Nikhil Kumaraswamy: ಜೆಡಿಎಸ್ ಪಕ್ಷದಿಂದ ʼಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ' ಅಭಿಯಾನ: ನಿಖಿಲ್ ಕುಮಾರಸ್ವಾಮಿ
Nikhil Kumaraswamy: ನಾಡಿನ ಜನರನ್ನು ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ. ನಿರಂತರವಾಗಿ ಶೋಷಣೆ ಮಾಡುತ್ತಿದೆ. ಜನರು ರೋಸಿ ಹೋಗಿದ್ದಾರೆ. ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕು. ಅದಕ್ಕೆ ನಾವು ಹೋರಾಟಕ್ಕೆ ಧುಮುಕಿದ್ದೇವೆ. ನಾವು 'ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ' ಎಂಬ ಅಭಿಯಾನ ಶುರು ಮಾಡಿದ್ದೇವೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.


ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಆರ್ಥಿಕವಾಗಿ ರಾಜ್ಯವನ್ನು ವಿಕೋಪದ ಪರಿಸ್ಥಿತಿಗೆ ದೂಡಿರುವ ಕಾಂಗ್ರೆಸ್ ಸರ್ಕಾರವು, ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದೆ ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಆರೋಪಿಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜೆಡಿಎಸ್ ಪಕ್ಷವು, 'ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ' ಎಂಬ ಅಭಿಯಾನ ಆರಂಭ ಮಾಡಿದ್ದು, ಅಭಿಯಾನದ ಬಗ್ಗೆ ಪಕ್ಷ ಕಚೇರಿ ಜೆಪಿ ಭವನದಲ್ಲಿ ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು, https://www.saakappasaaku.com ಎಂಬ ನೂತನ ವೆಬ್‌ಸೈಟ್ ಅನ್ನು ಲೋಕಾರ್ಪಣೆ ಮಾಡಿದರು. ಈ ವೆಬ್ ತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ, ರಾಜ್ಯದ ಯಾರೇ ಆದರೂ ನೋಂದಣಿ ಮಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ನಾಡಿನ ಜನರನ್ನು ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ. ನಿರಂತರವಾಗಿ ಶೋಷಣೆ ಮಾಡುತ್ತಿದೆ. ಜನರು ರೋಸಿ ಹೋಗಿದ್ದಾರೆ. ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕು. ಅದಕ್ಕೆ ನಾವು ಹೋರಾಟಕ್ಕೆ ಧುಮುಕಿದ್ದೇವೆ. ನಾವು 'ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಸಾಕು' ಎಂಬ ಅಭಿಯಾನ ಶುರು ಮಾಡಿದ್ದೇವೆ ಎಂದು ತಿಳಿಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ
ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡ ಹೋರಾಟ ಇರಲಿದೆ. ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಅಭಿಯಾನದ ಮೂಲಕ ಪ್ರತಿಭಟನೆ ಮಾಡ್ತೀವಿ. ಕುಮಾರಣ್ಣ ಅವರು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ. ನಿರಂತರವಾಗಿ ಈ ಅಭಿಯಾನವನ್ನು ಜೆಡಿಎಸ್ ಮಾಡುತ್ತೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಇಲ್ಲಿವರೆಗೂ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಹಂತ ಹಂತವಾಗಿ ಯಾವುದಾದರು ಒಂದು ರೀತಿ ಜನರ ಮೇಲೆ ಬೆಲೆ ಏರಿಕೆ ಮಾಡಿದೆ. ನಾಡಿನ ಜನರಿಗೆ ಸಂಕಷ್ಟದ ದಿನ ಎದುರಿಸಲು ಸರ್ಕಾರ ದೂಡಿದೆ. ಈ ಹಿನ್ನಲೆಯಲ್ಲಿ ದೊಡ್ಡ ಚರ್ಚೆಗಳು ರಾಜ್ಯದಲ್ಲಿ ಆಗ್ತಿದೆ. ಜೆಡಿಎಸ್ ಪಕ್ಷ ಕೂಡಾ ಪ್ರತಿಯೊಬ್ಬ ಕನ್ನಡರ ಭಾವನೆ ಹೊರಗೆ ಹಾಕೋ ಕೆಲಸ ಮಾಡ್ತಿದೆ ಎಂದು ಅವರು ತಿಳಿಸಿದರು. ಇಂದು ಬೆಳಗ್ಗೆಯಿಂದ ನಮ್ಮ ಕಾರ್ಯಕರ್ತರು ಕುಮಾರಣ್ಣನ ಅವರ ಸಲಹೆ ಮತ್ತು ಸೂಚನೆ ಪಡೆದುಕೊಂಡು ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ ಇಂದಿನಿಂದ ಪ್ರಾರಂಭ ಮಾಡಿದ್ದೇವೆ. ಏಳೂವರೆ ಕೋಟಿ ಜನರ ಭಾವನೆ ಸಾಕಪ್ಪ ಸಾಕು ಅಂತ ಇದೆ ಎಂದು ಹೇಳಿದರು.
ರಾಯರೆಡ್ಡಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದ ನಿಖಿಲ್
ಈ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರ ಜಾಸ್ತಿ ಆಗಿದೆ. ಸಿಎಂ ಅವರ ಆರ್ಥಿಕ ಸಲಹೆಗಾರರೇ ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್ 1 ಅಂತ ಹೇಳಿಕೆ ಕೊಟ್ಟಿದ್ದಾರೆ. ರಾಯರೆಡ್ಡಿ ಅವರಿಗೆ ಧನ್ಯವಾದ ಹೇಳ್ತೀನಿ. ಇಷ್ಟು ಮುಕ್ತವಾಗಿ ಆಡಳಿತ ಪಕ್ಷದ ಶಾಸಕರು, ಆರ್ಥಿಕ ಸಲಹೆಗಾರರು ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಈ ಹಿಂದೆಯೂ ಕೂಡಾ ರಾಯರೆಡ್ಡಿ ಅವರು ಗ್ಯಾರಂಟಿ ಹೇಗೆ ಅಭಿವೃದ್ಧಿ ಮೇಲೆ ಪರಿಣಾಮ ಬಿದ್ದಿದೆ ಅಂತ ಹೇಳಿದ್ರು. ರಾಜ್ಯ ಸರ್ಕಾರ ಹೇಗೆ ಆಡಳಿತ ಮಾಡ್ತಿದೆ ಅನ್ನೊದಕ್ಕೆ ಅನೇಕ ವೈಫಲ್ಯಗಳು ನಮ್ಮ ಮುಂದೆ ಇದೆ. ನಮ್ಮ ಹೋರಾಟ ನಿರಂತರವಾಗಿರುತ್ತೆ ಎಂದರು.
ಹನಿಟ್ರ್ಯಾಪ್, ಮನಿಟ್ರ್ಯಾಪ್, ಕನ್ನಡಿಗರ ಮೇಲೆ ತೆರಿಗೆ ಟ್ರ್ಯಾಪ್
ಇಂದಿನಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಸಾಕು ವೆಬ್‌ಸೈಟ್ ಪ್ರಾರಂಭ ಮಾಡಿದ್ದೇವೆ. ಈ ವೆಬ್‌ಸೈಟ್‌ನಲ್ಲಿ ಸರ್ಕಾರ ಶಾಸಕರು, ಮಂತ್ರಿಗಳು ಹಿಂದೆ ಏನೇನು ಮಾತಾಡಿದ್ರು ಅದನ್ನ ಹಾಕಲಾಗಿದೆ. ಇದು ಒಂದು ದಿನದ ಅಭಿಯಾನ ಅಲ್ಲ. ಈ ಸರ್ಕಾರದಲ್ಲಿ ಸಚಿವರ ಹನಿಟ್ರ್ಯಾಪ್ ಮಾಡಿದ್ದಾರೆ, ಹೈಕಮಾಂಡ್‌ಗೆ ಮನಿಟ್ರ್ಯಾಪ್ ಮಾಡಿದ್ದಾರೆ, ಕನ್ನಡಿಗರ ಮೇಲೆ ತೆರಿಗೆ ಟ್ರ್ಯಾಪ್ ಮಾಡಿದ್ದಾರೆ ಅಂತ ವೆಬ್‌ಸೈಟ್‌ನಲ್ಲಿ ಹೇಳಿದ್ದೇವೆ ಎಂದು ಅವರು ತಿಳಿಸಿದರು.
ಜೆಡಿಎಸ್ ಪಕ್ಷ ಫ್ರೀಡಂ ಪಾರ್ಕ್‌ನಲ್ಲಿ ಗ್ಯಾರಂಟಿ ಬಗ್ಗೆ ಪ್ರತಿಭಟನೆ ಮಾಡಿದ್ವಿ, ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸರಿಯಾಗಿ ಗ್ಯಾರಂಟಿ ಕೊಟ್ಟಿರಲಿಲ್ಲ. ಗ್ಯಾರಂಟಿ ಯೋಜನೆ ಹಣ ಬಿಡುಗಡೆಗೆ ದಿನಾಂಕ ನಿಗದಿ ಮಾಡಿ ಅಂತ ಪ್ರಶ್ನೆ ಮಾಡಿದ್ವಿ. ರೈತರಿಗೆ ಆರ್ಥಿಕ ಶಕ್ತಿ ಕೊಡಬೇಕು ಅಂತ ಮೂರು ತಿಂಗಳಿಗೊಮ್ಮೆ ಹಣ ಕೊಡಬೇಕು ಅಂತ ಮೋದಿ ಅವರು ಯೋಜನೆ ಮಾಡಿದ್ರು. ಮೋದಿ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಗ್ಯಾರಂಟಿಗೆ ಸರಿಯಾಗಿ ಹಣ ಹಾಕಿಲ್ಲ ಎಂದು ಕಿಡಿಕಾರಿದರು.
ನಿರಂತರವಾಗಿ ಹೋರಾಟಕ್ಕೆ ವೆಬ್‌ಸೈಟ್ ಬಿಡುಗಡೆ
ಉಪ ಚುನಾವಣೆ ವೇಳೆ 48 ಗಂಟೆ ಒಳಗೆ ಗ್ಯಾರಂಟಿ ಹಣ ಹಾಕಿದ್ರು. 3 ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮಿ ಹಣ ಹಾಕಿದ್ರು. ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿ ಹಣ ಹಾಕಿದ್ರು. ಶಾಸಕರೊಬ್ಬರು ಕಾಂಗ್ರೆಸ್‌ಗೆ ಮತ ಹಾಕದೇ ಹೋದ್ರೆ ಗ್ಯಾರಂಟಿ ರದ್ದು ಮಾಡ್ತೀವಿ ಅಂತ ಧಮ್ಕಿ ಹಾಕಿದ್ರು. ಬೆಲೆ ಏರಿಕೆಗೆ ಸೀಮಿತ ಪ್ರತಿಭಟನೆ ಅಲ್ಲ. ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಸಾಕು ಈ ಅಭಿಯಾನ ವಾರದ ಪ್ರತಿಭಟನೆ ಅಲ್ಲ. ನಿರಂತರವಾಗಿ ಈ ಅಭಿಯಾನ ಮಾಡ್ತೀವಿ. ಅದಕ್ಕಾಗಿ ಈ ವೆಬ್‌ಸೈಟ್ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿಗೆ ಜೆಡಿಎಸ್ ವಿರೋಧ ಇಲ್ಲ. ಆದರೆ ಪ್ರತಿ ತಿಂಗಳು ಗ್ಯಾರಂಟಿ ಹಣ ಕೊಡಲು ಈ ಸರ್ಕಾರದಿಂದ ಆಗ್ತಿಲ್ಲ. ಆಡಳಿತ ಪಕ್ಷದ ಶಾಸಕ ಪರಿಸ್ಥಿತಿಯೇ ಹೇಳೋಕೆ ಆಗೊಲ್ಲ. ಈ ಬಗ್ಗೆ ಕಾಂಗ್ರೆಸ್ ಶಾಸಕರು ತಮ್ಮ ನೋವನ್ನ ಹೇಳಿಕೊಳ್ತಾರೆ. ಮೂಲಭೂತ ಸೌಕರ್ಯಗಳ ಕೊಡಲು ಆಗ್ತಿಲ್ಲ. ಅಭಿವೃದ್ಧಿ ಆಗ್ತಿಲ್ಲ. ಈ ಸರ್ಕಾರ ಒಂದು ರೂಪಾಯಿ ಕೊಟ್ಟಿಲ್ಲ. ಇದು ಆಡಳಿತ ಶಾಸಕರ ಪರಿಸ್ಥಿತಿ ಎಂದು ವಾಗ್ದಾಳಿ ನಡೆಸಿದರು.
ವೈಯಕ್ತಿಕವಾಗಿ ಯಾರನ್ನು ನಿಂದನೆ ಮಾಡ್ತಿಲ್ಲ
ಮುಡಾ ಹಗರಣ ವಿಚಾರಕ್ಕೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಇಡಿ ಎಂಟ್ರಿ ಆಗಿದೆ. ಏನಾಗುತ್ತೆ ನೋಡೋಣ. ಮುಡಾ ಹಗರಣ ಬಂದಾಗ ಅದು ಕಷ್ಟ ಪಟ್ಟಿರೋ ಜಮೀನು ಇಷ್ಟು ಹಣ ಕೊಡಿ ಅಂತ ಸಿದ್ದರಾಮಯ್ಯ ಕೇಳಿದ್ರು. ಅದಾದ ಬಳಿಕ ಸೈಟ್ ವಾಪಾಸ್ ಮಾಡಿದ್ರು. ಅವರು ತಪ್ಪು ಮಾಡಿಲ್ಲ ಅಂದರೆ ಸೈಟ್ ವಾಪಸ್ ಯಾಕೆ ಕೊಟ್ಟರು? ನಾನು ಯಾರನ್ನ ವೈಯಕ್ತಿಕವಾಗಿ ನಿಂದನೆ ಮಾಡ್ತಿಲ್ಲ. ಸರ್ಕಾರ ಹೊಣೆಗಾರಿಕೆ ಹೊರಬೇಕು. ಸಚಿವರು, ಶಾಸಕರು ಏನ್ ಹೇಳಿದ್ರೋ ಅದನ್ನ ವೆಬ್‌ಸೈಟ್‌ನಲ್ಲಿ ಹಾಕಿದ್ದೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ
ಗ್ಯಾಸ್ ಬೆಲೆ ಏರಿಕೆ ವಿಚಾರಕ್ಕೆ ಮಾತನಾಡಿದ ಅವರು, 2004 ರಿಂದ 2014ರವರೆಗೆ ಯುಪಿಎ ಸರ್ಕಾರ ಇತ್ತು. ಕಾಂಗ್ರೆಸ್ ಸ್ನೇಹಿತರು ಗಣಿತ ಸರಿಯಾಗಿ ಓದಿಲ್ಲ ಅನ್ನಿಸುತ್ತೆ. ಯುಪಿಎ ಸರ್ಕಾರ ಇದ್ದಾಗ ಗ್ಯಾಸ್ ಬೆಲೆ 1241 ಗ್ಯಾಸ್ ಬೆಲೆ ಇತ್ತು. ಈಗ 854 ರೂಪಾಯಿ ಇದೆ. 50 ರೂಪಾಯಿ ಜಾಸ್ತಿ ಆದರು 850 ರೂ. ಮಾತ್ರ ಇರೋದು. ಕಾಂಗ್ರೆಸ್ ಅವಧಿಯಲ್ಲಿ ಗ್ಯಾಸ್ ಬೆಲೆ ಜಾಸ್ತಿ ಇತ್ತು ಎಂದು ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಜೆಪಿ-ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯ ಇಲ್ಲ
ದೇವೇಗೌಡರು ಲೋಕಸಭೆ ಚುನಾವಣೆ ಸಮಯದಲ್ಲಿ ಮಾಡಿರೋ ನಿರ್ಧಾರ ಈ ಮೈತ್ರಿ. ಮೋದಿ ಅವರ ಕೆಲಸ ಮೆಚ್ಚಿ ಮೈತ್ರಿ ಮಾಡಿತ್ತು, ದೇಶದ ಹಿತಕ್ಕಾಗಿ ಮೈತ್ರಿ ಆಯ್ತು. ಮೈತ್ರಿಯಿಂದಾಗಿ ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಕೊಟ್ಟರು. ಜನರು ಈ ಮೈತ್ರಿ ಒಪ್ಪಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಅಸಮಾಧಾನ ಇಲ್ಲ ಎಂದು ತಿಳಿಸಿದರು.
ಬಿಜೆಪಿ ಜತೆ ಜೆಡಿಎಸ್ ಮರ್ಜ್ ಆಗೋ ಪ್ರಶ್ನೆ ಇಲ್ಲ
ರೈತರಿಗೆ ದೇವೇಗೌಡರ ಕೊಡುಗೆ ಅಪಾರ. ಎಲ್ಲಾ ಭಾಗಕ್ಕೂ ಅವರ ಕೊಡುಗೆ ಇದೆ. ಪ್ರತಿ ಚುನಾವಣೆಯಲ್ಲಿ ನಮ್ಮ ಓಟ್ ಶೇರಿಂಗ್ ಹೆಚ್ವಾಗುತ್ತಿದೆ. ಪ್ರತಿ ಭಾಗದಲ್ಲೂ ನಮ್ಮ ಪಕ್ಷದ ಹೆಚ್ಚು ಶೇರಿಂಗ್ ಇದೆ. ಪ್ರಾದೇಶಿಕ ಪಕ್ಷ ಉಳಿಸಲು ನಮ್ಮ ಕಾರ್ಯಕರ್ತರು ಎಂತಹದ್ದೇ ಸಮಯ ಇದ್ದರು ಕೆಲಸ ಮಾಡ್ತಾರೆ. ಶಾಸಕರ ಸಂಖ್ಯೆ 19 ಸ್ಥಾನಕ್ಕೆ ಇಳಿಯೋಕೆ ಬೇರೆ ಬೇರೆ ಕಾರಣ ಇದೆ. ಬಿಜೆಪಿ ಜತೆ ಜೆಡಿಎಸ್ ಮರ್ಜ್ ಆಗೋ ಪ್ರಶ್ನೆ ಇಲ್ಲ. ಪಕ್ಷವನ್ನ ಕಟ್ಟಿ ಬೆಳೆಸಿದ ಸಾವಿರಾರು ಕಾರ್ಯಕರ್ತರು ಇದ್ದಾರೆ. ನಾವು ರಾಜ್ಯದ, ದೇಶದ ಹಿತಕ್ಕಾಗಿ ಮೈತ್ರಿ ಅಗಿದ್ದೇವೆ. ಜೆಡಿಎಸ್ ಮರ್ಜ್ ಆಗೋದಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ | ESIC Recruitment 2025: ಎಂಪ್ಲಾಯ್ಸ್ ಸ್ಟೇಟ್ ಇನ್ಶೂರೆನ್ಸ್ ಕಾರ್ಪೋರೇಷನ್‌ನಲ್ಲಿದೆ 558 ಹುದ್ದೆ; ಹೀಗೆ ಅಪ್ಲೈ ಮಾಡಿ
ಈ ವೇಳೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಸಂಸದ ಮಲ್ಲೇಶ್ ಬಾಬು, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಸ್ವರೂಪ್ ಪ್ರಕಾಶ್, ಮಾಜಿ ಎಂಎಲ್‌ಸಿ ಕೆ.ಎ. ತಿಪ್ಪೇಸ್ವಾಮಿ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.