Honey trap Case: ಹನಿಟ್ರ್ಯಾಪ್ ತನಿಖೆಗೆ ಕೋರಿದ ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್
ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣ ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಹಾಗೂ ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗಿತ್ತು.

ಸುಪ್ರೀಂ ಕೋರ್ಟ್

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ (Karnataka) ರಾಜಕಾರಣಿಗಳು, ನ್ಯಾಯಾಧೀಶರ ಮೇಲೆ ಮಾಡಲಾಗಿರುವ ಹನಿಟ್ರ್ಯಾಪ್ ಆರೋಪ (Honey trap Case) ಕುರಿತಂತೆ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಸುಪ್ರೀಂ ಕೋರ್ಟ್ (Supreme Court) ಬುಧವಾರ ವಜಾಗೊಳಿಸಿ ಆದೇಶ ಹೊರಡಿಸಿದೆ. ಈ ಸಂಬಂಧಿಸಿದಂತೆ ಲಾಯರ್ ವಿನಯ್ ಕುಮಾರ್ ಸಿಂಗ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಳ್ಳಿಹಾಕಿದ್ದು, ʼನೀವು ಜಾರ್ಖಂಡ್ನವರು ನಿಮಗೇನು ಸಂಬಂಧ? ಪೊಲಿಟಿಕಲ್ ನಾನ್ಸೆನ್ಸ್ಗಳನ್ನೆಲ್ಲಾ ವಿಚಾರಣೆ ಮಾಡಲು ಆಗಲ್ಲʼ ಎಂದು ಹೇಳಿದೆ.
ʼಜಡ್ಜ್ಗಳು ಏಕೆ ಹನಿಟ್ರ್ಯಾಪ್ಗೆ ಒಳಗಾಗುತ್ತಾರೆ? ಅದನ್ನು ಜಡ್ಜ್ಗಳು ನೋಡಿಕೊಳ್ಳುತ್ತಾರೆ, ನಿಮಗೇನು ಸಂಬಂಧ?ʼ ಎಂದು ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ಖಾರವಾಗಿ ಪ್ರಶ್ನೆ ಮಾಡಿದೆ. ರಾಜ್ಯ ಹಾಗೂ ದೇಶದ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣ ಇಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಹಾಗೂ ಸಿಬಿಐ ತನಿಖೆಗೆ ಕೋರಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಲಾಗಿತ್ತು. ಬಿನಯ್ ಕುಮಾರ್ ಸಿಂಗ್ ಎಂಬವರ ಪರವಾಗಿ ವಕೀಲ ಬರುಣ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾ. ವಿಕ್ರಂನಾಥ್, ನ್ಯಾ. ಸಂಜಯ್ ಕರೋಲ್, ನ್ಯಾ. ಸಂದೀಪ್ ಮೆಹ್ತಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಅರ್ಜಿ ಬಂದಿತ್ತು.
ಸಚಿವರು ಸೇರಿದಂತೆ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ (Minister KN Rajanna) ವಿಧಾನಸಭೆಯಲ್ಲಿ ಆರೋಪ ಮಾಡಿದ್ದರು. ಈ ಪ್ರಕರಣದ ತನಿಖೆಗೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. "ಪ್ರಕರಣದಲ್ಲಿ ಸಚಿವರು ಮಾತ್ರವಲ್ಲದೇ ನ್ಯಾಯಮೂರ್ತಿ ಹೆಸರಿರುವುದನ್ನು ಅರ್ಜಿದಾರರು ಪತ್ತೆಹಚ್ಚಿದ್ದಾರೆ. ಇದೊಂದು ಗಂಭೀರ, ಆಘಾತಕಾರಿ ವಿಷಯ. ವ್ಯಕ್ತಿಗಳ ವೈಯುಕ್ತಿಕ ಗೌರವವನ್ನ ಉಳಿಸಬೇಕು. ಇದೊಂದು ದೊಡ್ಡ ಹಗರಣವಾಗಿರುವ ಸಾಧ್ಯತೆ ಇರುವುದರಿಂದ ಕೂಲಂಕಷ ತನಿಖೆಯಾದರೆ ಎಲ್ಲ ಸತ್ಯಾಸತ್ಯತೆ ಹೊರಬರಲಿದೆ" ಎಂದು ನ್ಯಾಯಾಲಯದಲ್ಲಿ ಅರ್ಜಿದಾರರು ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: Honey Trap Case: ಕೊನೆಗೂ ಹನಿಟ್ರ್ಯಾಪ್ ದೂರು ನೀಡಿದ ಸಚಿವ ರಾಜಣ್ಣ