ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Myanmar Earthquake: 7.7 ತೀವ್ರತೆಯ ಮ್ಯಾನ್ಮಾರ್ ಭೂಕಂಪದ 5 ದಿನಗಳ ನಂತರವೂ ಪವಾಡಸದೃಶವಾಗಿ ಬದುಕುಳಿದ ವ್ಯಕ್ತಿ

ಕಳೆದ ವಾರ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 2,700ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಪವಾಡವೆಂಬಂತೆ 5 ದಿನಗಳಿಂದ ಹೋಟೆಲ್‌ವೊಂದರ ಅವಶೇಷಗಳಡಿ ಸಿಲುಕಿದ ವ್ಯಕ್ತಿ ಬುಧವಾರ ಜೀವಂತವಾಗಿ ಪತ್ತೆಯಾಗಿದ್ದಾನೆ.

ಮ್ಯಾನ್ಮಾರ್ ಭೂಕಂಪ:  5 ದಿನಗಳ ನಂತರವೂ ಬದುಕುಳಿದ ವ್ಯಕ್ತಿ

ಸಾಂದರ್ಭಿಕ ಚಿತ್ರ.

Profile Ramesh B Apr 2, 2025 9:59 PM

ನೈಪಿಡಾವ್: ಕಳೆದ ವಾರ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ (Myanmar Earthquake) 2,700ಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷದ ಅತಿ ದೊಡ್ಡ ನೈಸರ್ಗಿಕ ವಿಪತ್ತು ಎಂದು ಇದನ್ನು ಪರಿಗಣಿಸಲಾಗಿದೆ. ಇನ್ನೂ ಮೂರು ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರಲ್ಲಿ ಎಷ್ಟು ಮಂದಿ ಬದುಕುಳಿದಿದ್ದಾರೆ, ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಕುರಿತು ಇನ್ನೂ ನಿಖರ ಮಾಹಿತಿ ಲಭಿಸಿಲ್ಲ. ಆದರೆ ರಕ್ಷಣಾ ಕಾರ್ಯಾಚರಣೆಯ ವೇಳೆ ಪವಾಡವೆಂಬಂತೆ 5 ದಿನಗಳಿಂದ ಹೋಟೆಲ್‌ವೊಂದರ ಅವಶೇಷಗಳಡಿ ಸಿಲುಕಿದ ವ್ಯಕ್ತಿ ಬುಧವಾರ ಜೀವಂತವಾಗಿ ಪತ್ತೆಯಾಗಿದ್ದಾನೆ. ಆತ ಸುರಕ್ಷಿತವಾಗಿದ್ದು, ಅವಶೇಷಗಳಡಿಯಿಂದ ಆತನನ್ನು ಹೊರ ತೆಗೆದು ವೈದ್ಯಕೀಯ ಚಿಕಿತ್ಸೆಗಾಗಿ ರವಾನಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮ್ಯಾನ್ಮಾರ್ ದೇಶದ ರಾಜಧಾನಿ ನೇಪಿಡಾವ್‌ನಲ್ಲಿರುವ ಕಟ್ಟಡದ ಅವಶೇಷಗಳಿಂದ 26 ವರ್ಷದ ವ್ಯಕ್ತಿಯನ್ನು ಮ್ಯಾನ್ಮಾರ್ ಮತ್ತು ಟರ್ಕಿಶ್ ರಕ್ಷಣಾ ತಂಡವು ಮಧ್ಯರಾತ್ರಿ 12:30ರ ಸುಮಾರಿಗೆ ರಕ್ಷಿಸಿದೆ ಎಂದು ಅಗ್ನಿಶಾಮಕ ಸೇವೆ ಮತ್ತು ದೇಶದ ಆಡಳಿತಾರೂಢ ಮಿಲಿಟರಿ ಸರ್ಕಾರ ಜುಂಟಾ ತಿಳಿಸಿದೆ.



ಈ ಸುದ್ದಿಯನ್ನೂ ಓದಿ: Myanmar Earthquake: ಮ್ಯಾನ್ಮಾರ್‌ ರಣಭೀಕರ ಭೂಕಂಪದ ಸ್ಯಾಟಲೈಟ್‌ ಫೊಟೋಗಳು ರಿಲೀಸ್‌!

ಏರುತ್ತಲೇ ಇರುವ ಮೃತರ ಸಂಖ್ಯೆ

ಮಾ. 29ರಂದು ಮೃತರ ಸಂಖ್ಯೆ ಸಾವಿರದ ಗಡಿಯನ್ನು ದಾಟಿತ್ತು. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿಯುತ್ತಿದ್ದಂತೆಯೇ ಈ ಸಂಖ್ಯೆಯೂ ತೀವ್ರವಾಗಿ ಏರಿಕೆಯಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಈ ಸಂಖ್ಯೆ ಅತಿ ಶೀಘ್ರದಲ್ಲಿ ಮೂರು ಸಾವಿರದ ಗಡಿ ದಾಟುವ ಎಲ್ಲ ಸಾಧ್ಯತೆಗಳು ಇವೆ.

"ಪರಿಸ್ಥಿತಿ ಇನ್ನೂ ಗಂಭೀರವಾಗಿದೆ, ಸಂವಹನ ಮತ್ತು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ವಿಶೇಷವಾಗಿ ಸಾಗಿಂಗ್‌ನಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ" ಎಂದು ವಿಶ್ವಸಂಸ್ಥೆಯ ಯೋಜನಾ ಸೇವೆಗಳ ಕಚೇರಿ (UNOPS) ತೀವ್ರ ಹಾನಿಗೊಳಗಾದ ಪ್ರದೇಶಗಳನ್ನು ಉಲ್ಲೇಖಿಸಿ ಹೇಳಿದೆ.

ಭೂಕಂಪದ ತೀವ್ರತೆಗೆ ಒಳಗಾದ ಆರು ಪ್ರದೇಶಗಳಲ್ಲಿ 28 ದಶಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆಹಾರ, ಆಶ್ರಯ, ನೀರು, ನೈರ್ಮಲ್ಯ, ಮಾನಸಿಕ ಆರೋಗ್ಯ ಬೆಂಬಲ ಮತ್ತು ಇತರ ಸೇವೆಗಳಿಗಾಗಿ $12 ಮಿಲಿಯನ್ ತುರ್ತು ನಿಧಿಯನ್ನು ಮೀಸಲಿಡಲಾಗಿದೆ ಎಂದು UNOPS ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಿಂದಲೂ ಸಹಾಯಹಸ್ತ

ಭೂಕಂಪ ಪೀಡಿತ ಮ್ಯಾನ್ಮಾರ್‌ ಸಹಾಯಕ್ಕೆ ಭಾರತ ಸರ್ಕಾರ ಧಾವಿಸಿದ್ದು, ಇದನ್ನು ʼಆಪರೇಷನ್‌ ಬ್ರಹ್ಮʼ ಎಂದು ಕರೆಯಲಾಗಿದೆ. ಈಗಾಗಲೇ, ಸಂತ್ರಸ್ತರ ಪುನರ್ವಸತಿ ಹಾಗೂ ತುರ್ತು ಅಗತ್ಯಕ್ಕಾಗಿ 16 ಟನ್ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಒಂದು ವಿಮಾನವು ಮಂಡಲೆ ವಿಮಾನ ನಿಲ್ದಾಣವನ್ನು ತಲುಪಿದೆ.

ಭಾರತೀಯ ವೈದ್ಯಕೀಯ ತುಕಡಿಯಿಂದ ಸ್ಥಾಪಿಸಲಾದ ಸೇನಾ ಕ್ಷೇತ್ರ ಆಸ್ಪತ್ರೆಯು ಈವರೆಗೆ ಎರಡು ಪ್ರಮುಖ ಶಸ್ತ್ರಚಿಕಿತ್ಸೆಗಳು ಸೇರಿದಂತೆ ಸುಮಾರು 104 ರೋಗಿಗಳಿಗೆ ಚಿಕಿತ್ಸೆ ನೀಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. NDRF ತಂಡಗಳು ಗಂಗಾ ಘಾಟ್ ಮಂದಿರದಲ್ಲಿಯೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿದೆ.