PM Modi: ವಿದೇಶಿ ಸಂಸತ್ತು ಉದ್ದೇಶಿಸಿ ಗರಿಷ್ಠ ಭಾಷಣ: ಪ್ರಧಾನಿ ಮೋದಿಯೇ ಮೇಲುಗೈ
ವಿದೇಶಗಳ ಸಂಸತ್ತನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಗರಿಷ್ಠ ಭಾಷಣಗಳನ್ನು ಮಾಡಿದ್ದಾರೆ ಎನ್ನುವುದು ಈಗ ದಾಖಲೆಯಾಗಿದೆ. ಪ್ರಧಾನಿ ಮೋದಿ ಅವರನ್ನು ಹೊರತುಪಡಿಸಿ ಭಾರತದ ಹಲವು ಪ್ರಧಾನಿಗಳು ವಿದೇಶಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆದರೆ ಅವರೆಲ್ಲರಿಗಿಂತ ಹೆಚ್ಚು ಮಾತನಾಡಿರುವುದು ಪ್ರಧಾನಿ ಮೋದಿ. ಅವರು ದಾಖಲೆಯ 17 ಭಾಷಣಗಳನ್ನು ಮಾಡಿದ್ದಾರೆ.



ಭಾರತ ಸ್ವಾತಂತ್ಯದ ಬಳಿಕ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಜವಾಹರ್ ಲಾಲ್ ನೆಹರೂ ಅವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರವರೆಗೆ ಭಾರತೀಯ ಪ್ರಧಾನಿಗಳು ವಿದೇಶಿ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇವರಲ್ಲಿ ಗರಿಷ್ಠ ಭಾಷಣ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ.

ಪ್ರಧಾನಿ ನರೇಂದ್ರ ಮೋದಿ ಈಗ ವಿದೇಶಿ ಸಂಸತ್ತುಗಳನ್ನು ಉದ್ದೇಶಿಸಿ ದಾಖಲೆಯ 17 ಭಾಷಣಗಳನ್ನು ಮಾಡಿದ್ದಾರೆ. ಇದು ಹಿಂದೆ ಅಧಿಕಾರ ವಹಿಸಿಕೊಂಡಿದ್ದ ಎಲ್ಲ ಕಾಂಗ್ರೆಸ್ ಪ್ರಧಾನ ಮಂತ್ರಿಗಳು ಮಾಡಿರುವ ಭಾಷಣಗಳ ಒಟ್ಟು ಮೊತ್ತಕ್ಕೆ ಸಮನವಾಗಿದೆ.

2004- 2014ರವರೆಗೆ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಏಳು ವಿದೇಶಿ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದರು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಮಾಡಿರುವ ಗರಿಷ್ಠ ಸಂಖ್ಯೆ ಭಾಷಣ.

1966–1977 ಮತ್ತು 1980–1984ರ ನಡುವೆ ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ನಾಲ್ಕು ವಿದೇಶಿ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದರು. 1966ರವರೆಗೆ ಪ್ರಧಾನಿಯಾಗಿದ್ದ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೂರು ವಿದೇಶಿ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದರು.

ಮೂರು ಬಾರಿ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಅಟಲ್ ಬಿಹಾರಿ ವಾಜಪೇಯಿ ಎರಡು ಬಾರಿ ವಿದೇಶಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದರು. ಅವರು 1996ರಲ್ಲಿ ಕೆಲಕಾಲ 1998ರಿಂದ 1999ರವರೆಗೆ ಮತ್ತು ನಂತರ 1999ರಿಂದ 2004ರವರೆಗೆ ಪೂರ್ಣ ಅವಧಿ ಅಧಿಕಾರ ವಹಿಸಿಕೊಂಡ ಮೊದಲ ಕಾಂಗ್ರೆಸ್ಸೇತರ ನಾಯಕ.

1984ರ ಅಕ್ಟೋಬರ್ 31ರಿಂದ 1989ರ ಡಿಸೆಂಬರ್ 2ರವರೆಗೆ ಭಾರತದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ತಮ್ಮ ತಾಯಿ ಇಂದಿರಾ ಗಾಂಧಿ ಅವರ ಹತ್ಯೆಯ ಬಳಿಕ ಅಧಿಕಾರ ವಹಿಸಿಕೊಂಡರು. 40ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಪ್ರಧಾನಿಯಾಗಿ ದಾಖಲೆ ನಿರ್ಮಿಸಿದ ಅವರು ಎರಡು ಬಾರಿ ವಿದೇಶಿ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡಿದರು.

1991ರ ಜೂನ್ 21ರಿಂದ 1996ರ ಮೇ 16ರವರೆಗೆ ಭಾರತದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹ ರಾವ್ ದೇಶದ ಆರ್ಥಿಕ ಸುಧಾರಣೆ ಮೂಲಕ ಜನಪ್ರಿಯರಾಗಿದ್ದಾರೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಕೇವಲ ಒಂದು ಬಾರಿ ವಿದೇಶಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು.

1977ರ ಮಾರ್ಚ್ 24ರಿಂದ 1979ರ ಜುಲೈ 28ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮೊರಾರ್ಜಿ ದೇಸಾಯಿ ತುರ್ತು ಪರಿಸ್ಥಿತಿಯ ಅನಂತರ ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದರು. ಅವರು ತಮ್ಮ ಅಧಿಕಾರಾವಧಿಯಲ್ಲಿ ಒಂದು ಬಾರಿ ವಿದೇಶಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು.