ʼʼಮಮ್ಮಿ ಕಾಪಾಡಿʼʼ: ಪತ್ನಿಯ ಹಲ್ಲೆ ತಾಳಲಾರದೆ ಸಹಾಯಕ್ಕಾಗಿ ಕೂಗಿದ ಪತಿ; ಬೆಚ್ಚಿ ಬೀಳಿಸುವ ವಿಡಿಯೊ ಇಲ್ಲಿದೆ
Viral Video: ಮಧ್ಯ ಪ್ರದೇಶದ ಸತ್ನಾದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಕತ್ತು ಹಿಸುಕಿ ಹೊಡೆದಿದ್ದಾಳೆ. ಇದನ್ನು ಪತಿ ವಿಡಿಯೊ ಮಾಡಿದ್ದು, ಸದ್ಯ ವೈರಲ್ ಆಗಿದೆ. ವಿಡಿಯೊ ನೋಡಿದ ಹಲವರು ಪತಿಯನ್ನು ಹೊಡೆದ ಮಹಿಳೆಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.


ಭೋಪಾಲ್: ಇತ್ತೀಚಿನ ದಿನಗಳಲ್ಲಿ ಪತಿಯ ಮೇಲೆ ಪತ್ನಿ ಹಲ್ಲೆ ನಡೆಸುವ ಘಟನೆಗಳು ಹೆಚ್ಚಾಗುತ್ತಿವೆ. ಅದಕ್ಕೆ ಸೇರ್ಪಡೆ ಮಧ್ಯ ಪ್ರದೇಶದಲ್ಲಿ ನಡೆದ ಈ ಘಟನೆ. ಮಧ್ಯ ಪ್ರದೇಶದ ಸತ್ನಾದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಕತ್ತು ಹಿಸುಕಿ ಹೊಡೆದಿದ್ದಾಳೆ. ಇದನ್ನು ಪತಿ ವಿಡಿಯೊ ಮಾಡಿದ್ದು, ಸದ್ಯ ವೈರಲ್ ಆಗಿದೆ (Viral Video). 10 ಲಕ್ಷ ರೂ.ಗೆ ಬೇಡಿಕೆ ಇಟ್ಟು ಪತ್ನಿ ನಿರಂತರವಾಗಿ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದಾಗಿಯೂ ಸಂತ್ರಸ್ತ ಪತಿ ಹೇಳಿದ್ದಾನೆ. ಜತೆಗೆ ಪತ್ನಿ ವಿರುದ್ಧ ದೂರು ನೀಡಿದ್ದಾನೆ. ಸದ್ಯ ವಿಡಿಯೊ ನೋಡಿ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ. ಪುರುಷರ ಸುರಕ್ಷತೆ ಬಗ್ಗೆ ಹಲವರು ಧ್ವನಿ ಎತ್ತಿದ್ದಾರೆ.
ವರದಿಗಳ ಪ್ರಕಾರ ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ಕಾಣಿಸಿಕೊಂಡಿದೆ. ಬಾಗಿಲು ಲಾಕ್ ಮಾಡಿ ಪತ್ನಿ ಬಳಿಗೆ ಬಂದಾಗಲೇ ಪತಿಯ ಮುಖದಲ್ಲಿ ಭಯ ಕಾಣಿಸಿಕೊಂಡಿದೆ. ಹತ್ತಿರ ಬರಬೇಡ ಭಯವಾಗುತ್ತಿದೆ ಎಂದು ಆತ ಹೇಳುತ್ತಿರುವುದು ವಿಡಿಯೊದಲ್ಲಿ ಕಂಡುಬಂದಿದೆ. ಕೊನೆಗೆ ಆಕೆ ಕ್ರೂರವಾಗಿ ಪತಿಯ ಮೇಲೆ ಹಲ್ಲೆ ನಡೆಸಿದ್ದಾಳೆ.
ಪತಿಯ ಮೇಲೆ ಪತ್ನಿ ಹಲ್ಲೆ ನಡೆಸುತ್ತಿರುವ ವಿಡಿಯೊ ಇಲ್ಲಿದೆ:
Ankit of Satna in MP is a victim of #DomesticViolence by his wife Jyoti.
— ShoneeKapoor (@ShoneeKapoor) March 23, 2025
JYOTI
Does this name ring a bell? pic.twitter.com/0oDOYNoNu0
ಈ ಸುದ್ದಿಯನ್ನೂ ಓದಿ: Disha Salian Case: ದಿಶಾ ಸಾಲಿಯನ್ ಸಾವಿನ ಪ್ರಕರಣ; ಆದಿತ್ಯ ಠಾಕ್ರೆ, ಡಿನೋ ಮೋರಿಯಾ, ಸೇರಿದಂತೆ ಹಲವರ ವಿರುದ್ಧ ದೂರು
ವಿಡಿಯೊದಲ್ಲಿ ಏನಿದೆ?
ಪತ್ನಿ ಕೋಣೆಯ ಬಾಗಿಲಿಗೆ ಚಿಲಕ ಹಾಕುವುದನ್ನು ತೋರಿಸುವ ಮೂಲಕ ವಿಡಿಯೊ ಆರಂಭವಾಗುತ್ತದೆ. ವಿಡಿಯೊ ಮಾಡುವುದನ್ನು ನಿಲ್ಲಿಸುವಂತೆ ಆಕೆ ಪದೇ ಪದೆ ಬೆದರಿಕೆ ಹಾಕುತ್ತಾಳೆ. ಬಳಿಕ ಆತನಿಗೆ ಹೊಡೆಯುತ್ತಾಳೆ. ಮಾತ್ರವಲ್ಲ ಕತ್ತು ಹಿಸುಕುತ್ತಾಳೆ. ಈ ವೇಳೆ ಆತ ಅಸಾಹಯಕತೆ, ಭಯದಿಂದ ಸಹಾಯಕ್ಕಾಗಿ ಕೂಗಾಡುತ್ತಾನೆ.
ಆತನ ತಾಯಿಯ ಉಪಸ್ಥಿತಿಯಲ್ಲೇ ಈ ಹಲ್ಲೆ ನಡೆದಿದೆ. ಆದರೆ ರೂಮ್‌ನ ಚಿಲಕ ಹಾಕಿರುವುದರಿಂದ ತಾಯಿಗೆ ಮಧ್ಯ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ʼʼಮಮ್ಮಿ ಕಾಪಾಡಿʼʼ ಎಂದು ಅವನು ಕೂಗುತ್ತಾನೆ. ಬಳಿಕ ಹೇಗೋ ಬಾಗಿಲು ತೆಗೆದು ಹೊರ ಬಂದು ಓಡುತ್ತಾನೆ. ಬಳಿಕ ಪತ್ನಿಯು ಪತ್ನಿ ಮತ್ತು ಆತನ ತಾಯಿಯನ್ನು ಮನೆಯಿಂದ ಹೊರ ಹಾಕಿ ಬಾಗಿಲು ಮುಚ್ಚುತ್ತಾಳೆ.
10 ಲಕ್ಷ ರೂ.ಗಾಗಿ ಬೇಡಿಕೆ
ಸದ್ಯ ಈ ವ್ಯಕ್ತಿ ದೂರು ನೀಡಿದ್ದು, ಪತ್ನಿ 10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ನೀಡದ ಹಿನ್ನೆಲೆಯಲ್ಲಿ ನಿರಂತರವಾಗಿ ಥಳಿಸುತ್ತಿದ್ದಾಳೆ ಎಂದಿದ್ದಾನೆ. ʼʼತಂದೆಯ ಮರಣದ ನಂತರ 10 ಲಕ್ಷ ರೂ. ನೀಡುವಂತೆ ಆಕೆ ನಿರಂತರವಾಗಿ ಪೀಡಿಸುತ್ತಿದ್ದಳು. ಇದನ್ನು ನಿರಾಕರಿಸಿದಾಗ ಹಿಂಸೆ ನೀಡತೊಡಗಿದ್ದಾಳೆ. ಅಲ್ಲದೆ ನನ್ನ ಮತ್ತು ಮನೆಯವರ ವಿರುದ್ಧ ಸುಳ್ಳು ದೂರು ನೀಡುವುದಾಗಿಯೂ ಹೆದರಿಸುತ್ತಿದ್ದಾಳೆʼʼ ಎಂದು ತಿಳಿಸಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ದುರಂತ ಎಂದರೆ ಇವರು ಪ್ರೀತಿಸಿ ಮದುವೆಯಾದವರು.
ನೆಟ್ಟಿಗರಿಂದ ಆಕ್ರೋಶ
ವಿಡಿಯೊ ನೋಡಿದ ಹಲವರು ಶಾಕ್‌ಗೆ ಒಳಗಾಗಿದ್ದಾರೆ. ಮಹಿಳೆಯ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಮಹಿಳೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಲವರು ಮಧ್ಯ ಪ್ರದೇಶ ಪೊಲೀಸರು ಟ್ಯಾಗ್ ಮಾಡಿ ನೆರವಿಗೆ ಧಾವಿಸುವಂತೆ ತಿಳಿಸಿದ್ದಾರೆ.