾನ ಗತಿಯ, ಭಾವನಾತ್ಮಕ ಸಂಗೀತವನ್ನು ಬಳಸಲಾಗಿದೆ, ಇದು ಪ್ರೇಕ್ಷಕರಿಗೆ ತೀವ್ರ ಭಾವನಾತ್ಮಕ ಪ್ರತಿಕ್ರಿಯೆ ಉಂಟುಮಾಡುತ್ತದೆ. ೫. ‘ಕ್ಷಮಿಸಿ’ ಎಂಬ ನಿರೀಕ್ಷೆ: ಜಾಹೀರಾತಿನ ಕೊನೆಯಲ್ಲಿ, ಕಂಪನಿಯು “ಈ ಹೆಚ್ಚಳ ನಿಮಗೆ ತೊಂದರೆಯಾಗಿದೆಯೆಂದು ನಮಗೆ ಗೊತ್ತು, ದಯ ವಿಟ್ಟು ನಮ್ಮನ್ನು ಕ್ಷಮಿಸಿ" ಎಂಬ ಸಂದೇಶವನ್ನು ನೀಡುತ್ತದೆ.

ಈ ಜಾಹೀರಾತು ತಕ್ಷಣವೇ ಜಪಾನಿನಾದ್ಯಂತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ವೈರಲ್ ಆಯಿತು. ಜನರು ಇದನ್ನು ಈ ಎಲ್ಲ ಕಾರಣಗಳಿಂದ ಸಕಾರಾತ್ಮಕವಾಗಿ ಸ್ವೀಕರಿಸಿ ದರು: ೧. ಪ್ರಾಮಾಣಿಕತೆ ಮತ್ತು ಗ್ರಾಹಕನ ಗೌರವ: ಹಲವಾರು ಜನರು ಅಕಾಗಿ ನ್ಯೂಗು ಯೋ ಸಂಸ್ಥೆಯ ಈ ರೀತಿಯ ವಿನಯಶೀಲ ಗುಣವನ್ನು ಮೆಚ್ಚಿದರು. ಕಂಪನಿಯು ತನ್ನ ಗ್ರಾಹಕರನ್ನು ಎಷ್ಟು ಗೌರವಿಸುತ್ತದೆಯೆಂಬುದನ್ನು ಇದು ತೋರಿಸಿತು. ೨. ಸನ್ನಿವೇಶಾತ್ಮಕ ಹಾಸ್ಯ: ಕೆಲವರು ಇದನ್ನು ಹಾಸ್ಯಾಸ್ಪದ ರೀತಿಯಲ್ಲಿ ನೋಡಿ, ಜಪಾನಿ ವ್ಯವಹಾರ ಚಟುವಟಿಕೆಗಳು ಎಷ್ಟು ಪ್ರಾಮಾಣಿಕವಾಗಿರುತ್ತವೆ ಎಂಬುದನ್ನು ಗಮನಿಸಿದರು. ೩. ಅಂತಾ ರಾಷ್ಟ್ರೀಯ ಗಮನ: ಈ ಜಾಹೀರಾತು ಜಪಾನಿನಿಂದ ಹೊರತಾಗಿ ಅನೇಕ ದೇಶಗಳಲ್ಲಿ ಸುದ್ದಿಯಾಯಿತು, ಅನೇಕ ಅಂತಾರಾಷ್ಟ್ರೀಯ ಮಾಧ್ಯಮಗಳು ಇದನ್ನು ಶ್ಲಾಘಿಸಿದವು.

ಇದು ಜಪಾನಿನ ವ್ಯಾಪಾರ ಸಂಸ್ಕೃತಿಯ ಪ್ರತಿಬಿಂಬ ಎಂದು ಮಾಧ್ಯಮಗಳು ಬಣ್ಣಿಸಿದವು. ಜಪಾನಿನಲ್ಲಿ ಗ್ರಾಹಕರ ಸೇವೆಗೆ ವಿಶೇಷ ಆದ್ಯತೆ. ಗ್ರಾಹಕರೊಂದಿಗೆ ನೇರವಾಗಿ ಸಂವಹಿಸಲು, ಅವರ ಭಾವನೆಗಳನ್ನು ಗೌರವಿಸಲು ಮತ್ತು ವ್ಯವಹಾರದಲ್ಲಿ ಅತ್ಯಂತ ಪ್ರಾಮಾಣಿಕತೆ ತೋರಿಸಲು ಅಕಾಗಿ ನ್ಯೂಗುಯೋ ಮಾಡಿದ್ದ ಈ ಜಾಹೀರಾತು ಒಂದು ಪರಿಪೂರ್ಣ ಉದಾಹರಣೆ. ಜಪಾನಿನ ಕಂಪನಿಗಳು ‘ಒಮೊತೆನಾಶಿ’ (Omotenashi) ಎಂಬ ಗ್ರಾಹಕ ಸೇವಾ ತತ್ವವನ್ನು ಅನುಸರಿಸುತ್ತವೆ, ಇದರಲ್ಲಿ ಗ್ರಾಹಕರನ್ನು ಗೌರವಿಸಿ, ಅವರ ಅನುಭವ ವನ್ನು ಹೆಚ್ಚು ಸಂತೋಷಕರವಾಗಿಸಲು ಶ್ರಮಿಸಲಾಗುತ್ತದೆ. ಈ ಜಾಹೀರಾತು ಈಗಲೂ ಮನೆ ಮಾತು.

ವಲಸೆ ನೀತಿ

ಜಪಾನಿನಲ್ಲಿ ವಲಸೆ (Immigration) ಪ್ರಮಾಣವು ತುಂಬಾ ಕಡಿಮೆ. ಆ ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ.98.5ರಷ್ಟು ಜನರು ಶುದ್ಧ ಜಪಾನಿಯರು. ಉಳಿದ ಶೇ.1.5 ರಷ್ಟು ಜನರು ಮಾತ್ರ ವಿದೇಶಿ ಮೂಲದವರಾಗಿದ್ದಾರೆ. ಇದಕ್ಕೆ ಐತಿಹಾಸಿಕ, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿದ್ದಿರಬಹುದು. ಇದು ಜಗತ್ತಿನಲ್ಲಿ ಅತ್ಯಂತ ಏಕಾಂಗೀಯ ( homogeneous) ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದೆ.

ಜಪಾನ್ ಒಂದು ದ್ವೀಪ ರಾಷ್ಟ್ರವಾಗಿರುವುದರಿಂದ, ಅದು ಇತಿಹಾಸದಲ್ಲಿ ಬಹು ಕಾಲ ಪ್ರತ್ಯೇಕ ( isolated) ಜೀವನವನ್ನು ಅಳವಡಿಸಿಕೊಂಡಿತ್ತು. 1603ರಿಂದ 1868ರವರೆಗೆ, ಟೊಕುಗಾವಾ ಶೋಗುನೇಟು ಆಡಳಿತದಲ್ಲಿ ‘ಸಾಕೋಕು’ (Sakoku) ಎಂಬ ನೀತಿ ಜಾರಿಗೆ ಇತ್ತು. ಇದರ ಮೂಲಕ ಜಪಾನ್ ತನ್ನನ್ನು ಬೇರೆ ದೇಶಗಳಿಂದ ಸಂಪೂರ್ಣವಾಗಿ ಪ್ರತ್ಯೇಕಿಸಿ ಕೊಂಡಿತ್ತು. ಆ ಕಾಲದಲ್ಲಿ ವಿದೇಶಿಗರು ದೇಶದೊಳಗೆ ಪ್ರವೇಶಿಸಲು ಕಠಿಣ ನಿಯಮಗಳನ್ನು ಅನುಸರಿಸಬೇಕಾಗುತ್ತಿತ್ತು.

ಈ ಪ್ರತ್ಯೇಕತೆಯ ಪರಿಣಾಮವಾಗಿ, ದೇಶದ ಸಾಂಸ್ಕೃತಿಕ ಏಕತೆಯನ್ನು ಕಾಯ್ದುಕೊಳ್ಳಲು ಸಹಾಯಕವಾಯಿತು ಎಂಬುದನ್ನು ಮರೆಯುವಂತಿಲ್ಲ. ಜಪಾನಿ ಭಾಷೆ ಅತಿ ಸಂಕೀರ್ಣ ಹಾಗೂ ವಿಶೇಷ ಲಿಪಿಯುಳ್ಳದ್ದು. ಬೇರೆಯವರಿಗೆ ಅದನ್ನು ಕಲಿಯುವುದು ಕಬ್ಬಿಣದ ಕಡಲೆಯೇ. ಜಪಾನಿಯರಿಗೆ ತಮ್ಮ ಭಾಷೆ ಅಂದರೆ ಅತೀವ ಪ್ರೀತಿ, ಅಭಿಮಾನ. ಅವರು ಬೇರೆ ಭಾಷೆ ಕಲಿಯಲಾರರು.

ಬೇರೆಯವರು ತಮ್ಮ ಭಾಷೆ ಕಲಿಯಲಿ ಎಂದೂ ನಿರೀಕ್ಷಿಸಲಾರರು. ಇವೆಲ್ಲವುಗಳ ಪರಿಣಾಮ ವಿದೇಶಿಗರಿಗೆ ಸ್ಥಳೀಯ ಜನತೆ ಮತ್ತು ವ್ಯವಸ್ಥೆಗಳಲ್ಲಿ ಹೊಂದಿಕೊಳ್ಳುವುದು ಸವಾಲಾಗಿ ಪರಿಣಮಿಸುತ್ತದೆ. ಜಪಾನಿನ ಸಂಸ್ಕೃತಿಯಲ್ಲಿ ಪರಂಪರೆಯ ಹಾಗೂ ಸಾಮಾ ಜಿಕ ಶಿಷ್ಟಾಚಾರಗಳಿಗೆ ಬಹಳ ಒತ್ತು ನೀಡಲಾಗುತ್ತದೆ. ಹೊಸ ಸಂಸ್ಕೃತಿ ಅಥವಾ ಬಾಹ್ಯ ಪ್ರಭಾವಗಳು ದೇಶದ ಪರಂಪರೆ ಮತ್ತು ಸಮಗ್ರತೆಯನ್ನು ಹಾನಿಗೊಳಿಸಬಹುದು ಎಂಬ ಭಯದಿಂದ ವಲಸೆ ಸಂಬಂಽತ ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

ಜಪಾನಿನಲ್ಲಿ ವಲಸೆ ಅಥವಾ ಕಾರ್ಯನಿಮಿತ್ತ ಪ್ರವಾಸ ಮಾಡುವವರಿಗೆ ಕಠಿಣ ವೀಸಾ ನಿಯಮಗಳಿವೆ. ದೇಶವು ವಲಸಿಗರನ್ನು ಆದರದಿಂದ ಸ್ವೀಕರಿಸುವ ವ್ಯವಸ್ಥೆಯನ್ನು ದೀರ್ಘ ಕಾಲ ಅಳವಡಿಸಿಲ್ಲ. ಅಲ್ಲದೆ, ಶಾಶ್ವತ ನಿವಾಸಿ ಸ್ಥಾನಮಾನ (Permanent Residency) ಪಡೆಯಲು ಹೆಚ್ಚು ಸಮಯ ಮತ್ತು ಕಠಿಣ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.

ಜಪಾನಿನಲ್ಲಿ ಉದ್ಯೋಗ ವ್ಯವಸ್ಥೆಯು ಹೆಚ್ಚು ಸ್ಪರ್ಧಾತ್ಮಕವಾಗಿದೆ. ಅಲ್ಲದೆ, ದೇಶದ ಕಾರ್ಮಿಕ ಮಾರುಕಟ್ಟೆಯು ಮುಖ್ಯವಾಗಿ ಸ್ಥಳೀಯ ಜನತೆಗೆ ಪೂರಕವಾಗಿ ನಿರ್ಮಾಣ ಗೊಂಡಿದ್ದು, ವಿದೇಶಿಗರಿಗೆ ಇದು ಸವಾಲಾಗುತ್ತದೆ. ಜಪಾನಿನಲ್ಲಿ ಜನಸಂಖ್ಯೆ ನಿಧಾನವಾಗಿ ಕುಸಿಯುತ್ತಿದೆ. ಜನಸಂಖ್ಯೆಯಲ್ಲಿ ಹಿರಿಯ ನಾಗರಿಕರ ಪ್ರಮಾಣ ಹೆಚ್ಚಳವಾಗುತ್ತಿದ್ದು, ಯುವಜನರ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಶ್ರಮಶಕ್ತಿ ಕೊರತೆ ಮತ್ತು ಆರ್ಥಿಕತೆಯ ಮೇಲೆ ದೊಡ್ಡ ಪ್ರಭಾವ ಬೀರುತ್ತಿದೆ. ವಲಸೆ ಮೂಲಕ ಶ್ರಮಶಕ್ತಿಯನ್ನು ಹೆಚ್ಚಿಸಬಹು ದಾದರೂ, ಕಠಿಣ ನೀತಿಗಳಿಂದಾಗಿ ಇದಕ್ಕೆ ಮಾರ್ಗವನ್ನು ಹೊಂದಿಸಲು ಸಮಸ್ಯೆಯಾಗಿದೆ.

ಆರ್ಥಿಕ ಬೆಳವಣಿಗೆಯನ್ನು ನಿರಂತರವಾಗಿ ಮುಂದುವರಿಸಲು ಜಪಾನಿಗೆ ಹೊಸ ಶ್ರಮಶಕ್ತಿ ಅಗತ್ಯವಾಗಿದೆ. ಆದರೆ ವಲಸೆ ನೀತಿ ಜನರಿಗೆ ಅವಕಾಶ ನೀಡಲು ಅಡ್ಡ ಬಂದಿದೆ. ಜಪಾನಿ ನಲ್ಲಿ ವಲಸೆ ಕಡಿಮೆ ಇರುವುದರಿಂದ ಬಾಹ್ಯ ಸಂಸ್ಕೃತಿಗಳ ಪ್ರಭಾವ ಕಡಿಮೆ. ಇತರ ದೇಶ ಗಳ ಪೈಕಿ ಇದು ಜಪಾನಿನ ಸಾಂಸ್ಕೃತಿಕ ವೈಶಿಷ್ಟ್ಯವನ್ನು ಉಳಿಸಲು ಸಹಾಯಕ ವಾಗಿದೆ. ಆದರೆ ಅದೇ ಸಮಯದಲ್ಲಿ ಜಾಗತೀಕರಣದ ಪ್ರಯೋಜನಗಳನ್ನು ಸಂಪೂರ್ಣ ವಾಗಿ ಬಳಸಿಕೊಳ್ಳಲು ವಿಫಲವಾಗುವ ಸಾಧ್ಯತೆಯೂ ಇದೆ.

ಇತ್ತೀಚಿನ ವರ್ಷಗಳಲ್ಲಿ, ಜಪಾನ್ ತನ್ನ ವಲಸೆ ನೀತಿಗಳನ್ನು ಸಡಿಲಿಸಲು ಕೆಲವು ಕ್ರಮ ಗಳನ್ನು ತೆಗೆದುಕೊಂಡಿದೆ. ನಿರ್ದಿಷ್ಟ ವೃತ್ತಿ ( skilled worker) ಕ್ಷೇತ್ರಗಳಲ್ಲಿ ವಿದೇಶಿ ಕಾರ್ಮಿಕರನ್ನು ಆಕರ್ಷಿಸಲು ಅನುಕೂಲಕಾರಿ ನಿಯಮಗಳನ್ನು ಜಾರಿಗೆ ತರಲಾಗಿದೆ. ಅನೇಕ ಆರೋಗ್ಯ ಸೇವೆ, ತಂತ್ರಜ್ಞಾನ ಮತ್ತು ರೆಸ್ಟೋರೆಂಟ್ ಉದ್ಯೋಗಗಳಲ್ಲಿ ವಿದೇಶಿ ಕಾರ್ಮಿಕರನ್ನು ತರಲು ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಭವಿಷ್ಯದಲ್ಲಿ, ಜಪಾನ್ ಜಾಗತೀಕರಣದ ಒತ್ತಡಕ್ಕೆ ಅನುಗುಣವಾಗಿ ತನ್ನ ನೀತಿಗಳನ್ನು ಮತ್ತಷ್ಟು ನವೀಕರಿಸ ಬಹುದು.

ಮನೆಯೊಳಗೆ ಚಪ್ಪಲಿ ಧರಿಸಬಹುದೇ?

ಜಪಾನಿನಲ್ಲಿ ಯಾರೂ ತಮ್ಮ ಮನೆಯೊಳಗೆ ಚಪ್ಪಲಿಗಳನ್ನು ಧರಿಸುವುದಿಲ್ಲ. ಈ ಸಂಪ್ರದಾಯವು ಅವರ ಸಂಸ್ಕೃತಿ, ಸ್ವಚ್ಛತೆ ಮತ್ತು ಜೀವನಶೈಲಿಯೊಂದಿಗೆ ನಿಕಟವಾಗಿ ಬೆಳೆದು ಬಂದಿದೆ. ಜಪಾನಿಯರು ಸ್ವಚ್ಛತೆಗೆ ಅತ್ಯಂತ ಪ್ರಾಮುಖ್ಯ ನೀಡುವವರು. ಹೊರಗಿನ ಬೂದಿ, ಧೂಳು, ಕೊಳಕು ಇತ್ಯಾದಿಗಳನ್ನು ಮನೆಯೊಳಗೆ ತರಲೇಕೂಡದು. ಹಾಗಂತ ಜಪಾನಿನ ಬೀದಿಗಳು ಮತ್ತು ಸಾರ್ವಜನಿಕ ಸ್ಥಳಗಳು ಬಹಳ ಶುದ್ಧವಾಗಿರುತ್ತವೆ. ರಸ್ತೆಗಳು ಮನೆಗಿಂತ ಅಥವಾ ಮನೆಯಷ್ಟೇ ಶುದ್ಧವಾಗಿರುತ್ತವೆ. ಆದರೂ ಅವರು ಚಪ್ಪಲಿ ಧರಿಸಿ ಮನೆಯೊಳಗೇ ಆಗಮಿಸುವುದನ್ನು ಇಷ್ಟಪಡುವುದಿಲ್ಲ. ರಸ್ತೆ ಎಷ್ಟೇ ಸ್ವಚ್ಛವಾಗಿದ್ದರೂ, ನೂರಾರು ಜನ ಓಡಾಡುತ್ತಾರೆ. ಅಂದ ಮೇಲೆ ಅದು ನೂರಕ್ಕೆ ನೂರು ಸ್ವಚ್ಛವಾಗಿರಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ.

ಜಪಾನಿ ಮನೆಯಲ್ಲಿ ಮೂಲಭೂತವಾಗಿ ಟಾಟಾಮಿ (Tatami) ಎನ್ನುವ ಚಾಪೆಗಳು (ಮ್ಯಾಟ್‌ಗಳು) ಇದ್ದು, ಅವು ಬಹಳ ನಾಜೂಕಾಗಿ ಮತ್ತು ನೈಸರ್ಗಿಕ ಗಿಡಮೂಲಿಕೆಯಿಂದ ತಯಾರಿಸಲ್ಪಟ್ಟಿರುತ್ತವೆ. ಟಾಟಾಮಿ ಮೇಲೆ ಚಪ್ಪಲಿಗಳನ್ನು ಧರಿಸಿ ನಡೆದುಹೋದರೆ ಅವು ಹಾನಿಗೊಳಗಾಗಬಹುದು. ಅದಕ್ಕಾಗಿ ಟಾಟಾಮಿ ವಾಸ್ತುವನ್ನು ರಕ್ಷಿಸಲು ಕಾಲುಗಳನ್ನು ಒಣಗಿಸಿಕೊಂಡು ಅಥವಾ ಮನೆಯೊಳಗಿನ ವಿಶೇಷ ಚಪ್ಪಲಿಗಳನ್ನು ಧರಿಸುವ ನಿಯಮ ವಿದೆ.

ಜಪಾನಿ ಸಂಸ್ಕೃತಿಯಲ್ಲಿ ಮನೆಗಳನ್ನು ಪವಿತ್ರ ಸ್ಥಳವೆಂದು ಪರಿಗಣಿಸಲಾಗುತ್ತದೆ. ಮನೆ ಯು ಶುದ್ಧವಾಗಿರಬೇಕು ಎಂಬುದರ ಜತೆಗೆ, ಆಧ್ಯಾತ್ಮಿಕ ಶುದ್ಧಿಗೂ ಈ ಸಂಪ್ರದಾಯ ಸಂಬಂಧ ಹೊಂದಿದೆ. ಪ್ರತಿಯೊಬ್ಬ ಜಪಾನಿ ಮನೆಯಲ್ಲಿ ಪ್ರವೇಶದ ಬಾಗಿಲಿನ ಸಮೀಪ ದಲ್ಲಿ (ಜೆಂಕನ್ ಪ್ರದೇಶ)ರುವ ಸ್ಥಳದಲ್ಲಿ ಹೊರಗಿನ ಶೂಗಳನ್ನು ತೆಗೆದು ಸ್ಲಿಪ್ಪರ್ ಅಥವಾ ಚಪ್ಪಲಿ ಧರಿಸುವ ನಿಯಮವಿದೆ. ಮನೆಯೊಳಗಿನ ಸ್ವಚ್ಛತೆ ಕಾಪಾಡಲು, ಶೌಚಾಲಯಕ್ಕೆ ಪ್ರತ್ಯೇಕವಾದ ಟಾಯ್ಲೆಟ್ ಸ್ಲಿಪ್ಪರ್ ಬಳಸುತ್ತಾರೆ.

ಈ ಚಪ್ಪಲಿಗಳನ್ನು ಬೇರೆಡೆ ಬಳಸುವುದಿಲ್ಲ. ಆಹಾರ ಸೇವಿಸುವ ಸ್ಥಳದಲ್ಲಿ ಯಾವುದೇ ರೀತಿಯ ಚಪ್ಪಲಿಗಳನ್ನು ಧರಿಸಬಾರದು. ಇಂದು ಜಪಾನಿನಲ್ಲಿ ಪಾಶ್ಚಾತ್ಯ ಶೈಲಿಯ ಬಂಗಲೆಗಳು ಮತ್ತು ಅಪಾರ್ಟ್‌ಮೆಂಟುಗಳು ಹೆಚ್ಚಾದರೂ, ಮನೆಯೊಳಗೆ ಚಪ್ಪಲಿ ಧರಿ ಸುವ ಸಂಸ್ಕೃತಿ ಇನ್ನೂ ಅಪರೂಪವೇ. ಕೆಲವು ಹೊಸ ಪೀಳಿಗೆಯವರು ಪಶ್ಚಿಮ ಶೈಲಿಯ Indoor shoes ಬಳಸಿದರೂ, ಮನೆಯೊಳಗೇ ಚಪ್ಪಲಿ ಧರಿಸುವ ಬಗ್ಗೆ ಅವರ ತಾತ್ಸರ ಮುಂದುವರಿದಿದೆ.