Rapido: ರಾಜ್ಯದಲ್ಲಿ ರಾಪಿಡೋದಿಂದ ಪಿಂಕ್ ಬೈಕ್ ಸೇವೆ ; 25 ಸಾವಿರ ಮಹಿಳೆಯರಿಗೆ ಉದ್ಯೋಗ
ಮಹಿಳೆಯರ ಸುರಕ್ಷತೆಗಾಗಿ ರ್‍ಯಾಪಿಡೋ ಹೊಸ ಪ್ರಯೋಗವನ್ನು ಜಾರಿ ಮಾಡಲು ಹೊರಟಿದೆ. ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿರುವ ಸಂಸ್ಥೆ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಚಾಲಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಿಂಕ್ ಬೈಕ್ ಟ್ಯಾಕ್ಸಿಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ.

ಮಹಿಳೆಯರಿಗಾಗಿ ರ್‍ಯಾಪಿಡೋ ಪಿಂಕ್ ಬೈಕ್ ಟ್ಯಾಕ್ಸಿ ಆರಂಭ

ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ರ್‍ಯಾಪಿಡೋ (Rapido) ಹೊಸ ಪ್ರಯೋಗವನ್ನು ಜಾರಿ ಮಾಡಲು ಹೊರಟಿದೆ. ಮಹಿಳೆಯರಿಗೆ ಸಿಹಿ ಸುದ್ದಿಯನ್ನು ನೀಡಿರುವ ಸಂಸ್ಥೆ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತು ಮಹಿಳಾ ಚಾಲಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪಿಂಕ್ ಬೈಕ್ ಟ್ಯಾಕ್ಸಿಯನ್ನು ಆರಂಭಿಸುವುದಾಗಿ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಈ ಪಿಂಕ್ ಬೈಕ್ ಟ್ಯಾಕ್ಸಿ ಆರಂಭವಾಗಲಿದೆ. ಇದರಲ್ಲಿ ಮಹಿಳಾ ಸವಾರರು ಮಹಿಳಾ ಪ್ರಯಾಣಿಕರಿಗಾಗಿ ಮಾತ್ರ ಬೈಕ್ ಓಡಿಸಲಿದ್ದಾರೆ.ಜಾಗತಿಕ ಹೂಡಿಕೆ ಶೃಂಗಸಭೆಯಲ್ಲಿ ಈ ಹೊಸ ಯೋಜನೆಯನ್ನು ರ್‍ಯಾಪಿಡೋ ಘೋಷಣೆ ಮಾಡಿದೆ. ಮಹಿಳೆಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ರ್‍ಯಾಪಿಡೋ ಈ ಉಪಕ್ರಮಕ್ಕೆ ಕೈ ಹಾಕಿದೆ.
ಇದರ ಭಾಗವಾಗಿ ಕಂಪನಿಯು 25,000 ಮಹಿಳಾ ಸವಾರರನ್ನು ಪರಿಚಯಿಸಲಿದೆ. ಉದ್ಯೋಗ ಸೃಷ್ಟಿಯ ಹೊರತಾಗಿ, ಕಂಪನಿಯು ಮಹಿಳೆಯರಿಗೆ ಸುರಕ್ಷಿತ ಮತ್ತು ಬೆಂಬಲ ನೀಡುವ ಕೆಲಸದ ವಾತಾವರಣವನ್ನು ನಿರ್ಮಿಸುವತ್ತ ಗಮನಹರಿಸುತ್ತಿದೆ. ಪ್ರಯಾಣಿಕರು ಮತ್ತು ಚಾಲಕರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಹಲವಾರು ಸುರಕ್ಷತಾ ಕ್ರಮವನ್ನು ರ್‍ಯಾಪಿಡೋ ಕೈಗೊಳ್ಳಲಿದೆ.
ಈ ಸುದ್ದಿಯನ್ನೂ ಓದಿ: ಅನಧಿಕೃತ ರಾಪಿಡೋ, ಓಲಾ, ಉಬರ್, ಗೂಡ್ಸ್ ಪೋರ್ಟಲ್ ಗಳ ವಿರುದ್ಧ ಚಾಲಕ ಸಂಘಟನೆಗಳ ಆಕ್ರೋಶ
2024 ರ ಸೆಪ್ಟೆಂಬರ್‌ನಲ್ಲಿ ಈ ಸಂಸ್ಥೆ ಚೆನ್ನೈನಲ್ಲಿ ಪಿಂಕ್ ಬೈಕ್ ಟ್ಯಾಕ್ಸಿಯನ್ನು ಆರಂಭಿಸಿತ್ತು. ರ್‍ಯಾಪಿಡೋ ಸಂಸ್ಥೆಯು ಆರ್ಥಿಕವಾಗಿ ಹಿಂದುಳಿದ ಮಹಿಳಾ ಕ್ಯಾಪ್ಟನ್‌ಗಳಿಗೆ ಆರಂಭಿಕ ಹಂತದಲ್ಲಿ 25 ಎಲೆಕ್ಟ್ರಿಕ್ ಬೈಕ್‌ಗಳನ್ನು ಒದಗಿಸುವ ಮೂಲಕ ಸಾರಿಗೆ ಮತ್ತು ಆದಾಯದ ಅವಕಾಶಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದೆ. ದೇಶದ ಎಲ್ಲಾ ಕಡೆ ಪಿಂಕ್ ಬೈಕ್ ಟ್ಯಾಕ್ಸಿಯನ್ನು ಆರಂಭಿಸುವುದಾಗಿ ರ್‍ಯಾಪಿಡೋ ಘೋಷಣೆ ಮಾಡಿದೆ.