ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Our Plumber Our Hero: ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ-ರಾಜಸ್ಥಾನದ ಜೈಸಲ್ಮೇರ್ ಮಹಾರಾಣಿ ರಾಸೇಶ್ವರಿ ರಾಜಲಕ್ಷ್ಮಿ

ಪರಿಸರ ಸಂರಕ್ಷಣೆ ಎನ್ನುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ನಮಗೆ ಜೀವಿಸಲು ಬೇಕಾದ ವಸ್ತುಗಳನ್ನು ಪ್ರಕೃತಿ ಉಚಿತವಾಗಿ ನೀಡುತ್ತದೆ. ಅದಕ್ಕಾಗಿ ಉಪಕಾರ ಸ್ಮರಣೆ ದೃಷ್ಟಿಯಿಂದ ನಾವು ಪ್ರಕೃತಿಯ ಭಾಗವಾದ ಜಲವನ್ನು ಅತ್ಯಂತ ಗೌರವಯುತವಾಗಿ ನೋಡಬೇಕು ಎಂದು ರಾಜಸ್ಥಾನದ ಜೈಸಲ್ಮೇರ್ ಮಹಾರಾಣಿ ರಾಸೇಶ್ವರಿ ರಾಜಲಕ್ಷ್ಮಿ ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಪರಿಸರ ಸಂರಕ್ಷಣೆ ನಮ್ಮ ಸಂಸ್ಕೃತಿಯ ಭಾಗ- ರಾಸೇಶ್ವರಿ ರಾಜಲಕ್ಷ್ಮಿ

Profile Siddalinga Swamy Mar 24, 2025 1:29 PM

ಬೆಂಗಳೂರು: ಪರಿಸರ ಸಂರಕ್ಷಣೆ ಎನ್ನುವುದು ನಮ್ಮ ಸಂಸ್ಕೃತಿಯ ಭಾಗವೇ ಆಗಿದೆ. ನಮಗೆ ಜೀವಿಸಲು ಬೇಕಾದ ವಸ್ತುಗಳನ್ನು ಪ್ರಕೃತಿ ಉಚಿತವಾಗಿ ನೀಡುತ್ತದೆ. ಅದಕ್ಕಾಗಿ ಉಪಕಾರ ಸ್ಮರಣೆ ದೃಷ್ಟಿಯಿಂದ ನಾವು ಪ್ರಕೃತಿಯ ಭಾಗವಾದ ಜಲವನ್ನು ಅತ್ಯಂತ ಗೌರವಯುತವಾಗಿ ನೋಡಬೇಕು ಮತ್ತು ಮಿತ ಬಳಕೆ ಮಾಡಬೇಕು ಎಂದು ರಾಜಸ್ಥಾನದ ಜೈಸಲ್ಮೇರ್ ಮಹಾರಾಣಿ ರಾಸೇಶ್ವರಿ ರಾಜಲಕ್ಷ್ಮಿ ಹೇಳಿದರು. ಜಯನಗರದ ಸರ್ ಎಂ ವಿಶ್ವೇಶ್ವರಯ್ಯ ರೇನ್ ವಾಟರ್ ಹಾರ್ವೆಸ್ಟಿಂಗ್ ಥೀಮ್ ಪಾರ್ಕ್‌ನಲ್ಲಿ ಪರ್ಯಾವರಣ ಸಂರಕ್ಷಣ ಗತಿ ವಿಧಿ ಆಯೋಜಿಸಿದ್ದ ‌ʼನಮ್ಮ ಪ್ಲಂಬರ್ ನಮ್ಮ ಹೀರೋʼ ಎಂಬ ಸಂವಾದ ಕಾರ್ಯಕ್ರಮ(Our Plumber Our Hero)ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜಸ್ಥಾನದ ಜೈಸಲ್ಮೀರ್ ದಂತಹ ಅತ್ಯಂತ ಕಡಿಮೆ ನೀರಿರುವ ಪ್ರದೇಶದಲ್ಲಿ ನೀರಿನ ಸಂರಕ್ಷಣೆಯ ಯಶೋಗಾಥೆಯನ್ನು ತಿಳಿಸಿ ಪ್ರತಿಯೊಬ್ಬರಿಗೂ ಜಲ ಜಾಗೃತಿಗೆ ಅವರು ಪ್ರೇರೇಪಿಸಿದರು.

ಕೇಂದ್ರ ಜಲ ಆಯೋಗದ ಮುಖ್ಯ ಅಭಿಯಂತರ ಎಸ್. ಎನ್.ಪಾಂಡೆ ಮಾತನಾಡಿ, ವರ್ಷದಿಂದ ವರ್ಷಕ್ಕೆ ದೇಶದ ಎಲ್ಲ ಮೆಟ್ರೋಪಾಲಿಟನ್ ನಗರಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಿದೆ. ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ದೊಡ್ಡ ಪರಿಹಾರ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು .

ದೇಶದ ಬಹುತೇಕ ಮೆಟ್ರೋಪಾಲಿಟನ್ ನಗರಗಳಿಗೆ ಹೊರಗಡೆಯಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಬವಣೆ ತೀವ್ರವಾಗಿರುತ್ತದೆ. ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಿಕೊಂಡರೆ ಸಾಕಷ್ಟು ಪ್ರಮಾಣದಲ್ಲಿ ನೀರು ಶೇಖರಣೆ ಮಾಡಿಕೊಳ್ಳಬಹುದು. ದೇಶದ ಇತರೆ ಮಹಾನಗರಗಳನ್ನು ಹೋಲಿಸಿದರೆ ಬೆಂಗಳೂರಿನಲ್ಲಿ ಮಾತ್ರ ಹಿಂಗಾರು, ಮುಂಗಾರು ಅವಧಿಯಲ್ಲಿ ಮಳೆಯಾಗುತ್ತದೆ. ಹಾಗಾಗಿ, ಇಲ್ಲಿನ ನಿವಾಸಿಗಳು ಬೋರ್‌ವೆಲ್ ಅಥವಾ ಕಾವೇರಿ ನೀರಿನ ಮೇಲೆ ಅವಲಂಬಿತವಾಗದೆ ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವುದು ಉತ್ತಮ ಎಂದರು.

ಇಂಡಿಯನ್ ಪ್ಲಂಬಿಂಗ್ ಅಸೋಸಿಯೇಷನ್ ಅಧ್ಯಕ್ಷ ಬಾಲಕೃಷ್ಣ ಮೆಹತಾ ಮಾತನಾಡಿ, ನೀರಿನ ಮೌಲ್ಯದ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕು. ಅನಗತ್ಯವಾಗಿ ನೀರು ಪೋಲು ಮಾಡಬಾರದು. ಸರ್ಕಾರ ಮಾತ್ರವಲ್ಲದೆ ನೀರು ಉಳಿಸಲು ಸಾರ್ವಜನಿಕರು ಮುಂದಾಗಬೇಕು. ಪ್ರತಿ ಹನಿ ನೀರು ಉಳಿಸುತ್ತೇನೆ ಎಂದು ಜನರು ಶಪಥ ಮಾಡಬೇಕು. ನಮ್ಮ ಸಂಸ್ಥೆಯಿಂದ ನೀರಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಭವಿಷ್ಯದಲ್ಲಿ ನೀರಿನ ಅಭಾವ ಜಾಸ್ತಿ

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಎಂಜಿನಿಯರ್‌ ಯು. ನಳಿನಾಕ್ಷಿ, ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ಇನ್ನಷ್ಟು ನೀರಿನ ಅಭಾವ ಎದುರಾಗಲಿದೆ. ಸಾಕಷ್ಟು ನೀರಿನ ಸಂಪನ್ಮೂಲಗಳಿದ್ದರೂ ಬೋರ್‌ವೆಲ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಮಿತವಾಗಿ ನೀರನ್ನು ಬಳಸಬೇಕು. ಮಳೆ ನೀರು ಕೊಯ್ಲು ವ್ಯವಸ್ಥೆಯಿಂದಲೇ ನೀರಿನ ಸಮಸ್ಯೆಗೆ ಪರಿಹಾರ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Job Guide: ರಾಷ್ಟ್ರೀಯ ಕೆಮಿಕಲ್‌ & ಫರ್ಟಿಲೈಸರ್ಸ್‌ ಲಿಮಿಟೆಡ್‌ನಲ್ಲಿದೆ 74 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ‌ ಜಲ ಸಂರಕ್ಷಣೆ ಭಾಗವಾಗಿ ಸಮಾಜವನ್ನು ಜಲ ಸಾಕ್ಷರರನ್ನಾಗಿ ಮಾಡುವ ಒಮ್ಮತದ ನಿರ್ಧಾರ ಸಂವಾದದಲ್ಲಿ ಮೂಡಿಬಂತು. ಪರ್ಯಾವರಣ ಸಂರಕ್ಷಣ ಗತಿವಿಧಿ ಜಲ ಆಯಾಮ ಪ್ರಮುಖ ಡಾ. ಕೆ.ಆರ್. ಶ್ರೀ ಹರ್ಷ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. 150ಕ್ಕೂ ಅಧಿಕ ಪರಿಸರ ಆಸಕ್ತರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಬೆಂಗಳೂರು ಜಲಮಂಡಳಿಯ ಮುಖ್ಯ ಅಭಿಯಂತರ ಸನತ್ ಕುಮಾರ್ ಪಾಲ್ಗೊಂಡಿದ್ದರು.