Pralhad Joshi: ಕಾಂಗ್ರೆಸ್‌ನವರು ಕಡಲ ಅಲೆ ಎಣಿಸುವಲ್ಲೂ ದುಡ್ಡು ಹೊಡೆಯುವಲ್ಲಿ ನಿಪುಣರು: ಜೋಶಿ ಆರೋಪ
Pralhad Joshi: ಅಂಗನವಾಡಿ, ಶಾಲಾ ಮಕ್ಕಳ ಪೌಷ್ಠಿಕ ಆಹಾರಕ್ಕೂ ಕಾಂಗ್ರೆಸ್ ಪಕ್ಷ ಕನ್ನಾ ಹಾಕಿದೆ. ಸರ್ಕಾರವೇ ಭ್ರಷ್ಟರ ಬೆನ್ನಿಗೆ ನಿಲ್ಲುತ್ತಿದೆ. ಪ್ರಭಾವಿಗಳ ಕೃಪೆ, ಆಶೀರ್ವಾದ ಇರುವುದರಿಂದಲೇ ಭ್ರಷ್ಟರಿಗೆ ಈ ಮಟ್ಟದ ಧೈರ್ಯ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ.

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದವರು ಕಡಲ ಅಲೆ ಎಣಿಸುವಲ್ಲಿಯೂ ದುಡ್ಡು ಹೊಡೆಯುವವರು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ನಗರದಲ್ಲಿ ನಡೆದ ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಮತ್ತು ಕಳ್ಳ ಸಾಗಣೆ ಕುರಿತು ಅವರು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರಿಗಳು ತುಂಬಿ ತುಳುಕುತ್ತಿದ್ದಾರೆ. ಭ್ರಷ್ಟ ಅಧಿಕಾರಿ, ಸಿಬ್ಬಂದಿಯನ್ನು ಸಮುದ್ರಕ್ಕೆ ಅಲೆ ಎಣಿಸಲು ಕಳಿಸಿದರೂ ಅಲ್ಲಿ ಮೀನುಗಾರರಿಂದ ಎತ್ತುವಳಿ ಶುರು ಮಾಡುವಂಥವರು ಎಂದು ಜೋಶಿ ಲೇವಡಿ ಮಾಡಿದರು.
ಅಂಗನವಾಡಿ, ಶಾಲಾ ಮಕ್ಕಳ ಪೌಷ್ಟಿಕ ಆಹಾರಕ್ಕೂ ಕಾಂಗ್ರೆಸ್ ಪಕ್ಷ ಕನ್ನಾ ಹಾಕಿದೆ. ಸರ್ಕಾರವೇ ಭ್ರಷ್ಟರ ಬೆನ್ನಿಗೆ ನಿಲ್ಲುತ್ತಿದೆ. ಪ್ರಭಾವಿಗಳ ಕೃಪೆ, ಆಶೀರ್ವಾದ ಇರುವುದರಿಂದಲೇ ಭ್ರಷ್ಟರಿಗೆ ಈ ಮಟ್ಟದ ಧೈರ್ಯ ಬಂದಿದೆ ಎಂದು ದೂರಿದರು.
ಶಾಲಾ ಮಕ್ಕಳ ಪೌಷ್ಟಿಕ ಆಹಾರ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಮುಖರ ಕೈವಾಡವಿದೆ ಎಂಬ ಆರೋಪ ಕೇಳಿಬರುತ್ತಿದೆ. ರಾಜ್ಯ ಸರ್ಕಾರ ಇದುವರೆಗೂ ಪ್ರಮುಖ ಆರೋಪಿಗಳನ್ನು ಬಂಧಿಸಿಲ್ಲ. ಬದಲಿಗೆ ಅಂಥ ಆರೋಪಿಗಳ ಸಂರಕ್ಷಣೆಯಲ್ಲಿ ತೊಡಗಿದೆ. ಕಾಂಗ್ರೆಸ್ ಪಕ್ಷ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಪಕ್ಷ ಎಂದು ಆರೋಪಿಸಿದ ಸಚಿವರು, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ದೂರಿದ್ದಾರೆ.
ಈ ಸುದ್ದಿಯನ್ನೂ ಓದಿ: Karnataka Weather: ಕಲಬುರಗಿಯಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲು; ರಾಜ್ಯದಲ್ಲಿ ಮುಂದಿನ 5 ದಿನ ಹೇಗಿರಲಿದೆ ಹವಾಮಾನ?
ಭ್ರಷ್ಟ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಕಠಿಣ ಕ್ರಮ ಜರುಗಿಸುತ್ತಿಲ್ಲ. ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಿಸಿದರು.