ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dattatreya Hosabale: ಮಹಾರಾಣಿ ಅಬ್ಬಕ್ಕ ಜೀವನ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ: ದತ್ತಾತ್ರೇಯ ಹೊಸಬಾಳೆ

Dattatreya Hosabale: ಮಹಾರಾಣಿ ಅಬ್ಬಕ್ಕನವರ 500ನೇ ಜಯಂತಿಯ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿದ್ದು, ಮಹಾರಾಣಿ ಅಬ್ಬಕ್ಕ ಅವರು ಭಾರತದ ಎಲ್ಲರನ್ನೂ ಒಳಗೊಳ್ಳುವ ಸಂಪ್ರದಾಯವನ್ನು ಮಾದರಿಯಾಗಿ ತೋರಿಸಿದವರು ಎಂದು ತಿಳಿಸಿದ್ದಾರೆ.

ಮಹಾರಾಣಿ ಅಬ್ಬಕ್ಕ ಜೀವನ ಇಡೀ ರಾಷ್ಟ್ರಕ್ಕೆ ಸ್ಫೂರ್ತಿ: ದತ್ತಾತ್ರೇಯ ಹೊಸಬಾಳೆ

Profile Prabhakara R Mar 23, 2025 1:51 PM

ಬೆಂಗಳೂರು: ಉಳ್ಳಾಲದ ಮಹಾರಾಣಿ ಅಬ್ಬಕ್ಕ ಅವರು ಭಾರತದ ಮಹಾನ್ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದರು. ಅವರು ಆಡಳಿತದಲ್ಲಿ ನಿಪುಣರಾಗಿದ್ದರು. ಅಜೇಯ ತಂತ್ರಗಾರರಾಗಿದ್ದರು ಮತ್ತು ಅತ್ಯಂತ ಶೂರ ಆಡಳಿತಗಾರರಾಗಿದ್ದರು. ಅಬ್ಬಕ್ಕ ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಸಂಸ್ಥಾನವನ್ನು (ಪ್ರಸ್ತುತ ಕರಾವಳಿ ಕರ್ನಾಟಕ) ಯಶಸ್ವಿಯಾಗಿ ಆಳಿದವರು. ಅವರ ಜೀವನವು ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯಾಗಿದೆ. ವೀರ ಮಹಾರಾಣಿ ಅಬ್ಬಕ್ಕರ 500ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಅವರ ಅವಿನಾಶಿ ಪರಂಪರೆಗೆ ಗೌರವ ಸಲ್ಲಿಸುತ್ತಾ ಪೂರ್ಣ ಹೃದಯದಿಂದ ನಮನ ಸಲ್ಲಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಆರ್‌ಎಸ್‌ಎಸ್‌ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ (RSS Akhil Bharatiya Pratinidhi Sabha) ಮಾತನಾಡಿರುವ ಅವರು, ಅಬ್ಬಕ್ಕ ಅವರ ಆಳ್ವಿಕೆಯ ಸಮಯದಲ್ಲಿ, ವಿಶ್ವದ ಅತ್ಯಂತ ಅಜೇಯ ಸೈನ್ಯಶಕ್ತಿ ಎಂದು ಪರಿಗಣಿಸಲಾಗಿದ್ದ ಪೋರ್ಚುಗೀಸ್ ಆಕ್ರಮಣಕಾರರನ್ನು ಪದೇ ಪದೇ ಸೋಲಿಸಿದರು. ಈ ಮೂಲಕ ಅವರು ತಮ್ಮ ರಾಜ್ಯದ ಸ್ವಾತಂತ್ರ್ಯವನ್ನು ಕಾಪಾಡಿದರು. ಉತ್ತರ ಕೇರಳದ ಸಾಮೂತಿರಿ (ಜಮೋರಿನ್) ರಾಜನೊಂದಿಗಿನ ಅವರ ರಾಜತಾಂತ್ರಿಕ ಮತ್ತು ಕಾರ್ಯತಂತ್ರದ ಚತುರ ಮೈತ್ರಿಗಳು ಈ ಸಾಧನೆಯನ್ನು ಸಾಧ್ಯವಾಗಿಸಿದವು. ಅಬ್ಬಕ್ಕ ಅವರ ತಂತ್ರ, ಶೌರ್ಯ ಮತ್ತು ನಿರ್ಭೀತ ನಾಯಕತ್ವವು ಅವರನ್ನು ಇತಿಹಾಸದ ಪುಟಗಳಲ್ಲಿ "ಅಭಯರಾಣಿ" (ನಿರ್ಭೀತ ರಾಣಿ) ಎಂಬ ಗೌರವಾನ್ವಿತ ಬಿರುದಿಗೆ ಪಾತ್ರರಾಗಿಸಿತು.

ಮಹಾರಾಣಿ ಅಬ್ಬಕ್ಕ ಅವರು ಭಾರತದ ಎಲ್ಲರನ್ನೂ ಒಳಗೊಳ್ಳುವ ಸಂಪ್ರದಾಯವನ್ನು ಮಾದರಿಯಾಗಿ ತೋರಿಸಿದವರು. ಅವರು ಹಲವಾರು ಶಿವ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಿದರು. ಅವರ ಆಳ್ವಿಕೆಯಲ್ಲಿ, ಎಲ್ಲಾ ಸಂಪ್ರದಾಯಗಳ ಹಾಗೂ ಸಮುದಾಯಗಳನ್ನೂ ಸಮಾನ ಗೌರವದಿಂದ ಕಾಣಲಾಗಿತ್ತು ಮತ್ತು ಸಮಾಜದ ವಿವಿಧ ವರ್ಗಗಳಲ್ಲಿ ಸಮಗ್ರ ಅಭಿವೃದ್ಧಿಯನ್ನು ಪೋಷಿಸಿದರು. ಈ ಗೌರವ ಮತ್ತು ಏಕತೆಯ ಪರಂಪರೆ ಕರ್ನಾಟಕದಲ್ಲಿ ಇಂದಿಗೂ ಮುಂದುವರಿದಿದೆ. ಅವರ ಪ್ರೇರಣಾದಾಯಕ ಕಥೆಗಳು ಯಕ್ಷಗಾನ, ಜಾನಪದ ಗೀತೆಗಳು ಮತ್ತು ಸಾಂಪ್ರದಾಯಿಕ ನೃತ್ಯಗಳ ಮೂಲಕ ಜೀವಂತವಾಗಿವೆ.

ಅವರ ಅಪ್ರತಿಮ ಶೌರ್ಯ, ರಾಷ್ಟ್ರ ಮತ್ತು ಧರ್ಮದ ಕುರಿತಾದ ಸಮರ್ಪಣೆ, ಪರಿಣಾಮಕಾರಿ ಆಡಳಿತವನ್ನು ಗೌರವಿಸಿ ಭಾರತ ಸರ್ಕಾರವು ಅವರ ಸ್ಮರಣಾರ್ಥ 2003ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡುವ ಮೂಲಕ ಅವರ ಶೌರ್ಯದ ಕಥೆಗಳನ್ನು ರಾಷ್ಟ್ರದೊಂದಿಗೆ ಹಂಚಿಕೊಂಡಿತು. ಹಾಗೆಯೇ 2009ರಲ್ಲಿ ರಾಷ್ಟ್ರದ ಒಂದು ಗಸ್ತು ಹಡಗಿಗೆ ರಾಣಿ ಅಬ್ಬಕ್ಕ ಅವರ ಹೆಸರಿಡಲಾಗಿದ್ದು, ಇದು ಅವರ ನೌಕಾಪಡೆಯ ಪರಂಪರೆಯಿಂದ ಪ್ರೇರಣೆ ಪಡೆದು ಸ್ಫೂರ್ತಿಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿದೆ.

ಮಹಾರಾಣಿ ಅಬ್ಬಕ್ಕ ಅವರ ಜೀವನವು ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯಾಗಿದೆ. ಅವರ 500ನೇ ಜಯಂತಿಯ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಅನುಕರಣೀಯ ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸುತ್ತದೆ ಮತ್ತು ಅವರ ಅದ್ಭುತ ಜೀವನದಿಂದ ಸ್ಫೂರ್ತಿ ಪಡೆದು ರಾಷ್ಟ್ರ ನಿರ್ಮಾಣದ ಧೈಯಕ್ಕೆ ಸಕ್ರಿಯವಾಗಿ ಕೊಡುಗೆ ನೀಡಬೇಕೆಂದು ಇಡೀ ಸಮಾಜಕ್ಕೆ ಕರೆ ನೀಡುತ್ತದೆ.

ಈ ಸುದ್ದಿಯನ್ನೂ ಓದಿ | RSS ABPS 2025: ಬಾಂಗ್ಲಾದೇಶದ ಹಿಂದುಗಳ ರಕ್ಷಣೆಗೆ ಒಗ್ಗಟ್ಟಿನಿಂದ ನಿಲ್ಲಬೇಕು: ಆರ್‌ಎಸ್‌ಎಸ್‌ ಕರೆ