Viral Video: ಮೊಮ್ಮಕ್ಕಳ ಸಮ್ಮುಖದಲ್ಲಿ ಮತ್ತೊಮ್ಮೆ ಸಪ್ತಪದಿ ತುಳಿದ 64 ವರ್ಷಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದ ಹಿರಿಯ ಜೋಡಿ
Harsh & Mrunu Love Story: 64 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಓಡಿ ಹೋಗಿ ಮದುವೆಯಾದ ಗುಜರಾತ್‌ನ ಜೋಡಿಯೊಂದು ಇದೀಗ ಮತ್ತೊಮ್ಮೆ ಸಪ್ತಪದಿ ತುಳಿದಿದೆ. ಮಕ್ಕಳು, ಮೊಮ್ಮಕ್ಕಳು ಈ ಹಿರಿಯ ಜೀವಗಳಿಗೆ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ.


ಗಾಂಧಿನಗರ: ಗುಜರಾತ್‌ನ ಹಿರಿಯ ಜೋಡಿಯ ಈ ಅಪರೂಪದ ಪ್ರೇಮಕಥೆ ಕೇಳಿದರೆ ನೀವೂ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುತ್ತೀರಿ. 64 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ಓಡಿ ಹೋಗಿ ಮದುವೆಯಾದ ಜೋಡಿಯೊಂದು ಇದೀಗ ಮತ್ತೊಮ್ಮೆ ಸಪ್ತಪದಿ ತುಳಿದಿದೆ. ಅಲ್ಲಲ್ಲ ಮಕ್ಕಳು, ಮೊಮ್ಮಕ್ಕಳು ಈ ಹಿರಿಯ ಜೀವಗಳಿಗೆ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದೆ (Viral Video). ಈಗ 80ರ ಹೊಸ್ತಿಲಲ್ಲಿ ಇರುವ ಈ ಹಿರಿಯ ಜೋಡಿಯ ಲವ್‌ಸ್ಟೋರಿ ಕೇಳಿ ಹಲವರು ಭಾವುಕರಾಗಿದ್ದಾರೆ.
ʼದಿ ಕಲ್ಚರ್ ಗಲ್ಲಿʼ ಎನ್ನುವ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಅಪರೂಪದ ಪ್ರೇಮಕಥೆಯನ್ನು ವಿವರಿಸಲಾಗಿದೆ. ಈ ಪೇಜ್‌ನಲ್ಲಿ ಹಂಚಿಕೊಂಡಿರುವ ಫೋಟೊ ಮತ್ತು ವಿಡಿಯೊ ನೆಟ್ಟಿಗರ ಗಮನ ಸೆಳೆಯುತ್ತಿದೆ. ಗುಜರಾತ್‌ನ ಹರ್ಷ್ ಮತ್ತು ಮೃನು (Harsh and Mrunu) ಮೊಮ್ಮಕ್ಕಳ ಸಮ್ಮುಖದಲ್ಲಿ ಮರು ಮದುವೆಯಾದ ಜೋಡಿ.
ʼದಿ ಕಲ್ಚರ್ ಗಲ್ಲಿʼಯ ಪೋಸ್ಟ್ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Viral News: ಮದುವೆಗೆ ಆಹ್ವಾನಿಸಿ ಬಾಲ್ಯ ಸ್ನೇಹಿತೆ ಬಳಿ 90,000 ರೂ. ಬೇಡಿಕೆ ಇಟ್ಟ ವಧು
ʼʼ64 ವರ್ಷಗಳ ಹಿಂದೆ ಓಡಿ ಹೋಗಿ ಮದುವೆಯಾಗಿದ್ದ ಹಿರಿಯ ಜೋಡಿ ಇದೀಗ ಮರು ಮದುವೆಯಾಗಿದೆ. ಬೇರೆ ಬೇರೆ ಧರ್ಮಕ್ಕೆ ಸೇರಿದ ಹರ್ಷ್ ಮತ್ತು ಮೃನು ಪರಸ್ಪರ ಪ್ರೀತಿಸುತ್ತಿದ್ದರು. ಹೇಳಿಕೇಳಿ ಅದು 1960ರ ಕಾಲಘಟ್ಟ. ಸಹಜವಾಗಿಯೇ ಇವರ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇಬ್ಬರು ಓಡಿ ಹೋಗಿ ಮದುವೆಯಾಗಿ ಹೊಸ ಜೀವನ ಕಟ್ಟಿಕೊಂಡಿದ್ದರು. ಇದೀಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆʼʼ ಎಂದು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿವರಿಸಲಾಗಿದೆ.
ಹರ್ಷ್ ಮತ್ತು ಮೃನು ಲವ್ ಸ್ಟೋರಿ ಹೇಗಿತ್ತು?
ಇನ್ನು ವಿಡಿಯೊದಲ್ಲಿ ಹರ್ಷ್ ಮತ್ತು ಮೃನು ಅವರ ಪ್ರೇಮಕಥೆಯನ್ನು ಮನಮುಟ್ಟುವಂತೆ ವಿವರಿಸಲಾಗಿದೆ. ʼʼಅದು 1960 ದಶಕ. ಜೈನ ಹುಡುಗ ಹರ್ಷ್ ಮತ್ತು ಬ್ರಾಹ್ಮಣ ಹುಡುಗಿ ಮೃನು ನಡುವೆ ಪ್ರೇಮಾಂಕುರವಾಗಿತ್ತು. ಶಾಲೆಗೆ ಹೋಗುವಾಗಲೇ ಪರಸ್ಪರ ಪ್ರೀತಿಸುತ್ತಿದ್ದ ಅವರು ಪ್ರೇಮ ಪತ್ರದ ಬರೆಯುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದರು. ಮೊಬೈಲ್ ಫೋನ್, ಸೋಶಿಯಲ್ ಮೀಡಿಯಾದ ಮುಂತಾದ ತಂತ್ರಜ್ಞಾನ ಇಲ್ಲದಿದ್ದರೂ ಇವರು ಪ್ರೇಮಯಾನ ಸುಗಮವಾಗಿ ಸಾಗುತ್ತಿತ್ತುʼʼ.
ʼʼಕೊನೆಗೊಂದು ದಿನ ಮೃನು ತಮ್ಮ ಪ್ರೇಮಕಥೆಯನ್ನು ಮನೆಯವರ ಮುಂದೆ ಪ್ರಸ್ತಾವಿಸಿ ಮುದುವೆಯಾಗುವುದಿದ್ದರೆ ಹರ್ಷ್‌ನನ್ನು ಮಾತ್ರ ಎಂದಿದ್ದರು. ಆದರೆ ಧರ್ಮ ಬೇರೆ ಬೇರೆಯಾದ ಕಾರಣ ಮನೆಯವರು ಒಪ್ಪಿಗೆ ನೀಡಲಿಲ್ಲ. ಕೊನೆಗೊಂದು ದಿನ ಇನ್ನು ಬರುವುದಿಲ್ಲ ಎಂದು ಪತ್ರ ಬರೆದಿಟ್ಟು ಮನೆಬಿಟ್ಟು ಪ್ರೀತಿಯನ್ನು ಅರಸಿ ಹೊರಟಿದ್ದರು. ಬಳಿಕ ಹರ್ಷ್ ಮತ್ತು ಮೃನು ಮದುವೆಯಾಗಿ ತಮ್ಮದೇ ಆದ ಜೀವನ ಕಟ್ಟಿಕೊಂಡಿದ್ದರುʼʼ.
ʼʼಅವರ ಮದುವೆ 1961ರಲ್ಲಿ ಸರಳವಾಗಿ ನಡೆದಿತ್ತು. ಅಚ್ಚರಿಯ ವಿಷಯ ಎಂದರೆ ಮೃನು ಅಂದು ಮದುವೆಗೆ ಕೇವಲ 10 ರೂ. ಬೆಲೆಯ ಸೀರೆ ಉಟ್ಟುಕೊಂಡಿದ್ದರು. ಹೀಗೆ ಯಾವುದೇ ಅದ್ಧೂರಿ, ಆಡಂಬರದ ಆಚರಣೆ ಇಲ್ಲದೆ 2 ಜೀವಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದವು. ಇದೀಗ ಅವರ ಮೊಮ್ಮಕ್ಕಳು 64 ವರ್ಷಗಳ ಬಳಿಕ ಅದ್ಧೂರಿ ಮದುವೆ ಏರ್ಪಡಿಸಿ ಅಂದು ಮಿಸ್ ಆಗಿದ್ದ ಸಮಾರಂಭವನ್ನು ಮತ್ತೆ ಮರುಸೃಷ್ಟಿಸಿ ವಿಶೇಷ ಉಡುಗೊರೆ ನೀಡಿದ್ದಾರೆʼʼ ಎಂದು ವಿಡಿಯೊದಲ್ಲಿ ತಿಳಿಸಲಾಗಿದೆ. ಸದ್ಯ ಈ ವಿಡಿಯೊ ನೆಟ್ಟಿಗರ ಮನ ಗೆದ್ದಿವೆ.