Art Therapy: ಮಾನಸಿಕ ಒತ್ತಡಕ್ಕೆ ಗುಡ್ ಬೈ ಹೇಳಬೇಕೆ? ಹಾಗಿದ್ದರೆ ಆರ್ಟ್ ಥೆರಪಿ ಟ್ರೈ ಮಾಡಿ!
ಒತ್ತಡ, ಮಾನಸಿಕ ಅಸ್ವಸ್ಥತೆ, ಅಸ್ಥಿರತೆ ಕೇವಲ ಮಾನಸಿಕವಾಗಿ ಕುಗ್ಗಿಸುವುದು ಅಲ್ಲದೆ ದೈಹಿಕವಾಗಿ ಕೂಡ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಹೀಗಾಗಿ ಈ ಸಮಸ್ಯೆಗಳಿಗೆ ವಿವಿಧ ಚಿಕಿತ್ಸೆ ಪಡೆದರೂ ಇನ್ನೂ ಪರಿಹಾರಕಂಡುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವವರು ಆರ್ಟ್ ಥೆರಪಿ ಚಿಕಿತ್ಸಾ ವಿಧಾನವನ್ನು ಪ್ರಯತ್ನಿಸಬಹುದು.

art therapy

ನವದೆಹಲಿ: ಆಧುನಿಕ ಜೀವನ ಶೈಲಿಯಲ್ಲಿ ಮಾನಸಿಕ ಒತ್ತಡವು ವ್ಯಾಪಕವಾಗಿ ಹೆಚ್ಚಾಗುತ್ತಿದೆ. ಪ್ರಸ್ತುತ, ಮಾನಸಿಕ ಆರೋಗ್ಯ ಸಮಸ್ಯೆಗಳು ದೊಡ್ಡ ಸವಾಲಾಗಿ ಹೊರ ಹೊಮ್ಮುತ್ತಿವೆ. ಒತ್ತಡ, ಮಾನಸಿಕ ಅಸ್ವಸ್ಥತೆ, ಅಸ್ಥಿರತೆ ಕೇವಲ ಮಾನಸಿಕವಾಗಿ ಕುಗ್ಗಿಸುವುದು ಅಲ್ಲದೆ ದೈಹಿಕವಾಗಿ ಕೂಡ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತಿದೆ. ಹೀಗಾಗಿ ಈ ಸಮಸ್ಯೆಗಳಿಗೆ ವಿವಿಧ ಚಿಕಿತ್ಸೆ ಪಡೆದರೂ ಇನ್ನೂ ಪರಿಹಾರಕಂಡುಕೊಳ್ಳಲು ಸಾಧ್ಯವಾಗಿಲ್ಲ ಎನ್ನುವವರು ಆರ್ಟ್ ಥೆರಪಿ (Art Therapy) ಚಿಕಿತ್ಸಾ ವಿಧಾನವನ್ನು ಟ್ರೈ ಮಾಡ್ಬೋದು. ಒತ್ತಡ ನಿರ್ವಹಿಸುವಲ್ಲಿ ಮತ್ತು ಮಾನಸಿಕ ಯೋಗ ಕ್ಷೇಮವನ್ನು ಉತ್ತೇಜಿಸುವಲ್ಲಿ ಆರ್ಟ್ ಥೆರಪಿ ಒಂದು ಉತ್ತಮ ವಿಧಾನ ವಾಗಿದ್ದು ಈ ಚಿಕಿತ್ಸೆ ಹೇಗೆ? ಯಾವೆಲ್ಲ ಸಮಸ್ಯೆಗೆ ಈ ಥೆರಪಿ ಉಪಯುಕ್ತ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.
ಆರ್ಟ್ ಥೆರಪಿ ಎಂದರೇನು?
ಆರ್ಟ್ ಥೆರಪಿ ಎನ್ನುವುದು ನಮ್ಮ ಮನಸ್ಸಿನ ಭಾವನೆಯನ್ನು ಹೊರತಂದು ಗುಣಪಡಿಸುವ ಒಂದು ಚಿಕಿತ್ಸಾವಿಧಾನವಾಗಿದೆ. ಅನೇಕರು ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತ ಪಡಿಸಲು ಬಯಸುತ್ತಾರೆ. ಆದರೆ ಭಯ, ಅಂಜಿಕೆಗಳಿಂದ ಈ ಭಾವನೆ ವ್ಯಕ್ತವಾಗದೇ ಉಳಿದು ಬಿಡುತ್ತದೆ. ಹೀಗಾಗಿ ಆರ್ಟ್ ಥೆರಪಿ ಮೂಲಕ ಚಿಕಿತ್ಸೆ ಪಡೆಯುವುದು ಬಹಳ ಉತ್ತಮ ಎನ್ನಬಹುದು. ಚಿತ್ರಬಿಡಿಸುವುದು, ಬಣ್ಣ ತುಂಬುವುದು, ವಿಭಿನ್ನವಾಗಿ ಪೈಂಟಿಂಗ್ ಮಾಡುವುದು ಇತ್ಯಾದಿ ವಿಧಾನವಾಗಿದ್ದು ಇಲ್ಲಿಯಾವುದೇ ನಿರ್ದಿಷ್ಟ ನಿರ್ಬಂಧಗಳು ಇರಲಾರದು. ಅಂದರೆ ಚಿಕಿತ್ಸೆಗೆ ಭಾಗವಹಿಸುವ ವ್ಯಕ್ತಿ ಕಲೆಗಾರನೇ ಆಗಿರಬೇಕು ಎಂದೇನಿಲ್ಲ ತನಗೆ ತೋಚಿದ್ದನ್ನು ಮುಕ್ತವಾಗಿ ಗೀಚುವ, ಚಿತ್ರ ಬಿಡಿಸಿ ಬಣ್ಣ ತುಂಬುವ ಮೂಲಕ ಮನಸ್ಸಿನ ಭಾವನೆ ಹೊರಹಾಕುವುದಾಗಿದೆ. ಕೆಲವೊಂದು ಭಾವನೆ ಮಾತಿನ ಮೂಲಕ ಅಭಿವ್ಯಕ್ತಿ ಪಡಿಸಲು ಅಸಾಧ್ಯವೆಂದು ಕಂಡು ಬಂದ ಸಂದರ್ಭದಲ್ಲಿ ಈ ಚಿಕಿತ್ಸಾ ವಿಧಾನ ಬಹಳ ಸಹಕಾರಿ ಆಗಲಿದೆ.
ಯಾವೆಲ್ಲ ಪ್ರಕಾರದ ಆರ್ಟ್ ಥೆರಪಿ ಇದೆ?
ಆರ್ಟ್ ಥೆರಪಿಯಲ್ಲಿ ಅನೇಕ ಪ್ರಕಾರಗಳಿವೆ. ಚಿತ್ರ ಬಿಡಿಸುವುದು, ಅಬ್ ಸ್ಟ್ರ್ಯಾಕ್ಟ್ ಸ್ಕೆಚ್, ಕೊಲೇಜಿಂಗ್ ಮೂಲಕ ಚಿತ್ರ ಜೋಡಿಸುವುದು, ಡಿಜಿಟಲ್ ಆರ್ಟ್ ಮಾಡುವುದು, ಫೋಟೋಗ್ರಫಿ, ನೇಯ್ಗೆ ಮಾಡುವುದು, ಕಸೂತಿ ಮಾಡಿ ಚಿತ್ರ ಬಿಡಿಸುವುದು, ವಸ್ತುಗಳ ಮೇಲೆ ಚಿತ್ರ ಬಿಡಿಸುವುದು, ಗೋಡೆ ಮೇಲೆ ಚಿತ್ರ , ಮಣ್ಣಿನಲ್ಲಿ ಚಿತ್ರ ಬಿಡಿಸುವುದು, ಸ್ಯಾಂಡ್ ಆರ್ಟ್ ಬಿಡಿಸುವುದು ಇತರ ಕರಕುಶಲ ಕಲೆಗಳು ಸಹ ಈ ಆರ್ಟ್ ಥೆರಪಿಯಲ್ಲಿ ಸೇರಿದೆ.
ಈ ಸಮಸ್ಯೆಗೆ ಸಿಗಲಿದೆ ಮುಕ್ತಿ
- ಮಾನಸಿಕ ಸಮಸ್ಯೆಯಿಂದ ಸ್ಕಿಜೋಫ್ರೇನಿಯಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರ್ಟ್ ಥೆರಪಿ ವಿಧಾನ ಸಹಕಾರಿ ಆಗಲಿದೆ.
- ಒಂಟಿತನದಿಂದ ಮಾನಸಿಕ ಖಿನ್ನತೆ ಸಮಸ್ಯೆ ಇದ್ದವರಿಗೆ ಇದರಿಂದ ಹೊರಬರಲು ಆರ್ಟ್ ಥೆರಪಿ ಉಪಯುಕ್ತ ಆಗಲಿದೆ.
- ಆಟಿಸಂ ಸಮಸ್ಯೆ ಇದ್ದವರು ಸರಿಯಾದ ಸಂವಹನ ಮಾಡಲು ಭಯ ಪಡುವವರು ಆರ್ಟ್ ಥೆರಪಿ ಉತ್ತಮ ಔಷಧವಾಗಲಿದೆ.
- ಕಲಿಕೆಯಲ್ಲಿ ಹಿಂದೆ ಉಳಿದವರಿಗೆ ಹಾಗೂ ವಿಷಯವನ್ನು ನಿಖರವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗದೆ ಇರುವವರು ಆರ್ಟ್ ಥೆರಪಿ ಚಿಕಿತ್ಸೆ ಪಡೆಯಬಹುದು.
ಇದನ್ನು ಓದಿ: Health Tips: ಲೈಂಗಿಕ ಕ್ರಿಯೆಯ ನಂತರ ನೀವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳಾವುವು ಗೊತ್ತಾ?
- ಹಿಂಜರಿಕೆ, ಭಯದ ಸಮಸ್ಯೆ ಇದ್ದವರಿಗೆ ಸಮಸ್ಯೆ ನಿವಾರಿಸಲು ಆರ್ಟ್ ಥೆರಪಿ ಸಹಕಾರಿ.
- ಬಹುತೇಕರಿಗೆ ಮರೆವಿನ ಸಮಸ್ಯೆ ಇರಲಿದೆ ಅಂತವರು ಈ ಆರ್ಟ್ ಥೆರಪಿ ಚಿಕಿತ್ಸಾ ವಿಧಾನ ಅಳವಡಿಸಿಕೊಂಡರೆ ಮೆದುಳು ಹೆಚ್ಚು ಕ್ರಿಯಾಶೀಲವಾಗಿ ಇರಲಿದೆ.
ಒಟ್ಟಿನಲ್ಲಿ ಇಷ್ಟೆಲ್ಲ ಪ್ರಯೋಜನ ನೀಡುವ ಕಲಾ ಪ್ರಕಾರದ ಚಿಕಿತ್ಸೆಯಿಂದ ಮಾನಸಿಕ ಆರೋಗ್ಯ ವೃದ್ಧಿ ಆಗಲಿದೆ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ 2019ರ ವರದಿಯಲ್ಲಿಯೇ ಈ ಬಗ್ಗೆ ಉಲ್ಲೇಖಿಸಿದೆ. ಹೀಗಾಗಿ ವಿಶ್ವ ಮಟ್ಟ ದಲ್ಲಿ ಆರ್ಟ್ ಥೆರಪಿಗೆ ಬೆಂಬಲ ವ್ಯಕ್ತವಾಗುತ್ತಿದ್ದು ಮುಂದಿನ ದಿನಗಳಲ್ಲಿ ರಂಗಭೂಮಿ ಮತ್ತು ನೃತ್ಯ ಕ್ಷೇತ್ರಗಳನ್ನು ಸಹ ಆರ್ಟ್ ಥೆರಪಿ ಚಿಕಿತ್ಸಾ ವಿಧಾನದಲ್ಲಿ ಬಳಸುವ ಬಗ್ಗೆ ಅನೇಕ ಚಿಂತನೆಗಳು ನಡೆದಿವೆ.