Beauty Tips: ಆರೋಗ್ಯಕರ ಚರ್ಮ, ಕೂದಲಿನ ಆರೈಕೆಗಾಗಿ ಅರಿಶಿನ ಹೀಗೆ ಬಳಸಿ
ಅರಿಶಿನದಲ್ಲಿ ಹಲವು ರೀತಿಯ ಔಷಧೀಯ ಗುಣಗಳಿವೆ. ಇವು ದೇಹದ ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಜತೆ ಅರಶಿನವು ಚರ್ಮ ಮತ್ತು ಕೂದಲಿನ ಆರೈಕೆಗೂ ಸಹಾಯ ಮಾಡುತ್ತದೆ. ಅರಶಿನವು ಮೊಡವೆ ಮತ್ತು ಸೋಂಕುಗಳಂತಹ ಸಮಸ್ಯೆ ನಿವಾರಿಸುತ್ತದೆ. ಜತೆಗೆ ತಲೆಹೊಟ್ಟು, ಇತರ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ.

ಅರಶಿನ.

ನವದೆಹಲಿ: ಅರಿಶಿನ (Turmeric)ವು ಅಡುಗೆ ಮನೆಯಲ್ಲಿ ಮುಖ್ಯವಾದ ಮಸಾಲೆ ಪದಾರ್ಥವಾಗಿದ್ದು, ಹಿಂದಿನಿಂದಲೂ ಇದರ ಬಳಕೆ ಹೆಚ್ಚು ಪ್ರಸಿದ್ದಿಯಲ್ಲಿದೆ. ಇದರಲ್ಲಿ ಹಲವು ರೀತಿಯ ಔಷಧೀಯ ಗುಣಗಳಿದ್ದು ಕರ್ಕ್ಯುಮಿನ್, ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ಸೆಪ್ಟಿಕ್ ಗುಣಗಳು ದೇಹದ ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಜತೆ ಅರಶಿನವು ಚರ್ಮ ಮತ್ತು ಕೂದಲಿನ ಆರೈಕೆಗೂ ಒಳ್ಳೆಯದು ಎಂದು ತಜ್ಞರು ಸಲಹೆ ನೀಡಿದ್ದಾರೆ (Beauty Tips). ಅರಶಿನವು ಮೊಡವೆ ಮತ್ತು ಸೋಂಕುಗಳಂತಹ ಸಮಸ್ಯೆಗಳಿಗೆ ರಾಮಬಾಣ ಎನಿಸಿಕೊಂಡಿದೆ. ಇದನ್ನು ಕೂದಲಿಗೆ ಬಳಸುವುದರಿಂದಲೂ ತಲೆಹೊಟ್ಟು, ಉರಿಯೂತ ಹಾಗೂ ಇತರ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ.
ಉರಿಯೂತವನ್ನು ಕಡಿಮೆ ಮಾಡುತ್ತದೆ
ಅರಿಶಿನವು ನಂಜು ನಿರೋಧಕ ಮತ್ತು ಆ್ಯಂಟಿ ಫಂಗಲ್ ಗುಣ ಲಕ್ಷಣಗಳನ್ನು ಹೊಂದಿದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಅರಿಶಿನ ಬಹಳಷ್ಟು ಪ್ರಯೋಜನಕಾರಿ. ಅರಿಶಿನವನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದೇ ರೀತಿ ಇದು ಮೊಡವೆ ಮತ್ತು ಎಸ್ಜಿಮಾದಂತಹ ಸಂದರ್ಭದಲ್ಲಿ ಕೆಂಪು ದದ್ದು ಅಥವಾ ಊತವನ್ನು ಕಡಿಮೆ ಮಾಡುತ್ತದೆ.
ಮೊಡವೆಗಳ ವಿರುದ್ಧ ಹೋರಾಡುತ್ತದೆ
ಇದರಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಗಳು ಮೊಡವೆಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಮುಖದಲ್ಲಿ ಮೊಡವೆ ಇದ್ದರೆ ಆ್ಯಂಟಿ ಮೈಕ್ರೊಬಿಯಲ್ ಅಂಶ ದೊಂದಿಗೆ ಅರಿಶಿನವು ಮೊಡವೆ ಉಂಟು ಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಿ ಶಮನ ಗೊಳಿಸುತ್ತದೆ.
ವಯಸ್ಸಾಗುವಿಕೆ ತಡೆಯುತ್ತದೆ
ಅರಿಶಿನವು ತ್ವಚೆಯ ಆರೋಗ್ಯ ಕಾಪಾಡುತ್ತದೆ. ಈ ಮೂಲಕ ಅಕಾಲಿಕ ಸೂಕ್ಷ್ಮ ರೇಖೆ ಮತ್ತು ಸುಕ್ಕುಗಳ ಸಮಸ್ಯೆ ನಿಯಂತ್ರಿಸುತ್ತದೆ. ಚರ್ಮವು ನಿರ್ಜಲೀಕರಣ ಆಗದಂತೆ ತಡೆಯುತ್ತದೆ. ಅರಿಶಿನದ ಬಳಕೆ ಚರ್ಮಕ್ಕೆ ನೈಸರ್ಗಿಕವಾಗಿ ತೇವಾಂಶ ನೀಡುತ್ತದೆ.
ಸನ್‌ಬರ್ನ್ ಶಮನಗೊಳಿಸುತ್ತದೆ
ಅರಿಶಿನದ ತಂಪಾಗಿಸುವ ಗುಣಲಕ್ಷಣಗಳು ಉರಿಯೂತ ಮತ್ತು ಬಿಸಿಲಿನಿಂದ ಸುಟ್ಟ ಚರ್ಮದ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸನ್‌ಬರ್ನ್‌ನಿಂದಾಗಿ ಚರ್ಮ ಕಪ್ಪಾಗುವುದನ್ನು ಇದು ತಡೆಗಟ್ಟುತ್ತದೆ. ಸೂರ್ಯನಿಂದ ಉಂಟಾಗುವ ಶಾಖ ಮತ್ತು ಸುಡುವ ಸಂವೇದನೆಯನ್ನು ಶಾಂತಗೊಳಿಸಲು ಇದು ಸಹಾಯ ಮಾಡುತ್ತದೆ.
ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ಅರಿಶಿನದಲ್ಲಿರುವ ಉತ್ಕರ್ಷಣ ನಿರೋಧಕಗಳು ಕೂದಲಿನ ಕಿರುಚೀಲಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಣೆ ಮಾಡುತ್ತದೆ. ಇದರಿಂದ ಕೂದಲು ಉದುರುವುದು, ಕೂದಲು ಒಡೆಯುವುದು, ಬಿಳಿ ಕೂದಲು ಹಾಗೂ ಇತರ ಕೂದಲಿನ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಕೂದಲು ಉತ್ತಮವಾಗಿ ಬೆಳೆಯುವಂತೆ ಸಹಾಯ ಮಾಡುತ್ತದೆ.
ರಕ್ತ ಪರಿಚಲನೆ ಹೆಚ್ಚಿಸುತ್ತದೆ
ನೆತ್ತಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಅರಿಶಿನವು ಕೂದಲಿನ ಕಿರುಚೀಲಗಳಿಗೆ ಪೋಷಣೆ ನೀಡುತ್ತದೆ. ಸುಧಾರಿತ ರಕ್ತ ಪರಿಚಲನೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲು ತೆಳುವಾಗುವುದನ್ನು ಕಡಿಮೆ ಮಾಡುತ್ತದೆ. ಇನ್ನು ನಿಮ್ಮ ಕೂದಲು ಬೇಗ ಬಿಳಿಯಾಗುತ್ತಿದ್ದರೆ ಅರಿಶಿನ ಬಳಸಿ. ಇದರಲ್ಲಿರುವ ಕರ್ಕ್ಯುಮಿನ್ ಬಿಳಿ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.
ಇದನ್ನು ಓದಿ: Skin Care: ಕಾಂತಿಯುಕ್ತ ತ್ವಚೆ ಬೇಕೆ? ಈ ಪಾನೀಯ ಬಳಸಿ
ತಲೆಹೊಟ್ಟು ಕಡಿಮೆ ಮಾಡುತ್ತದೆ
ಇದರಲ್ಲಿರುವ ಆ್ಯಂಟಿ ಮೈಕ್ರೊಬಿಯಲ್ ಮತ್ತು ಉರಿಯೂತದ ಲಕ್ಷಣಗಳು ತಲೆಹೊಟ್ಟು ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅರಿಶಿನ ನೆತ್ತಿಯ ಮೇಲೆ ಶಿಲೀಂಧ್ರ ವಿರೋಧಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ನೆತ್ತಿಯ ತುರಿಕೆ, ತಲೆ ಹೊಟ್ಟು ಇತ್ಯಾದಿ ಸಮಸ್ಯೆಯನ್ನು ಶಮನಗೊಳಿಸುತ್ತದೆ.