#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Cabinet Meeting: ಅರಮನೆ ಮೈದಾನ ಭೂಸ್ವಾಧೀನ ವಿವಾದ ಕುರಿತು ಇಂದು ತುರ್ತು ಸಂಪುಟ ಸಭೆ

ರಸ್ತೆ ಅಗಲೀಕರಣ ವಿಚಾರದ ಹಿನ್ನೆಲೆಯಲ್ಲಿ ಆಗಬೇಕಿದ್ದ ಇಡೀ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಸರ್ಕಾರ ನಿರ್ಧಾರ ಕೈಗೊಳ್ಳಲಿದ್ದು, ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಅರಮನೆ ಮೈದಾನ ಭೂಸ್ವಾಧೀನ ವಿವಾದ ಕುರಿತು ಇಂದು ತುರ್ತು ಸಂಪುಟ ಸಭೆ

ಹರೀಶ್‌ ಕೇರ ಹರೀಶ್‌ ಕೇರ Jan 24, 2025 8:06 AM

ಬೆಂಗಳೂರು: ಮೈಸೂರು ರಾಜಮನೆತನ (Mysore dynasty) ಮತ್ತು ರಾಜ್ಯ ಸರ್ಕಾರದ ನಡುವಿನ ಕಾನೂನಾತ್ಮಕ ಜಟಾಪಟಿ (Legal battle) ಮುಂದುವರೆದಿದೆ. ಅರಮನೆ ಮೈದಾನದ (palace ground) ಭೂಮಿಗೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme court) ವಿಚಾರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ ತುರ್ತು ಸಂಪುಟ ಸಭೆ (Cabinet meeting) ಕರೆದಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಅರಮನೆ ಮೈದಾನದ ಭೂಮಿಗೆ ಟಿಡಿಆರ್ ನೀಡುವ ವಿಚಾರದಲ್ಲಿ ರಾಜಮನೆತನ ಮತ್ತು ರಾಜ್ಯ ಸರಕಾರದ ನಡುವೆ ತಿಕ್ಕಾಟ ನಡೆಯುತ್ತಿದೆ. ಈ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಿದೆ.

ಇಂದು ನಡೆಯುವ ಸಂಪುಟ ಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ಸರ್ಕಾರ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ರಸ್ತೆ ಅಗಲೀಕರಣ ವಿಚಾರದ ಹಿನ್ನೆಲೆಯಲ್ಲಿ ಆಗಬೇಕಿದ್ದ ಇಡೀ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಲು ಸರ್ಕಾರ ನಿರ್ಧಾರ ಕೈಗೊಳ್ಳಲಿದ್ದು, ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

ರಾಜ್ಯ ಸರ್ಕಾರವು ರಸ್ತೆ ಅಗಲೀಕರಣ ಉದ್ದೇಶಕ್ಕಾಗಿ 15.7 ಎಕರೆ ಬೆಂಗಳೂರು ಅರಮನೆ ಮೈದಾನದ ಜಾಗವನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಈ ಜಮೀನಿನ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋದ ರಾಜಮನೆತನಕ್ಕೆ ಬಳ್ಳಾರಿ ರಸ್ತೆಯಲ್ಲಿ ಪ್ರತಿ ಚದರ ಮೀ.ಗೆ 2.83 ಲಕ್ಷ ರೂ.ಗಳಂತೆ ಹಾಗೂ ಜಯಮಹಲ್ ರಸ್ತೆಯಲ್ಲಿ 2.04 ಲಕ್ಷ ರೂ.ಗಳಂತೆ ಒಟ್ಟು 3011 ಕೋಟಿ ರೂ. ಮೌಲ್ಯದ ಟಿಡಿಆರ್ ಅನ್ನು ಪರಿಹಾರದ ರೂಪದಲ್ಲಿ ನೀಡಲು 2014ರಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ವಿರುದ್ಧ ರಾಜ್ಯ ಸರ್ಕಾರಕ್ಕೆ ಆರ್ಥಿಕ ಹೊರೆ ಆಗುತ್ತದೆ ಎಂದು ಅಪೀಲು ಸಲ್ಲಿಸಿದ್ದರೂ ಹೈಕೋರ್ಟ್ ರಾಜ್ಯ ಸರ್ಕಾರ ಮನವಿ ತಿರಸ್ಕರಿಸಿತ್ತು.

ಟಿಡಿಆರ್ ನೀಡದ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದ ರಾಜಮನೆತನದ ವಾರಸುದಾರರ ವಿರುದ್ಧ ರಾಜ್ಯ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ರಾಜ್ಯ ಸರ್ಕಾರ ಬೆಂಗಳೂರು ಅರಮನೆ ವಶಪಡಿಸಿಕೊಂಡಿರುವ 1997ರ ಬೆಂಗಳೂರು ಅರಮನೆ ಕಾಯ್ದೆಯ ಸಿಂಧುತ್ವ ಎತ್ತಿ ಹಿಡಿಯಲು ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂ‌ ಕೋರ್ಟ್‌ಗೆ ಮನವಿ ಮಾಡಲು ಜ.16ರಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಜೊತೆಗೆ 2001ರಲ್ಲಿ ಸುಪ್ರೀಂ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದ್ದರೂ 2 ಲಕ್ಷ ಚದರ ಮೀಟರ್ ಅನಧಿಕೃತ ನಿರ್ಮಾಣ ಮಾಡಲಾಗಿದೆ. ಈ ಬಗ್ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಇದೀಗ ರಸ್ತೆ ಅಗಲೀಕರಣ ಕೈಬಿಡಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜ.16ರ ನಿರ್ಣಯದ ಕುರಿತು ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಯಬೇಕಿದೆ.

ಇದನ್ನೂ ಓದಿ: Cabinet meeting: ಅರಮನೆ ಟಿಡಿಆರ್ ಪ್ರಕರಣ; 1997ರ ಕಾಯ್ದೆ ಸಿಂಧುತ್ವದ ಬಗ್ಗೆ ಸಚಿವ ಸಂಪುಟ ಮಹತ್ವದ ತೀರ್ಮಾನ